ಶುಕ್ರವಾರ, ಫೆಬ್ರವರಿ 26, 2021
28 °C

ಸಮ ಸಮಾಜದ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

‘ಮನೆ ಕೆಲಸ ಮತ್ತು ಹೊರಗಿನ ಕೆಲಸ’ ಈ ಹೆಸರೇ ಒಳಗಿನ ಹೂರಣವನ್ನು ನಮ್ಮ ಮುಂದಿಡುತ್ತದೆ. ಇದೊಂದು ಸಮಾಜಶಾಸ್ತ್ರೀಯ ಅಧ್ಯಯನ ಎಂದರೆ ತಪ್ಪಾಗದು. ತೆಲುಗಿನ ಪ್ರಸಿದ್ಧ ಮಾರ್ಕ್ಸ್‌ವಾದಿ ಮತ್ತು ಸ್ತ್ರೀವಾದಿ ಚಿಂತಕಿ ರಂಗನಾಯಕಮ್ಮ ಈ ಕೃತಿಯ ಮೂಲ ಲೇಖಕಿ. ಬಿ. ಸುಜ್ಞಾನಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾರ್ಕ್ಸ್‌ವಾದ ಎಂದ ಮೇಲೆ ಸಮ ಸಮಾಜದ ಚಿಂತನೆ ಎಂಬುದು ದಿಟ.

ರಂಗನಾಯಕಮ್ಮ ಅವರು ರಾಮಾಯಣವನ್ನು ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ವಿಮರ್ಶಿಸಿದ ಮೊದಲ ಲೇಖಕಿ. ಅವರ ‘ರಾಮಾಯಣ ವಿಷವೃಕ್ಷಂ’ ಪ್ರಸಿದ್ಧ ಸ್ತ್ರೀವಾದಿ ಕೃತಿಯಾಗಿ ವರ್ಗಭೇದದ ವಿರುದ್ಧದ ಮಹತ್ವದ ಕೃತಿಯಾಗಿದೆ. ಮನೆಕೆಲಸ ಮತ್ತು ಹೊರಗಿನ ಕೆಲಸಕ್ಕೂ ಇರುವ ಸಂಬಂಧವನ್ನು ಅವರು ಮಹಿಳೆಗೂ, ಪುರುಷನಿಗೂ ಇರುವ ಶ್ರಮ ಸಂಬಂಧವಾಗಿದೆ ಎಂದು ಹೇಳುತ್ತಾರೆ. ಸ್ತ್ರೀಪುರುಷ ಸಂಬಂಧ ಎಂದ ಕೂಡಲೇ ಶಾರೀರಿಕ ಸಂಬಂಧ ಎಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ, ಶ್ರಮ ಸಂಬಂಧವೂ ಇದ್ದರೆ ಮಾತ್ರ ಅದು ಸ್ತ್ರೀಪುರುಷ ಸಂಬಂಧ ಎಂದು ರಂಗನಾಯಕಮ್ಮ ಹೇಳುತ್ತಾರೆ. 

ಮನೆ ಕೆಲಸವನ್ನು ಹೆಣ್ಣು ಮತ್ತು ಗಂಡು ಹಂಚಿಕೊಂಡು ಮಾಡಬೇಕು. ಹಾಗೆಯೇ ಹೊರಗಿನ ಕೆಲಸವನ್ನೂ ಹಂಚಿಕೊಳ್ಳಬೇಕು. ಅಷ್ಟೇ ಅಲ್ಲ ಶ್ರಮವನ್ನೇ ಪಡದೇ ಕುಳಿತು ಉಣ್ಣುವ ವರ್ಗದವರೂ ಶ್ರಮ ಪಡಬೇಕು ಎಂದು ಪ್ರತಿಪಾದಿಸುತ್ತಾರೆ. ಆಗ ಸ್ತ್ರೀ ಶೋಷಣೆಯ ವ್ಯವಸ್ಥೆ ಬದಲಾಗಲು ದಾರಿ ನಿರ್ಮಾಣವಾಗುತ್ತದೆ ಎಂಬುದು ಅವರ ಆಶಾವಾದ.

ಗಂಡನ ಸಂಬಳದಿಂದ ಮನೆ ಕೆಲಸದವಳಿಗೆ ಸಂಬಳ ನೀಡುವುದಾದರೆ ಅದನ್ನೇ ಪತ್ನಿಗೆ ಯಾಕೆ ನೀಡಬಾರದು ಎಂದೂ ಅವರು ವಿಮರ್ಶಿಸುತ್ತಾರೆ. ಕೆಲಸದವಳು ಮನೆಗೆಲಸ ಮಾಡಿದರೆ ಉತ್ಪಾದಕಳಾಗುತ್ತಾಳೆ. ಗೃಹಿಣಿ ಮಾಡಿದರೆ ಅನುತ್ಪಾದಕರ ಪಟ್ಟಿಗೆ ಸೇರುತ್ತಾಳೆ. ಈ ಸಮಾಜದಲ್ಲಿ ಗೃಹಿಣಿ ಎಂಬ ಪದದ ನಿಜವಾದ ಅರ್ಥ ಗುಲಾಮಳು, ಸೇವಕಿ ಎನ್ನುತ್ತಾರೆ ಅವರು. 

ಉತ್ಪಾದಕ ಶ್ರಮ, ಅನುತ್ಪಾದಕ ಶ್ರಮ, ಕುಟುಂಬ ಶ್ರಮ, ಸ್ವತಂತ್ರ ಶ್ರಮ, ದಂಪತಿ ನಡುವಿನ ಶ್ರಮ ಸಂಬಂಧಗಳಲ್ಲಿ ಯಾವುದು ಪ್ರಧಾನ? ಗಂಡ ಹೆಂಡತಿಯರ ನಡುವಿನ ಅಸಮಾನತೆ, ಮನೆಯ ಒಳಗೆ ಮತ್ತು ಹೊರಗೆ ಕೆಲಸ ಮಾಡುವ ಮಹಿಳೆಯರು, ಮನೆಕೆಲಸ ಸಾಮಾಜಿಕ ಶ್ರಮದಲ್ಲಿ ಭಾಗವೇ–
ಅಲ್ಲವೇ? ಸ್ತ್ರೀ ಪುರುಷರ ಸಮಾನತೆ, ದೈಹಿಕ ಸಂಬಂಧ... ಹೀಗೆ ಮನೆಯೊಳಗಿನ ಮತ್ತು ಹೊರಗಿನ ಒಟ್ಟು ಸ್ತ್ರೀಪುರುಷನ ಅಸ್ತಿತ್ವದ ಹಲವು ಆಯಾಮಗಳ ಚರ್ಚೆ ನಡೆಸಿದ್ದಾರೆ.

ಒಟ್ಟು ಆಶಯ ಸಮಸಮಾಜಸದ ನಿರ್ಮಾಣವೇ ಆಗಿದೆ. ಓದುತ್ತಾ ಹೋದಂತೆ ಹೌದಲ್ವಾ ಎಂದು ಎನಿಸದೇ ಇರದು. ಎಲ್ಲವೂ ನಮಗೆ ಗೊತ್ತಿದೆ. ಆದರೆ, ನಾವು ಹಾಗಿಲ್ಲ ಎಂಬ ಅರಿವನ್ನೂ ಈ ಪುಸ್ತಕ ಮೂಡಿಸುತ್ತದೆ. 

ಮನೆ ಕೆಲಸ ಮತ್ತು ಹೊರಗಿನ ಕೆಲಸ

ಮೂಲ: ರಂಗನಾಯಕಮ್ಮ

ಲೇಖಕರು: ಬಿ. ಸುಜ್ಞಾನಮೂರ್ತಿ

ಪ್ರಕಾಶನ: ಲಡಾಯಿ ಪ್ರಕಾಶನ, ಗದಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು