ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪರಿಚಯ | ಸೀರೆಯೆನ್ನುವ ನದಿಯಗುಂಟ…

Last Updated 29 ಮಾರ್ಚ್ 2020, 2:01 IST
ಅಕ್ಷರ ಗಾತ್ರ

ಸೀರೆಯೊಂದಿಗೆ ತಳಕು ಹಾಕಿಕೊಂಡಷ್ಟು ಕಥೆಗಳು ಬಹುಶಃ ಬೇರಾವುದೇ ಬಟ್ಟೆಯ ಸಂದರ್ಭದಲ್ಲೂ ಇಲ್ಲ. ಸೀರೆ ಎನ್ನುವುದು ಭಾರತವೂ ಹೌದು, ಮಹಾಭಾರತವೂ ಹೌದು. ಇಂಥ ಸೀರೆಯ ಜಗತ್ತಿನ ಕಾವ್ಯರೂಪಿ ಚಿತ್ರಗಳನ್ನು ಒಂದೆಡೆ ಕಲೆಹಾಕುವ ಹಂದಲಗೆರೆ ಗಿರೀಶ್ ಮತ್ತು ದೀಪಾ ಗಿರೀಶ್ ಅವರ ಪ್ರಯತ್ನವೇ ‘ಸುರಗಿ’ ಸಂಕಲನ.

ವೈದೇಹಿ, ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಇಂದಿನ ಭುವನಾ ಹಿರೇಮಠ, ಚಿದಂಬರ ನರೇಂದ್ರರವರೆಗಿನ ಐವತ್ತೆಂಟು ಕವಿಗಳು ಈ ಸಂಕಲನದ ಮೂಲಕ ಅಪೂರ್ವ ಸೀರೆಯೊಂದನ್ನು ನೇಯ್ದಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಇರುವ ಸೀರೆ ಒಂದು ವಸ್ತ್ರದ ರೂಪದಲ್ಲಿ ಕಾಣುವುದಕ್ಕಿಂತಲೂ ಹೆಚ್ಚಾಗಿ, ಭಾವಕೋಶದ ರೂಪದಲ್ಲಿಯೇ ಎದ್ದುಕಾಣುತ್ತದೆ. ಇದಕ್ಕೆ ಉದಾಹರಣೆಯ ರೂಪದಲ್ಲಿ, ಸಂಕಲನದ ಅರ್ಧಕ್ಕೂ ಹೆಚ್ಚು ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಅಮ್ಮನ ರೂಪಕವನ್ನು ಗಮನಿಸಬಹುದು. ‘ಮಗು ಮಲಗಿದೆ ತೊಟ್ಟಿಲಲ್ಲಿ / ಅವ್ವ ಹೊರಗೆಲ್ಲೋ ಹೋಗಿದ್ದಾಳೆ / ಅವ್ವ ಒಣಗಾಕಿದ ಸೀರೆಯ ಗಾಳಿ ತೂಗುತ್ತಿದೆ / ಮಗು ಅತ್ತಲೇ ನೋಟ, ಬುಗ್ಗೆ ಬುಗ್ಗೆ ನಗು / ಹೀಗೇ ಜಗವಂತೆ’ ಎನ್ನುವ ಫೀನಿಕ್ಸ್ ರವಿ ಅವರ ಕಿರುಗವಿತೆ ಸೀರೆಯೊಂದಿಗೆ ಮೂಡಿಬರುವ ಅಮ್ಮನ ಆಪ್ತಚಿತ್ರಕ್ಕೆ ಉತ್ತಮ ಉದಾಹರಣೆ. ಸುಕನ್ಯಾ ಕಳಸ ಅವರ ‘ಅಮ್ಮನ ಹತ್ತಿ ಸೀರೆಗಳು’ ಕವಿತೆ, ಸೀರೆಯ ಮೂಲಕ ಮಾತೃ ವಾತ್ಸಲ್ಯ ತಲೆಮಾರುಗಳಿಗೆ ಹರಿದುಬರುವುದನ್ನು ಹಿಡಿದಿಡುತ್ತದೆ. ಜಡೆಯ ಹಿನ್ನೆಲೆಯಲ್ಲಿನ ಮಾತೃ ಮುಖವನ್ನು ಕಾಣಲು ಹಂಬಲಿಸುವ ಜಿ.ಎಸ್. ಶಿವರುದ್ರಪ್ಪನವರ ‘ಜಡೆ’ ಕವಿತೆಯನ್ನು ನೆನಪಿಸುವ ಪ್ರವೀಣರ ‘ಲಕ್ಷಾಂತರ ಬತ್ತಿ’, ಅಮ್ಮನ ಸೀರೆ ಚಿಂದಿಯಾದರೂ ಲಕ್ಷಾಂತರ ದೀಪಗಳಿಗೆ ಬತ್ತಿಯಾಗುವ ಬೆರಗನ್ನು ಹಿಡಿದಿಟ್ಟಿದೆ.

ಅಮ್ಮ ಮಾತ್ರವಲ್ಲ – ಹೂಬಳ್ಳಿಗಳೂ ಹಕ್ಕಿಚುಕ್ಕಿಗಳೂ ಇಲ್ಲಿನ ಸೀರೆಗಳಲ್ಲಿವೆ. ಜೋಕಾಲಿಯ ರೂಪದಲ್ಲೂ ಮಡಿಲು ಒಡಲಿನ ರೂಪದಲ್ಲೂ ಸೀರೆಯ ಬಿಂಬಗಳಿವೆ. ಸವಿತಾ ನಾಗಭೂಷಣ ಅವರ ಕವಿತೆ ಸೀರೆಯಾಚೆಗಿನ ಕೇಳದ ಮಗ್ಗದ ಸದ್ದಿಗೆ ಹಾತೊರೆದರೆ, ಲಲಿತಾ ಸಿದ್ಧಬಸವಯ್ಯ ದ್ರೌಪದಿ ವಸ್ತ್ರಾಪಹರಣ ಪ್ರಸಂಗವನ್ನು ಸೀರೆಯ ನೆಪದಲ್ಲಿ ನೆನಪಿಸಿಕೊಂಡಿದ್ದಾರೆ. ಚಾಂದ್ ಪಾಷ ಅವರ ‘ಲೋಕದ ಸೀರೆಯನುಟ್ಟ’ ಕವಿತೆ ಶರಣೆ ಸಂಕವ್ವೆಯ ಮೂಲಕ ಸೀರೆಯ ಘನತೆಯನ್ನು ಚಿತ್ರಿಸಲು ಪ್ರಯತ್ನಿಸಿದೆ.

ಸಂಕಲನದ ಮುಖ್ಯವಾದ ಕವಿತೆ ಪ್ರತಿಭಾ ನಂದಕುಮಾರ್ ಅವರ ‘ನನಗಿನ್ನೂ ಸೀರೆ ಉಡಲು ಬರೊಲ್ಲ – ಬಿಪಾಶಾ ಬಸು’. ಸೀರೆಯುಡಲು ಬರುವುದಿಲ್ಲ ಎನ್ನುವ ನಟಿಯೊಬ್ಬಳ ಹೇಳಿಕೆಗೆ ಪ್ರತಿಕ್ರಿಯೆಯ ರೂಪದಲ್ಲಿ, ಸೀರೆಯುಡುವ ಕಲೆಯನ್ನು ನಿರಿಗೆ ನಿರಿಗೆಯಾಗಿ ಬಣ್ಣಿಸುತ್ತ, ಸೀರೆಯಾಚೆಗಿನ ಜಗತ್ತನ್ನು ಪ್ರತಿಭಾ ಅನಾವರಣಗೊಳಿಸಿದ್ದಾರೆ. ವರ್ತಮಾನ–ಚರಿತ್ರೆ–ಪುರಾಣಗಳನ್ನು ಒಳಗೊಂಡಿರುವ ಈ ಸೀರೆಮೀಮಾಂಸೆ ಕೊನೆಗೊಳ್ಳುವುದು, ‘ಎಚ್ಚರಿಕೆ ಬಿಪಾಶಾ / ಇದು ಪಾಶ’ ಎನ್ನುವ ಮಾರ್ಮಿಕ ಸಾಲಿನೊಂದಿಗೆ.

ಸಂಕಲನದ ಮತ್ತೊಂದು ಗಮನಾರ್ಹ ಕವಿಗೆ ಸಂಧ್ಯಾರಾಣಿ ಅವರ ‘ಐದು ಮೀಟರ್ ದಿನಚರಿ’. ‘ಈಗಿನ ಹೆಣ್ಣುಗಳು ಸೀರೆಯೊಂದಿಗೆ / ಮಡಿಲನ್ನೂ ಕಳೆದುಕೊಂಡರು’ ಎನ್ನುವ ಯಾರದೋ ಮಾತಿಗೆ ಸಿಟ್ಟಾಗುವ ಕವಯಿತ್ರಿ, ಹೆಣ್ಣಿನ ಅಸ್ಮಿತೆ ಸೀರೆಯೊಳಗಿಲ್ಲ ಎನ್ನುವ ಸರಿಯಾದ ತೀರ್ಮಾನಕ್ಕೆ ಬರುತ್ತಾರೆ. ಆದರೆ, ಕವಿತೆಯ ಕೊನೆಯಲ್ಲಿ – ‘ಒಂದೊಂದು ಸೀರೆಯ ಮಡತೆಯಲ್ಲೂ ಒಂದೊಂದು ಕಥೆ / ಅಕ್ಷರಗಳೇ ಇಲ್ಲದ ಡೈರಿಯ ಪುಟ / ಒಂದೊಂದಾಗಿ ಜೋಡಿಸಿಟ್ಟರೆ / ನಾನೆಂದೂ ಬರೆಯದ ನನ್ನ ಆತ್ಮಚರಿತ್ರೆ’ ಎನ್ನುವ ನಿಲುವಿಗೆ ಬರುತ್ತಾರೆ. ಸೀರೆಯೇ ಬದುಕಾಗಿರುವ ವಸ್ತುಸ್ಥಿತಿ ಒಂದುಕಡೆ, ಸೀರೆಯಾಚೆಗೆ ಜಿಗಿಯಬಯಸುವ ಮನಸ್ಥಿತಿ ಮತ್ತೊಂದು ಕಡೆ – ಈ ವೈರುಧ್ಯವನ್ನು ಕವಿತೆ ಸೊಗಸಾಗಿ ಹಿಡಿದಿಟ್ಟಿದೆ.

ಸೀರೆ ಮಹಿಳೆಯರ ಉಡುಪಾದರೂ ಸಂಕಲನದಲ್ಲಿ ಪುರುಷರೂ ಸಮಾನ ಸಂಖ್ಯೆಯಲ್ಲಿರುವುದು ಗಮನಾರ್ಹ. ಆಶ್ಚರ್ಯಕರ ಸಂಗತಿಯೆಂದರೆ, ಗಂಡಿನ ಸೀರೆಯ ಕವಿತೆಗಳು ಕೂಡ ಅಮ್ಮ–ಮಗಳ ಸುತ್ತಲೇ ಗಿರಕಿ ಹೊಡೆಯುವುದು. ಸೀರೆಗಿರಬಹುದಾದ ರಮ್ಯ–ಮಾದಕ ಆಯಾಮದ ಹಿನ್ನೆಲೆಯಲ್ಲಿ ಸಾಧ್ಯವಾಗಬಹುದಿದ್ದ ತುಂಟತನವನ್ನು ಕವಿಗಳು ಬಿಟ್ಟುಕೊಟ್ಟಿದ್ದಾರೆ.

‘ಇಂದು ಭೂಮಿಯ ತುಂಬೆಲ್ಲಾ ಬಗೆಬಗೆಯ ನದಿಗಳು ಸಾವಿರ ಸಾವಿರ ನದಿಗಳಂತೆ’ ಎನ್ನುತ್ತಾರೆ ಭುವನಾ. ನದಿಯಷ್ಟೇ ಸೊಗಸಾದ ಹಾಗೂ ಸಮೃದ್ಧವಾದ ಸೀರೆಯ ವಿಕಾಸ–ಚರಿತ್ರೆಗೆ ಸಂಬಂಧಿಸಿದ ದೀರ್ಘ ಪ್ರಸ್ತಾವನೆಯೊಂದು ’ಸುರಗಿ’ಗೆ ಅಗತ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT