ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಶ್ರೀಸಾಹಿತ್ಯದ ಆಕರಗ್ರಂಥ

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಬಿ.ಎಂ. ಶ್ರೀಕಂಠಯ್ಯನವರು ಆಧುನಿಕ ಕನ್ನಡ ಸಾಹಿತ್ಯಪ್ರವರ್ತಕರಲ್ಲಿ ಪ್ರಮುಖರು; ‘ಕನ್ನಡದ ಕಣ್ವ’ ಎಂದು ಹೆಸರಾದವರು; ‘ಸಿಗನ್ನಡಂ ಗೆಲ್ಗೆ ಬಾಳ್ಗೆ’, ‘ಆಳ್‌ ಕನ್ನಡ ತಾಯ್‌’, ‘ಬಾಳ್‌ ಕನ್ನಡ ತಾಯ್‌’ ಎಂದು ಘೋಷಿಸಿದವರು; ಕನ್ನಡದ ಏಳಿಗೆಗಾಗಿ ದಿಟವಾಗಿ ಶ್ರಮಿಸಿದವರು; ಹಲವು ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಅದರಲ್ಲೂ ಅವರ ‘ಇಂಗ್ಲಿಷ್‌ ಗೀತಗಳು’ ಮೂಡಿಸಿದ ಸಂಚಲನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಒಂದು ಮೈಲುಗಲ್ಲೆನಿಸಿದೆ. ಶ್ರೀಯವರ ಸಾಹಿತ್ಯವನ್ನು ಕುರಿತಂತೆ ಇದುವರೆಗೆ ಪ್ರಕಟವಾಗಿರುವ ನಾಡಿನ ಪ್ರಮುಖ ವಿದ್ವಾಂಸರ, ವಿಮರ್ಶಕರ ಮುಖ್ಯಲೇಖನಗಳನ್ನೆಲ್ಲ ಒಟ್ಟುಗೂಡಿಸಿ ಪ್ರಕಟಿಸಿರುವ ಕೃತಿಯೇ ‘ಶ್ರೀಕೌಸ್ತಭ’.

ಜಿ. ಎಂ. ಹೆಗಡೆ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲನೆಯದರಲ್ಲಿ ಶ್ರೀಯವರ ‘ಇಂಗ್ಲಿಷ್‌ ಗೀತಗಳು, ‘ಹೊಂಗನಸುಗಳು’ ಕುರಿತು ಲೇಖನಗಳಿವೆ; ಎರಡನೆಯ ಭಾಗದಲ್ಲಿ ಅವರ ನಾಟಕಸಾಹಿತ್ಯದ ವಿಮರ್ಶೆಯಿದ್ದರೆ, ಮೂರನೆಯ ಭಾಗದಲ್ಲಿ, ಕನ್ನಡ ಸಾರಸ್ವತಲೋಕಕ್ಕೆ ಬಿ.ಎಂ.ಶ್ರೀ.ಯವರ ಕೊಡುಗೆಯ ಬಗ್ಗೆ ವಿಮರ್ಶಾತ್ಮಕ ಲೇಖನಗಳಿವೆ. ಹಲವು ಗ್ರಂಥಗಳಲ್ಲಿ ನಾಲ್ಕಾರು ದಶಕಗಳಿಂದ ಪ್ರಕಟವಾಗಿದ್ದ ಲೇಖನಗಳ ಸಂಗ್ರಹವಾಗಿರುವ ಈ ಹೆಬ್ಬೊತ್ತಗೆ ಕನ್ನಡ ಸಾಹಿತ್ಯಚರಿತ್ರೆಯಲ್ಲೂ ಕಾವ್ಯಮೀಮಾಂಸೆಯಲ್ಲೂ ಆಕರಗ್ರಂಥವಾಗಿ ಒದಗುತ್ತದೆ ಎಂಬುದು ದಿಟ. ಮಾಸ್ತಿ, ಬೇಂದ್ರೆ, ತೀನಂಶ್ರೀ, ಕುರ್ತಕೋಟಿ, ಎ.ಆರ್‌.ಕೃ., – ಹೀಗೆ ಹಲವರ 43 ಲೇಖನಗಳು‘ಶ್ರೀಕೌಸ್ತಭ’ದಲ್ಲಿವೆ.

ಕೃತಿ: ಶ್ರೀಕೌಸ್ತಭ (ಬಿಎಂಶ್ರೀಯವರ ಬರಹಗಳನ್ನು ಕುರಿತ ವಿಮರ್ಶಾತ್ಮಕ ಲೇಖನಗಳ ಸಂಪುಟ)

ಪ್ರಧಾನ ಸಂಪಾದಕ: ಆರ್‌. ಲಕ್ಷ್ಮೀನಾರಾಯಣ

ಸಂಪಾದಕ: ಜಿ.ಎಂ.ಹೆಗಡೆ

ಪ್ರ: ಬಿ.ಎಂ.ಶ್ರೀ. ಪ್ರತಿಷ್ಠಾನ

ಸಂ:080–26615877

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT