ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕೊರತೆ ತುಂಬುವ ರಂಗ ವಿಮರ್ಶೆ

Last Updated 27 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕಥೆಗಾರ್ತಿ, ರಂಗಾಸಕ್ತ ಲೇಖಕಿ ವೈ.ಕೆ. ಸಂಧ್ಯಾ ಶರ್ಮ ಅವರು ಬರೆದ 57 ನಾಟಕಗಳ ವಿಮರ್ಶಾ ಸಂಕಲನವೇ ಈ ಕೃತಿ. ಅಂದಹಾಗೆ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ರಂಗ ವಿಮರ್ಶೆ ಲೇಖನಗಳ ಗುಚ್ಛ ಕೂಡ ಈ ಪುಸ್ತಕದಲ್ಲಿದೆ. ಇಲ್ಲಿ ವಿಮರ್ಶೆಗೊಳಗಾದ ಎಲ್ಲ ನಾಟಕಗಳೂ ಮಹತ್ವದ್ದೇ ಆಗಿವೆ.

ಕನ್ನಡದಲ್ಲಿ ನಾಟಕ ಪ್ರಯೋಗಗಳ ವಿಮರ್ಶೆ ಇನ್ನೂ ಅಷ್ಟಾಗಿ ಬೆಳೆದಿಲ್ಲ. ಈ ಕೊರತೆಯನ್ನು ತುಂಬುವ ಪ್ರಯತ್ನದಲ್ಲಿರುವ ಸಂಧ್ಯಾ ಅವರು, ರಂಗಭೂಮಿಯ ಕುರಿತು ತಮಗಿರುವ ಆಳವಾದ ಆಸಕ್ತಿಯಿಂದ ಪ್ರಯೋಗಗಳನ್ನು ತುಂಬಾ ಸೊಗಸಾಗಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ.

ಪ್ರತೀ ನಾಟಕದ ಸನ್ನಿವೇಶದ ಸೂಕ್ಷ್ಮತೆಯನ್ನು ವಿವರಿಸಿರುವ ಲೇಖಕಿ ಪಾತ್ರಧಾರಿಗಳ ಹೆಸರು ಉಲ್ಲೇಖಿಸಿಯೇ ಅಭಿಪ್ರಾಯ ಮಂಡಿಸಿದ್ದಾರೆ. ಪ್ರದರ್ಶನಗಳಲ್ಲಿ ಸುಧಾರಣೆ ಕಾಣಬೇಕಾದ ಅಂಶಗಳನ್ನು ಸಲಹೆಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ರಂಗಕರ್ತೃಗಳು, ಕಲಾವಿದರು ಯಾರಿಗೂ ಚುಚ್ಚದ ರೀತಿ ಬರಹದಲ್ಲಿಸಮತೋಲನಕಾಯ್ದುಕೊಂಡಿದ್ದಾರೆ ಲೇಖಕಿ. ಹಾಗಂತ ದೋಷಗಳ ಕುರಿತು ಅವರೇನೂ ಮೌನ ವಹಿಸಿಲ್ಲ. ಕೇವಲ ಎರಡೇ ಪಾತ್ರಗಳಲ್ಲಿ ನಡೆಯುವ ‘ಅಕ್ಷಯಾಂಬರ’ದಿಂದ ಹಿಡಿದು ಹತ್ತಾರು ಪಾತ್ರಗಳ ಜನಪದ ಕಥಾನಕ ‘ಸಿರಿ’ಯವರೆಗೆ ಲೇಖಕಿ ಸಮಾನ ದೃಷ್ಟಿಯಿಟ್ಟು ವಿಮರ್ಶಿಸಿದ್ದಾರೆ. ಹವ್ಯಾಸಿಗಳಿಂದ ಹಿಡಿದು ವೃತ್ತಿಪರ ತಂಡಗಳ ಪ್ರದರ್ಶನವನ್ನೂ ವಿಮರ್ಶೆಯ ಒರೆಗೆ ಹಚ್ಚಿದ್ದಾರೆ. ಅಲ್ಲಲ್ಲಿ ನಾಟಕದ ಕಥೆಯ ತರ್ಕದ ಚರ್ಚೆ ನಡೆಸಿದ್ದಾರೆ.

ನಾಟಕ ವಿಮರ್ಶಿಸುವುದು ಸಮಯ ಹಾಗೂ ತಾಳ್ಮೆ ಬೇಡುವ ಕೆಲಸ. ಆದರೆ, ಸಂಧ್ಯಾ ಅವರು ಪದಗಳ ಇತಿಮಿತಿಯಲ್ಲಿ, ಸಮಯದ ಚೌಕಟ್ಟಿನಲ್ಲಿ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಇದು ರಂಗ ಅಭ್ಯಾಸಿಗಳಿಗೆ, ರಂಗ ತಂಡಗಳಿಗೆ ಸುಧಾರಣೆಯ ಮಾರ್ಗದರ್ಶಿಯೂ ಹೌದು. ಸಮಕಾಲೀನ ಕನ್ನಡದ ರಂಗಭೂಮಿ ಹಾದು ಬಂದಿರುವ ದಾರಿಯ ದಾಖಲೀಕರಣವಾಗಿಯೂ ಈ ಕೃತಿಯನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT