‘ಆರ್‌ಎಸ್‌ಎಸ್‌’ನ ಮಿನಿ ವಿಶ್ವಕೋಶ ಈ ಪುಸ್ತಕ

7

‘ಆರ್‌ಎಸ್‌ಎಸ್‌’ನ ಮಿನಿ ವಿಶ್ವಕೋಶ ಈ ಪುಸ್ತಕ

Published:
Updated:

ಒಂದಿಷ್ಟು ಜನರ ಪ್ರೀತಿ–ಅಭಿಮಾನಕ್ಕೂ, ಇನ್ನೊಂದಿಷ್ಟು ಜನರ ತೀವ್ರ ಕೋಪಕ್ಕೂ ತುತ್ತಾಗಿರುವ ಭಾರತದ ಸಾಂಸ್ಕೃತಿಕ ಸಂಘಟನೆಗಳ ಪೈಕಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್‌.ಎಸ್‌.ಎಸ್‌) ಒಂದು ಸ್ಥಾನ ಇದ್ದೇ ಇರುತ್ತದೆ. ರಾಜಕೀಯದಿಂದ ಆರಂಭಿಸಿ, ಸಮಾಜದ ನೂರೆಂಟು ಕ್ಷೇತ್ರಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಅಸ್ತಿತ್ವದಲ್ಲಿ ಇರುವ ಈ ಸಂಘಟನೆಯ ಬಗ್ಗೆ ಮಾಹಿತಿ ನೀಡುವ ಪುಸ್ತಕಗಳಿಗೆ ಬರವಿಲ್ಲ. ಅಂತಹ ಪುಸ್ತಕಗಳ ಸಾಲಿಗೆ ಸೇರಿಯೂ, ತುಸು ಭಿನ್ನ ಜಾಗವೊಂದನ್ನು ಕಂಡುಕೊಂಡಿರುವ ಪುಸ್ತಕ ‘RSS 3600’. ಇದನ್ನು ಬರೆದವರು ಸಂಘದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿರುವ ರತನ್ ಶಾರದಾ.

ಇದನ್ನು ‘ಸೀಕ್ರೆಟ್ಸ್‌ ಆಫ್‌ ಆರ್‌ಎಸ್‌ಎಸ್‌’ ಎಂಬ ಹೆಸರಿನಲ್ಲಿ ಈ ಮೊದಲು ಲಭ್ಯವಿದ್ದ, ಇದೇ ಲೇಖಕರ ಪುಸ್ತಕದ ಪರಿಷ್ಕೃತ ಆವೃತ್ತಿಯಂತೆಯೂ ಓದಬಹುದು. ಹಳೆಯ ಪುಸ್ತಕವನ್ನು ಓದಿರದಿದ್ದರೆ, ಇದನ್ನು ಸಂಪೂರ್ಣ ಹೊಸ ಪುಸ್ತಕವನ್ನಾಗಿಯೂ ಓದಿಕೊಳ್ಳಬಹುದು. ಈ ಪುಸ್ತಕವನ್ನು ಬ್ಲೂಮ್ಸ್‌ಬರಿ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.

ಪುಸ್ತಕ ಆರಂಭವಾಗುವುದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ವಹಿಸಿದ ಪಾತ್ರದ ಬಗ್ಗೆ ವಿವರಿಸುವ ಮೂಲಕ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾದ ಒಂದು ಲಕ್ಷದ ಮೂವತ್ತು ಸಾವಿರ ಜನರ ಪೈಕಿ, ಒಂದು ಲಕ್ಷ ಜನ ಆರ್‌ಎಸ್‌ಎಸ್‌ ಹಿನ್ನೆಲೆ ಹೊಂದಿದ್ದವರು ಎಂಬ ಮಾಹಿತಿಯನ್ನು ಲೇಖಕರು ನೀಡುತ್ತಾರೆ. ಆರ್‌ಎಸ್‌ಎಸ್‌ ಮಾತ್ರವಲ್ಲದೆ ‘ಸಂಘ’ ಎನ್ನುವ ‘ಪರಿವಾರ’ದಲ್ಲಿನ ಬೇರೆ ಬೇರೆ ಸಂಘಟನೆಗಳ ಕುರಿತ ವಿವರ ಕೂಡ ಇದರಲ್ಲಿ ಇದೆ.

‘ಸಂಘದ ಬಗ್ಗೆ ತಿಳಿದುಕೊಳ್ಳಬೇಕು ಎಂದಾದರೆ, ಸಂಘವನ್ನು ಸೇರಬೇಕು. ಆಗಲೇ ಅದರ ಶಕ್ತಿ–ವ್ಯಾಪ್ತಿ ಗೊತ್ತಾಗುವುದು’ ಎಂಬ ಮಾತನ್ನು ಅದರ ಜೊತೆ ಗುರುತಿಸಿಕೊಂಡವರು ಹೊರಗಿನವರಿಗೆ ಆಗಾಗ ಹೇಳುವುದುಂಟು. ಇಂತಹ ಸಂಘದ ಬಗ್ಗೆ ಪರಿಚಯ ಮಾಡಿಕೊಡುವುದು ಕೃತಿಯ ಉದ್ದೇಶ. ‘ಇದು ಆರ್‌ಎಸ್‌ಎಸ್‌ ಕುರಿತ ಕಿರು ವಿಶ್ವಕೋಶದಂತೆ ಇದೆ. ವಿವರಣೆಗಳನ್ನು ನಿರ್ಮೋಹದಿಂದ ನೀಡಿ ಲೇಖಕರು ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂಬ ಮೆಚ್ಚುಗೆ ಕೂಡ ಇದಕ್ಕೆ ಬಂದಿದೆ.
ಪುಟಗಳು: 342
ಬೆಲೆ: ₹ 499

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 1

  Sad
 • 2

  Frustrated
 • 9

  Angry

Comments:

0 comments

Write the first review for this !