ಭಾನುವಾರ, ನವೆಂಬರ್ 1, 2020
19 °C

ಕಬೀರ ದರ್ಶನ ಮಾಡಿಸುವ ‘ಹಂಸ’!

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಸಂತ ಕಬೀರನದು ಬಲು ಎತ್ತರದ ಸ್ಥಾನ. ಕಾಲಾತೀತವಾಗಿ ನಮ್ಮ ಸಮಾಜ, ಸಂಸ್ಕೃತಿ ಹಾಗೂ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿರುವ ಯುಗಪುರುಷ ಆತ. ಅಧ್ಯಾತ್ಮದ ಮೇರು ಶಿಖರವನ್ನೇ ಏರಿನಿಂತ ಕಬೀರ, ತನ್ನ ಪದಗಳಲ್ಲಿ ಯಾರೆಂದರೆ ಯಾರನ್ನೂ ಕುಟುಕದೇ ಬಿಟ್ಟಿಲ್ಲ. ಹೀಗಿದ್ದೂ ದೇಶ ಕಾಲಗಳನ್ನು ಮೀರಿ ಅವನಷ್ಟು ಜನರ ಪ್ರೀತಿಗೆ ಪಾತ್ರನಾಗಿರುವ ಮತ್ತೊಬ್ಬ ಕವಿಯಿಲ್ಲ.

ಸಾಮಾಜಿಕ ಅಸಮಾನತೆ, ಧಾರ್ಮಿಕ ಶೋಷಣೆ ಮತ್ತು ಸಾಂಸ್ಕೃತಿಕ ಆಷಾಢಭೂತಿತನವನ್ನು ಅತ್ಯಂತ ಕಟು ಶಬ್ದಗಳಲ್ಲಿ ಧಿಕ್ಕರಿಸಿದ ಕಬೀರ, ಪುರೋಹಿತಶಾಹಿ ಠೇಂಕಾರದಲ್ಲಿ ನಲುಗಿದ ಸಮಾಜದ ನಿಮ್ನವರ್ಗಗಳಲ್ಲಿ ಆತ್ಮಾಭಿಮಾನವನ್ನೂ ಜಾಗೃತಿಗೊಳಿಸಿದ ಸಾಧಕ. ಆದಿಮ ಬಂಡಾಯ ಕವಿ. ಆತ ಕವಿ, ಸಂತ, ತತ್ತ್ವಜ್ಞಾನಿ ಎಲ್ಲವೂ ಹೌದಾದರೂ ಅವೆಲ್ಲದಕ್ಕಿಂತ ಪೂರ್ವದಲ್ಲಿ ಮಹಾನ್‌ ಮಾನವತಾವಾದಿ. ಹೌದು, ಆತನ ಪದಗಳನ್ನು ಮುಷ್ಟಿಯಲ್ಲಿ ಹಿಡಿದು ಹಿಂಡಿದರೆ ಮಾನವ ಪ್ರೇಮವೇ ತೊಟ್ಟಿಕ್ಕುವಷ್ಟು ಭಾವನೆಗಳ ಬನಿ ಅವುಗಳಲ್ಲಿ ತುಂಬಿದೆ. ಅಂತಹ ಕಬೀರನನ್ನು ಕೇಶವ ಮಳಗಿಯವರು ‘ಹಂಸ ಏಕಾಂಗಿ’ ಮೂಲಕ ಇದೀಗ ಕನ್ನಡಕ್ಕೆ ಕರೆತಂದಿದ್ದಾರೆ.

ಕನ್ನಡಕ್ಕೆ ಕಬೀರ ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ‘ಕಬೀರ ವಚನಾವಲಿ’ ಹೆಸರಿನಲ್ಲೇ ಮೂರು ಕೃತಿಗಳು ಬಂದಿವೆ. ದ.ರಾ. ಬೇಂದ್ರೆ ಅವರದೊಂದು, ಶೇಷ ನವರತ್ನ ಅವರದೊಂದು ಮತ್ತು ಎಚ್‌.ವಿ. ರಾಮಚಂದ್ರರಾವ್‌ ಅವರದೊಂದು. ಗೋಪಾಲ ವಾಜಪೇಯಿ ಅವರೂ ಕಬೀರನ ಕೆಲವು ದೋಹೆಗಳನ್ನು ಕನ್ನಡಕ್ಕೆ ತಂದ ನೆನಪು. ಆದರೆ, ಮಳಗಿ ಅವರು ಆಯ್ದುಕೊಂಡ ಪದಗಳು ವಿಶೇಷವಾಗಿವೆ. ಅವುಗಳನ್ನು ಕನ್ನಡತನಕ್ಕೆ ಒಗ್ಗಿಸಿದ ರೀತಿಯೂ ಅನನ್ಯವಾಗಿದೆ.

ಕಬೀರ ಹೇಳಿಕೇಳಿ ರೂಪಕಗಳ ಚಕ್ರವರ್ತಿ. ಆತನ ಕಾವ್ಯದಲ್ಲಿ ಸಂಕೇತಗಳು ಮತ್ತು ಪ್ರತೀಕಗಳ ಮೂಲಕ ಪ್ರತಿಧ್ವನಿಸುವ ಭಾವಸಾಂದ್ರತೆಯು ಅನ್ಯಾದೃಶವಾದುದು. ಆತ ಶಬ್ದಗಳ ಜತೆ ಸರಸವಾಡುವ ಗಾರುಡಿಗ. ಜನರ ಆಡುಮಾತಿನಲ್ಲೇ ಅಗಾಧ ಗೂಢಾರ್ಥಗಳಿರುವ ಪದಗಳನ್ನು ಕಟ್ಟಿದಂತಹ ನಿರ್ಗುಣ ಆರಾಧಕ, ನಿರ್ಭಯದ ಪ್ರತಿಪಾದಕ. ಆತನ ಪದಗಳಲ್ಲಿರುವ ಭಾವದ ರಸವನ್ನೂ ಹಿಡಿದಿಡುವಂತಹ ಅನುವಾದ ಯಾರಿಗೇ ಆಗಲಿ ಅಷ್ಟು ಸುಲಭ ಸಾಧ್ಯವಲ್ಲ. ಆದರೆ, ಮಳಗಿಯವರು ಪದಗಳ ಹಿಂದಿರುವ ಭಾವದ ತಂತುವನ್ನು ಗಟ್ಟಿಯಾಗಿ ಹಿಡಿದುಬಿಟ್ಟಿದ್ದಾರೆ.

‘ಭಲಾ ಹುವಾ ಮೋರಿ ಗಗರಿ ಫೂಟಿ...’ ಎನ್ನುವ ಕಬೀರವಾಣಿ ಕನ್ನಡದ ರೂಪತೊಟ್ಟ ಬಗೆ ನೋಡಿ:

‘ಚಲೋನೆ ಆತು ನನ ಗಡಿಗಿ ಒಡೀತು/ ನೀರ ಹೊರೂದು ತಪ್ಪೇ ಹೋತು/ ನನ್ನ ತಲಿಭಾರನೂ ಹಗೂರ ಆತ್ಯು’ – ಈ ಪದವನ್ನು ಯಾರ ಕೈಗೆ ಕೊಟ್ಟು ಕೇಳಿದರೂ ಶಿಶುನಾಳ ಷರೀಫರ ಗೀತೆಯೇ ಇರಬೇಕು ಅಂದಾರು. ‘ಪ್ರೇಮದ ಓಣಿಯ ದಾರಿ ಬಲು ಇಕ್ಕಟ್ಟು/ ಏಕಕಾಲಕೆ ಇಬ್ಬರಿರುವುದೇ ಬಿಕ್ಕಟ್ಟು’, ‘ಹೌದು ಅನಬೇಕಂದ್ರ ಅಲ್ಲವೇ ಅಲ್ಲ/ ಅಲ್ಲ ಅಂತನೂ ಹೇಳೂ ಹಾಂಗಿಲ್ಲ’  – ಇಂತಹ ಕಾವ್ಯದ ಸಾಲುಗಳು ಹಿಂದಿಯಿಂದ ಬಂದಿದ್ದು ಎಂದರೆ ನಂಬಲಾಗುವುದಿಲ್ಲ. ಕನ್ನಡದ ಗಂಧವೇ ಅವುಗಳಲ್ಲಿ ತುಂಬಿಹೋಗಿದೆ.

ಕಬೀರನ ಸಿದ್ಧಾಂತಗಳನ್ನು ಪ್ರತಿಪಾದಿಸುವ ಪದಗಳನ್ನು ‘ಬೀಜಕ’ ಎಂದು ಕರೆಯಲಾಗಿದೆ. ಅದರಲ್ಲಿ ರಮೈನಿಗಳಿವೆ (ಜೀವ ಹಾಗೂ ಭಗವತ್ತತ್ತ್ವದ ಲೀಲಾವಿಲಾಸವನ್ನು ಕೊಂಡಾಡುವ ಪದ), ಸಾಖಿಗಳಿವೆ (ಸಂಸ್ಕೃತದ ‘ಸಾಕ್ಷಿ’ಯ ತದ್ಭವರೂಪ ‘ಸಾಖಿ’. ಕಬೀರನು ತಾನು ಸ್ವಯಂ ಕಂಡರಿಸಿದ ಸತ್ಯವನ್ನು ಸಾಕ್ಷಿಪೂರ್ವಕವಾಗಿ ಹೇಳಿದ ಸಾಲುಗಳಿವು) ಹಾಗೂ ಸಬದಗಳೂ ಇವೆ (ದೋಹೆ = ದ್ವಿಪದಿ ಇವುಗಳ ರೂಪ).

ಕೃತಿಯನ್ನು ಒಟ್ಟು ಮೂರು ಭಾಗಗಳನ್ನಾಗಿ ವಿಭಜಿಸಲಾಗಿದೆ. ಮೊದಲ ಭಾಗದಲ್ಲಿ ಅಪರೂಪದ ರಮೈನಿಗಳಿವೆ. ಕಬೀರನ ಸಾಮಾಜಿಕ ದೃಷ್ಟಿಕೋನವನ್ನು ಪ್ರತಿಫಲಿಸುವ ಪದಗಳು ಎರಡನೇ ಭಾಗದಲ್ಲಿವೆ. ಅದರಲ್ಲಿ ಕೆಲವು ‘ಉಲಟಭಾಸಿ’ಯಲ್ಲಿವೆ (ಒಡಪುಗಳ ರೂಪ). ಮೂರನೇ ಭಾಗದಲ್ಲಿ ಸಾಖಿಗಳಿವೆ. ರೂಪದಲ್ಲಿ ವಾಮನನಾದ ಈ ಸಾಖಿಗಳು, ಅರ್ಥದಲ್ಲಿ ತ್ರಿವಿಕ್ರಮನ ರೂಪವನ್ನೇ ತಾಳಿನಿಂತು, ದಿಗ್ಭ್ರಮೆಗೊಳಿಸುತ್ತವೆ. ಉದಾಹರಣೆ ಬೇಕೆ? ‘ಸಾಖಿ ಎಂದರೆ ಕಾಣ್ಕೆಯ ಕಣ್ಣು/ ನಿನ ರುದಯದಾಗ ಏನದ ಕಾಣು’.

ಮೊದಲ ಕಾವ್ಯ ‘ಹಂಸ ಏಕಾಂಗಿ’ ಎನ್ನುವುದು ಮುಕ್ತಿಯ ಹಾದಿಹಿಡಿದ ಆತ್ಮದ ಸಂಕೇತವಾಗಿದೆ. ಈ ಪದದ ಮೂಲರೂಪ ‘ಉಡ್‌ ಜಾಯೇಗಾ ಹಂಸ ಅಕೇಲಾ’ವನ್ನು ಕುಮಾರ ಗಂಧರ್ವರ ಕಂಠಸಿರಿಯಲ್ಲಿ ಕೇಳುವುದೇ ಒಂದು ಆನಂದ. ಅಬಿದಾ ಪರ್ವೀನ್‌, ಜಗಜೀತ್‌ ಸಿಂಗ್‌ ಅವರಂತಹ ಗಾಯಕರನ್ನೂ ಗಾಢವಾಗಿ ಕಾಡಿದವನು ಕಬೀರ. ಮಹಾನ್‌ ಗಾಯಕರಲ್ಲದೆ ಜನಸಾಮಾನ್ಯರ ನಾಲಗೆ ಮೇಲೂ ಕುಣಿಯುತ್ತಿರುವವನು ಆತ. ಅಂತಹ ಸಂತ ಸುಧಾರಕನ ಪದಗಳ ಕನ್ನಡದ ರೂಪ ನೇರವಾಗಿ ಹೃದಯಕ್ಕೆ ಇಳಿಯುವಷ್ಟು ಭಾವತೀವ್ರತೆಯಿಂದ ಕೂಡಿದೆ. ಕಬೀರನಂತೆಯೇ ದೊಡ್ಡ ಅನುಭಾವಿಯಾದ ಅಲ್ಲಮನ ವಚನಗಳನ್ನು ‘ಬೀಜಕ’ಗಳೊಂದಿಗಿಟ್ಟು ತೌಲನಿಕ ಅಧ್ಯಯನ ಮಾಡಲು ಸಹ ಈ ಕೃತಿ ಪ್ರೇರೇಪಿಸುತ್ತದೆ.

ಆರಂಭದ ಸುದೀರ್ಘ ಪ್ರಸ್ತಾವ ‘ಕಬೀರ ಕೊಳ’ದಲ್ಲಿ ನಮ್ಮನ್ನು ಈಜಾಡುವಂತೆ ಮಾಡುತ್ತದೆ. ನಾಗರಾಜ ರಾಮರಾವ್‌ ಅವರ ಕಲಾಕೃತಿ ಹಾಗೂ ನಾಗರಾಜ ರೋಣೂರು ಅವರ ವಿನ್ಯಾಸ ಓದಿನ ಖುಷಿಯನ್ನು ಹೆಚ್ಚಿಸುವಂತಿವೆ. ಹಂಸವು ಎತ್ತರಕ್ಕೆ ಹಾರಿದಂತೆ ಅದರ ದೃಷ್ಟಿ ವಿಶಾಲವಾಗುತ್ತಾ ಹೋಗುತ್ತದಂತೆ. ಅಂತೆಯೇ ಇಲ್ಲಿನ ಕಬೀರನ ಪದಗಳನ್ನು ಓದುತ್ತಾ ಹೋದಂತೆ ನಮ್ಮ ಅರಿವೂ ವಿಸ್ತಾರವಾಗುತ್ತಾ ಹೋಗುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.