ಸೋಮವಾರ, ಮಾರ್ಚ್ 8, 2021
32 °C

ಸ್ವೀಡನ್‌ನಲ್ಲಿ ಸೋಲಿಗರ ಹೆಜ್ಜೆ

ನಾ. ಮಂಜುನಾಥಸ್ವಾಮಿ ಗೂಳಿಪುರ Updated:

ಅಕ್ಷರ ಗಾತ್ರ : | |

Deccan Herald

ಕಲೆ ಸಾಮಾಜಿಕ ಪ್ರಜ್ಞೆಯಿಂದ ಹರಳುಗಟ್ಟುತ್ತದೆ. ಸಂಗೀತ, ನೃತ್ಯ ಪ್ರಕಾರಗಳು ಜನಸಮುದಾಯದ ನಡುವೆ ಧ್ವನಿ ಎತ್ತರಿಸುವ ಮೂಲಕ ಮನಮುಟ್ಟುತ್ತವೆ. ಆದರೆ, ಕಾನನವೇ ಪರಿಸರವಾಗಿ, ವೃಕ್ಷವೇ ನಾದಲೀಲೆಯಾಗಿ ಮನುಕುಲಕ್ಕೆ ಕಲಿಸಿದ ಮೊದಲ ಕಲೆಯೆಂದರೆ ಅದು ಸೋಲಿಗರ ‘ಗೋರುಕಾನಾ’ ನೃತ್ಯವೇ ಇರಬೇಕು. ಅಷ್ಟರಮಟ್ಟಿಗೆ ಇದು ಜನಪದರ ಗಾಢ ಸಂಬಂಧದ ಕಾವ್ಯವಾಗಿ, ಬುಡಕಟ್ಟು ಜನರ ಬದುಕಿನ ಭಾಗವಾಗಿ ಉಳಿದಿದೆ. ಹತ್ತಾರು ಜನರ ಸಂಘಟಿತ ಸಹವರ್ತನೆಯ ಸಂಕೇತದ ಗುರುತಾಗಿದೆ. ಗೋರುಕಾನಾ ನೃತ್ಯಕ್ಕೆ ವಿದೇಶದಲ್ಲೂ ವೇದಿಕೆ ಸಿಕ್ಕಿದೆ. ಸ್ವೀಡನ್‌ನಲ್ಲೂ ಗಿರಿಜನ ಕಲಾವಿದರು ಹೆಜ್ಜೆಮೂಡಿಸಿ ಬಂದಿದ್ದಾರೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಗಿರಿವಾಸಿಗಳಿಗೆ ಹಬ್ಬಗಳೆಂದರೆ ಬಗೆಬಗೆಯ ಭಕ್ಷ್ಯಗಳನ್ನು ತಿಂದುಂಡು ಮಲಗುವುದಲ್ಲ. ಬದಲಾಗಿ ಅನ್ನ ನೀಡಿದ ಪ್ರಕೃತಿಯನ್ನು ಧ್ಯಾನಿಸುವುದು; ಜಾತ್ರೆಗಳಲ್ಲಿ ರಾಗಿ ರೊಟ್ಟಿ, ಕಾಯಿಪಲ್ಯವನ್ನು ದೈವಕ್ಕೆ ಬಡಿಸುವುದು; ರಾತ್ರಿಪೂರ ಸಂಪಿಗೆ ಬನದಲ್ಲಿ ಕುಳಿತು ಹಾಡುವುದು; ಮನದಣಿಯೇ ಕುಣಿಯುವುದು; ಕರುಳಬಳ್ಳಿಗಳಿಗೆ ಅನೂಚಾನವಾಗಿ ಬಂದ ಪದ, ಕಗ್ಗಗಳನ್ನು ನೆನಪು ಮಾಡುವುದು; ಮಳೆ, ಬೆಳೆ ಸರಿಯಾಗಿ ಸುರಿಸುವಂತೆ ಮನೆದೇವ ರಂಗನಾಥನಿಗೆ ಬೇಡುವುದು; ರಾತ್ರಿಪೂರ ನೃತ್ಯ ಸಂಭ್ರಮದಲ್ಲಿ ಸಂತಸ ಕಾಣುವುದಾಗಿದೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಗೋರುಕಾನಾ ನೃತ್ಯದಲ್ಲಿ ಇಂಪಾಗಿ ಕೇಳಿಬರುವ ಹಿಮ್ಮೇಳದ ಹಾಡಿಗೆ ಸೋಲಿಗ ನುಡಿಯ ಸ್ಪರ್ಶವಿದೆ. ನೃತ್ಯದ ಹುಟ್ಟಿನ ಮೂಲದಲ್ಲಿ ಹತ್ತಾರು ಕಥೆ, ಪುರಾಣಗಳು ನಾಟ್ಯದೊಂದಿಗೆ ಹೆಜ್ಜೆ ಹಾಕುತ್ತವೆ.

‘ಬೇಡಗುಳಿ ಬಳಿ ಶ್ರವಣ ರಾಕ್ಷಸನ ಹಾವಳಿಯಿಂದ ದೇವಮಾನವರು ತತ್ತರಿಸಿದ್ದರು. ಶ್ರವಣ ಸುತ್ತಲ ಜನರನ್ನು ಪೀಡಿಸಲು ಮುಂದಾದ. ಈತನ ಸಂಹಾರಕ್ಕೆ ಮಹದೇಶ್ವರನ ಅಣತಿಯಂತೆ ರಂಗಸ್ವಾಮಿ ಸ್ತ್ರೀರೂಪ ತೊಟ್ಟು ನಡೆದ. ಶನಿವಾರದಂದು ಶ್ರವಣಿಬೋಳಿ ಬೆಟ್ಟದ ಬಳಿ ನಡೆದ ಕಾಳಗದಲ್ಲಿ ಮಹದೇಶ್ವರರು ಶ್ರವಣನನ್ನು ಸಂಹರಿಸಿದ ಪ್ರತೀತಿ ಇದೆ’ ಎನ್ನುತ್ತಾರೆ ಗೋರುಕಾನಾ ನೃತ್ಯ ಕಲಿಸುವ ಯರಕನಗದ್ದೆಯ ಬಸವರಾಜು.

ಹಾಗಾಗಿ, ಶ್ರಾವಣ ಶನಿವಾರ ಸೋಲಿಗರಿಗೆ ಪವಿತ್ರ ದಿನವಾಯಿತು. ಕಂಟಕ ನಿವಾರಿಸಿದ ದೇವರಿಗೆ ಪೋಡಿನ (ಸೋಲಿಗರು ವಾಸಿಸುವ ಪ್ರದೇಶ) ಜನರು ರಾಗಿ, ಅವರೆ ಬೇಯಿಸಿ ಜಾತ್ರೆ ಆರಂಭಿಸಿದರು. ಸೋಲಿಗರ ಸಂತೋಷದ ದನಿಯಾಗಿ ಗೋರುಕಾನಾ ಹಾಡು ಮೈದಾಳಿತು. ಪ್ರಾಣಿ, ಪಕ್ಷಿ, ಗುಡ್ಡ, ಕಣಿವೆ, ಹಳ್ಳ, ಕಾಡುಜೀವಿಗಳೊಂದಿಗಿನ ಬಾಂಧವ್ಯದ ಬೆಸುಗೆಯಾಗಿ, ವನಸುಮಗಳನ್ನು ಹಾಡಿನಲ್ಲಿ ಸ್ತುತಿಸುತ್ತಾರೆ ಬುಡಕಟ್ಟು ಜನರು.

ಕೂಸು, ಕುನ್ನಿ ಎಲ್ಲಾ ನಿನ್ನದಯ್ಯೋ

ಮೊಗ್ಗು, ಮೊಗರು ನಿನ್ನದಯ್ಯೋ

ಕಾಸಿಟ್ಟು ಮಡಿಗೇನು ದೇವರಯ್ಯೋ...

ಎಂದು ಮುಂಜಾನೆವರೆಗೆ ಹಾಡುತ್ತಲೇ ಇರುಳು ಕಳೆಯುತ್ತಾರೆ. ಹಾಡಿನಲ್ಲಿ ಲತೆಗಳ ವರ್ಣನೆ, ಎಲೆಗಳ ಬಳಕೆ, ವೃಕ್ಷಲೋಕದ ಪರಿಚಯ, ನಿಸರ್ಗದ ನಡುವಿನ ಒಡನಾಟ, ವನ್ಯಜೀವಗಳೊಂದಿಗಿನ ಸಾಂಗತ್ಯ, ನದಿ, ನೀರು, ಬನದ ದೇವರು, ಹೆಣ್ಣು– ಗಂಡಿನೊಲವು ರಾಗವಾಗುತ್ತಲೇ ಜೀವಂತಿಕೆಯ ಬುತ್ತಿ ಬಿಚ್ಚಿಕೊಳ್ಳುತ್ತವೆ. 

ಗೋರುಕಾನಾ ನೃತ್ಯವು ಹದಿನೈದು ಮಹಿಳೆಯರು ಮತ್ತು ಪುರುಷರ ಸಾಂಗತ್ಯದಲ್ಲಿ ನಡೆಯುತ್ತದೆ. ಹಿಮ್ಮೇಳದಲ್ಲಿ ಐವರು ರಾಗಬದ್ಧವಾಗಿ ಹಾಡುತ್ತಾರೆ. ಇದಕ್ಕೆ ಸಿದ್ಧ ಸಾಹಿತ್ಯದ ಪಠ್ಯವಿಲ್ಲ. ಎಲ್ಲಾ ಕಲಾವಿದರು ಜನಪದ ಸಾಹಿತ್ಯದ ಓಘದಲ್ಲಿ ಪಳಗಿದವರಾಗಿರಬೇಕು. ಬಹುತೇಕ ನಾಡಿನ ಮಂದಿಗೆ ಅಪರಿಚಿತವಾಗಿದ್ದರೂ, ಈಗೀಗ ಜನಮನ್ನಣೆ ಗಳಿಸುತ್ತಿದೆ. ಇಲ್ಲಿ ವಿಡಂಬನೆ ಮತ್ತು ವ್ಯಂಗ್ಯಕ್ಕೆ ಅವಕಾಶವಿಲ್ಲ. ಸರಳ ಮತ್ತು ಸುಂದರ ನಿರೂಪಣೆಗೆ ಹೆಚ್ಚು ಒತ್ತು ಕಲ್ಪಿಸಲಾಗಿದೆ. ಪ್ರತಿ ಸಾಲಿನಲ್ಲೂ ಕಾಡುಜನರ ಮುಗ್ಧತೆ ಇಣುಕುತ್ತದೆ. 

ಜನಪದೀಯ ತಾಳ, ಮೇಳಗಳಿಗೆ ಒತ್ತು ನೀಡಲಾಗಿದೆ. ಹಾಡುಗಾರರೇ ಕಂಸಾಳೆ, ತಮಟೆ ಮತ್ತು ಮದ್ದಳೆ ನುಡಿಸುತ್ತಾರೆ. ಗಂಡಸರು ಕಚ್ಚೆ ಮತ್ತು ಧೋತಿ ತೊಟ್ಟು, ದೇಹದ ತುಂಬಾ ನೇರಳೆ ಮತ್ತು ಮಾವಿನ ಎಲೆಯಿಂದ ಅಲಂಕರಿಸುತ್ತಾರೆ. ಹೆಂಗಳೆಯರು ಸೀರೆ ಧರಿಸುತ್ತಾರೆ. ಕಾಲಿಗೆ ಮರದ ಕಡಗ, ಓಲೆ ಮತ್ತು ಕುತ್ತಿಗೆಗೆ ಸರದ ಅಲಂಕಾರ. ಕಣ್ಣು, ಹುಬ್ಬು, ಹಣೆ ಮತ್ತು ಮೈಗೆ ವಿಭೂತಿಯ ಬೊಟ್ಟು ಮತ್ತು ನಾಮ ಬಳಿದುಕೊಂಡು ನೃತ್ಯಕ್ಕೆ ಸಜ್ಜಾಗುತ್ತಾರೆ. ಹೀಗೆ ರಾತ್ರಿಪೂರ ಮನರಂಜನೆಯ ನೆಪದಲ್ಲಿ ಸಾಹಿತ್ಯವನ್ನು ಸೃಷ್ಟಿಸುವುದು ಇದರ ವಿಶೇಷ. ಪಂಡಿತರು ಮತ್ತು ಸಾಮಾನ್ಯರು ಸುಲಭವಾಗಿ ಗ್ರಹಿಸಬಹುದಾದ ಭಾಷೆ, ಕುಣಿತದ ಲಯ ವೀಕ್ಷಕರನ್ನು ಕುಳಿತಲ್ಲೇ ತಲೆದೂಗುವಂತೆ ಮಾಡುತ್ತದೆ.

‘ಗೋರು ಗೋರುಕೊ ಗೋರುಕಾನಾ...’ ಹಾಡಿನ ಸಾಲಿನಲ್ಲಿ ಬರುವ ಗೋರು ಎಂದರೆ ಮರಗಳು ಸ್ಪರ್ಶಿಸುವಾಗ ಕೇಳಿ ಬರುವ ಗೊರಗೊರ ಶಬ್ದ. ಕಾನಾ ಎಂದರೆ ಕಾಡು ಎಂಬ ಅರ್ಥವಿದೆ. ನಿಸರ್ಗದಲ್ಲಿ ಮೊದಲು ಮೂಡಿ ಬಂದ ಶಬ್ದವೇ ‘ಗೋರುಕಾನಾ’ ಹಾಡಾಯಿತು.

‘ಅರಣ್ಯದ ಶಬ್ದ, ಪಕ್ಷಿಯ ಉಲಿತ, ಪ್ರಾಣಿಯ ಮೊರೆತವನ್ನೇ ಆದಿಮಾನವ ಮನದಲ್ಲಿ ದಾಖಲಿಸಿಕೊಂಡು ಈ ಮೂಲಕ ನಾಡಿಗೆ ಪರಿಚಯಿಸಿದ. ನೃತ್ಯದ ನಡುವೆ ಇಡೀ ರಾತ್ರಿ ಬುಡಕಟ್ಟು ಸ್ತ್ರೀಯರು ಹಾಡುವುದೇ ‘ಹಾಡುಕೇ’, ಪ್ರಾರ್ಥನೆ ಗೀತೆ ಮತ್ತು ಕಗ್ಗಗಳಾಗಿ ‘ಓಲಗ’ ಗಮನ ಸೆಳೆಯುತ್ತದೆ’ ಎಂದು ವಿವರಿಸುತ್ತಾರೆ ಚಾಮರಾಜನಗರ ಜಿಲ್ಲಾ ಬುಡಕಟ್ಟು ಗಿರಿಜನರ ಸಂಘದ ಕಾರ್ಯದರ್ಶಿ ಸಿ. ಮಾದೇಗೌಡ. 

‘ಸ್ವೀಡನ್‌ನಲ್ಲಿ ಸೋಲಿಗರ ನೃತ್ಯ ಅನುರಣಿಸಲು ಸಮಾಜ ಕಲ್ಯಾಣ ಇಲಾಖೆ ಮತ್ತು ಬೆಂಗಳೂರಿನ ಸ್ತ್ರೀಸ್ವರ ಸಂಸ್ಥೆಯ ಪರಿಶ್ರಮ ಹೆಚ್ಚಿದೆ’ ಎನ್ನುತ್ತಾರೆ ಬಿಳಿಗಿರಿರಂಗನಬೆಟ್ಟದ ಪದ್ಮಾ ಮತ್ತು ಲಕ್ಷ್ಮಿ. 

ನೃತ್ಯಕ್ಕೆ ಜೇಡ ಪ್ರೇರಣೆ

ಸೋಲಿಗರ ಭಾಷೆಯಲ್ಲಿ ಜೇಡಕ್ಕೆ ‘ಗೋರಕ’ ಎಂದು ಕರೆಯಲಾಗುತ್ತದೆ. ಜೇಡದ ನೇಯ್ಗೆ ಅದ್ಭುತ. ಬಲೆ ನೇಯುವಾಗ ಅದು ಹಿಂದಕ್ಕೆ ಮುಂದಕ್ಕೆ ಚಲಿಸುತ್ತದೆ. ಆಗ ವಿಚಿತ್ರ ಶಬ್ದವನ್ನು ಹೊರಡಿಸುತ್ತದೆ. ಅದು ಓಡಾಡುವ ಶೈಲಿಯೂ ಭಿನ್ನ. ಜೇಡದ ನೇಯ್ಗೆ ಪ್ರಕ್ರಿಯೆ, ಶಬ್ದಕ್ಕೆ ತಕ್ಕಂತೆಯೇ ಲಯಬದ್ಧವಾಗಿ ಸೋಲಿಗರು ಗೋರುಕಾನಾ ನೃತ್ಯ ಕಲಿತಿದ್ದಾರೆ ಎಂದು ಹಿರಿಯರು ನೆನಪಿಕೊಳ್ಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು