ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನೆಯಷ್ಟೇ ಅಲ್ಲ...‘ಜೀರೋ ಬ್ಯಾಲೆನ್ಸ್’ ಕವನ ಸಂಕಲನ

Last Updated 20 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

‘ಜೀರೋ ಬ್ಯಾಲೆನ್ಸ್’ ಶ್ರುತಿ ಬಿ.ಆರ್‌. ಅವರ ಚೊಚ್ಚಲ ಕವನಸಂಕಲನ. ಸೊನ್ನೆ ಎನ್ನುವುದನ್ನು ಪರಿಪೂರ್ಣ ಎನ್ನುವ ಅರ್ಥದಲ್ಲಿ ಯೋಚಿಸುವುದಾದರೆ, ಶೀರ್ಷಿಕೆಯಲ್ಲಿನ ‘ಜೀರೊ’ ಸಮೃದ್ಧ ಬ್ಯಾಲೆನ್ಸ್‌ ಅನ್ನೇ ಸೂಚಿಸುವಂತಿದೆ. ಗಮನಸೆಳೆಯುವ ಈ ಬ್ಯಾಲೆನ್ಸ್‌, ಕವಯತ್ರಿಯ ಕಾವ್ಯದ ಬಗೆಗಿನ ತುಡಿತ ಹಾಗೂ ಅದರ ಫಲಶ್ರುತಿ ಎರಡಕ್ಕೂ ಸಂಬಂಧಿಸಿದ್ದು.

ಶ್ರುತಿ ಅವರಿಗೆ ತಾವು ಬರೆಯುತ್ತಿರುವುದರ ಬಗ್ಗೆ ಸ್ಪಷ್ಟತೆಯಿದೆ. ಹೆಣ್ಣಿನ ಬಗೆಗಿನ ಸಮಾಜದ ರೂಢಿಗತ ಗ್ರಹಿಕೆಗಳನ್ನು ನಿರಾಕರಿಸುತ್ತ, ಈ ಕಾಲದ ಹೆಣ್ಣಿನ ಅಸ್ಮಿತೆಯನ್ನು ಮನಗಾಣಿಸುವುದು ಅವರ ಬಹುತೇಕ ಕವಿತೆಗಳ ತುಡಿತವಾಗಿದೆ. ಹೆಣ್ಣಿನ ಅನನ್ಯತೆಯನ್ನು ಎತ್ತಿಹಿಡಿಯುವ ಪ್ರಯತ್ನದಲ್ಲಿ ಗಂಡನ್ನು ಪ್ರತಿವಾದಿ ಆಗಿಸಿಕೊಳ್ಳದೆ, ಗಂಡು–ಹೆಣ್ಣು ಪರಸ್ಪರ ಅಧೀನರಲ್ಲ; ಸಮಾನರು ಎನ್ನುವ ಆರೋಗ್ಯಕರ ನಿಲುವನ್ನು ಕವಯಿತ್ರಿ ಮುಂದಿರಿಸುತ್ತಾರೆ.

‘ಜೀರೋ ಬ್ಯಾಲೆನ್ಸ್‌’ ಸಂಕಲನ ಚಿತ್ರಿಸುತ್ತಿರುವ ಹೆಣ್ಣಿನ ಸ್ವರೂಪ ಯಾವ ಬಗೆಯದ್ದು? ಅದಕ್ಕೆ ಉತ್ತರವಾಗಿ, ‘ಕ್ಷಮಿಸಿ, ನಾನು ಅಂತವಳಲ್ಲ’ ಕವಿತೆಯಲ್ಲಿನ – ಕರೆದಾಗಲೆಲ್ಲ ಬರುವ, ಬೇಡವೆಂದಾಗ ಕಾಯುವ, ಗಂಡಿನ ಸೇವೆ ಮಾಡುವ, ಇಂಥ ಲೋಕಗ್ರಹೀತ ಹೆಣ್ಣು ನಾನಲ್ಲ ಎನ್ನುವ ಚಿತ್ರಣವನ್ನು ಗಮನಿಸಬಹುದು. ಹಾಗಾದರೆ, ಆ ಹೆಣ್ಣು ಎಂಥವಳು. ‘ನನ್ನದೊಂದಿಷ್ಟು ಬಾಯಿ ಮುಂದು / ಇದ್ದಿದ್ದ ಇದ್ದಂತೆ ವದರಿ / ಬಜಾರಿ ಎನಿಸಿಕೊಂಡಿದ್ದರೂ / ನನ್ನತನವೆಂಬುದ ಜೋಪಾನವಾಗಿ / ಕಾಪಿಡುವವಳು!’

ಶ್ರುತಿ ಅವರು ಈ ಹೊತ್ತಿನ ಹೆಣ್ಣಿನ ಬಗ್ಗೆ ಮಾತನಾಡುತ್ತಿದ್ದರೂ, ಅವರ ಮಾತುಗಳ ಹಿಂದೆ ಪುರಾಣ ಚರಿತ್ರೆಯ ಸ್ತ್ರೀಪರಂಪರೆಯಿದೆ. ಪುರಾಣ ಕಥನಗಳನ್ನು ಮುರಿದು ಕಟ್ಟಬೇಕಾದ ಅಗತ್ಯದ ಬಗ್ಗೆ ಅವರ ಕಾಳಜಿ. ಪುರಾಣದ ಅಹಲ್ಯೆ, ಸೀತೆ, ರಾಧೆ, ಇವರೆಲ್ಲರೂ ಸೂತ್ರದ ಗೊಂಬೆಗಳಂತಹವರು. ಆಯ್ಕೆಗಳಿಲ್ಲದವರು. ಆದರೆ, ಈ ಹೊತ್ತಿನ ಹೆಣ್ಣಿಗೆ ಆಯ್ಕೆಗಳಿವೆ ಎನ್ನುವುದನ್ನು ಕವಯಿತ್ರಿ ಒತ್ತಿಹೇಳುತ್ತಾರೆ. ಹೀಗೆ ಹೇಳುವಾಗ ಹೆಣ್ಣನ್ನು ನಡೆಸಿಕೊಳ್ಳುವ ಸಮಾಜದ ನಡವಳಿಕೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲದಿರುವುದನ್ನು ಅವರು ಗುರ್ತಿಸುತ್ತಾರೆ. ‘ಮೆಸೇಜಲ್ಲಿ ಮೈ ಸವರುವ / ಆನ್‌ಲೈನ್‌ನಲ್ಲಿ ಸ್ಖಲಿಸುವ ಇಂದ್ರರು’ ಈಗಲೂ ಇದ್ದು, ‘ಇವರನ್ನು ಕಂಡು ಕಲ್ಲಾಗುವ ಬಯಕೆ’ ಎನ್ನುತ್ತದೆ ‘ಭೇಟಿಯಾಗಿದ್ದರು... ಆ ಹುಡುಗಿಯರು...’ ಕವಿತೆ. ಇಂದ್ರರು ಇದ್ದಾರೆ ಎನ್ನುವ ಮೂಲಕ ಹೆಣ್ಣಿನ ಪರಿಸ್ಥಿತಿ ಬದಲಾಗಿಲ್ಲದಿರುವುದನ್ನು ಸೂಚಿಸುವ ಕವಯಿತ್ರಿ, ‘ಈಗ ಕಲ್ಲಾಗುವುದು ಕೂಡ ಹೆಣ್ಣಿನ ಆಯ್ಕೆ’ ಎನ್ನುವ ಮೂಲಕ ಪರಿಸ್ಥಿತಿಯಲ್ಲಿ ಆಗಿರುವ ಬದಲಾವಣೆಯನ್ನು ಕಾಣಿಸುತ್ತಾರೆ. ಈ ಕಲ್ಲಾಗುವ ಪ್ರಕ್ರಿಯೆ ಜಡವಾಗುವ ಪ್ರಕ್ರಿಯೆ ಮಾತ್ರವಲ್ಲ, ದುರುಳರ ಪಾಲಿಗೆ ಪಾಷಾಣವಾಗುವುದೂ ಹೌದು.

‘ಕೇಳಿ ಕೇಳಿ ಕೇಳಿರಿಲ್ಲಿ / ಮಣ್ಣು ಮುಚ್ಚಿದವರೇ / ಸಮಾಧಿ ಕಟ್ಟಿದವರೇ / ನನ್ನೊಲವು ನಶಿಸಿಲ್ಲ / ಮಣ್ಣು ಕಲ್ಲುಗಳ ಸೀಳಿ/ ಹಸುರಾಗಿ ಬಂದಿದೆ’ (‘ವಿಷಕಂಠ ಸ್ವರೂಪ’) ಎನ್ನುವ ಸಾಲುಗಳು ಹೇಳುವುದೂ ಈ ಹೊತ್ತಿನ ಹೆಣ್ಣಿನ ಚಿಂತನೆಯಲ್ಲಿನ ಬದಲಾವಣೆಯನ್ನು ಹಾಗೂ ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಅದಮ್ಯ ಶಕ್ತಿಯನ್ನು.

‘ಅಕ್ಕನ ಮೊಹೆಂಜೊದಾರೊ’ ಸಂಕಲನದ ಉತ್ತಮ ಕವಿತೆಗಳಲ್ಲೊಂದು. ಅಕ್ಕ–ತಂಗಿಯ ಮಾತುಕತೆಯ ಮೂಲಕ ತೆರೆದುಕೊಳ್ಳುವ ಕವಿತೆಯಲ್ಲಿ, ಮೊಹೆಂಜೊದಾರೊದ ವೈಭವದ ಬಗ್ಗೆ ತಂಗಿ ಭಾವುಕತೆಯಿಂದ ಮಾತನಾಡುತ್ತಾಳೆ. ಅಕ್ಕನದು ಮಾರ್ಮಿಕ ಪ್ರತಿಕ್ರಿಯೆ: ‘ಹೆಂಗಸರು ಹೇಗಿದ್ದರಂತೆ? ಏನು ಮಾಡುತ್ತಿದ್ದರಂತೆ?’. ನಿಟ್ಟುಸಿರೇ ಮೈದಾಳಿದಂತಹ ಈ ಪ್ರಶ್ನೆಗಳಲ್ಲೇ ಉತ್ತರವೂ ಇದೆ. ಪುರಾಣವಷ್ಟೇ ಅಲ್ಲ, ಚರಿತ್ರೆಯ ಪಠ್ಯಗಳಿಗೂ ಹೆಣ್ಣಿನ ಬಗ್ಗೆ ಕಡೆಗಣ್ಣು.

ಪುರಾಣ, ಚರಿತ್ರೆ ಹಾಗೂ ವರ್ತಮಾನದ ತರತಮಗಳ ಬಗ್ಗೆ ಮಾತನಾಡುವ ‘ಜೀರೋ ಬ್ಯಾಲೆನ್ಸ್‌’ ಕವಿತೆಗಳು, ಯಾರನ್ನೂ ಪ್ರತಿವಾದಿಯ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ. ‘ನಿನ್ನ ಮೂಗಿನ ನೇರಕ್ಕೆ ನಿನ್ನದೇ ತಕ್ಕಡಿ / ನನ್ನ ಮೂಗಿನ ನೇರಕ್ಕೆ ನನ್ನದೇ ತಕ್ಕಡಿ’ (‘ಅಂತರ’) ಎನ್ನುವ ಸಾಲುಗಳು, ತಪ್ಪು ಒಪ್ಪುಗಳ ತೂಗುಯ್ಯಾಲೆಗೆ ಒಬ್ಬರನ್ನೇ ಹೊಣೆಯಾಗಿಸುವುದಿಲ್ಲ. ಈ ಅರಿವು, ಪ್ರಾಂಜಲ ಮನೋಭಾವ ಹಾಗೂ ವಿಮರ್ಶೆಯ ಪ್ರಜ್ಞೆ, ಸಂಕಲನದ ಕವಿತೆಗಳ ಹೊಳಪು ಹೆಚ್ಚಲು ಕಾರಣವಾಗಿವೆ.

ಹೆಣ್ಣಿನ ತವಕತಲ್ಲಣಗಳ ಹೊರತಾದ ಸಂಗತಿಗಳ ಕವಿತೆಗಳೂ ಸಂಕಲನದಲ್ಲಿವೆ. ಬಾಲ್ಕನಿಯಲ್ಲಿನ ಪ್ರಕೃತಿಯ ಮಿನಿಯೇಚರು (‘ಪ್ರತಿಕೃತಿ’) ಧ್ವನಿಸುವ ನಗರದ ಜಡತೆ ಹಾಗೂ ಪರಿಸರ ನಾಶದ ಕುರಿತಾದ ವಿಷಾದ, ಪಾದಗಳ ಮೂಲಕ ಮನುಷ್ಯ ಭಾವಲೋಕವನ್ನು ಚಿತ್ರಿಸುವ ಹಂಬಲ (‘ಒಂದು ಜೊತೆ ಪಾದ’), ‘ಬಾಬಾ ಸಾಹೇಬರು ನೆಟ್ಟ ಮರ’ದ ತಂಪು ನೆಳಲು, ‘ಒಳ್ಳೆಯವರಾಗುವುದೆಂದರೆ’ ಎನ್ನುವ ಜಿಜ್ಞಾಸೆ – ಹೀಗೆ ಹಲವು ಭಾವ–ಬಣ್ಣಗಳು ಸಂಕಲನದಲ್ಲಿ ಇಣುಕುತ್ತವೆ.

‘ಜೀರೋ ಬ್ಯಾಲೆನ್ಸ್‌’ ಎನ್ನುವುದು ನಮ್ಮ ಸಮಾಜ ಹೆಣ್ಣನ್ನು ನಡೆಸಿಕೊಂಡಿರುವ ರೀತಿಗೆ ರೂಪಕವೂ ಹೌದು. ಆ ಬ್ಯಾಲೆನ್ಸ್‌ ಅನ್ನು ತುಂಬುವ ಹುಮ್ಮಸ್ಸಿನಲ್ಲಿ ರೂಪುಗೊಳ್ಳುತ್ತಿರುವ ಮಹಿಳಾಕಾವ್ಯದ ಹೊಸ ಧ್ವನಿಯಾಗಿ ಶ್ರುತಿ ಅವರ ಸಂಕಲನ ಕಾಣಿಸುತ್ತದೆ. ಇದು ಹೊಸ ಧ್ವನಿಯಷ್ಟೇ ಅಲ್ಲ; ಶಕ್ತವಾದುದೂ ಹೌದು, ಆತ್ಮವಿಶ್ವಾಸದಿಂದ ಕೂಡಿರುವಂತಹದ್ದೂ ಹೌದು. ಈ ಧ್ವನಿಗೆ ಈಗ ಬೇಕಾಗಿರುವುದು ತಾನು ಹೇಳುವುದನ್ನು ಸಹೃದಯರು ನಂಬುತ್ತಾರೆ, ಸ್ವಾಗತಿಸುತ್ತಾರೆ ಎನ್ನುವ ನಂಬಿಕೆ. ಆ ನಂಬಿಕೆ ಸಿದ್ಧಿಸಿದಾಗ, ಕವಿತೆ ಇನ್ನಷ್ಟು ಧ್ವನಿಪೂರ್ಣವಾಗುತ್ತದೆ, ಅನಗತ್ಯ ಹೊರೆಗಳನ್ನು ಕಳೆದುಕೊಂಡು ನಳನಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಂದರವಾಗಿ ಪ್ರಕಟಗೊಂಡ ಕೃತಿಗಳಲ್ಲಿ ‘ಜೀರೋ ಬ್ಯಾಲೆನ್ಸ್‌’ ಕೂಡ ಒಂದು ಎನ್ನುವುದನ್ನು ಹೇಳುತ್ತಲೇ, ಅಲ್ಲೊಂದು ಇಲ್ಲೊಂದು ಉಳಿದುಕೊಂಡಿರುವ ಅಕ್ಷರದೋಷಗಳು ರಸಾಸ್ವಾದಕ್ಕೆ ತೊಡಕುಂಟು ಮಾಡುವುದನ್ನೂ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT