ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಡುಗಾಯಿ ನಂಬಿಕೆ’ ಉಳಿಸಿ!

Last Updated 29 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಈಗ ನಮ್ಮ ನಿಮ್ಮೆಲ್ಲರ ಮೆಚ್ಚಿನ ಅಭ್ಯರ್ಥಿ ಕೋಡಂಗಿ ರಾಜ ಅವರು ಎರಡು ಮಾತುಗಳನ್ನಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ:

ವೇದಿಕೆ ಮೇಲಿರುವ ಎಲ್ಲಾ ಗಣ್ಯರಿಗೆ, ವೇದಿಕೆಯ ಮೇಲೆ ಇಲ್ಲದ ಪಕ್ಷದ ಅಧ್ಯಕ್ಷರಿಗೆ… ಇನ್ನೇನು ಕೆಲ ಹೊತ್ತಿನಲ್ಲಿ ಈ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ, ಈ ಉರಿ ಬಿಸಿಲಿಗೆ ನಿಮ್ಮ ಕಣ್ಣು ತಂಪು ಮಾಡಲು ಬರಲಿರುವ ಸಖತ್ ಸರಸು ಮತ್ತು ಇಲ್ಲಿ ಬರೀ ನೂರು ರೂಪಾಯಿ ಕೊಟ್ಟರೂ, ನನ್ನ ಮೇಲಿನ ಅಭಿಮಾನದಿಂದ ನೂರಾರು ಸಂಖ್ಯೆಯಲ್ಲಿ ನೆರೆದಿರುವ ಸಭಿಕರಿಗೆ… ನನ್ನ ನಮಸ್ಕಾರಗಳು.

ನಮ್ಮ ಬುದ್ಧಿಗೇಡಿ ಕಾರ್ಯಕರ್ತ ನನ್ನನ್ನು ಬರೀ ಎರಡೇ ಎರಡು ಮಾತುಗಳನ್ನಾಡಲು ಹೇಳಿದ್ದಾನೆ. ಚುನಾವಣಾ ನೀತಿ ಸಂಹಿತೆಯಲ್ಲೇನಾದರೂ ಅಂತಹ ನಿರ್ಬಂಧ ಇದೆಯೇನಪ್ಪಾ?

ನಾನು ಈ ಕ್ಷೇತ್ರದವನಲ್ಲದಿದ್ದರೂ ಪಕ್ಷ ನನಗೆ ಟಿಕೆಟ್ ಕೊಟ್ಟಿರುವುದಕ್ಕೆ ನನ್ನ ಅಸಂಬದ್ಧ ಹೇಳಿಕೆಗಳ ಜನಪ್ರಿಯತೆಯೇ ಕಾರಣ. ನಮ್ಮ ಪಕ್ಷಕ್ಕೆ ಇದು ‘ಸೇಫ್‌ ಸೀಟು’ ಅಲ್ಲದಿದ್ದರೂ ನಾನು ಇಲ್ಲಿ ಚುನಾವಣೆಗೆ ನಿಂತು ಎಪ್ಪತ್ತು ಇಂಚಿನ ಎದೆಗಾರಿಕೆ ತೋರಿಸಿದ್ದೇನೆ. ನಮ್ಮ ಪಕ್ಷದ ಯಾವನೂ ಈ ಕ್ಷೇತ್ರದಲ್ಲಿ ನಿಲ್ಲೋಕೆ ತಯಾರಿರಲಿಲ್ಲ.

ಆದರೆ ನಾನು ನಮ್ಮ ಪಕ್ಷದ ಘನತೆ, ಮರ್ಯಾದೆ ಕಾಪಾಡುವ ಉದ್ದೇಶದಿಂದ ಮತದಾರರ ಮುಂದೆ ಬಂದು ನಿಂತಿದ್ದೇನೆ.
ನಾನು ಪಕ್ಷೇತರರಿಗಿಂತ ಹೆಚ್ಚು ಮತ ಪಡೆದು, ಚುನಾವಣಾ ರೇಸ್‌ನಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಬದಲಾಗಿ ಎರಡನೇ ಸ್ಥಾನದಲ್ಲಿ ಇರುವವರು ಗೆಲ್ಲುವಂತೆ ನೋಡಿಕೊಳ್ಳಬಲ್ಲೆ ಎಂದು ನಮ್ಮ ಪಕ್ಷದ ರಾಜ್ಯ ಅಧ್ಯಕ್ಷರು ಧೈರ್ಯ ತುಂಬಿದ್ದಾರೆ. ಒಂದು ವೇಳೆ ಡಿಪಾಸಿಟ್ ಕಳಕೊಂಡರೆ ಆ ಹಣವನ್ನು ತಾನು ಭರಿಸುತ್ತೇನೆ ಎಂದೂ ಅವರು ವಾಗ್ದಾನ ಮಾಡಿದ್ದಾರೆ.

ಈ ಜಿಲ್ಲೆಯ ಬಗ್ಗೆ ನೆನೆದಾಗಲೆಲ್ಲಾ ಕಣ್ಣೀರುಬರುತ್ತೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳೇ ಆದರೂ ಇಲ್ಲಿ ಒಂದು ಚೂರೂ ಅಭಿವೃದ್ಧಿ ಕೆಲಸ ನಡೆದಿಲ್ಲ. ಪಾಪ, ನೀವೇನೋ ಬಹಳ ವರ್ಷಗಳಿಂದ ನಮ್ಮ ಎದುರಾಳಿ ಪಕ್ಷದ ಅದೇ ಅಭ್ಯರ್ಥಿಯನ್ನೇ ಪಾರ್ಲಿಮೆಂಟಿಗೆ ಕಳಿಸುತ್ತಿದ್ದೀರ. ಪಾಪ! ದಿಲ್ಲಿಗೆ ಕಳಿಸುವುದೆಂದರೆ ಅವರು ಅಲ್ಲೇ ಕಾಲ ಕಳೆಯುವುದಕ್ಕೆ ಎಂದು ನೀವು ತಿಳ್ಕೊಂಡ ಹಾಗಿದೆ.

ಅವರು ಅಭಿವೃದ್ಧಿ ಕೆಲಸ ಮಾಡಿರುತ್ತಿದ್ದರೆ ಚೆನ್ನಾಗಿ ಆಸ್ತಿಪಾಸ್ತಿ ಮಾಡಿಕೊಂಡಿರುತ್ತಿದ್ದರು. ಅದಕ್ಕೇ ಚುನಾವಣೆ ಹೊತ್ತಿಗೆ ಅವರು
ನಿಮಗೆ ಕಳಪೆ ಸೀರೆ ಮಾತ್ರವಲ್ಲ ಯಾವುದೋ ಚೀಪ್ ರಮ್ ಕೊಡಿಸ್ತಾರೆ. ನನ್ನನ್ನೊಮ್ಮೆ ಆಯ್ಕೆ ಮಾಡಿನೋಡಿ. ಈ ಜಿಲ್ಲೆಯನ್ನು ಹೇಗೆ ಬದಲಾಯಿಸುತ್ತೇನೆಅಂದರೆ, ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುವ ಪ್ರವಾ ಸಿಗರೆಲ್ಲಾ ಇಲ್ಲಿ ಬರಬೇಕು! ಮೆಟ್ರೊ, ಡಿಸ್ನಿ
ಲ್ಯಾಂಡ್, ಫ್ಲೈಓವರ್‌ಗಳು ಇಲ್ಲಿ ಬರುವಂತೆ ನೋಡಿಕೊಳ್ಳುತ್ತೇನೆ. ಆಮೇಲೆ ನೋಡಿ, ಮುಂದಿನ ಚುನಾವಣೆಗೆ ಕಾಂಜೀವರಂ ಸೀರೆ, ಸ್ಕಾಚ್, ವಿಸ್ಕಿಗಳನ್ನೇ ಧಾರಾಳವಾಗಿ ವಿತರಿಸಬಹುದು.

ಭ್ರಷ್ಟ ಎದುರಾಳಿ ಪಕ್ಷದವರನ್ನು ಈ ಬಾರಿ ದೂರವಿಡಿ. ಅವರೆಷ್ಟು ನುಂಗುತ್ತಿದ್ದಾರೆ ಎಂಬುದು ಈಗ ತೆರೆದ ಡೈರಿಯಾಗಿಬಿಟ್ಟಿದೆ. ಅಲ್ರೀ ಇವರಿಗೆಲ್ಲಾ ನಾಚಿಕೆ ಎಂಬುದು ಇರುತ್ತಿದ್ದರೆ ನುಂಗಿದ್ದನ್ನು, ಕೊಟ್ಟದ್ದನ್ನು ಡೈರಿಯಲ್ಲಿ ಬರೆದಿಡುತ್ತಿರಲಿಲ್ಲ. ನನ್ ತರ ಸ್ಮಾರ್ಟ್ ಫೋನ್‌ನಲ್ಲಿ ನೀಟಾಗಿ ನೋಟ್ ಮಾಡಿಡಬೇಕಾಗಿತ್ತು! ಎಷ್ಟೆಂದರೂ ಇದು ‘ಡಿಜಿಟಲ್ ಇಂಡಿಯಾ’ ಅಲ್ಲವೇ?

ನಮ್ದು ಬಡವರ ಬಗ್ಗೆ ಕಾಳಜಿ ಇರುವ ಪಕ್ಷ. ನಾವು ಅಧಿಕಾರಕ್ಕೆ ಬಂದರೆ ಬಡವರಿಗೆ 5 ಲಕ್ಷ ರೂಪಾಯಿ ವಾರ್ಷಿಕ ಆದಾಯ ನೀಡಲಿದ್ದೇವೆ! ಆದರೆ ನಾವು ‘ಗರೀಬ್ ಹಠಾವೋ’ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಡ ಕುಟುಂಬಕ್ಕೆ ಕನಿಷ್ಠ ವಾರ್ಷಿಕ ಆದಾಯದ ಭರವಸೆ ನೀಡಲಿದ್ದೇವೆ. ಟಿ.ವಿ., ಕುಕ್ಕರ್‌, ಮಿಕ್ಸಿಯನ್ನೂ ಹಂತ ಹಂತವಾಗಿ ನೀಡಲಿದ್ದೇವೆ. ನಮ್ಮ ದೇಶದಲ್ಲಿ ‘ಶ್ರೀಮಂತ ಬಡವರು’ ಇರಬೇಕೆಂಬುದು ನಮ್ಮ ಪಕ್ಷದ ಕನಸು.

ನನ್ನ ಅಭಿಮಾನಿಗಳೇ, ನಾವು ಅಧಿಕಾರಕ್ಕೆ ಬಂದರೆ ತಿಂಗಳಿಗೊಮ್ಮೆಯಾದರೂ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರತೀ ಬಾರಿಯೂ ಐನೂರು ಐನೂರು ಉಗ್ರರನ್ನು ಸದೆಬಡಿಯಲಿದ್ದೇವೆ! ‘ಉಗ್ರ ಮುಕ್ತ ಪಾಕಿಸ್ತಾನ’ ಮಾಡುವುದೇ ನಮ್ಮ ಗುರಿ.

ಎಷ್ಟೋ ಮಂದಿ ಪ್ರಮಾಣ ಪತ್ರದಲ್ಲಿ ಕೊಟ್ಟಿರುವ ನನ್ನ ಆಸ್ತಿ ವಿವರ ನೋಡಿ ಕುಸಿದು ಬಿದ್ದಿದ್ದಾರೆ ಎಂದು ಕೇಳಿದ್ದೇನೆ. ನಿಜ ಹೇಳಬೇಕೆಂದರೆ, ಸ್ವತಃ ನಾನೇ ಅದನ್ನು ನೋಡಿ ಕುಸಿದು ಬಿದ್ದಿದ್ದೆ! ಯಾಕೆಂದರೆ ನನ್ನ ಆಸ್ತಿಪಾಸ್ತಿ ಎಷ್ಟಿದೆ ಎಂದು ನಾನು ನೋಡದೆ ನಾಲ್ಕೈದು ವರ್ಷಗಳೇ ಆಗಿದ್ದವು!

ನಿಮ್ಮ ಈ ಜಿಲ್ಲೆಯಲ್ಲಿರುವ ಎಲ್ಲಾ ಪ್ರಸಿದ್ಧ ದೇವಾಲಯಗಳಿಗೆ ಹೋಗಿ ನನ್ನ ನಾಮಪತ್ರಕ್ಕೆ ಪೂಜೆ ಮಾಡಿಸಿದ್ದೇನೆ. ಎಲ್ಲಾ ಕಡೆಗಳಲ್ಲೂ ಈಡುಗಾಯಿ ಹೊಡೆದಿವೆ. ಆದ್ದರಿಂದ ನಾನು ಈ ಬಾರಿ ಗೆಲ್ಲೋದು ಖಚಿತ. ದಯವಿಟ್ಟು ನನಗೇ ಮತ ಹಾಕಿ ‘ಈಡುಗಾಯಿ ನಂಬಿಕೆ’ ಸುಳ್ಳಲ್ಲ ಎಂಬುದನ್ನು ತೋರಿಸಿಕೊಡಬೇಕು. ಇಷ್ಟು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಕೇಳಿದ ಮತ್ತು ಕೇಳದ ಎಲ್ಲರಿಗೂ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT