ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೋಚಿತ–ಕಲೋಚಿತ ಬದಲಾವಣೆಯೇ ಆಧುನೀಕರಣ: ಯಕ್ಷಗಾನದ ಆಧುನಿಕತೆ ಚರ್ಚೆಯಲ್ಲಿ ಅಭಿಮತ

ಪ್ರಜಾವಾಣಿಯ ಕ್ಲಬ್‌ಹೌಸ್‌ನಲ್ಲಿ ನಡೆದ ಸಮಾಲೋಚನೆಯಲ್ಲಿ ಅರ್ಥಧಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಭಾಗಿ
Last Updated 11 ಜುಲೈ 2021, 11:31 IST
ಅಕ್ಷರ ಗಾತ್ರ

ಆಲದಮರ (ಪ್ರಜಾವಾಣಿ ಕ್ಲಬ್‌ಹೌಸ್‌): ಕಾಲೋಚಿತ ಮತ್ತು ಕಲೋಚಿತ ಬದಲಾವಣೆಗಳನ್ನು ಆಗಾಗ ಮಾಡಿಕೊಳ್ಳುತ್ತಲೇ ಇರಬೇಕು. ಇದು ಕಲಾ ಕ್ಷೇತ್ರದ ಆಧುನಿಕತೆ. ಆಧುನಿಕತೆಯನ್ನು ಪೂರ್ಣವಾಗಿ ನಿರಾಕರಿಸಲಾಗದು...

ಹೀಗೆ ಪ್ರಜಾವಾಣಿಯ ಸಾಮಾಜಿಕ ಮಾಧ್ಯಮ ವೇದಿಕೆಕ್ಲಬ್‌ಹೌಸ್‌ನ ‘ಆಲದ ಮರ’ದಡಿಯ ರಂಗಸ್ಥಳದಲ್ಲಿ ಭಾನುವಾರ ಯಕ್ಷಗಾನ ಮತ್ತು ಆಧುನಿಕತೆಯನ್ನು ಒಂದೇ ಸಾಲಿನಲ್ಲಿ ತೆರೆದಿಟ್ಟವರು ಖ್ಯಾತ ಅರ್ಥಧಾರಿ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಅವರು.

ಸಾಮಾನ್ಯವಾಗಿ ಯಕ್ಷಗಾನ ತಾಳಮದ್ದಲೆಗಳಲ್ಲಿ ಕೌರವ, ರಾವಣನಾಗಿ ಆ ಪಾತ್ರ ಸಮರ್ಥನೆಯನ್ನು ಬಲವಾಗಿ ಮಾಡುವ ಡಾ.ಜೋಷಿ ಅವರು ‘ಆಲದ ಮರ’ದ ಅಡಿ ನಿರ್ವಹಿಸಿದ್ದು ಜ್ಞಾನವೃದ್ಧ ಭೀಷ್ಮನ ಪಾತ್ರ. ಚರ್ಚೆ ಸ್ವಲ್ಪ ತಾರಕಕ್ಕೇರುತ್ತದೆ ಎಂದಾದಾಗ ಅವರೇ ಸಂಧಾನಕಾರ ಕೃಷ್ಣನ ಪಾತ್ರವನ್ನೂ ನಿರ್ವಹಿಸಿದರು. ಉಳಿದ ಘಟಾನುಘಟಿ ಯಕ್ಷ ತಾರೆಯರ ಮಾತುಗಳೆಲ್ಲಾ ಮಹಾಭಾರತದ ವಿವಿಧ ಪ್ರಸಂಗಗಳಲ್ಲಿ ಆಗಾಗ ಹಲವು ತರ್ಕ ಜಿಜ್ಞಾಸೆಗಳ ಕುರಿತ ಚರ್ಚೆ ನಡೆಯುತ್ತದಲ್ಲಾ... ಹಾಗೆ ಯಕ್ಷ ಲೋಕದ ವಿಚಾರ ಮಂಡಿಸಿ ಪ್ರತಿಕ್ರಿಯೆಯನ್ನೂ ಪಡೆದರು. ನೂರಾರು ಯಕ್ಷಾಭಿಮಾನಿಗಳು ‘ಕೇಳು’ ಜನಮೇಜಯರೂ ಆದರು.

ಅಂದಹಾಗೆ ಇದೇ ವೇಳೆ ಕರಾವಳಿಯಲ್ಲಿ ಜೋರು ಮಳೆ. ಆ ಮಳೆಯ ಜೊತೆ ಸೋನೆಯೆಂತೆ ಪಟ್ಲ ಸತೀಶ್‌ ಶೆಟ್ಟಿ ಅವರ ರಾಗಧಾರೆಯೂ ಸೇರಿತು. ದಿಗ್ಗಜರ ಮಾತಿಗೆ ತಾವೂ ದನಿಗೂಡಿಸಿದರು.

ಜೋಷಿ ಅವರ ಮಾತು ಮುಂದುವರಿಯಿತು.

‘ಹಾಗೆ ನೋಡಿದರೆ ನಾವೆಲ್ಲರೂ ಆಧುನಿಕರೆ. ನೂರು ವರ್ಷಗಳ ಹಿಂದಿನ ಜನಪದ ಜೀವನವೂ ನಮ್ಮದಲ್ಲ. ಹಾಗಾಗಿ ಅಂದಿನ ಕಲಾವಿದನ ಮಟ್ಟದ ಕಾರ್ಯಕ್ಷಮತೆ ಇಂದು ನಿರೀಕ್ಷಿಸಲೂ ಅಸಾಧ್ಯ. ಯಕ್ಷಗಾನದ ಮೇಲೆ ಬೇರೆ ಮಾಧ್ಯಮಗಳ ಪರಿಣಾಮವೂ ಇದೆ. ನಮ್ಮಲ್ಲಿ ಇನ್ನೂ ಕಲೆಯ ಶಿಸ್ತು ಬಂದಿಲ್ಲ. ರಂಗಸ್ಥಳದಲ್ಲಿ ಮದುವೆ ಮಂಟಪ, ಫ್ಯಾನ್ಸಿ ಅಂಗಡಿ, ಸರ್ಕಸ್‌ ಕಂಪನಿಯ ಸರಕುಗಳನ್ನು ತಂದು ಅಲ್ಲಿಯ ಪರಿಕಲ್ಪನೆಗಳನ್ನು ಅಳವಡಿಸಿಕೊಂಡುಬಿಟ್ಟಿದ್ದೇವೆ....’ ಹೀಗೆ ಮಾತು ಮುಂದುವರಿಯುತ್ತಲೇ ಇತ್ತು.

ವಿಮರ್ಶೆಗಳು ಏಕಮುಖವಾಗಿವೆ. ಎಲ್ಲೋ ಕುಳಿತು ಏನೋ ಬರೆಯುತ್ತಾರೆ ಎಂಬ ಮಾತು ಬಂದಾಗ ಜೋಷಿ ಅವರ ಸಾತ್ವಿಕ ಕೋಪವೂ ಹೊರ ಬಂದಿತು. ‘ಕೃತಿಗಳನ್ನು ಓದದೇ ವಿಮರ್ಶೆ ಏಕಪ್ರಕಾರವಾಗಿದೆ ಎಂದೆಲ್ಲಾ ಜರೆಯುವುದು ಸರಿಯಲ್ಲ’ ಎಂದು ಚುರುಕು ಮುಟ್ಟಿಸಿದರು.

ಮೇಳದ ಯಜಮಾನರಾಗಿ ಮಾತನಾಡಿದ ಕಿಶನ್‌ ಹೆಗ್ಡೆ (ಸಾಲಿಗ್ರಾಮ ಮೇಳ), ‘ಯಾವುದೇ ಪ್ರಸಂಗ ಇರಲಿ. ಯಕ್ಷಮಾತೆಗೆ ಅಪಚಾರ ಆಗದಂತೆ ಗರಿಷ್ಠ ಎಚ್ಚರ ವಹಿಸುತ್ತೇವೆ. ಸದ್ಯ ಕರಾವಳಿಯಲ್ಲಿ ಉಳಿದಿರುವ ಎರಡೇ ಡೇರೆ ಮೇಳಗಳ ಅಸ್ತಿತ್ವ ಉಳಿಸಲು ಏನಾದರೂ ಮಾಡಬೇಕಿದೆ. ಉದಾಹರಣೆಗೆ ಅರ್ಧಚಂದ್ರಾಕೃತಿಯ ರಂಗಸ್ಥಳ ವಿನ್ಯಾಸಗೊಳಿಸಿದೆವು. ಚೌಕಿಯಲ್ಲಿ ಬದಲಾವಣೆ ಮಾಡಿದೆವು. ಆಸನಗಳ ವ್ಯವಸ್ಥೆ ಬದಲಾಯಿಸಿದೆವು. ದೈವಾರಾಧನೆ ಸಂಬಂಧಿಸಿದ ಪಾತ್ರಗಳನ್ನು ಯಥಾವತ್ತಾಗಿ ಅಣಿ ಸಹಿತ) ವೇದಿಕೆಗೆ ತರಲು ನಾವು ಬಿಡುವುದಿಲ್ಲ. ಏಕೆಂದರೆ ದೈವಗಳನ್ನು ಆ ರೀತಿ ಪಾತ್ರಗಳನ್ನಾಗಿ ಬಿಂಬಿಸುವುದಿಲ್ಲ. ಅಂಥ ಪ್ರದರ್ಶನಗಳನ್ನೇ ನಿರಾಕರಿಸಿದ್ದೇವೆ’ ಎಂದರು.

ಚರ್ಚೆಗೆ ನಾಂದಿಹಾಡಿದ ಕಲಾವಿದ, ವಿಮರ್ಶಕ ರಾಘವ ನಂಬಿಯಾರ್‌, ‘ಆಧುನೀಕರಣ ಸುಮಾರು 50 ವರ್ಷಗಳ ಹಿಂದೆಯೇ ಆಗಿದೆ. ಡಾ.ಕೆ.ಶಿವರಾಮ ಕಾರಂತರ ಆದಿಯಾಗಿ ಎಲ್ಲರೂ ಕೂಡಾ ಆಧುನಿಕತೆಗೆ ಒಗ್ಗಿಕೊಂಡವರೇ. ಅದೆಲ್ಲಾ ಸರಿ. ಆದರೆ, ಹೊಸಬರು ಈ ಹಳೆಯ ಪರಂಪರೆಯ, ಬದಲಾವಣೆಯ ಅಧ್ಯಯನ ಮಾಡಬೇಕು. ಅದನ್ನು ಓದುವುದೂ ಇಲ್ಲ. ಹಳಬರ ಮಾತು ಕೇಳುವುದಾಗಲಿ, ಒಪ್ಪಿಕೊಳ್ಳುವುದಾಗಲಿ ಇಲ್ಲ. ಸಂಭಾಷಣೆ ಬಿಡುವುದೋ, ಅಥವಾ ಹಾಡುಗಳನ್ನು ಬಿಡುವುದೋ, ತಮಗೆ ತಿಳಿದ ಸಂಭಾಷಣೆ (ಡೈಲಾಗ್‌) ಹೊಡೆಯುವುದೇ ಆಧುನಿಕತೆ ಅಂದುಕೊಂಡಿದ್ದಾರೆ. ನಮ್ಮ ಅಭಿನಯದ ರೀತಿ ನೀತಿಗಳನ್ನು ನಿನ್ನೆಯ ಪ್ರದರ್ಶನಕ್ಕಿಂತ ಇಂದು ಸುಧಾರಿಸಿಕೊಳ್ಳುವುದು ಸಾಧ್ಯವೇ ಎಂಬ ನಿಟ್ಟಿನಲ್ಲಿ ಪ್ರಯತ್ನಶೀಲರಾಗುವುದೇ ಆಧುನೀಕರಣದ ಮೊದಲ ಹೆಜ್ಜೆ’ ಎಂದು ಅಭಿಪ್ರಾಯಪಟ್ಟರು.

‘ವೇಷಭೂಷಣಗಳ ಭಾರ ಕೂಡಾ ನಮ್ಮ ಭಾವಾಭಿನಯಕ್ಕೆ ಪೂರಕ. ಆದರೆ, ಹೊಸಬರು ಹಗುರ ಎನ್ನುವ ಕಾರಣಕ್ಕೆ ಥರ್ಮಾಕೋಲ್‌ನಿಂದ ತಯಾರಾದ ರೆಡಿಮೇಡ್‌ ವೇಷಭೂಷಣ ಬಳಸುತ್ತಾರೆ. ಪ್ರದರ್ಶನದ ಅವಧಿ ಕಿರಿದಾಗಿಸುವುದು, ಮೇಳದ ಕಲಾವಿದರನ್ನು ಕಡಿಮೆ ಮಾಡುವುದು ಆಧುನೀಕರಣ ಅಲ್ಲವೇ ಅಲ್ಲ. ಅನಗತ್ಯ ಅಂಶಗಳನ್ನು ತೆಗೆದುಹಾಕಿ, ಪ್ರದರ್ಶನದಲ್ಲಿ ನಿಯಂತ್ರಣ ಸಾಧಿಸುವುದೇ ಆಧುನೀಕರಣ’ ಎಂದು ವ್ಯಾಖ್ಯಾನಿಸಿದರು.

ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಪ್ರತಿಕ್ರಿಯಿಸಿ, ‘ಹೊಸ ಕಲಾವಿದರೇನೋ ಓದಿಕೊಂಡಿದ್ದಾರೆ. ಆದರೆ ಆಧುನೀಕರಣಕ್ಕೆ ತೆರೆದುಕೊಳ್ಳುತ್ತಿಲ್ಲ. ವಿಮರ್ಶಕರು ಹಳೆಯದು – ಹೊಸದನ್ನು ಹೋಲಿಸುತ್ತಿದ್ದಾರೆ. ದೇಹದ ಆಕಾರ ಬೆಳವಣಿಗೆಗೆ ತಕ್ಕಂತೆ ಹೇಗೆ ಬಟ್ಟೆಬರೆ ಹಾಕಿಕೊಳ್ಳುತ್ತೇವೋ ಅದೇ ರೀತಿ ಕಾಲಕ್ಕೆ ತಕ್ಕಂತೆ ಕಲಾಕ್ಷೇತ್ರದಲ್ಲೂ ಒಳ್ಳೆಯ ಬೆಳವಣಿಗೆಗಳು ಆಗಬೇಕು’ ಎಂದರು.

ಯಜಮಾನರು– ಕಲಾವಿದರು– ಪ್ರೇಕ್ಷಕರು – ವಿಮರ್ಶಕರು ಮತ್ತು ಮಾಧ್ಯಮಗಳು ಒಟ್ಟಾಗಿ ಕಲೆತು ಕಲಾ ಕ್ಷೇತ್ರದ ಉಳಿವು ಮತ್ತು ಸುಧಾರಣೆಯ ಬಗ್ಗೆ ಸಮಗ್ರವಾಗಿ ಚರ್ಚಿಸಿ ಒಂದಷ್ಟು ಸೂತ್ರಗಳನ್ನು ರೂಪಿಸಿದರೆ ಪರಂಪರೆಯ ಉಳಿವು ಹಾಗೂ ಆಧುನಿಕ ಸ್ಪರ್ಶ ಒಟ್ಟಾಗಿಯೇ ಮಾಡಬಹುದು ಎಂದು ಒಮ್ಮತದ ಅಭಿಪ್ರಾಯದೊಂದಿಗೆ ಚರ್ಚೆಗೆ ತೆರೆ ಬಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT