ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಕನ್ನಡದ ವಿಜ್ಞಾನ ಪಠ್ಯಕ್ಕೊಂದು ದೀವಟಿಗೆ

Last Updated 21 ಮೇ 2022, 19:31 IST
ಅಕ್ಷರ ಗಾತ್ರ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಳೆದೊಂದು ಶತಮಾನದಲ್ಲಿ ಆಗಿರುವ ಬೆಳವಣಿಗೆಗಳ ವೇಗ ದಿಗಿಲು ಮೂಡಿಸುವಂತಿದೆ. ಈ ನಾಗಾಲೋಟದ ಜೊತೆ ಹೆಜ್ಜೆ ಹಾಕದಿದ್ದರೆ ಕನ್ನಡಿಗರು ಹಿಂದುಳಿಯಬೇಕಾಗುತ್ತದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ವಿಜ್ಞಾನ ಕಲಿಕೆಗೆ ಸಮರ್ಥವಾಗಿ ದುಡಿಸಿಕೊಳ್ಳಲಾಗುತ್ತಿದೆಯೇ ಎಂದು ನೋಡಿದರೆ ನಿರಾಸೆಯೇ ಉತ್ತರ.

ವಿಜ್ಞಾನ ಮತ್ತು ತಂತ್ರಜ್ಞಾನದ ‘ತಿಳಿವು’ಗಳನ್ನು ಕಟ್ಟಿಕೊಡಲು ಕನ್ನಡವನ್ನು ಹದಗೊಳಿಸುವುದು ಇಂದಿನ ಕಾಲಘಟ್ಟದ ತುರ್ತು. ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿರುವ ಪ್ರಶಾಂತ ಸೊರಟೂರ ಅವರು ರಚಿಸಿರುವ ‘ಕನ್ನಡದಲ್ಲಿ ವಿಜ್ಞಾನ ಎಡವುತ್ತಿರುವುದು ಎಲ್ಲಿ?’ ಕೃತಿಯು ಈ ನಿಟ್ಟಿನಲ್ಲಿ ಒಂದು ಪ್ರಯತ್ನ. ವಿಜ್ಞಾನ ಮತ್ತು ತಂತ್ರಜ್ಞಾನದ ನಾಗಾಲೋಟದ ಜ್ಞಾನವನ್ನು ತಾಯಿ ನುಡಿಯಲ್ಲೇ ಕನ್ನಡಿಗರು ದಕ್ಕಿಸಿಕೊಳ್ಳುವಲ್ಲಿ ಆಗಬೇಕಾದ ಕೆಲಸಗಳಿಗೆ ಬೆಳಕಿಂಡಿಯಂತಿದೆ ಈ ಹೊತ್ತಿಗೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಸಲು, ಸುಲಭವಾಗಿ ಅರ್ಥವಾಗುವ ಕನ್ನಡ ಪದ ಕಟ್ಟುವ ಕಾಯಕವನ್ನು ಆಸಕ್ತಿಯಿಂದ ನಿರ್ವಹಿಸುತ್ತಾ ಬಂದವರು ಪ್ರಶಾಂತ. ವಿಜ್ಞಾನ ಮತ್ತು ತಂತ್ರಜ್ಞಾನದ ಬರಹಗಳನ್ನು ಪ್ರಕಟಿಸುವ ‘ಅರಿಮೆ’ ವೆಬ್‌ಸೈಟ್‌ ಮತ್ತು ಕನ್ನಡದಲ್ಲೇ ವಿಜ್ಞಾನ ಕಲಿಸುವ ವಿಡಿಯೊಗಳನ್ನು ಬಿತ್ತರಿಸುವ ‘ತಿಳಿ’ ಯುಟ್ಯೂಬ್‌ ಚಾನೆಲ್‌ ನಿರ್ವಹಣೆ ಹಾಗೂ ಪರಿಣಿತರ ಮೂಲಕ
ವಿಜ್ಞಾನದ ಮಾಹಿತಿ ಹಂಚಿಕೊಳ್ಳುವ ‘ಅರಿಮೆ @ ಮುನ್ನೋಟ’ ಕಾರ್ಯಕ್ರಮಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡವರು ಅವರು. ಮಕ್ಕಳಿಗೆ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವಾಗ ಆಗುತ್ತಿರುವ ಲೋಪ ಸರಿಪಡಿಸುವ ಮೂಲಕ ವಿಜ್ಞಾನವನ್ನುತಾಯಿ ನುಡಿಯಲ್ಲೇ ಕಲಿಯುವ ಆಸಕ್ತಿಯನ್ನು ಅವರಲ್ಲಿ ಬೆಳೆಸಬಹುದು. ವಿಜ್ಞಾನವನ್ನು ಜನರು ನಿತ್ಯ ಬಳಸುವ ಸುಲಭ ಪದಗಳ ಮೂಲಕ ಕಟ್ಟಿಕೊಡಬೇಕು ಎಂಬ ನಂಬಿಕೆ ಅವರದು.

ಪ್ರಾಥಮಿಕ ಕಲಿಕೆಯ ಹಂತದಲ್ಲೇ ವಿದ್ಯಾರ್ಥಿಗಳಿಗೆ ಗ್ರಹಿಕೆಗೆ ನಿಲುಕದ ಪದಗಳಲ್ಲಿ ವಿಜ್ಞಾನವನ್ನು ಕಲಿಸುವ ಮೂಲಕ ಹೇಗೆ ಗೊಂದಲ ಮೂಡಿಸಲಾಗುತ್ತಿದೆ ಎಂಬುದನ್ನು ಲೇಖಕರು ಉದಾಹರಣೆಗಳ ಸಮೇತ ಕಟ್ಟಿಕೊಟ್ಟಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಜ್ಞಾನ ಪಠ್ಯಗಳಲ್ಲಿ ಬಳಸಿರುವ 1,403 ಪದಗಳನ್ನು ಪಟ್ಟಿ ಮಾಡಿ, ಅವುಗಳನ್ನು ತಿಳಿಯುವ ಕನ್ನಡ ಪದಗಳು (ಬೆಳಕು, ಮುಚ್ಚಳ ಇತ್ಯಾದಿ), ತಿಳಿಯುವ ಬೇರೆ ನುಡಿಯ ಪದಗಳು (ಬೀಜ, ಪ್ರಾಣಿ... ಇತ್ಯಾದಿ) ತಿಳಿಯದ ಕನ್ನಡ ಪದಗಳು (ಅಟ್ಟೆ, ಬಿರಿ ವ್ಯವಸ್ಥೆ... ಇತ್ಯಾದಿ) ಹಾಗೂ ತಿಳಿಯದ ಬೇರೆ ನುಡಿಯ ಪದಗಳು (ದ್ಯುತಿ, ಅಪರ್ಕ್ಯುಲಮ್‌... ಇತ್ಯಾದಿ) ಎಂದು ಪಟ್ಟಿ ಮಾಡಿದ್ದಾರೆ. ಅಷ್ಟೇ ಅಲ್ಲ ಅವುಗಳಿಗೆ ಪರ್ಯಾಯವಾಗಿ ಮಕ್ಕಳಿಗೆ ವಿಜ್ಞಾನವನ್ನು ಸುಲಭವಾಗಿ ತಿಳಿಸುವಂತಹ ಪದಗಳನ್ನು ಕನ್ನಡದಲ್ಲೇ ಹೇಗೆ ಕಟ್ಟಬಹುದು ಎಂಬುದನ್ನೂ ವಿವರಿಸಿದ್ದಾರೆ.

‘ರಿಯಾಕ್ಟಿವಿಟಿ’ ಎಂಬ ಇಂಗ್ಲಿಷ್‌ ಪದಕ್ಕೆ ಕನ್ನಡ ಪಠ್ಯದಲ್ಲಿ ‘ಕ್ರಿಯಾಪಟುತ್ವ’ ಎಂಬ ಪದವನ್ನು ಬಳಸಲಾಗಿದೆ. ಅದರ ಬದಲು ‘ಚುರುಕುತನ’ ಎಂದು ಸರಳವಾಗಿ ಹೇಳಿದರೆ ಸುಲಭವಾಗಿ ಅರ್ಥವಾಗುತ್ತದೆ. ‘ಶೀತಲೀಕರಣ’ದ ಬದಲು ‘ತಂಪುಗೊಳಿಸುವಿಕೆ’ ಪದ ಬಳಕೆಯೇ ತಂಪು ನೀಡುತ್ತದೆ. ‘ಸಂಕೋಚನ’ ಪದಕ್ಕಿಂತ ‘ಕುಗ್ಗುವಿಕೆ’ ಕನ್ನಡಕ್ಕೆ ಹೆಚ್ಚು ಒಗ್ಗಿಕೊಳ್ಳುತ್ತದೆ. ‘ಗ್ಯಾಲ್ವನೀಕರಣ’ ಪದಕ್ಕೆ ಬದಲಾಗಿ ‘ಸತುಸವರಿಕೆ’ ಎಂದು ಬಳಸುವುದು ಒಳ್ಳೆಯದು ಎಂಬ ಅಭಿಪ್ರಾಯ ಲೇಖಕರದು. ‘ಹೃತ್ಕರ್ಣ’ದ ಬದಲು ‘ಹೃದಯದ ಮೇಲ್ಕೋಣೆ’ ಹಾಗೂ ‘ಹೃತ್ಕುಕ್ಷಿ’ ಬದಲು ‘ಹೃದಯದ ಕೆಳಕೋಣೆ’ ಎಂದರೆ ವಿದ್ಯಾರ್ಥಿಗಳು ಗೊಂದಲವಿಲ್ಲದೇ ಕಲಿಯುತ್ತಾರೆ ಎಂಬುದು ಅವರ ಪ್ರತಿಪಾದನೆ. ವಿಜ್ಞಾನ ಕಲಿಸಲು ಬಳಕೆಯಾಗಿರುವ ಇಂತಹ 1,073 ಪದಗಳಿಗೆ ಅವರು ಪರ್ಯಾಯ ಪದಗಳನ್ನೂ ಸೂಚಿಸಿದ್ದಾರೆ. ಈ ಎಲ್ಲ ಪರ್ಯಾಯ ಪದಗಳೂ ಒಪ್ಪತಕ್ಕವುಗಳಲ್ಲ. ಉದಾಹರಣೆಗೆ, ‘ನವೀಕರಿಸಬಹುದಾದ’ ಪದಕ್ಕೆ ಬದಲಾಗಿ ‘ಮರುಪಡೆಯಬಹುದಾದ’ ಪದ ಬಳಸಬಹುದು ಎಂಬುದು ಲೇಖಕರ ಸಲಹೆ. ಇಲ್ಲಿ ಅವರು ಸೂಚಿಸಿರುವ ಪರ್ಯಾಯ ಪದಕ್ಕಿಂತ ಈಗ ಬಳಕೆಯಲ್ಲಿರುವ ಪದವೇ ಹೆಚ್ಚು ಸರಳ ಅನಿಸುತ್ತದೆ. ‘ನಾನು ಹೇಳಿದ್ದನ್ನೇ ಒಪ್ಪಬೇಕಿಲ್ಲ. ಅವುಗಳನ್ನೂ ತಿದ್ದುಪಡಿ ಮಾಡಬಹುದು’ ಎಂದೂ ಲೇಖಕರು ವಿನಮ್ರವಾಗಿ ಹೇಳಿಕೊಂಡಿದ್ದಾರೆ.

ಈ ಪುಸ್ತಕ ರೂಪುಗೊಳ್ಳುವುದರ ಹಿಂದೆ ಆಳವಾದ ಅಧ್ಯಯನವೂ ಇದೆ. ಇದರಲ್ಲಿರುವ ವಿಚಾರಗಳು ಲೇಖಕರೊಬ್ಬರ ಅಭಿಪ್ರಾಯಗಳಲ್ಲ. ವಿಜ್ಞಾನ ಕಲಿಸುವ ಶಿಕ್ಷಕರು ಹಾಗೂ ತಜ್ಞರ ಜೊತೆ ನಡೆಸಿದ ಸಂವಾದಗಳ ಹೂರಣವೇ ಈ ಪುಸ್ತಕ. ಕನ್ನಡದಲ್ಲೆ ವಿಜ್ಞಾನ ಪದಗಳನ್ನು ಕಟ್ಟುವಾಗ ಎದುರಾಗುವ ಒಂಬತ್ತು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು, ಅವುಗಳನ್ನು ಒಂದೊಂದಾಗಿ ವಿಶ್ಲೇಷಿಸಲಾಗಿದೆ.

ಕನ್ನಡದಲ್ಲಿ ವಿಜ್ಞಾನ ಕಲಿಸುವಾಗ ಎದುರಾಗುತ್ತಿರುವ ಕಗ್ಗಂಟುಗಳು ಹಾಗೂ ಮಕ್ಕಳು ಎದುರಿಸುತ್ತಿರುವ ಕಷ್ಟಗಳನ್ನೆಲ್ಲ ಕಡೆದು ತೆಗೆದ ‘ಬೆಣ್ಣೆ’ಯಂತಿದೆ ಈ ಹೊತ್ತಿಗೆ. ಈ ಬೆಣ್ಣೆಯನ್ನೇ ಬಳಸಿಕೊಂಡು, ಇನ್ನಷ್ಟು ಚೆನ್ನಾಗಿ ಕಾಯಿಸಿ ‘ಕನ್ನಡದ ಕಂಪು’ ಸೂಸುವ ತುಪ್ಪವನ್ನು ತಯಾರಿಸಬೇಕಿದೆ. ತಾಯಿ ನುಡಿಯ ಕಳಕಳಿ ಹೊಂದಿದ ಮನಸುಗಳೆಲ್ಲವೂ ಇದಕ್ಕೆ ಕೈಜೋಡಿಸಬೇಕಿದೆ. ವಿಜ್ಞಾನದ ಸಂವಹನವನ್ನು ಕನ್ನಡದಲ್ಲೇ ಸಲೀಸಾಗಿ ನಡೆಸುವಲ್ಲಿ ಆಗಬೇಕಾದ ಕೆಲಸಕಾರ್ಯಗಳು ಬಹಳಷ್ಟಿವೆ. ಈ ಹಾದಿಯ ಆರಂಭದಲ್ಲಿ ಇಡಲಾದ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವ ಕಿರು‍ಪ್ರಯತ್ನವಾಗಿದೆ ಈ ಕೃತಿ.

ಕೃತಿ: ಕನ್ನಡದಲ್ಲಿ ವಿಜ್ಞಾನ ಎಡವುತ್ತಿರುವುದು ಎಲ್ಲಿ?

ಲೇ: ಪ್ರಶಾಂತ ಸೊರಟೂರ

ಪ್ರ: ಮುನ್ನೋಟ ಟ್ರಸ್ಟ್‌

ಪುಟಗಳು: 164

ದರ: ₹ 200

ಸಂ: 9353119792

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT