ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮೀಸಲಾತಿಯ ತಲ್ಲಣಗಳಿಗೆ ಧ್ವನಿ

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಪರಿಸರದ ತಲ್ಲಣಗಳು ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಅದಕ್ಕೆ ವಿಶೇಷವಾದ ಕಾಣ್ಕೆ ಬೇಕು. ಹಾಗಾಗಿಯೇ ಹತ್ತನೇ ಶತಮಾನದ ಜೈನ ಕವಿಗಳು, ನಂತರ ಬಂದ ವಚನಕಾರರು ಹಾಗೂ ಕುವೆಂಪು ಅಂಥವರು ತಾವು ಬದುಕಿದ್ದ ಕಾಲದ ಅಸಮಾನತೆಯ ತಲ್ಲಣಗಳಿಂದ ಬೇಸತ್ತು ರೂಢಿಮೂಲವಾದ ಮೌಢ್ಯಗಳನ್ನು ಧಿಕ್ಕರಿಸಿ ಪರ್ಯಾಯ ಸಂಸ್ಕೃತಿಯನ್ನು ಕಟ್ಟಿ ಜನಸಾಮಾನ್ಯರಿಗೂ ಮುಟ್ಟಿಸಿದರು. ಅದೇ ರೀತಿಯ ತಲ್ಲಣಕ್ಕೆ ಒಳಗಾದ ಪ್ರೊ.ಎಚ್‌.ಲಿಂಗಪ್ಪ ಅವರು ಬರೆದ ಕೃತಿಯೇ ‘ಮೀಸಲಾತಿಯ ತಲ್ಲಣಗಳು’. ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳು ಸಂದಿದ್ದರೂ ದಮನಿತ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಸಂಪೂರ್ಣವಾಗಿ ಸಿಕ್ಕಿಲ್ಲ ಎನ್ನುವ ತಲ್ಲಣದಿಂದ ಈ ಕೃತಿ ಬರೆದಿದ್ದಾರೆ.

ಲಿಂಗಪ್ಪ ಅವರ ಬಹುತೇಕ ಬರಹಗಳಲ್ಲಿ ಇಂತಹದ್ದೊಂದು ತಲ್ಲಣವನ್ನು ಕಾಣಬಹುದು. ದೇವರಾಜ ಅರಸು ಅವರಲ್ಲೂ ಇಂತಹದ್ದೊಂದು ತಲ್ಲಣವಿತ್ತು. ಅದೇ ಕಾರಣಕ್ಕೆ ಇರಬೇಕು, ಈ ಕೃತಿಯನ್ನು ಲೇಖಕರು ಅರಸು ಅವರಿಗೆ ಸಮರ್ಪಿಸಿದ್ದಾರೆ. ಲಿಂಗಪ್ಪ ಅವರು ಅನುಭವಿಸಿದ ನೋವಿನಗಾಥೆ ಇಲ್ಲಿ ಹರಳುಗಟ್ಟಿದೆ. ಸಾವಿರಾರು ವರ್ಷಗಳಿಂದ ಸಮಾಜದ ಮುಗ್ಧರಲ್ಲಿ ಜಾತಿ, ಮತ, ಧರ್ಮದ ವಿಷಬೀಜ ಬಿತ್ತಿ, ಅಸಮಾನತೆಯ ಕಂದರ ನಿರ್ಮಿಸಿ, ಅಸ್ಪೃಶ್ಯತೆಯ ಪಿಡುಗಿಗೆ ಕಾರಣವಾದ ಪುರೋಹಿತಶಾಹಿ ವ್ಯವಸ್ಥೆಯನ್ನು ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ರಾಜಕೀಯ ಪಕ್ಷವೂ ದಮನಿತರ ಪರವಾಗಿಲ್ಲ ಎಂದು ಖಂಡತುಂಡವಾಗಿ ಹೇಳುತ್ತಾರೆ. ಮೀಸಲಾತಿಯನ್ನು ಮುಂದುವರಿಸಿರುವುದು ದಲಿತರ ಓಟಿಗಾಗಿಯೇ ಹೊರತು ಅಂತಃಕರಣದಿಂದಲ್ಲ ಎಂಬ ಕಟುವಾಸ್ತವವನ್ನೂ ತೆರೆದಿಟ್ಟಿದ್ದಾರೆ.

ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹುಟ್ಟಿದ ನಾಡು ಮಹಾರಾಷ್ಟ್ರ, ಮಹಾತ್ಮ ಗಾಂಧಿ ಜನಿಸಿದ ನಾಡು ಗುಜರಾತ್‌, ಬಸವಣ್ಣ–ಅರಸು ಜನಿಸಿದ ನಾಡು ಕರ್ನಾಟಕ – ಈ ಮೂರೂ ರಾಜ್ಯಗಳನ್ನು ಸಾಕ್ಷಿಯಾಗಿ ಇಟ್ಟುಕೊಂಡು ದಮನಿತರ ಬದುಕನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಪರಿಪೂರ್ಣ ಮೀಸಲಾತಿ ಇನ್ನೂ ಜಾರಿಗೆ ಬಂದಿಲ್ಲ. ಹಾಗೆಯೇ ಸಂವಿಧಾನದ ಆಶಯಗಳೂ ಈಡೇರಿಲ್ಲ ಎಂಬುದನ್ನು ದಾಖಲಿಸಿದ್ದಾರೆ. ಮನುಸ್ಮೃತಿಯ ಆಶಯಗಳೇ ಎಲ್ಲೆಡೆ ಬಿಂಬಿತವಾಗುತ್ತಿವೆ ಎಂಬ ಸತ್ಯಕ್ಕೆ ಓದುಗರನ್ನು ಮುಖಾಮುಖಿ ಮಾಡಿದ್ದಾರೆ.

ಬ್ರಾಹ್ಮಣ್ಯದ ಮನಃಸ್ಥಿತಿ ದಲಿತರ ಮೇಲೆ ಹೇಗೆ ದಬ್ಬಾಳಿಕೆ ನಡೆಸಿದೆ ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ ಲಿಂಗಪ್ಪ. ದಲಿತರ ಮೇಲೆ ನಡೆಯುವ ದಬ್ಬಾಳಿಕೆ, ಕೊಲೆ–ಸುಲಿಗೆ, ಅತ್ಯಾಚಾರಗಳ ದೊಡ್ಡ ಪಟ್ಟಿಯನ್ನೇ ಪ್ರಕಟಿಸಿದ್ದಾರೆ. ದೌರ್ಜನ್ಯ ತಡೆಗೆ ಏನೆಲ್ಲ ಕಾನೂನುಗಳು ಇದ್ದರೂ ಅವುಗಳು ಕಡಿಮೆಯಾಗುವ ಬದಲು ಹೆಚ್ಚುತ್ತಿರುವುದನ್ನು ಕಂಡು ಲೇಖಕರು ಮಮ್ಮಲ ಮರುಗಿದ್ದಾರೆ.

ಎಡ–ಬಲ ಭೇದವಿಲ್ಲದೆ ಮನಸ್ಸು ಲೇಖಕರದು. ಶೋಷಣೆಗೆ ಒಳಪಟ್ಟ ಹಿಂದುಳಿದ ವರ್ಗಗಳ ಎಲ್ಲರಿಗೂ ಮೀಸಲಾತಿ ಸಿಗಲಿ ಎನ್ನುವುದು ಅವರ ಅಪೇಕ್ಷೆ. ಈ ಕೃತಿಯಲ್ಲಿರುವ ವಿಷಯಗಳು ಹೆಚ್ಚು, ಹೆಚ್ಚು ಚರ್ಚೆಗೆ ಒಳಪಟ್ಟಷ್ಟೂ ದಲಿತ ಚಿಂತನೆಯಲ್ಲಿ ಹೊಸ ಹೂರಣ ಸೇರುವುದರಲ್ಲಿ ಸಂಶಯವಿಲ್ಲ.

ಕೃತಿ: ಮೀಸಲಾತಿ ತಲ್ಲಣ
ಲೇ: ಪ್ರೊ. ಎಚ್‌. ಲಿಂಗಪ್ಪ
ಪ್ರ: ರಶ್ಮಿ ಪ್ರಕಾಶನ, ಚಿತ್ರದುರ್ಗ
ಸಂ: 9945998099

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT