ಸೋಮವಾರ, ಮಾರ್ಚ್ 30, 2020
19 °C

ಗಮನಸೆಳೆದ ಹಿರಿಯ ಕಲಾವಿದರ ನೃತ್ಯ

ರಮಾ ವಿ ಬೆಣ್ಣೂರ್ Updated:

ಅಕ್ಷರ ಗಾತ್ರ : | |

ಶಮಾ ಭಾಟೆ

ಬೆಂಗಳೂರು ಮೂಲದ ನೃತ್ಯ ಸಂಸ್ಥೆ ‘ಆರ್ಟಿಕ್ಯುಲೇಟ್’ ಅವರು ಮೈಸೂರಿನಲ್ಲಿ ಆರಂಭಿಸಿದ ನೃತ್ಯ ಯಾನಕ್ಕೆ 25ತಿಂಗಳು ತುಂಬಿದವು. ವೀಣೆ ಶೇಷಣ್ಣ ಭವನದಲ್ಲಿ ಈಚೆಗೆ ನಡೆದ ಯುವ ನೃತ್ಯಕಲಾಕಾರರ ಸಂಭ್ರಮಕ್ಕೆ ನೃತ್ಯದ ಹಿರಿಯ ಕಲಾವಿದರೇ ಭಾಗವಹಿಸಿ ಹರಸಿದರು. ಅಂದು ಆರ್ಟಿಕ್ಯುಲೇಟ್ ಸಂಸ್ಥೆಯ ವೆಬ್‌ಸೈಟ್ ಸಹ ಬಿಡುಗಡೆಯಾಯಿತು. ಅಂದಿನ ನೃತ್ಯದ ವಿಶೇಷತೆ ಎಂದರೆ, ಸಾತ್ವಿಕಾಭಿನಯಕ್ಕೇ ಒತ್ತು ನೀಡಿ ನರ್ತಿಸಿದ ಮೂರು ಸಂಪ್ರದಾಯದ ಹಿರಿಯ ಕಲಾವಿದರ ತನಿ ನೃತ್ಯ ಕಾರ್ಯಕ್ರಮ.

ಮೊದಲಿಗೆ ವಿದುಷಿ ಶಮಾ ಭಾಟೆ ಕಥಕ್ ಶೈಲಿಯ ನೃತ್ಯವನ್ನು ಪ್ರಸ್ತುತಪಡಿಸಿದರು. 35 ವರ್ಷಗಳಿಗೂ ಮೀರಿದ ಅನುಭವದ ಪಕ್ವತೆ ಅವರ ಅಭಿನಯದಲ್ಲಿ ಎದ್ದು ಕಾಣುತ್ತಿತ್ತು. ‘ಕೃಷ್ಣಾ, ಸಾಕು ಮಾಡು ನಿನ್ನ ತುಂಟತನ. ನೀನಿನ್ನು ಮಗುವಲ್ಲ. ಯಶೋದೆಗೆ ಹೇಳಿ ಮತ್ತೆ ನಿನ್ನ ಕೈಗಳನ್ನು ಬಂಧಿಸುತ್ತೇನೆ’ ಎಂದು ಪಲ್ಲವಿಯಲ್ಲೂ, ‘ಗರ್ಜಿಸುವ ಮೋಡಗಳು ಭಯವನ್ನುಂಟುಮಾಡುತ್ತಿವೆ. ಕೇಳಿಬರುತ್ತಿರಲು ನಿನ್ನ ಕೊಳಲ ದನಿ, ನನ್ನ ಕಣ್ಣಲ್ಲಿ ನೀರು. ಮನೆಗೆ ಹೇಗೆ ಹೋಗಲಿ?’ ಎಂಬ ಕೃಷ್ಣನ ಬದುಕಿನ ಎರಡು ಹಂತದಲ್ಲಿ ಗೋಪಿಯ ಮನಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನೋಡುಗರೆದುರು ತೆರೆದಿಟ್ಟರು ಶಮಾ ಭಾಟೆ. 65ವರ್ಷ ವಯಸ್ಸಾದರೂ ಅವರಲ್ಲಿ ನೃತ್ಯವು ಚೈತನ್ಯದಾಯಿಯಾಗಿ ನೆಲೆಸಿದೆ. ದಿನಕರ ಕಾಯ್ಕಿಣಿಯವರ ‘ಮೋರೆ ಕಾನ್ಹಾನೆ ಏಸೆ ಬೀನ ಬಜಾಯೆ’ಯಲ್ಲಿ ಅವನ ವೇಣುನಾದದ ಮೋಡಿಯಲ್ಲಿ ಹೇಗೆ ಇಡೀ ಜಗತ್ತು ಸ್ತಬ್ಧ ಎಂಬುದನ್ನು ಅದ್ಭುತವಾಗಿ ಚಿತ್ರಿಸಿದರು.

ವಿದುಷಿ ರಂಜನಾ ಗೌಹರ್ ಅವರು ಜಯದೇವನ ಎರಡು ಅಷ್ಟಪದಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅಭಿಸಾರಿಕೆ ರಾಧೆಯು ಮನೆಯವರೆಲ್ಲ ಮಲಗಿರುವಾಗ ಮುರಳಿಯ ಭೇಟಿಗಾಗಿ ಹೊರಡುತ್ತಾಳೆ. ಸಪ್ಪಳವಾದೀತೆಂದು ಕಾಲ್ಗೆಜ್ಜೆ ಬಿಚ್ಚಿ, ದೀಪವಾರಿಸಿ ಹೊರಟ ರಾಧೆಗೆ ಕಾಣಿಸಿಕೊಳ್ಳದೆ ಕಾಡುವ ಕೃಷ್ಣನ ಪ್ರಸಂಗವನ್ನು ಸುಂದರವಾಗಿ ಒಡಿಸ್ಸಿ ಶೈಲಿಯಲ್ಲಿ ತೋರಿದರು.

ರಾಧೆ ಕೃಷ್ಣರಿಬ್ಬರೂ ಅಗಲಿ ದೂರವಿದ್ದರೂ ಮಿಲನಕ್ಕಾಗಿ ಹಾತೊರೆಯುತ್ತಿರುವ ವಿರಹಿಗಳನ್ನು ‘ರತಿಸುಖಸಾರೆ’ ಎಂಬ ಅಷ್ಟಪದಿಯಲ್ಲಿ ಚಿತ್ರಿಸಿದರು. ಒಡಿಸ್ಸಿ ಶೈಲಿಯ ಜಾರು ಅಡವುಗಳು ಮತ್ತು ತ್ರಿಭಂಗಿಗಳಿಂದ ಸಮೃದ್ಧವಾಗಿದ್ದ ಅವರ ಪ್ರಸ್ತುತಿಯು ಸೊಗಸಾದ ಸಂಗೀತದೊಡನೆ ರಂಜಿಸಿದವು.

ವಿದ್ವಾನ್ ದೀಪಕ್ ಮಜುಂದಾರ್ ಅವರ ‘ನೃತ್ಯ ಪ್ರೇಮವು ನರ್ತಕನ ಶಾರೀರಿಕ ಸ್ಥಿತಿಯನ್ನು ಮೀರಿದ್ದು’ ಎಂಬುದಕ್ಕೆ ಉದಾಹರಣೆಯಂತಿತ್ತು. ಆಯಾ ಪಾತ್ರದೊಳಗೆ ಅವರು ತಲ್ಲೀನರಾಗಿ ಅಭಿನಯಿಸಿದ ಪರಿಯು ಪ್ರೇಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತಹುದು. ಅವರ ಎರಡೂ ನೃತ್ಯಬಂಧಗಳು, ತಮ್ಮ ವಿರಳವಾದ ವಸ್ತುವಿನಿಂದ, ಅದರ ಸೊಗಸಾದ ಪ್ರಸ್ತುತಿಯಿಂದ ನೋಡುಗರಿಗೆ ಮೋಡಿ ಮಾಡಿದವು. ಮೊದಲನೆಯದು ಪಾರ್ವತಿಯು ಮೊತ್ತಮೊದಲ ಬಾರಿಗೆ ಶಿವನನ್ನು ನೋಡಿದಾಗ ತೋರಿದ ಅವಳ ಪ್ರತಿಕ್ರಿಯೆಯನ್ನು ಕುರಿತದ್ದು. ಗಜಚರ್ಮಾಂಬರಧರನಾದ ಶಿವನು ಹಾವಿನ ಆಭರಣ, ತಲೆಯ ಮೇಲಿನ ಚಂದ್ರ, ಕೈಯೊಳಗಿನ ಭಿಕ್ಷಾಪಾತ್ರೆ ಇವೆಲ್ಲವನ್ನೊಳಗೊಂಡಿದ್ದರೂ ಅವನಿಗೆ ಒಲಿಯುವ ಶಿವೆಯ ಪ್ರಸಂಗವು ಮನೋಜ್ಞವಾಗಿದ್ದಿತು.

ಈ ಶೃಂಗಾರದಿಂದ ವಾತ್ಸಲ್ಯ ಭಾವದೊಳಗೆ ಕಾಲಿಟ್ಟ ಅವರು ಮುಂದೆ, ಮಲಗಲು ಒಲ್ಲೆನೆನುತ್ತಿದ್ದ ಕೃಷ್ಣನನ್ನು ಕಥೆ ಹೇಳಿ ಮಲಗಿಸುವ ಯಶೋದೆಯಾಗಿ ಪರಿವರ್ತಿತಗೊಂಡರು. ರಾಜ್‌ಕುಮಾರ್ ಭಾರತಿ ಅವರ ಸಂಗೀತ ಸಂಯೋಜನೆಯಿದ್ದ ಈ ಸಾಹಿತ್ಯದ ಮೂಲ ಅಗೋಚರ. ರಾಮಾಯಣದ ಕತೆಯನ್ನು ಹೇಳಲಾರಂಭಿಸಿದ ಯಶೋದೆ. ತನ್ಮಯನಾಗಿ ಕೇಳಿದ ಕೃಷ್ಣ. ಕ್ಷಣಮಾತ್ರದಲ್ಲಿ ಶಿವ ಧನುಸ್ಸನ್ನು ಮುರಿದ, ಸ್ವಯಂವರದ, ಮಂಥರೆ–ಕೈಕೇಯಿಯ ಮತ್ತು ಕಾಡಿಗೆ ಹೊರಟ ರಾಮನನ್ನು ಕಣ್ಣ ಮುಂದೆ ತೋರಿದ ದೀಪಕ್ ಅವರು ರಾವಣನು ಸೀತೆಯನ್ನು ಹೊತ್ತೊಯ್ಯುವ ದೃಶ್ಯವನ್ನು ಪರಿಣಾಮಕಾರಿಯಾಗಿಸಿದರು.

ರಾಮನಿಗೆ ತಿಳಿಯಲೆಂದು ತನ್ನ ಒಡವೆಗಳನ್ನು ಬಿಚ್ಚಿ ಬಿಚ್ಚಿ ಕೆಳಗೆಸೆಯುತ್ತಿದ್ದ ಅಸಹಾಯಕ ಸೀತೆಯ ಆಕ್ರಂದನವನ್ನು ಕೇಳಿದ ಕೃಷ್ಣ ಧಿಗ್ಗನೆದ್ದು ‘ಸೌಮಿತ್ರಿ, ನನ್ನ ಧನುಸ್ಸನ್ನು ತಾ’ ಎಂದು ಕೂಗಿದಾಗ ಕಕ್ಕಾವಿಕ್ಕಿಯಾಗುವ ತಾಯಿ, ಥಟ್ಟನೆ ‘ತಾನು ಈಗ ರಾಮನಲ್ಲ’, ಎಂಬುದು ನೆನಪಿಗೆ ಬಂದ ಕೃಷ್ಣ ಈ ಎಲ್ಲವೂ ಅವರ ಅಭಿನಯವು ಮನದಲ್ಲಿ ಬಹುಕಾಲ ಉಳಿಯುವಂತೆ ಮೂಡಿಬಂದಿತು. ಒಟ್ಟಾರೆ, ಆರ್ಟಿಕ್ಯುಲೇಟ್‌ನ ಈ ರಜತ ಸಂಭ್ರಮವು ಕಿರಿಯರಿಗೆ ಮಾರ್ಗದರ್ಶಕವಾಗಿದ್ದುದು ವಿಶೇಷ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು