ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಬರೀ ಪುರಾಣವಲ್ಲ, ರಂಗಸಂಭವದ ಆತ್ಮಕಥೆ...

Last Updated 23 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಚಿತ್ರಕಲೆ, ರಂಗಭೂಮಿ, ಪುಸ್ತಕ ವಿನ್ಯಾಸ, ಪುಸ್ತಕ ಪ್ರಕಾಶನ, ಚಿತ್ರರಂಗ, ಸಾಹಿತ್ಯ, ಗೊಂಬೆಯಾಟ, ಮಕ್ಕಳ ಶಿಬಿರ ಹೀಗೆ ಸೃಜನಶೀಲ ಅಭಿವ್ಯಕ್ತಿಯ ಕ್ಷೇತ್ರಗಳಲ್ಲಿ ದಶಶಿರನಾಗಿ ಕೆಲಸ ಮಾಡಿದ ಚನ್ನಕೇಶವ ಬರೆದ ಪುಸ್ತಕ ‘ರಂಗ ಪುರಾಣ’. ನೀನಾಸಂನಲ್ಲಿನ ತಮ್ಮ ಕಲಿಕೆಯ ದಿನಗಳು ಮತ್ತು ನಂತರ ತಿರುಗಾಟದ ದಿನಗಳ ಅನುಭವಗಳನ್ನು ಮೆಲುಕು ಹಾಕಿಕೊಂಡು ನೆನಪುಗಳನ್ನು ಆಯ್ದು ಕಟ್ಟಿದ ಹೂಮಾಲೆಯಂತಿದೆ ಈ ಪುಸ್ತಕ. ನೀನಾಸಂ ದಿನಗಳ ನಂತರದ ಚನ್ನಕೇಶವರ ಕ್ರಿಯಾಶೀಲತೆಯ ವಿವರಗಳು ಇಲ್ಲಿಲ್ಲ. ಆ ದಿನಗಳ ಬಳಿಕ ಚನ್ನಕೇಶವರ ಆಸಕ್ತಿ, ಅಭಿರುಚಿ ಮತ್ತು ಸೃಜನಶೀಲತೆಗಳು ಹೇಗಿದ್ದುವು ಎಂಬುದನ್ನು ಅಮೆರಿಕದ ಯೂನಿವರ್ಸಿಟಿ ಆಫ್ ನಾರ್ತ್ ಕೆರೊಲಿನಾದ ಪ್ರಾಧ್ಯಾಪಕಿ ಕಾಥಿ ಎ ಪರ್ಕಿನ್ಸ್ ಮತ್ತು ವಿವೇಕ ಶಾನಭಾಗ ಇಲ್ಲಿ ಸಂಕ್ಷಿಪ್ತವಾಗಿ ಹಿಡಿದಿಟ್ಟಿದ್ದಾರೆ. ಇವುಗಳ ಜೊತೆಗೆ ಸಹನಟರಾದ ಎಂ.ಎಸ್. ಜಹಾಂಗೀರ ಅವರ ಗಪದ್ಯ, ಮೌನೇಶ ಬಡಿಗೇರ ಅವರ ಪ್ರವೇಶಿಕೆ ಮತ್ತು ಶ್ರೀಧರ ಹೆಗ್ಗೋಡು ಅವರ ಕೆಲವೇ ಕೆಲವು ಮಾತುಗಳ ಹಿನ್ನುಡಿ ಈ ಕೃತಿಯ ಸೊಗಸನ್ನು, ಮಹತ್ವವನ್ನು ಹೆಚ್ಚಿಸಿವೆ.

ನಾಟಕವೊಂದರ ರಂಗಪ್ರಸ್ತುತಿಯ ಪೂರ್ವತಯಾರಿಯ ಪ್ರಕ್ರಿಯೆಯನ್ನು ಆಖೈರಾಗಿ ಹಿಡಿದಿಡುವುದು ಕಷ್ಟ. ಆ ಸಂಕೀರ್ಣ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ಅಲ್ಲಿಯ ಮುಖ್ಯ ಅಂಶಗಳನ್ನು ಸೋಸಿಕೊಳ್ಳುತ್ತ, ಅದನ್ನು ಮರುಕಥಿಸುವಾಗ ಕೊಂಚ ತಾತ್ವಿಕಗೊಳಿಸುತ್ತ, ಆ ಎಲ್ಲವನ್ನೂ ಕಥನದ ದಾರದಲ್ಲಿ ಪೋಣಿಸುವ ಕೌಶಲ ಬಲ್ಲ ಚನ್ನಕೇಶವ ನಿಜಕ್ಕೂ ಮಾಯಗಾರ. ಈ ಪುಸ್ತಕದಲ್ಲಿ ಅವರು ಮಾಡಿರುವುದು ಗಾಳಿಯನ್ನು ಮುಷ್ಟಿಯಲ್ಲಿ ಹಿಡಿದು ಅದಕ್ಕೊಂದು ಆಕಾರ ಕೊಡುವ ಪ್ರಯತ್ನವನ್ನೇ.

ರಂಗ ಪುರಾಣದ ಬಗ್ಗೆ ಕೇಳಬೇಕಾದುದು ‘ಇದು ಯಾವ ಪ್ರಕಾರದ ಪುಸ್ತಕ’ ಎಂಬ ನಿಖರ ಪ್ರಶ್ನೆಯನ್ನಲ್ಲ; ಬದಲಾಗಿ ‘ಇದು ಏನೇನನ್ನು ಮಾಡುವ ಪುಸ್ತಕ’ ಎಂಬ ಪ್ರಶ್ನೆಯನ್ನು. ಬದುಕಿನುದ್ದಕ್ಕೂ ತಾನು ತೊಡಗಿಕೊಂಡ ಕ್ಷೇತ್ರಗಳಲ್ಲಿ ಪರಿಪೂರ್ಣತೆಯ ಸಿದ್ಧಿಗಾಗಿ ಹಟಯೋಗಿಯಂತೆ ಕೆಲಸ ಮಾಡುತ್ತಿದ್ದ ಚನ್ನಕೇಶವರ ಈ ಪುಸ್ತಕಕ್ಕೆ ಹತ್ತು ಹಲವು ಆಯಾಮಗಳಿವೆ. ತೋರಮಟ್ಟಿಗೆ ರಂಗಶಿಕ್ಷಣ, ರಂಗಪ್ರದರ್ಶನದ ಅನುಭವ ಕಥನಗಳೇ ಇಲ್ಲಿದ್ದರೂ ಈ ಪುಸ್ತಕ ನಿಜವಾಗಿಯೂ ರಂಗಪ್ರಯೋಗವೊಂದರ ಆತ್ಮಕಥೆ. ಅಷ್ಟಲ್ಲದೆ ಈ ಪುಸ್ತಕ ಯಾವುದೇ ವಿದ್ಯೆಯ ಕಲಿಕೆ ಸಾಧ್ಯವಾಗುವುದು ಹೇಗೆ, ನಮ್ಮ ಸಮಗ್ರ ಶಿಕ್ಷಣ ವ್ಯವಸ್ಥೆ ಹೇಗಿದೆ, ನಮ್ಮ ಸಾಂಸ್ಕೃತಿಕ ನೀತಿ ಹೇಗಿದೆ ಎಂಬ ಪ್ರಶ್ನೆಗಳನ್ನೂ ತನ್ನ ಇಂಗಿತದಲ್ಲಿರಿಸಿದೆ.

ಪುಸ್ತಕದ್ದೇ ಒಂದು ನಿದರ್ಶನ. ‘ರಂಗಶಿಕ್ಷಣ ಕೇಂದ್ರದ ದಿನಚರಿಯು ಕೋಲಾಟ ಆಡುವುದರೊಂದಿಗೆ ಶುರುವಾಗುತ್ತಿತ್ತು. ಹೊಸ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಾದ ತಿರುಗಾಟದ ನಟರೇ ಹಾಡಿನೊಂದಿಗೆ ಕೋಲಾಟ ಕಲಿಸಿಕೊಡಬೇಕಿತ್ತು. ಕೋಲಾಟವಾಡುವ ಹೊತ್ತಿನಲ್ಲೇ ಪಕ್ಕದ ಕೋಣೆಯಿಂದ ‘ಮೀಡಿಯಾ’ ಪಾತ್ರಧಾರಿ ಭವಾನಿಗೆ ನಿರ್ದೇಶಕ ಜಂಬೆಯವರು ಮಾತುಗಾರಿಕೆಯನ್ನು ಕಲಿಸುತ್ತಿದ್ದರು. ಅದರ ಮುಂದೆ ಕೋಲಾಟದ ಈ ಪೂರ್ವಭಾವಿ ಶಿಕ್ಷಣ ಬಹಳ ಸಪ್ಪೆಯೆನಿಸುತ್ತಿತ್ತು. ಕೋಲಾಟಕ್ಕೂ ನಟನೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗಳೇಳುತ್ತಿದ್ದರೂ, ಒಂದು ವೃತ್ತಿಪರ ನಾಟಕದಲ್ಲಿ ಪಾತ್ರ ಮಾಡುವುದಕ್ಕೆ ಎಷ್ಟೊಂದು ತಯಾರಿಯ ಅಗತ್ಯವಿರುತ್ತದೆಯೆಂಬ ಅರಿವು ಮನಸ್ಸಿಗೆ ಬಂದು, ನಮ್ಮ ಕೋಲಿನ ಬಡಿತದ ತೀವ್ರತೆಯನ್ನು ಹೆಚ್ಚಿಸುತ್ತಿತ್ತು.’ ಚನ್ನಕೇಶವರ ಈ ನಿರೂಪಣೆಯನ್ನು ಯಾವುದೇ ಕ್ಷೇತ್ರದ ಕಲಿಕೆಯ ಜೊತೆಗೆ ಇಟ್ಟು ನೋಡಬಹುದಾಗಿದೆ.

ನಟ-ನಟಿಯರು ಅಭಿನಯಕ್ಕಾಗಿ ತಮ್ಮ ಶರೀರವನ್ನು ಹದಗೊಳಿಸುವುದಕ್ಕಾಗಿ, ಲಯವನ್ನು ಸಿದ್ಧಿಸುವುದಕ್ಕಾಗಿ ಕೋಲಾಟವನ್ನು ಪ್ರತಿನಿತ್ಯ ಅಭ್ಯಾಸ ಮಾಡಿದರೆ; ವೈದ್ಯಕೀಯ, ಕಾನೂನು, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ ಇತ್ಯಾದಿಗಳ ಕಲಿಕಾರ್ಥಿಗಳು ತಮ್ಮ ಶೈಕ್ಷಣಿಕ ತರಬೇತಿ ಮತ್ತು ಬೌದ್ಧಿಕ ಸಿದ್ಧಿಗಾಗಿ ಪ್ರತಿನಿತ್ಯ ಯಾವುದನ್ನು, ಹೇಗೆ ಅಭ್ಯಾಸ ಮಾಡಬೇಕು ಎಂದು ಯೋಚಿಸುವಂತೆಯೂ ಈ ಪುಸ್ತಕದ ನಿರೂಪಣೆ ಇದೆ.

ಚನ್ನಕೇಶವರಿಗೆ ತಾನು ಕಟ್ಟುವುದು ‘ಪುರಾಣ’ವಷ್ಟೇ ಅಲ್ಲ ಎಂಬುದು ಗೊತ್ತಿದೆ. ಹಾಗಾಗಿ ಇದು ಬಿ.ವಿ. ಕಾರಂತ, ಜಂಬೆ, ಅಕ್ಷರ, ರಘುನಂದನ, ಜಹಾಂಗೀರ, ಅಚ್ಯುತ, ಆನಂದ, ಮೇಕಪ್ ನಾಣಿ, ಹನುಮಕ್ಕ, ಗ್ವಾಮಾರದನಳ್ಳಿ ಮಂಜುನಾಥ ಮೊದಲಾದವರ ಕುರಿತು ನಿರ್ಮಾಣವಾಗಿರುವ ಕಥೆ, ಉಪಕಥೆಗಳನ್ನು ಮಡಿಚಿಟ್ಟ ರಂಜನೀಯ ರಸಗವಳವಷ್ಟೇ ಅಲ್ಲ. ರಂಗವನ್ನು ನೋಡುವ, ನಟನೆಯನ್ನು ಅಭ್ಯಸಿಸುವ, ಬದುಕನ್ನು ಅರ್ಥೈಸುವ, ಸಮಾಜವನ್ನು ವಿಮರ್ಶಿಸುವ ಸ್ವತಂತ್ರ ಯೋಚನೆಯೂ ಇಲ್ಲಿ ಉದ್ದಕ್ಕೆ ಪ್ರವಹಿಸಿದೆ.

ಅನೇಕ ಸ್ವಾರಸ್ಯಕರ ಪ್ರಕರಣಗಳು ಇಲ್ಲಿವೆ. ಯಾವತ್ತೂ ನೀಟಾಗಿ ಬಾಚಿಸಿಕೊಂಡು ಮಲಗಿಯೇ ಇರುವ ಕಾರಂತರ ತಲೆಕೂದಲು ‘ಸಂಗೀತ’ ಎಂಬ ಪದ ಕೇಳಿದ ಕೂಡಲೇ ನಿಮಿರಿ ನಿಂತು ಕ್ಷೌರಿಕರಿಗೆ ಕತ್ತರಿಸಲು ಅನುಕೂಲವಾಗುವುದು, ಆರ್‍ಎಸ್‍ಎಸ್ ಕಾರ್ಯಕರ್ತರೂ, ತಿರುಗಾಟದ ಮ್ಯಾನೇಜರ್‍ರು ಆಗಿದ್ದ ಶ್ರೀಕಾಂತ ಹಾಗೂ ನಟ ಅಚ್ಯುತರ ನಡುವೆ ರಾಜಕೀಯ ವಿಷಯಗಳಲ್ಲಿ ಭಿನ್ನಮತ ಮತ್ತು ಲೌಕಿಕ ವಿಷಯಗಳಲ್ಲಿನ ಸಹಮತ, ಮಿಠಾಯಿ ಕಳ್ಳ ಜಹಾಂಗೀರ, ತಟ್ಟೀರಾಯನಿಗೆ ಮರಿಗಳು ಹುಟ್ಟಿದ್ದು, ‘ಜತೆಗಿರುವನು ಚಂದಿರ’ ನಾಟಕದ ಮದುವೆ ದೃಶ್ಯದಲ್ಲಿ ಸ್ವತಃ ತಹಸೀಲ್ದಾರ್ ರಂಗಕ್ಕೆ ಬಂದು ‘ಬಡೇಮಿಯಾ’ನಿಗೆ ಐನೂರು ರೂಪಾಯಿ ಮುಯ್ಯಿ ಮಾಡಿದ್ದು, ಅದೇ ನಾಟಕವನ್ನು ಗಲಗಲಿಯ ಪಕ್ಕದ ಹಳ್ಳಿಯಲ್ಲಿ ಮಾಡಿದಾಗ ಆಲಮಟ್ಟಿ ಅಣೆಕಟ್ಟನ್ನು ಎತ್ತರ ಮಾಡಿದ್ದರಿಂದ ಮನೆ-ಜಮೀನು ಕಳೆದುಕೊಂಡ ಜನರ ಶೋಕತಪ್ತ ಪ್ರತಿಕ್ರಿಯೆ ಇತ್ಯಾದಿ ಘಟನೆಗಳನ್ನು ಚನ್ನಕೇಶವ ಮರುಕಥಿಸುವಾಗ ಮನುಷ್ಯರ ಹಾಡು-ಪಾಡುಗಳ, ಸೊಗಸು-ಸಂಕೀರ್ಣತೆಗಳು ಅನಾವರಣಗೊಳ್ಳುವ ಪರಿಯೇ ಚಂದ. ಹಾಗೆಯೇ ತಿರುಗಾಟದಲ್ಲಿದ್ದಾಗ ನಟರಿಗೆ ಹಂದಿಗಳು ಕೊಟ್ಟ ಕಾಟವೇ ಮೊದಲಾದ ಘಟನೆಗಳು ರಂಗಭೂಮಿಯನ್ನು ಕರ್ನಾಟಕ ಹೇಗೆ ಪರಿಗಣಿಸಿದೆ ಎಂಬುದನ್ನೂ ಹೇಳುತ್ತವೆ.

ರಂಜನೀಯ ಘಟನೆಗಳನ್ನು ಮತ್ತು ಗಹನ-ಗಂಭೀರ ವಿಷಯಗಳನ್ನು ಚನ್ನಕೇಶವ ಇಲ್ಲಿ ‘ವಿಚಾರ-ವಿನೋದ’ವೆಂಬ ‘ಸಮಾಸ ಪ್ರಕ್ರಿಯೆ’ಗೆ ಒಳಪಡಿಸಿದ್ದಾರೆ. ಪುಸ್ತಕದಲ್ಲಿ ನಿರೂಪಿತವಾದ ಪ್ರಸಂಗಗಳನ್ನು ವಿನೋದವಾಗಿಯಷ್ಟೇ ಕಂಡರೆ ಇಲ್ಲಿರುವ ವಿಚಾರದ ಮುಖ ಗೋಚರಿಸದೆ ಹೋಗಬಹುದು. ಉದಾಹರಣೆಗೆ ರಘುನಂದನರು, ಲಂಕೇಶರ ‘ಈ ನರಕ ಈ ಪುಲಕ’ವನ್ನು ರಂಗಕ್ಕೆ ಅಳವಡಿಸುವಾಗ ನಟರನ್ನು ಚಡ್ಡಿಯಲ್ಲಿ ನಿಲ್ಲಿಸುತ್ತಾರೆ ಎಂದು ತಿಳಿದು ಹೆಗ್ಗೋಡಿನ ಬಟ್ಟೆ ಅಂಗಡಿಗಳಲ್ಲಿದ್ದ ಎಲ್ಲ ಕಾಚಾಗಳು ಮಧ್ಯಾಹ್ನದೊಳಗೆ ಖಾಲಿ ಆದ ತಮಾಷೆಯ ಘಟನೆ. ಈ ನಿರೂಪಣೆಯ ಜೊತೆಜೊತೆಗೆ ಚನ್ನಕೇಶವ ಕೊಡುವ ಇತರ ವಿವರಣೆಗಳು ಬೇರೆಯೇ ಲೋಕವನ್ನು ತೋರಿಸುತ್ತವೆ.

ರಘುನಂದನರು ತಮ್ಮ ನಾಟಕದ ಪೂರ್ವತಯಾರಿಯಲ್ಲಿ ಗೋಪಾಲಕೃಷ್ಣ ಅಡಿಗರ ‘ತೆಗೆದುಕೋ ನೀಕೊಟ್ಟ ಎಲ್ಲ ವಸ್ತ್ರವಿಲಾಸ.... ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ’ ಕವನವನ್ನು ರಂಗರೂಪಕ್ಕೆ ತರುವಾಗ ನಡೆದ ಪ್ರಕರಣವಿದು. ಈ ದೃಶ್ಯದ ಮೂಲಕ ರಘುನಂದನ, ರಂಗಭೂಮಿಯ ತತ್ತ್ವವನ್ನೂ, ಬದುಕಿನ ದರ್ಶನವನ್ನೂ ಒಟ್ಟಿಗೇ ಕಾಣಿಸುತ್ತಿದ್ದಾರೆ ಎಂಬ ಸೂಕ್ಷ್ಮವನ್ನು ತೋರಿಸುವುದರೊಂದಿಗೆ ನೂರೆಂಟು ತೂತು ಬಿದ್ದಿರುವ ನಟರ ಕಾಚಾಗಳನ್ನೂ ಚನ್ನಕೇಶವ ಪರಿಪರಿಯಾಗಿ ವರ್ಣಿಸುತ್ತಾರೆ. ಈಗ ಇದು ರಂಜನೀಯವೋ, ದಯನೀಯವೋ? ಬಡತನದ ರೂಪಕಗಳಂತಿರುವ ತೂತು ಕಾಚಾಗಳನ್ನು ಧರಿಸಿದ ನಟರ ಸ್ಥಿತಿಗೆ ಗಹಗಹಿಸಿ ನಗಬೇಕೋ ಅಥವಾ ದುಗುಡ ಪಡಬೇಕೋ? ಚನ್ನಕೇಶವ ಓದುಗರ ಸೂಕ್ಷ್ಮತೆಯನ್ನು ಇಲ್ಲಿ ಪರೀಕ್ಷೆಗೊಡ್ಡುತ್ತಿದ್ದಾರೆ. ಅರ್ಥಾತ್ ಲೇಖಕ ವಿಚಾರ-ವಿನೋದವನ್ನು ‘ಸಮಾಸ ಪ್ರಕ್ರಿಯೆ’ಗೆ ಒಳಪಡಿಸಿ ಬರೆದಂತೆಯೇ; ಓದುಗರೂ ಈ ‘ಸಮಾಸ ಪ್ರಕ್ರಿಯೆ’ಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಪುಸ್ತಕದ ಪಾರಾಯಣ ಆಗುತ್ತದೆಯೇ ಶಿವಾಯಿ ಓದು ಆಗುವುದಿಲ್ಲ. ಬರಿದೆ ಓದುಗರಿಗೂ, ಸೂಕ್ಷ್ಮ ಓದುಗರಿಗೂ ವ್ಯತ್ಯಾಸವನ್ನು ಮಾಡುವಂತಿದೆ ಚನ್ನಕೇಶವರ ನಿರೂಪಣೆ.

ರಂಗ ಶಿಕ್ಷಣದ ಒಟ್ಟು ಸ್ವರೂಪದಲ್ಲಿ ಭಯವೂ, ಒತ್ತಡವೂ ಇದೆ. ಜೊತೆಗೆ ತುಂಟತನಕ್ಕೆ, ಸೃಜನಶೀಲ ವಿಲಾಸಗಳ ಸ್ವಚ್ಛಂದ ಹರಿವಿಗೆ ಮುಕ್ತ ಅವಕಾಶವೂ ಇದೆ. ಇದು ರಂಗಶಿಕ್ಷಣದಲ್ಲಿ ಮಾತ್ರ ಯಾಕಿದೆ, ಶಿಕ್ಷಣದ ಉಳಿದ ನಿಕಾಯಗಳಲ್ಲಿ ಇದು ಯಾಕೆ ಗೈರಾಗಿದೆ ಎಂಬ ಪ್ರಶ್ನೆಯನ್ನೂ ಈ ಪುಸ್ತಕ ನಮ್ಮೆದುರು ನಿಲ್ಲಿಸುತ್ತದೆ. ನೀನಾಸಂ ಸೇರಿದಂತೆ ಅನೇಕ ಒಳ್ಳೆಯ ರಂಗಶಾಲೆಗಳು ತಮ್ಮ ವಿದ್ಯಾರ್ಥಿಗಳಲ್ಲಿ ಬಹುತೇಕರನ್ನು ಸೃಜನಶೀಲರನ್ನಾಗಿಸಿವೆ, ಸ್ವತಂತ್ರರನ್ನಾಗಿಸಿವೆ, ಸಮರ್ಥರನ್ನಾಗಿಸಿವೆ. ಎಲ್ಲಕ್ಕಿಂತಲೂ ಹೆಚ್ಚು ಅವರನ್ನು ಸೆಕ್ಯುಲರ್‌ಗಳನ್ನಾಗಿಸಿವೆ. ಆದರೆ ಅದನ್ನದು ಹೇಗೆ ಸಾಧಿಸಿದೆ ಎಂಬುದು ಈ ಪುಸ್ತಕದಲ್ಲಿಲ್ಲ. ಅದಕ್ಕೇ ಇದು ಪುರಾಣವಾಗಿದೆ. ಇಲ್ಲದಿದ್ದರೆ ಇದೊಂದು ಗಂಭೀರ ಅಧ್ಯಯನದ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತೋ ಏನೋ?

ರಂಗಪುರಾಣವನ್ನು ಓದುವ ಅನುಭವ ಮತ್ತು ನಾಟಕ ನೋಡುವ ಅನುಭವ ಎರಡೂ ಒಂದೇ ಆಗಿವೆ. ಇಂತಹ ಒಂದು ಪುಸ್ತಕ ಕನ್ನಡದಲ್ಲಿ ಇದುವರೆಗೆ ಬಂದಿಲ್ಲ ಎಂಬುದು ಎಷ್ಟು ಸಂತೋಷದ ವಿಷಯವೋ, ಇದರ ಕರ್ತೃ ಚನ್ನಕೇಶವ ಈಗ ನಮ್ಮೊಡನಿಲ್ಲ ಎಂಬುದು ಅಷ್ಟೇ ದುಃಖದ ಮಾತೂ ಹೌದು.

ಕೃತಿ: ರಂಗಪುರಾಣ

ಲೇ: ಚನ್ನಕೇಶವ

ಪ್ರ: ಥಿಯೇಟರ್‌ ತತ್ಕಾಲ್‌ ಬುಕ್ಸ್‌

ಸಂ: 9901234161

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT