ಸೋಮವಾರ, ಮಾರ್ಚ್ 30, 2020
19 °C

ಸುಂದರಕಾಂಡ ಹೊಸಪ್ರಯೋಗ

ವೈ.ಕೆ.ಸಂಧ್ಯಾ ಶರ್ಮ Updated:

ಅಕ್ಷರ ಗಾತ್ರ : | |

Deccan Herald

‘ಅಭಿವ್ಯಕ್ತಿ ಡಾನ್ಸ್ ಸೆಂಟರ್’ನ ಇತ್ತೀಚಿನ ಹೊಸಪ್ರಯೋಗ ‘ಸುಂದರಕಾಂಡ’ ನೃತ್ಯರೂಪಕ ‘ನಯನ’ ರಂಗಮಂದಿರದಲ್ಲಿ ಸುಂದರವಾಗಿ ಮೂಡಿಬಂತು. ಇದುವರೆಗೂ ರಾಮಾಯಣ ಕುರಿತ ಪ್ರಸಂಗಗಳ ಅನೇಕ ನೃತ್ಯರೂಪಕಗಳು ಪ್ರಯೋಗಗೊಂಡಿದ್ದರೂ ಖ್ಯಾತ ನೃತ್ಯಪಟು ಹಾಗು ನಾಟ್ಯಗುರು ಎಸ್. ರಘುನಂದನ್ ನೇತೃತ್ವದ ಹೊಸಪರಿಕಲ್ಪನೆಯ ‘ಸುಂದರಕಾಂಡ’ ಮನೋಜ್ಞ ನೃತ್ಯಸಂಯೋಜನೆ ಹಾಗೂ ಅನೇಕ ನಾಟಕೀಯ ಸನ್ನಿವೇಶಗಳಿಂದ ‘ಹನುಮಂತ’ನ ಉನ್ನತ ವ್ಯಕ್ತಿತ್ವವನ್ನು ವರ್ಣರಂಜಿತವಾಗಿ ಚಿತ್ರಿಸಲಾಯಿತು.

ಒಟ್ಟು ಸುಂದರಕಾಂಡದಲ್ಲಿ ಏಳು ಅಂಕಗಳಿದ್ದವು. ಕರ್ನಾಟಕ ಶಾಸ್ತ್ರೀಯ ಸಂಗೀತ (ಸಂಯೋಜನೆ ಮತ್ತು ಗಾಯನ ವಿನಯ ರಾಜಮಾನ್ಯ)ವನ್ನು ಬಳಸಿ, ಭರತನಾಟ್ಯದಲ್ಲಿ ಕಲಾವಿದರು ಕಥಾ ಓಟವನ್ನು ಬೆಳೆಸಿದರು. ಮೋಹನ ರಾಗದಲ್ಲಿ ವಿವಿಧ ರಸೋತ್ಪತ್ತಿಯ ಪ್ರಯತ್ನ ಶ್ಲಾಘನೀಯ. ಇಲ್ಲಿ ಭಕ್ತಿ ಮತ್ತು ಹಾಸ್ಯರಸಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದ್ದು, ಭಕ್ತಿಯ ಮೂರ್ತಿಯಾದ ಆಂಜನೇಯನ ವಿವಿಧ ಮುಖಗಳು ಲೋಕಧರ್ಮಿಯಾಗಿ ಪರಿಣಾಮಕಾರಿಯಾಗಿ ಅನಾವರಣಗೊಂಡವು.

ಆಂಜನೇಯ (ರಘುನಂದನ್) ನ ಪ್ರವೇಶ, ಜೊತೆಯ ಎರಡು ಮರಿಕೋತಿಗಳ ಅಂಗಚೇಷ್ಟೆಗಳು ನಗು ಉಕ್ಕಿಸಿ, ಒರಟು ದಾಪುಗಾಲುಗಳ ನಡಿಗೆ ಅವನ ಶಕ್ತಿಯ ಪ್ರತೀಕವಾಗಿ, ಆಕಾಶದ ಮೋಡಗಳ ಮಧ್ಯೆ ಲಂಘಿಸುವ ದೃಶ್ಯ ಅದ್ಭುತವಾ ಗಿತ್ತು.

ಇಡೀ ನೃತ್ಯನಾಟಕದ ಕೆಂದ್ರಪಾತ್ರವಾದ ಆಂಜನೇಯನ ಮೇಲೆಯೇ ಹೆಚ್ಚಿನ ಒತ್ತನ್ನು ನೀಡಿದ್ದ ಕಾರಣ, ಸೀತೆ ( ಮಾನಸಿ ರಘುನಂದನ್)ಯನ್ನು ಕಂಡು ಚೂಡಾಮಣಿ ಪಡೆಯುವವರೆಗೂ ನಡೆದ ಘಟನೆಗಳು ನಾಟಕೀಯ ಸೆಳೆಮಿಂಚಿನಿಂದ ಕೂಡಿದ್ದವು. ಆಂಜನೇಯನ ಮಿಂಚಿನ ಸಂಚಾರದ ಚಲನೆಗಳು, ಆಂಗಿಕಾಭಿನಯ ಪಾತ್ರಕ್ಕೆ ಹೆಚ್ಚಿನ ಪುಷ್ಠಿ ನೀಡಿದವು. ರಾವಣನ ಮಗ ಇಂದ್ರಜಿತನ ಜೊತೆಗೆ ನಡೆಯುವ ಕಾಳಗ ಮತ್ತು ಬಾಲಕ್ಕೆ ಬೆಂಕಿ ಹಚ್ಚಿದ-ಲಂಕೆಯನ್ನು ಸುಡುವ ದೃಶ್ಯಗಳಲ್ಲಿ ಸಾಕಷ್ಟು ಹಾಸ್ಯದ ಲೇಪನವಿದ್ದು, ನೃತ್ಯದಲ್ಲಿ ಹಾಸ್ಯರಸವನ್ನೂ ಧಾರಾಳವಾಗಿ ಅಭಿವ್ಯಕ್ತಿಸುವ ಅವಕಾಶಗಳಿವೆ ಎಂಬುದಕ್ಕೆ ಕನ್ನಡಿ ಹಿಡಿದವು. ಉಳಿದೆಲ್ಲ ಕಲಾವಿದರೂ ಶಾಸ್ತ್ರೀಯ ಚೌಕಟ್ಟಿನೊಳಗಿನ ನರ್ತನಕ್ಕೆ ಭಂಗಬಾರದಂತೆ ಮನಮೋಹಕ ನೃತ್ಯ-ಆಂಗಿಕಾಭಿನಯಗಳಿಂದ ಗಮನ ಸೆಳೆದರು. ಹಿಮ್ಮೇಳದ ಸಹಕಾರದಲ್ಲಿ ವಯೊಲಿನ್-ಹೇಮಂತ್ ಕುಮಾರ್,ಕೊಳಲು-ಮಹೇಶ ಸ್ವಾಮಿ, ಮೃದಂಗ-ರಮೇಶ್, ರಿದಂ ಪ್ಯಾಡ್ ಅರುಣ್ ಕುಮಾರ್ ಮತ್ತು ನಟುವಾಂಗ ಬಿ.ಕೆ.ಶ್ಯಾಮ್ ಪ್ರಕಾಶ್ ನೃತ್ಯನಾಟಕದ ಪರಿಣಾಮ ವೃದ್ಧಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು