ಭಾನುವಾರ, ಮೇ 9, 2021
26 °C

ಪುಸ್ತಕ ವಿಮರ್ಶೆ: ಮರಣದ ಮಹಾನವಮಿಯಲ್ಲಿ ಮನುಷ್ಯತ್ವದ ಅಮೃತಧಾರೆ

ಎಚ್. ದಂಡಪ್ಪ Updated:

ಅಕ್ಷರ ಗಾತ್ರ : | |

Prajavani

ಕಮೂ, ಸಾರ್ತ್ರೆ, ಕಾಫ್ಕ ಇವರು ಕನ್ನಡದ ನವ್ಯದ ಸಂದರ್ಭದಲ್ಲಿ ಪದೇ ಪದೇ ಚರ್ಚಿತವಾಗುತ್ತಿದ್ದವರು. ಈಗಲೂ ಇವರ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಇವರ ವಿಚಾರಧಾರೆಗಳು ಕನ್ನಡ ಲೇಖಕರ ಮೇಲೆ ಪ್ರಭಾವ ಬೀರಿವೆ. ಕಮೂನ ‘ಅಸಂಗತ’, ‘ಬಂಡಾಯ’, ‘ಸಿಸಿಪಸ್ ಕಲ್ಪಿತ ಕಥನ’ದ ವಿಚಾರಗಳು ಬಹಳಷ್ಟು ಕೃತಿಗಳಲ್ಲಿ ಕಾಣಿಸಿಕೊಂಡಿವೆ. ಅವನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಪ್ರಕಟವಾಗಿರುವ ಅವನ ಐದು ಕಾದಂಬರಿಗಳಲ್ಲಿ ಎರಡು ಈಗಾಗಲೇ ಅನುವಾದವಾಗಿದ್ದವು. ಈಗ ಎಚ್.ಎಸ್. ರಾಘವೇಂದ್ರರಾವ್ ಅವರು ‘ಪ್ಲೇಗ್’ ಕಾದಂಬರಿಯನ್ನೂ ಕನ್ನಡಕ್ಕೆ ತಂದಿದ್ದಾರೆ. ಈ ಕಾದಂಬರಿಯು ಮೊದಲು 1947ರಲ್ಲಿ ಪ್ರಕಟವಾಯಿತು. ಅಂದಿನಿಂದ ಇಲ್ಲಿಯವರೆಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಲೇ ಬಂದಿದೆ.

ಓರಾನ್ ಎಂಬ ನಗರದಲ್ಲಿ ‘ಪ್ಲೇಗ್’ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯು ದೇವರು ನೀಡುತ್ತಿರುವ ಶಿಕ್ಷೆ ಎಂದು ಪಾದ್ರಿ ಹೇಳುತ್ತಾನೆ. ಆದರೆ ಡಾ.ರಿಯು ಎಂಬ ವೈದ್ಯ ಇದನ್ನು ಒಪ್ಪದೆ ಚಿಕಿತ್ಸೆ ನೀಡುತ್ತಿರುತ್ತಾನೆ. ಸತ್ತವರನ್ನು ಅಮಾನುಷವಾಗಿ, ಸಾಮೂಹಿಕವಾಗಿ ಸಂಸ್ಕಾರ ಮಾಡಲಾಗುತ್ತದೆ. ಒಂಬತ್ತು ತಿಂಗಳ ನಂತರ ಪ್ಲೇಗ್ ನಿಲ್ಲುತ್ತದೆ. ಜನರಲ್ಲಿ ಹೊಸ ಪರಿವರ್ತನೆ ಕಂಡು ಬಂದಿರುತ್ತದೆ. ಇದು ಈ ಕಾದಂಬರಿಯ ಸ್ಥೂಲವಾದ ಕಥಾ ಹಂದರ.

ಕಾದಂಬರಿಯಲ್ಲಿ ಬಳಸಿರುವ ಭಾಷೆ, ರೂಪಕ, ಸಂಕೇತ ಹಾಗೂ ಚಿತ್ರಗಳು ಕಮೂವಿನ ತಾತ್ವಿಕ ವಿಚಾರಗಳನ್ನು ಪ್ರತಿಪಾದಿಸುತ್ತವೆ. ಅದರ ಜೊತೆಗೆ ಮನುಷ್ಯ ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವಂತಹ ಆಕೃತಿಯೂ ಇಲ್ಲಿದೆ. ಅನ್ಯೋಕ್ತಿಯ ವಿಧಾನದಲ್ಲಿ ಬರೆಯಲಾಗಿರುವ ಈ ಕಾದಂಬರಿಯಲ್ಲಿ ಎಲ್ಲಾ ಪಾತ್ರಗಳು ಸಾಂಕೇತಿಕ ರೂಪದಲ್ಲಿ ಚಿತ್ರಣಗೊಂಡಿವೆ. ಮುಖ್ಯವಾಗಿ ಡಾ.ರಿಯು ನಾಯಕನಾಗಿ ಓದುಗರ ಪ್ರತಿನಿಧಿಯಂತಿದ್ದಾನೆ. ಓದುಗರ ಮನಸ್ಸು ಮತ್ತು ಕಲ್ಪನೆಯಲ್ಲಿ ಕ್ರಿಯೆ ನಡೆಯುವಂತಹ ರಚನೆ ಅನ್ಯೋಕ್ತಿಯ ಪ್ರಮುಖವಾದ ಲಕ್ಷಣ. ಇಡೀ ಕೃತಿಯೇ ಸಾಂಕೇತಿಕ ರೂಪದಲ್ಲಿ, ಅನ್ಯೋಕ್ತಿ ರೂಪದಲ್ಲಿರುವುದರಿಂದ ಎಲ್ಲಾ ತಾತ್ವಿಕ ವಿಚಾರಗಳು ಕಾದಂಬರಿಯಲ್ಲಿ ಅಂತರ್ಗತವಾಗಿವೆ. ಆದ್ದರಿಂದ ಓದುಗನ ಮನಸ್ಸು ಮತ್ತು ಕಲ್ಪನೆಗಳಲ್ಲಿ ಕ್ರಿಯೆ ನಡೆದು ಕೃತಿಯ ಧ್ವನಿ ಅನಾವರಣಗೊಳ್ಳುತ್ತಾ ಹೋಗುತ್ತದೆ.

ನಿರೂಪಣೆಯಲ್ಲಿ ಒಂದು ಚಲನಶೀಲತೆ ಇರುವುದರಿಂದ ಕಥನದ ಬೆಳವಣಿಗೆ ಹಾಗೂ ಶಿಲ್ಪ ವಿಶಿಷ್ಟವಾಗಿದೆ. ಸಂಕೇತಗಳಂತೆ ಘಟನೆಗಳ ಸಂಬಂಧ ಆಂತರಿಕವಾಗಿದ್ದು ಬೇರೆ ಕಾದಂಬರಿಗಳಲ್ಲಿರುವಂತೆ ಕಾರ್ಯಕಾರಣ ಸಂಬಂಧ, ತರ್ಕಬದ್ಧ ವ್ಯವಸ್ಥೆ ಕಾಣುವುದಿಲ್ಲ. ಡಾ.ರಿಯು ಸುತ್ತ ಸಮಾಜ, ಜನರ ವ್ಯವಸ್ಥೆಯ ಸ್ವರೂಪಗಳು ಬಿಚ್ಚಿಕೊಳ್ಳುತ್ತಾ ಸಾಗುತ್ತವೆ. ಒಂದಕ್ಕೊಂದು ಸಂಬಂಧವಿಲ್ಲದಂತೆ ಹರಡಿಕೊಂಡಿರುವ ಘಟನೆಗಳು ವ್ಯವಸ್ಥಿತವಾಗಿ, ಸೋದಿಶ್ಯವಾಗಿ ನಿಯೋಜಿಸಲ್ಪಟ್ಟಿರುವುದು ಇಡೀ ಕಾದಂಬರಿಯನ್ನು ಓದಿ ಮುಗಿಸಿದಾಗ ಅನುಭವಕ್ಕೆ ಬರುತ್ತದೆ.

ನೈತಿಕತೆ, ಅರಾಜಕತೆ ಇರುವ ಜಗತ್ತಿನಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾದ ಮನುಷ್ಯನ ಅಸಹಾಯಕತೆ, ತನಗೆ ಸಂಬಂಧವಿಲ್ಲದಿದ್ದರೂ ತಾನೇ ಜವಾಬ್ದಾರನಾಗಬೇಕಾದ ಅನಿವಾರ್ಯತೆ, ಅನಿಶ್ಚಯ, ಗೊಂದಲದ ಪರಿಸ್ಥಿತಿಯನ್ನು ಡಾ.ರಿಯು ಮೌನವಾಗಿ ಎದುರಿಸುತ್ತಾನೆ. ರೋಗಗ್ರಸ್ತ ವ್ಯವಸ್ಥೆಯ ವಿರುದ್ಧ‘ಬಂಡಾಯ’ ಹೂಡುತ್ತಾನೆ. ಅಂತರ್ಮುಖಿಯಾದ, ಬುದ್ಧಿಜೀವಿಯಾದ ರಿಯು ತನ್ನ ವೈಚಾರಿಕತೆಯನ್ನು ಕಾರ್ಯರೂಪಕ್ಕೆ ತರುವಾಗ ಉಂಟಾಗುವ ತಿಕ್ಕಾಟಗಳೇ ಅವನ ಸಮಸ್ಯೆಗಳಾಗಿವೆ. ಆದರೂ ಅವನು ಸಾಂಕ್ರಾಮಿಕ ರೋಗದ ವಿರುದ್ಧ, ಸ್ಥಗಿತ ಧರ್ಮದ ಕಲ್ಪನೆಗಳ ವಿರುದ್ಧ, ಸಾವಿನ ವಿರುದ್ಧ ಬಂಡಾಯ ಹೂಡುವ ವ್ಯಕ್ತಿತ್ವದವನು. 

ತನ್ನ ಸಾಂಕೇತಿಕತೆ, ಚತುರ ಸಂವಿಧಾನದ ಮೂಲಕ ಅರ್ಥಗಳನ್ನು ಹಿಗ್ಗಿಸಿಕೊಳ್ಳುವ ಈ ಕಾದಂಬರಿಯು ಬದುಕಿನ ಅಸಂಗತತೆ, ಅತಾರ್ಕಿಕತೆ, ರಹಸ್ಯಮಯ ವಿಚಾರಗಳನ್ನು ಅಂತರ್ಗತವಾಗಿಸಿಕೊಂಡಿದೆ. ಈ ಕಾದಂಬರಿಯಲ್ಲಿ ಧರ್ಮ ಮತ್ತು ವೈಚಾರಿಕತೆಯ ಸಂಘರ್ಷವಿದೆ. ಧರ್ಮ ಎನ್ನುವುದು ಮನುಷ್ಯನ ಸಂತೋಷದ ಬದುಕಿಗೆ ಶಕ್ತಿಯಾಗಬೇಕು, ಜೊತೆಗೆ ಕ್ರಿಯಾಶೀಲತೆಯನ್ನೊದಗಿಸುವ ಮಾಧ್ಯಮದಂತಿರಬೇಕು, ಆಗ ಧರ್ಮಕ್ಕೆ ಅರ್ಥ ಬರುತ್ತದೆ.

ಫಾದರ್ ಪೆನೆಲೊ ಮಾಡುವ ಭಾಷಣದಲ್ಲಿ ಸ್ಥಗಿತಗೊಂಡ ಮತಧರ್ಮದ ದೇವರ ಬಗ್ಗೆ ಹೇಳುತ್ತಾನೆಯೇ ಹೊರತು ಪ್ಲೇಗಿನ ಸಮಸ್ಯೆಗೆ ಪರಿಹಾರ ಸೂಚಿಸುವ ಮಾತುಗಳನ್ನು ಹೇಳುವುದಿಲ್ಲ. ಎರಡನೇ ಭಾಷಣದಲ್ಲಿ ತನ್ನ ಮಾತುಗಳನ್ನು ಸ್ವಲ್ಪಮಟ್ಟಿಗೆ ಬದಲಿಸಿಕೊಂಡರೂ ಅವೂ ಸ್ಥಗಿತಗೊಂಡ ಮತಧರ್ಮದ ವಿಚಾರಗಳೇ ಆಗಿವೆ. ಯಾವುದೇ ಧರ್ಮದ ಬಗ್ಗೆ ಮಾತನಾಡುವಾಗ ಅದರ ಕ್ರಿಯಾಶೀಲತೆಯ ಬಗ್ಗೆ ಮಾತನಾಡಬೇಕು. ಸಮಕಾಲೀನ ಬದುಕಿಗೆ ಮಾರಕವಾದ ಸಾವು, ರೋಗ, ನೋವು, ಯಾತನೆಗಳಿಗೆ ಪರಿಹಾರ ಒದಗಿಸಬೇಕು. ಆತ್ಮ, ಸ್ವರ್ಗಗಳ ಬಗ್ಗೆ ಮಾತನಾಡಿದರೆ ಆ ಧರ್ಮ ಕೊಳೆಯುತ್ತದೆ ಎಂಬ ವಿಚಾರಧಾರೆಯ ಧ್ವನಿ ಈ ಕಾದಂಬರಿಯಲ್ಲಿ ಒಳಧಾರೆಯಾಗಿ ಹರಿಯುತ್ತದೆ. 

ಮತಧರ್ಮದ ಅವಶೇಷವಾದ ದೇವರು ಹಾಗೂ ಅಮೂರ್ತವೂ, ಬಲಯುತವೂ ಆದ ಪ್ರಕೃತಿಯ ನಿಷ್ಠುರತೆ ಈ ಎರಡರ ವಿರುದ್ಧ ಹೋರಾಟ ಮಾಡುತ್ತಾ ನೋವು ಸಂಕಟಗಳನ್ನು ಎದುರಿಸುತ್ತಾ ಸಂತೋಷವಾಗಿ ಬದುಕುವುದನ್ನು ಕಲಿಯುವ ಮನುಷ್ಯನ ಸ್ವರೂಪವನ್ನು ವಿವರಿಸುವುದು ಈ ಕಾದಂಬರಿಯ ಮತ್ತೊಂದು ಧ್ವನಿ. ಪ್ಲೇಗ್, ಪ್ರಕೃತಿ ತಂದೊಡ್ಡಿರುವ ದೊಡ್ಡ ರೋಗ. ಎಲ್ಲರನ್ನೂ ಕರುಣೆ ಇಲ್ಲದೆ ಸಾಯಿಸುತ್ತಿದೆ. ಈ ಸಂದರ್ಭದಲ್ಲಿ ದೇವರು ಕೂಡ ಕಾಪಾಡುತ್ತಿಲ್ಲ. ಆದ್ದರಿಂದ ಮನುಷ್ಯನೇ ತನ್ನನ್ನು ತಾನು ಕಾಪಾಡಿಕೊಳ್ಳಬೇಕು. ವಿವೇಕಯುತವಾಗಿ ಸಾವಿನ ವಿರುದ್ಧ ಹೋರಾಡಬೇಕು.

ಮುಗ್ಧ ಮಗು ಸಾಯುವಾಗ ತನ್ನ ಮುಖದಲ್ಲಿ ‘ಬಂಡಾಯ’ದ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ನಿರೂಪಣೆಯಾಗಿದೆ. ಇದರ ಅರ್ಥ ಅನಿವಾರ್ಯವಾದ ಸಾವಿನ ವಿರುದ್ಧವೂ ಬಂಡಾಯವೇಳಬೇಕು. ನಿಸರ್ಗವಾಗಲಿ, ದೇವರಾಗಲಿ ಸಾವಿನಿಂದ ಉಳಿಸಲ್ಲ. ಆದ್ದರಿಂದ ಮನುಷ್ಯನಿಗೆ ಎದುರಾಗುವ ಸಮಸ್ಯೆ, ಸಂಕಟ, ನೋವು, ರೋಗ, ಸಾವು ಇತ್ಯಾದಿಗಳ ವಿರುದ್ಧ ಸಾಮೂಹಿಕವಾಗಿ ಬಂಡಾಯ ಹೂಡಬೇಕು. ಓರಾನ್ ನಗರಕ್ಕೆ ಪ್ಲೇಗ್ ಬಂದಾಗ ನಮಗೇನೂ ಬಂದಿಲ್ಲವಲ್ಲ ಅವನಿಗೆ ಬಂದರೆ ಬರಲಿ ಬಿಡು ಎಂದು ಭಾವಿಸಿದ್ದವರು, ಎಲ್ಲರಿಗೂ ಬಂದಾಗ ಅದನ್ನು ಸಾಮೂಹಿಕವಾಗಿ ಎದುರಿಸುತ್ತಾರೆ. ಸಾಮುದಾಯಿಕ ಸಾವಿನ ಪ್ರಶ್ನೆ ಬಂದಾಗ ಅನ್ಯ ಭಾವನೆ ಹೊರಟು ಹೋಗಿ ಒಂದಾಗುತ್ತಾರೆ. ಸಾವು ಮತ್ತು ಯಾತನೆಗಳನ್ನು ಎದುರಿಸುವುದರ ಮೂಲಕ ಜೀವನದ ಅರ್ಥಪೂರ್ಣತೆ ಸಾಧ್ಯ ಎಂಬ ಭಾವನೆ ಬಂದು ಬಿಡುತ್ತದೆ.

ಪ್ಲೇಗ್ ಬಂದಾಗ ಜನ ಕ್ವಾರಂಟೈನ್ ಆಗಿ ಬಂದಿಗಳಾಗಿದ್ದರು. ಅಂದರೆ ಸ್ವಾತಂತ್ರ್ಯ ಕಳೆದುಕೊಂಡರು. ಅದಕ್ಕಿಂತಲೂ ಮೊದಲು ತಮಗೆ ಗೊತ್ತಿಲ್ಲದೆ ಸ್ವಾತಂತ್ರ್ಯ ಕಳೆದುಕೊಂಡಿದ್ದರು. ಪ್ಲೇಗ್ ಬಂದ ನಂತರ ಅವರ ಬದುಕಿಗೆ ಒಂದು ಅರ್ಥ ಬಂದಿತು. ಸ್ನೇಹಿತರು, ಹಿತೈಷಿಗಳು, ಬಂಧುಗಳ ಬೆಲೆ ಗೊತ್ತಾಯಿತು. ಆದ್ದರಿಂದಲೇ ಈ ಕಾದಂಬರಿಯಲ್ಲಿ ಮಾನವ ಸಂಬಂಧಗಳ ಬಗ್ಗೆ, ಮನುಷ್ಯತ್ವದ ಬಗ್ಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಪ್ರಸ್ತಾಪವಾಗುತ್ತಲೇ ಹೋಗುತ್ತದೆ. ‘ಮಾನವತೆ ದೊಡ್ಡದು, ಮನುಷ್ಯ ಜಾತಿ ದೊಡ್ಡದು’ ಎಂಬ ಅರ್ಥದ ಮಾತುಗಳು ಅನುರಣಿಸುತ್ತವೆ. 

ಕಾದಂಬರಿಯ ಮುಕ್ತಾಯದ ಹಂತದಲ್ಲಿ ಬರುವ ‘ಭಯ ಮತ್ತು ಅದರ ಹತ್ತು ಹಲವು ಆಯುಧಗಳ ನಿರಂತರವಾದ ಸೋಲರಿಯದ ಆಕ್ರಮಣಗಳ ವಿರುದ್ಧ ನಮ್ಮ ವೈಯಕ್ತಿಕ ಕಷ್ಟ ಕಾರ್ಪಣ್ಯಗಳು ಏನೇ ಇರಲಿ, ಮತ್ತೆ ಮತ್ತೆ ನಡೆಸಬೇಕಾದ ಹೋರಾಟದ ದಾಖಲೆಯಾಗಿ ಈ ಬರವಣಿಗೆ ಇರುತ್ತದೆ’ ಎಂಬ ಮಾತು ಈ ಕಾದಂಬರಿಯ ಸಾರ್ವತ್ರಿಕತೆ, ಸಾರ್ವಕಾಲಿಕತೆ ಮತ್ತು ತತ್ಕಾಲೀನತೆಗಳನ್ನು ಸೂಚಿಸುತ್ತದೆ.  

ಅನುವಾದವು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಪದರುಗಳುಳ್ಳ ರಚನೆ ಎಂಬ ಮಾತಿದೆ. ಎಚ್.ಎಸ್.ರಾಘವೇಂದ್ರ ರಾವ್ ಅವರು ಅನ್ಯೋಕ್ತಿಯಲ್ಲಿ ಸಂಕೇತ ಪ್ರಧಾನವಾದ ನಿರೂಪಣಾ ತಂತ್ರವನ್ನೊಳಗೊಂಡಿರುವ ಈ ಕಾದಂಬರಿಯನ್ನು ಅದರ ಎಲ್ಲಾ ಅರ್ಥ ಸಾಧ್ಯತೆಗಳಿಗೆ ಭಂಗ ಬರದಂತೆ ಅದರ ಎಲ್ಲಾ ಧ್ವನಿ ಸಾಧ್ಯತೆಗಳೊಂದಿಗೆ ಅನುವಾದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು