ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಹಬ್ಬಗಳು

Last Updated 16 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಹಬ್ಬಗಳು

ಲೇ: ಡಾ.ಆರ್‌.ಬಿ. ಚಿಲಮಿ

ಪ್ರ: ಅಕ್ಷರ ಮಂಟಪ, ಬೆಂಗಳೂರು

ಪುಟ: 286

ಬೆಲೆ: 250

ಹಬ್ಬಗಳು ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿಗಳಾಗಿವೆ. ಇವುಗಳ ಆಚರಣೆಯಿಂದ ಮನುಷ್ಯ ಚೈತನ್ಯಶೀಲ, ಕ್ರಿಯಾಶೀಲನೂ ಆಗುತ್ತಾನೆ ಎನ್ನುವುದು ನಂಬಿಕೆ. ಪ್ರತಿಯೊಂದು ಹಬ್ಬದ ಆಚರಣೆಗೂ ಒಂದು ವಿಶಿಷ್ಟ ಸ್ಥಾನವಿದೆ. ಹಬ್ಬ ಎಂದಾಕ್ಷಣ ಕೇವಲ ಉಂಡು, ಉಟ್ಟು, ತೇಗಿ ನಲಿದಾಡುವುದಲ್ಲ. ಈ ನಿಯಮಿತ ದಿನದಲ್ಲಿಯಾದರೂ ಕಡ್ಡಾಯವಾಗಿ ದೇಹ ದಂಡನೆ ಮೂಲಕ ವ್ರತಾಚರಣೆ ಮಾಡಬೇಕು.

ನಾಡಿನ ಪ್ರತಿ ಭಾಗದಲ್ಲಿ ಆಚರಿಸುವ ಹಬ್ಬಗಳು ಭಿನ್ನವಾಗಿರುತ್ತವೆ. ಡಾ.ಆರ್.ಬಿ. ಚಿಲಮಿ ಅವರು ಉತ್ತರ ಕರ್ನಾಟಕದಲ್ಲಿ ಆಚರಿಸುವ ಹಬ್ಬಗಳ ಜನರಿಗೆ ಅರ್ಥೈಸುವ ಕೆಲಸ ಮಾಡಿದ್ದಾರೆ. ಕಾರಹುಣ್ಣಿಮೆ, ಮಣ್ಣೆತ್ತಿನ ಅಮಾವಾಸ್ಯೆಯ ಸಂಭ್ರಮ, ಗುಳ್ಳವ್ವನ ಸಡಗರದ ಹಬ್ಬ, ಸೀಗೀ ಹುಣ್ಣಿಮೆ ಹಬ್ಬ, ಹೋಳಿ ಹಬ್ಬ ಹೀಗೆ ವಿವಿಧ ಹಬ್ಬಗಳ ಆಚರಣೆಗಳ ಮಹತ್ವ ಕುರಿತು ಓದುಗರಿಗೆ ಈ ಹೊತ್ತಿಗೆಯಲ್ಲಿ ಪರಿಚಯಿಸಿದ್ದಾರೆ.

***

ಸಮೀಕ್ಷೆ– ಧಾರವಾಡ ಸಾಹಿತ್ಯ ಸಂಭ್ರಮ 2018

ಸಂ: ಲಕ್ಷ್ಮೀಕಾಂತ ಇಟ್ನಾಳ

ಪ್ರ: ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಧಾರವಾಡ

ಪುಟ: 174

ಬೆಲೆ: 200

ಧಾರವಾಡ ಸಾಹಿತ್ಯ ಸಂಭ್ರಮ ಕೇವಲ ಸಾಹಿತಿಗಳಿಗಷ್ಟೇ ಸೀಮಿತವಾಗಿಲ್ಲ. ಈ ಸಂಭ್ರಮದಲ್ಲಿ ನಡೆಯುವ ಮುಕ್ತ ಚರ್ಚೆಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿವೆ. ಇಲ್ಲಿ ಸಾಹಿತ್ಯ ಲೋಕದ ಪ್ರತಿಯೊಂದು ಹೊಸ ವಿಚಾರಗಳು ಚರ್ಚೆಯಾಗುತ್ತವೆ. ಇದು ಯುವ ಸಾಹಿತಿಗಳ ಕಲಿಕೆಗೆ ಸಹಕಾರಿಯಾಗಿದೆ. ಪ್ರತಿವರ್ಷವೂ ಧಾರವಾಡದಲ್ಲಿ ಅಚ್ಚುಕಟ್ಟಾಗಿ ಸಾಹಿತ್ಯ ಸಂಭ್ರಮ ನಡೆಯುತ್ತಿದೆ. 2018ರ ಸಾಹಿತ್ಯ ಸಂಭ್ರಮದ ಹೂರಣವನ್ನು ಓದುಗರಿಗೆ ಈ ಪುಸ್ತಕದ ಮೂಲಕ ನೀಡಿದ್ದಾರೆ ಲಕ್ಷ್ಮೀಕಾಂತ ಇಟ್ನಾಳ.

ಮೂರು ದಿನಗಳ ಕಾಲ ನಡೆದ ಗೋಷ್ಠಿಗಳ ವಿವರ ಇಲ್ಲಿದೆ. ಉದ್ಘಾಟನೆ, ಸಮಾರೋಪದ ವಿವರಣೆಯೂ ಇದೆ. ಸಂಭ್ರಮ ಕುರಿತು ಸಾಹಿತಿಗಳು, ಗಣ್ಯರ ಅಭಿಪ್ರಾಯವನ್ನೂ ನೀಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಚಿತ್ರ ಸಂಪುಟ ಇದೆ. ಈ ಅಪರೂಪದ ಛಾಯಾಚಿತ್ರಗಳು ಓದುಗರ ಮನ ಸೆಳೆಯುತ್ತವೆ.

***

ವಚನಗಳಲ್ಲಿ ಗಣಿತ

ಲೇ: ಮಲ್ಲಿಕಾರ್ಜುನ ಯಾಳವಾರ

ಪ್ರ: ಅನಿಮಿಷ ಪ್ರಕಾಶನ, ಬಾಗಲಕೋಟೆ

ಪುಟ: 332

ಬೆಲೆ: 250

ಶರಣರ ವಚನಗಳನ್ನು ಗಣಿತದ ನೆಲೆಯಲ್ಲಿ ವಿಶ್ಲೇಷಿಸುವ ಪುಸ್ತಕವೇ ‘ವಚನಗಳಲ್ಲಿ ಗಣಿತ’. ಒಟ್ಟು 29 ವಚನಕಾರರ 62 ವಚನಗಳನ್ನು ಗಣಿತೀಯವಾಗಿ ವಿಶ್ಲೇಷಿಸಿದ್ದಾರೆ. ಪ್ರಸಿದ್ಧ ಗಣಿತಜ್ಞರ ಸಿದ್ಧಾಂತಗಳೊಂದಿಗೆ ವಚನಗಳಲ್ಲಿರುವ ಅಂಕಿಅಂಶಗಳನ್ನು ಸಮೀಕರಿಸಿದ್ದಾರೆ.

ಆಯ್ದುಕೊಂಡಿರುವ ಈ ಅಂತರಂಗದಲ್ಲಿ ಭಾಜಕ ಸಂಖ್ಯೆ, ಸಂಖ್ಯಾ ವಿಭಜನೆ, ತ್ರಿಭುಜ ಸಂಖ್ಯೆ, ಶೂನ್ಯ, ಪೈ–ನಕ್ಷೆ, ವೃತ್ತ, ಚತುರ್ಭುಜ, ಗೋಲ, ಶಂಕು, ಮಾಯಾಚೌಕ, ಪರವಾಹಕ ಜಾಲಾಕೃತಿ ಇತ್ಯಾದಿಯನ್ನು ಗಣಿತಶಾಸ್ತ್ರದ ಸಿದ್ಧಾಂತದ ಮೂಲಕ ವಿಶ್ಲೇಷಿಸಿ ಓದುಗರಲ್ಲಿ ಬೆರಗು ಮೂಡಿಸುತ್ತಾರೆ. ಈ ಹೊತ್ತಿಗೆಯಲ್ಲಿ ನೀಡಿರುವ ಟಿಪ್ಪಣಿಮ ಅನುಬಂಧಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಗಣಿತ ಶಿಕ್ಷಕರು ಮತ್ತು ಸಂಶೋಧಕರಲ್ಲಿ ಆಸಕ್ತಿ ಮೂಡಿಸುತ್ತದೆ.

***

ಸಾಹಿತ್ಯ ಚಳುವಳಿಗಳು

ಸಂ: ಶ್ರೀಧರ ಹೆಗಡೆ ಭದ್ರನ್

ಪ್ರ: ಅಭಿನವ ಪ್ರಕಾಶನ, ಬೆಂಗಳೂರು

ಪುಟ: 100

ಬೆಲೆ: 100

ವ್ಯವಸ್ಥೆಯ ಬದಲಾವಣೆಗಾಗಿ ನಡೆಯುವ ಚಲನಶೀಲವಾದ ಆಂದೋಲನಕ್ಕೆ ಚಳವಳ ಎನ್ನುತ್ತಾರೆ. ಇದು ಸಮಷ್ಟಿಪ್ರಜ್ಞೆಯ ಫಲ. ಭಾರತೀಯ ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಪಾಶ್ಚಿಮಾತ್ಯ ಸುಸಂಘಟಿತ ಸಮಾಜದ ಪರಿಭಾಷೆಯಾದ ಚಳವಳಿಯ ಭಾರತೀಯರನ್ನು ಪ್ರಭಾವಿಸಿತು. ಇದು ಶುದ್ಧ ಸಾಹಿತ್ಯಿಕ ಪರಿಕಲ್ಪನೆಯೇನಲ್ಲ. ಆದರೂ, ಸಾಹಿತ್ಯ ಮತ್ತು ಚಳವಳಿಯದ್ದು ಅವಿನಾಭಾವ ಸಂಬಂಧ.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕಾಣಿಸಿಕೊಂಡ ಸಾಹಿತ್ಯಿಕ ಚಳುವಳಿಗಳ ಬಗ್ಗೆ ಪರಿಚಯಿಸುವ ಹೊತ್ತಿಗೆ ಇದು. ಈ ಪುಸ್ತಕದ ಲೇಖಕರಾದ ಶ್ರೀಧರ ಹೆಗಡೆ ಭದ್ರನ್ ಅವರೂ ಸೇರಿದಂತೆ ಎಚ್‌.ಎಸ್‌. ರಾಘವೇಂದ್ರರಾವ್, ಚಿ. ಶ್ರೀನಿವಾಸರಾಜು, ನರಹಳ್ಳಿ ಬಾಲಸುಬ್ರಹ್ಮಣ್ಯ, ಪುರುಷೋತ್ತಮ ಬಿಳಿಮಲೆ, ಅರವಿಂದ ಮಾಲಗತ್ತಿ ಅವರು ಬರೆದು ಲೇಖನಗಳು ಇಲ್ಲಿವೆ. ನವೋದಯ, ಪ್ರಗತಿಶೀಲ, ನವ್ಯತೆಯ ಪರಿಕಲ್ಪನೆ, ಬಂಡಾಯ ಮತ್ತು ದಲಿಯ ಸಾಹಿತ್ಯದ ಬಗ್ಗೆ ಇಲ್ಲಿ ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT