ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸಂಸ್ಕೃತಿಯ ‘ದೃಶ್ಯ ಕಾವ್ಯ’

Last Updated 20 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

‘ಕಲಾವಿದನ ತುಡಿತ ಮತ್ತು ಭಾವನೆಗಳ ಪ್ರತಿಬಿಂಬವೇ ಕಲಾಕೃತಿ. ಆದರೆ, ಚಿತ್ರಕಾರನ ದೃಷ್ಟಿಕೋನವೇ ಕಲಾಪ್ರೇಮಿಗಳಿಗೆ ದಕ್ಕಬೇಕು ಎಂದೇನಿಲ್ಲ. ಪ್ರತಿಯೊಬ್ಬರ ನೋಟ, ಅರ್ಥೈಸಿಕೊಳ್ಳುವಿಕೆ ವಿಭಿನ್ನ. ಹಾಗಾಗಿ ನೋಡುವವರ ಕಣ್ಣಲ್ಲಿ ಅದರ ಸೌಂದರ್ಯ ಅಡಗಿರುತ್ತದೆ. ಕಲಾಕೃತಿ ಹೀಗೆಯೇ ಇರಬೇಕು ಅಥವಾ ಇರಬೇಕಿತ್ತು ಎಂದು ಹೇಳುವ ವಿಮರ್ಶೆಯ ಅಗತ್ಯವೂ ಇಲ್ಲ. ಅದರಿಂದ ಕಲೆಯ ಸೊಬಗು ಮತ್ತು ವಿಸ್ತಾರಕ್ಕೆ ಚೌಕಟ್ಟು ವಿಧಿಸಿದಂತಾಗುತ್ತದೆ. ಕಲೆ ಎಂಬುದು ಪದಗಳ ಹಂಗಿಲ್ಲದ ದೃಶ್ಯ ಕಾವ್ಯ...’

ಹೀಗೆ ‘ಚಿತ್ತ’ದಲ್ಲಿ ಮೂಡಿದ ‘ಚಿತ್ತಾರ’ದ ಬಗೆಗಿನ ಮಾತುಗಳನ್ನು ‘ಚಿತ್ರ’ ಅರಳುವಷ್ಟೇ ಸಹಜವಾಗಿ ಅನಾವರಣಗೊಳಿಸಿದರು ಹಿರಿಯ ಚಿತ್ರಕಲಾವಿದ ಕಿಶೋರ್‌ಕುಮಾರ್‌ ಹಿರೇಮಠ.

‘ಕಲಾಕೃತಿಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿಯೇ ಕಲಾಸಕ್ತರು ತಮ್ಮ ಪ್ರೀತಿಪಾತ್ರರಿಗೆ ಕಲಾಕೃತಿಗಳನ್ನು ‘ಉಡುಗೊರೆ’ಯನ್ನಾಗಿ ನೀಡುತ್ತಾರೆ. ಕೊಟ್ಟವರಿಗೆ ಸಂತೃಪ್ತ ಭಾವ, ಪಡೆದವರಿಗೆ ಧನ್ಯತಾ ಭಾವ. ಈ ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಕಲಾವಿದರು ಉಳಿಯಲು ಮತ್ತು ಕಲೆ ಬೆಳೆಯಲು ಸಹಕಾರಿಯಾಗಿದೆ’ ಎಂಬುದು ಕಿಶೋರ್‌ ಅವರ ಅಭಿಮತ.

ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರಾದ ಕಿಶೋರ್‌, ಶಿಕ್ಷಕ ದಂಪತಿಗಳಾದ ಸೂರಯ್ಯ ಮತ್ತು ಸುಶೀಲಮ್ಮ ಅವರ ಪುತ್ರ. ತಾಯಿಯ ಕಸೂತಿ ಕಲೆ ಮತ್ತು ಕುಂಬಾರ ಓಣಿಯಲ್ಲಿ ಅರಳುತ್ತಿದ್ದ ಮಣ್ಣೆತ್ತಿನ ಬಸವಣ್ಣನ ಆಕೃತಿಗಳು ಬಾಲ್ಯದಲ್ಲಿ ಹೆಚ್ಚು ಇವರನ್ನು ಆಕರ್ಷಿಸಿದವು. ಕಲೆಯ ಬಗ್ಗೆ ಒಲವು ಬೆಳೆಸಿಕೊಂಡು, ಕಲಾ ಶಿಕ್ಷಣ ಪಡೆಯಲು ನಿರ್ಧರಿಸಿದ ಕಿಶೋರ್ ಅವರು, 1982ರಲ್ಲಿ ಕಲಬುರ್ಗಿಯ ಐಡಿಯಲ್‌ ಫೈನ್‌ ಆರ್ಟ್‌ ಇನ್‌ಸ್ಟಿಟ್ಯೂಟ್‌ನಲ್ಲಿ ‘ಆರ್ಟ್‌ ಮಾಸ್ಟರ್‌’ ವ್ಯಾಸಂಗ ಪೂರ್ಣಗೊಳಿಸಿದರು.

ಮನಸೆಳೆದ ಭಿತ್ತಿಚಿತ್ರಗಳು!

ಉದ್ಯೋಗದ ಹುಡುಕಾಟದಲ್ಲಿದ್ದ ಕಿಶೋರ್‌ ಅವರಿಗೆ ತುಮಕೂರಿನ ‘ರವೀಂದ್ರ ಕಲಾನಿಕೇತನ’ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ದೊರೆಯಿತು. ಬೋಧನೆಯ ಜತೆಗೆ ಕಲಾ ಸಾಧನೆಯಲ್ಲೂ ತೊಡಗಿಕೊಂಡರು. ವಿದ್ಯಾರ್ಥಿಗಳ ಜತೆ ತಡರಾತ್ರಿವರೆಗೂ ಚಿತ್ರ ಬಿಡಿಸುತ್ತಾ, ಕಾಲೇಜಿನಲ್ಲೇ ತಂಗುತ್ತಿದ್ದರು. ‘ಸ್ಪಾಟ್‌ ಪೇಂಟಿಂಗ್‌’ಗಾಗಿ ವಿದ್ಯಾರ್ಥಿಗಳ ಜತೆ ಜಿಲ್ಲೆಯಾದ್ಯಂತ ಸುತ್ತಾಡುವಾಗ ‘ಭಿತ್ತಿ ಚಿತ್ರಗಳು’ ಇವರ ಗಮನಸೆಳೆದವು. ಸೀಬಿ ಲಕ್ಷ್ಮೀನರಸಿಂಹ ದೇವಾಲಯ, ಕೆರೆಗೋಡಿ ರಂಗಾಪುರದ ದೇವಾಲಯ, ಅಮೃತೂರು ಲಕ್ಷ್ಮೀ ದೇವಾಲಯ, ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ಬೆನಕನಕರೆಯ ಚನ್ನಕೇಶವ ದೇವಾಲಯ ಸೇರಿದಂತೆ ವಿವಿಧೆಡೆ ಕಂಡು ಬಂದ ಭಿತ್ತಿ ಚಿತ್ರಗಳು ಇವರ ಕಲಾ ಪಯಣಕ್ಕೆ ಹೊಸ ತಿರುವು ನೀಡಿದವು.

ಜನಜೀವನ, ಶಿವನ ಅವತಾರ, ವಿಷ್ಣು ದಶಾವತಾರ, ರಾಮಾಯಣ ಕತೆ ಹಾಗೂ ಶೃಂಗಾರದ ವಿಷಯಗಳನ್ನು ತುಮಕೂರಿನ ಭಿತ್ತಿಚಿತ್ರಗಳು ಒಳಗೊಂಡಿದ್ದವು. ಅವುಗಳ ಸ್ಥಳಕ್ಕೆ ಹೋಗಿ, ಅಲ್ಲಿಯೇ ಕುಳಿತು 30ಕ್ಕೂ ಹೆಚ್ಚಿನ ಕಲಾಕೃತಿಗಳನ್ನು ಕಿಶೋರ್‌ ರಚಿಸಿದ್ದಾರೆ.

ಈ ಭಿತ್ತಿಚಿತ್ರಗಳ ಮೇಲೆ ಮೈಸೂರು ಚಿತ್ರಕಲೆ ಶೈಲಿ ಮತ್ತು ಮೊಘಲ್‌ ಕಲೆಗಳ ಪ್ರಭಾವ ಢಾಳಾಗಿ ಇರುವುದನ್ನು ಗುರುತಿಸಿದ್ದಾರೆ. ತುಮಕೂರು ನಗರದಲ್ಲಿ ನಲ್ಲಪ್ಪ ಫೌಜ್‌ದಾರ್‌ ಅವರ ‘ವಸಂತ ಮಹಲ್‌’ ಕಟ್ಟಡ ಪಾಳು ಬಿದ್ದಿತ್ತು. ಅಲ್ಲಿ ಅಪರೂಪದ ಟಿಪ್ಪು ಸುಲ್ತಾನ್‌ ಯುದ್ಧದ ದೃಶ್ಯ, ಅಂತಃಪುರದಲ್ಲಿನ ಶೃಂಗಾರದ ದೃಶ್ಯಗಳನ್ನು ಒಳಗೊಂಡ ಭಿತ್ತಿಚಿತ್ರಗಳು ಇದ್ದವು. ಅವುಗಳನ್ನು ಪತ್ತೆ ಹಚ್ಚಿ, ಅದ್ಭುತವಾದ ಪೇಂಟಿಂಗ್‌ ಮಾಡಿದ್ದಾರೆ.

ಜನಪದ ಲೋಕ ಅನಾವರಣ

ಕಿಶೋರ್‌ ಅವರು ರಾಜ್ಯದಾದ್ಯಂತ ತಿರುಗಾಡಿ, ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತಾದ ಜನಪದ ಕಲೆಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳನ್ನು ಕುಂಚದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಕೋಲೆ ಬಸವನ ಆಟ, ಕೀಲು ಕುದುರೆ ಪ್ರದರ್ಶನ, ಸೂತ್ರದ ಗೊಂಬೆ ಆಟ, ವೀರಗಾಸೆ, ದುರ್ಗಿ– ಮುರ್ಗಿಯರ ಪ್ರದರ್ಶನ, ಮಲ್ಲಯ್ಯನ ಆರಾಧಕರಾದ ಕಾರಣಿಕರ ಸಂಸ್ಕೃತಿ, ಬಸವನ ಪೂಜೆ... ಮುಂತಾದ ಜನಪದ ಕಲೆಗಳ ಬಗ್ಗೆ 45 ಕಲಾಕೃತಿಗಳನ್ನು ರಚಿಸಿದ್ದಾರೆ.

ಜನಪದ ಪರಂಪರೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆ, ಈ ಎಲ್ಲ ಕಲಾಕೃತಿಗಳಲ್ಲೂ ಇರುವುದು ವಿಶೇಷ. ಮಹಿಳೆಯ ನಂಬಿಕೆ, ಕನಸು, ನೆನಪು, ಸ್ವಾತಂತ್ರ್ಯಕ್ಕಾಗಿ ಹಂಬಲಿಸುವ ಬಿಂಬಗಳನ್ನು ಚಿತ್ರಿಸಿದ್ದಾರೆ. ಚಾವಡಿಗಳಲ್ಲಿ ಕುಳಿತು ಚಾಡಿ ಮಾತುಗಳನ್ನು, ಗಾಳಿ ಸುದ್ದಿಗಳನ್ನು ಒಬ್ಬರ ಕಿವಿಯಿಂದ ಒಬ್ಬರ ಕಿವಿಗೆ ದಾಟಿಸುವ ವೇಳೆ, ತನ್ನ ನೋವುಗಳನ್ನೂ ಮಹಿಳೆ ತೋಡಿಕೊಳ್ಳುತ್ತಾಳೆ. ಈ ಮೂಲಕ ಮನಸು ಹಗುರ ಮಾಡಿಕೊಳ್ಳುತ್ತಾಳೆ ಎಂಬುದನ್ನು ‘ಗಾಸಿಪ್‌’ ಕಲಾಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಪ್ರಕೃತಿಯೇ ದೇವರು’ ಎಂದು ನಂಬಿದ್ದ ಜನಪದರ ಆಚರಣೆಗಳ ಬಗ್ಗೆ ‘ನೇಚರ್‌ ವರ್ಷಿಪ್‌’ ಕಲಾಕೃತಿ ಬೆಳಕು ಚೆಲ್ಲುತ್ತದೆ.

ಮುಂಬೈ, ನವದೆಹಲಿ, ಹೈದರಾಬಾದ್‌, ಕೋಲ್ಕತ್ತಾ, ರಾಜಸ್ಥಾನ ಸೇರಿ ವಿವಿಧೆಡೆ 1980ರಿಂದ 2018ರವರೆಗೆ ನೂರಾರು ಏಕವ್ಯಕ್ತಿ ಮತ್ತು ಸಾಮೂಹಿಕ ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ಕಲಾಸಾಧನೆಗೆ 1994ರಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, 2002ರಲ್ಲಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2009ರಲ್ಲಿ ಪಿ.ಆರ್‌. ತಿಪ್ಪೇಸ್ವಾಮಿ ಪ್ರಶಸ್ತಿ, 2016ರಲ್ಲಿ ‘ಕಲಾಶ್ರೀ’ ಪ್ರಶಸ್ತಿ ಸೇರಿದಂತೆ ವಿವಿಧ ಬಹುಮಾನ, ಸನ್ಮಾನಗಳು ಸಂದಿವೆ.

‘ಬುದ್ಧನ ಕುರಿತು 30ಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದೇನೆ. ಅಷ್ಟೇ ಅಲ್ಲದೆ ಕೃಷ್ಣ ಮತ್ತು ರಾಧೆ, ಮಹಿಳೆ ಮತ್ತು ಗೂಳಿ, ಮಹಿಳೆ ಮತ್ತು ಕುದುರೆ, ಬೆಕ್ಕು ಮತ್ತು ಮೀನು... ಈ ವಿಷಯಗಳ ಮೇಲೂ ಸರಣಿ ಕಲಾಕೃತಿಗಳನ್ನು ರಚಿಸಿದ್ದೇನೆ. ಪತ್ನಿ ವೇದಾವತಿ ಕೂಡ ಕಲಾವಿದೆಯಾಗಿರುವುದರಿಂದ, ಮನೆಯಲ್ಲಿ ಕಲೆಗೆ ಪೂರಕ ವಾತಾವರಣವಿದೆ. ನಾನು ನಿರಾತಂಕವಾಗಿ ಕಲಾ ಸಾಧನೆಯಲ್ಲಿ ತೊಡಗಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಕಲಾ ಗ್ಯಾಲರಿ, ಸ್ಟುಡಿಯೊ, ವಸತಿ ಸೌಲಭ್ಯಗಳನ್ನೊಳಗೊಂಡ ‘ಕಲಾಗ್ರಾಮ’ ಸೃಷ್ಟಿಸಿ, ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಕನಸು ಇದೆ’ ಎಂದು ಮನದಾಳದ ಮಾತುಗಳನ್ನು ಕಿಶೋರ್‌ ಹಂಚಿಕೊಂಡರು.

ಮುಂಬೈಯಲ್ಲಿ

ಮುಂಬೈನಲ್ಲಿರುವ ಪ್ರತಿಷ್ಠಿತ ಜಹಾಂಗೀರ್‌ ಆರ್ಟ್‌ ಗ್ಯಾಲರಿಯಲ್ಲಿ ಒಮ್ಮೆಯಾದರೂ ಕಲಾಕೃತಿಗಳನ್ನು ಪ್ರದರ್ಶಿಸಬೇಕು ಎಂಬುದು ಪ್ರತಿಯೊಬ್ಬ ಕಲಾವಿದರ ಬಹುದೊಡ್ಡ ಕನಸು. ಆದರೆ, ಆ ಕನಸನ್ನು ನನಸು ಮಾಡುವುದು ಅಷ್ಟು ಸುಲಭವಲ್ಲ.

ಏಕೆಂದರೆ, ಅಲ್ಲಿ ಪ್ರದರ್ಶನ ನೀಡಲು ಮೊದಲು ಅರ್ಜಿ ಹಾಕಿ, ಕಲಾಕೃತಿಗಳನ್ನು ಕಳುಹಿಸಿಕೊಡಬೇಕು. ಕಲಾಕೃತಿಗಳ ಗುಣಮಟ್ಟ ಮತ್ತು ವೈಶಿಷ್ಟ್ಯಪರಿಶೀಲಿಸಿ, ಪ್ರದರ್ಶನ ನೀಡಲು ಅರ್ಹ ಎಂದು ‘ಬಾಂಬೆ ಆರ್ಟ್‌ ಸೊಸೈಟಿ’ಯವರು ಅನುಮತಿ ನೀಡಬೇಕು. ಒಟ್ಟು 7 ಗ್ಯಾಲರಿಗಳಿದ್ದು, ಒಂದು ವಾರ ಅವಧಿಗೆ ₹ 50 ಸಾವಿರದಿಂದ ₹ 80 ಸಾವಿರದವರೆಗೆ ಶುಲ್ಕ ಕಟ್ಟಬೇಕು.

‘2014ರಲ್ಲಿ ನಾನು ಅರ್ಜಿ ಹಾಕಿದ್ದಕ್ಕೆ 2018ರ ಮೇ ತಿಂಗಳಲ್ಲಿ ಒಂದು ವಾರ ಪ್ರದರ್ಶನ ನೀಡಲು ಅವಕಾಶ ಸಿಕ್ಕಿತು. ಆಯ್ದ 30 ಜನಪದ ಕಲಾಕೃತಿಗಳನ್ನು ಅಲ್ಲಿ ಪ್ರದರ್ಶಿಸಿದೆ. ದೇಶ–ವಿದೇಶದ ಪ್ರಖ್ಯಾತ ಕಲಾವಿದರು, ಗ್ರಾಹಕರು, ಕಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿದ್ದರು. ನನ್ನ ಕಲಾಕೃತಿಗಳ ಬಣ್ಣದ ಸಂಯೋಜನೆ ಮತ್ತು ಕಲಾ ಕೌಶಲದ ಬಗ್ಗೆ ಖ್ಯಾತ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಶ್ರೇಷ್ಠ ಗ್ಯಾಲರಿಯಲ್ಲಿ ಇರುವ ಬೆಳಕಿನ ವ್ಯವಸ್ಥೆ, ಸ್ವಚ್ಛತೆ ಕಲಾಕೃತಿಗಳಿಗೆ ಹೊಸ ಮೆರುಗು ತರುತ್ತದೆ. ಅಲ್ಲಿನ ಒಂದೊಂದು ಕ್ಷಣವೂ ಅವಿಸ್ಮರಣೀಯ’ ಎನ್ನುತ್ತಾರೆ ಕಿಶೋರ್‌ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT