ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ, ಬದುಕು ಇತ್ಯಾದಿ...

Last Updated 5 ಜನವರಿ 2019, 19:30 IST
ಅಕ್ಷರ ಗಾತ್ರ

ಮೊದಲ ಮಾತು...

2, ಫೆಬ್ರುವರಿ, 1835ರಲ್ಲಿ ಮೆಕಾಲೆಯು ಭಾರತದ ಸಂಸ್ಕೃತಿ, ಭಾಷೆಯ ಕುರಿತು ಆಡಿದ ಮಾತುಗಳು 20ನೆಯ ಶತಮಾನದ ಉದ್ದಕ್ಕೂ ಸಾಕಷ್ಟು ವಿವಾದ, ಚರ್ಚೆಗೆ ಕಾರಣವಾದವು. ಆತ, ‘ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ ಇಲ್ಲಿನ ಜನರನ್ನು ಮತ್ತಷ್ಟು ಕಗ್ಗತ್ತಲಿಗೆ ದೂಡುತ್ತವೆ. ಮೂಢನಂಬಿಕೆ, ಬಡತನದಲ್ಲಿ ಬದುಕುತ್ತಿರುವ ಭಾರತೀಯರಿಗೆ ಇಂಗ್ಲಿಷ್ ಭಾಷೆಯ ಮೂಲಕ ಶಿಕ್ಷಣ ಕೊಡಲೇಬೇಕಾಗುತ್ತದೆ’ ಎಂದೆಲ್ಲಾ ವಿವರಿಸುತ್ತಾನೆ.

ಈಗ ಇದು ಚರ್ಚೆಯ ವಿಷಯವಲ್ಲ. ಪ್ರಶ್ನೆ ಇರುವುದು ಸಾಮಾಜಿಕ-ಆರ್ಥಿಕ ಸುಸ್ಥಿರತೆಗೆ ಮೆಕಾಲೆಯು ಭಾಷೆಯೊಂದನ್ನು ಪ್ರಮುಖ ಕಾರಣವನ್ನಾಗಿ ತನ್ನ ವಾದ ಮಂಡಿಸುತ್ತಾನೆ ಎನ್ನುವುದರ ಕುರಿತು. ಭಾಷೆ ಮತ್ತು ಸಮಾಜೋ-ಸಾಂಸ್ಕೃತಿಕ ವಿಷಯಗಳು ಪರಸ್ಪರ ಹೆಣೆದುಕೊಂಡಿರುತ್ತವೆ ಎನ್ನುವುದನ್ನು ಮರೆತು ನಾವು ವಿಸ್ಮೃತಿಗೆ ಜಾರಿದ್ದು ದುರಂತ. ಈಗಲಾದರೂ ನೆಲಮೂಲ ಸಂಸ್ಕೃತಿ, ಬಹುತ್ವ ಮತ್ತು ಭಾಷೆಯ ನಡುವಿನ ಪರಸ್ಪರ ಹೆಣಿಗೆ ನಮ್ಮ ಚಿಂತನೆ, ಸಂವಾದದ ಕೇಂದ್ರವಾಗಬೇಕಿದೆ.

ಕರ್ನಾಟಕದಲ್ಲಿ ಸಾಮಾಜಿಕ ಚಳವಳಿ ಮತ್ತು ಭಾಷಾ ಚಳವಳಿ ಪರಸ್ಪರ ಬೆರೆತು ಹೋರಾಟ ರೂಪಿಸಲಿಲ್ಲ. ಬಹುಪಾಲು ಸಾಮಾಜಿಕ ಚಳವಳಿಗಳಿಗೆ ತಮ್ಮ ಸಂಘಟನೆಗಳಲ್ಲಿ ಭಾಷಾ ಚಳವಳಿಗೆ ಆದ್ಯತೆ ಕೊಡಲು ಸಾಧ್ಯವಾಗಲಿಲ್ಲ. ಭಾಷಾ ಚಳವಳಿಯ ಮುಂಚೂಣಿಯಲ್ಲಿರುವವರಿಗೆ ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪಲ್ಲಟಗಳು ಮತ್ತು ಭಾಷೆ ಪರಸ್ಪರ ಬೆಸೆದುಕೊಂಡಿರುತ್ತವೆ ಎಂಬುದು ಗ್ರಹಿಕೆಗೆ ಬರಲಿಲ್ಲ. ಇಲ್ಲಿನ ಭಾಷಾ ಚಳವಳಿ ಭಾವುಕತೆಯ ಮೇಲೆ ರೂಪುಗೊಂಡಿದೆ. ಈ ಮಾತು ಮಾತೃಭಾಷಾ ಮಾಧ್ಯಮದ ವಿಚಾರಕ್ಕೂ ಅನ್ವಯಿಸುತ್ತದೆ.

ಸಮಾಜೋ-ಸಾಂಸ್ಕೃತಿಕ-ಶೈಕ್ಷಣಿಕ ಆಯಾಮಗಳು ಮಾತೃಭಾಷೆಯನ್ನು ಕಟ್ಟುತ್ತವೆ ಮತ್ತು ಬದುಕಿಸುತ್ತವೆ ಎನ್ನುವ ನಿಜ ಚಿಂತನೆಗಳು ಇಲ್ಲಿನ ಬಹುತೇಕ ಕನ್ನಡಪರ ಸಂಘಟನೆಗಳಿಗೆ ಅರಿವಾದಂತಿಲ್ಲ. ಇಂದು ಇಂಗ್ಲಿಷ್ ಮಾಧ್ಯಮ ಬೇಡ, ಬದಲಾಗಿ ನಮಗೆ ಕನ್ನಡ ಮಾಧ್ಯಮ ಮಾತ್ರ ಬೇಕು ಎನ್ನುವ ಒಂದಂಶದ ವಾದದ ಮೂಲಕ ಇಡೀ ಚರ್ಚೆಯನ್ನು ಕನ್ನಡ-ಇಂಗ್ಲಿಷ್ ಭಾಷಾ ಜಗಳದ ಸ್ತರಕ್ಕೆ ಸೀಮಿತಗೊಳಿಸಿದ್ದಾರೆ. ಅದರಾಚೆ ಕನ್ನಡ-ಇಂಗ್ಲಿಷ್ ಮಾಧ್ಯಮ ಎನ್ನುವ ಆಯ್ಕೆಯು ವರ್ಗ ಸಂಘರ್ಷ, ಜಾತಿ ಸಂಘರ್ಷ, ಲಿಂಗ ತಾರತಮ್ಯ, ಜನಾಂಗೀಯ ಘರ್ಷಣೆಗಳಂತಹ ಸಮಾಜಶಾಸ್ತ್ರೀಯ ವಾಸ್ತವ ಬದುಕಿನ ಆಯ್ಕೆಯೂ ಆಗಿರುತ್ತದೆ ಎನ್ನುವುದು ನಮ್ಮ ಭಾಷಾ ಹೋರಾಟಗಾರರಿಗೆ ಮನವರಿಕೆ ಆಗಲಿಲ್ಲ. ಹೀಗಾಗಿಯೇ ಕನ್ನಡದ ಭಾಷಾ ಚಳವಳಿ ಒಂದು ಭಾವಾವೇಶದ ಹೋರಾಟವಾಗಿ ಉಳಿದುಕೊಂಡಿದೆ.

ಇಂದು ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬೋಧಿಸುತ್ತಿದ್ದರೆ ಬಹುತೇಕ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುತ್ತಿವೆ. ಶಿಕ್ಷಣವು ಒಂದು ಉದ್ಯಮವಾಗಿ ಆ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಪಾರಿ ಹಿತಾಸಕ್ತಿಗಳಿಗೆ ಅನುಗುಣವಾಗಿ ಇಂಗ್ಲಿಷ್ ಭಾಷೆ ಕಲಿಕಾ ಮಾಧ್ಯಮವಾಗಿ ಜಾರಿಗೊಂಡಿದೆ. ಸರ್ಕಾರದ ಬಳಿ ಸ್ಪಷ್ಟ ಶಿಕ್ಷಣ ನೀತಿ ಇಲ್ಲದಿರುವ ಕಾರಣ.

ಮಾಧ್ಯಮದ ವಿಷಯದಲ್ಲಿ ಇಬ್ಬಗೆಯ, ಮರೆಮೋಸದ ನೀತಿಗಳು ಜಾರಿಯಲ್ಲಿವೆ. ಇದರ ಫಲವಾಗಿ ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಶಾಲೆಗಳೆಂದರೆ ಕನ್ನಡ ಮಾಧ್ಯಮದ ಶಾಲೆಗಳು, ಖಾಸಗಿ ಶಾಲೆಗಳೆಂದರೆ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಎಂಬ ಅಧಿಕೃತ ವಿಭಜನೆ ಆಗಿದೆ.

ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರು ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಗುಣಮಟ್ಟದ ಬೋಧನಾ ಕ್ರಮ ರೂಪಿಸುವುದನ್ನು ಮೊದಲ ಆದ್ಯತೆಯನ್ನಾಗಿ ಪರಿಗಣಿಸಲಿ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲಿ. ನಂತರ ಮಾಧ್ಯಮದ ಕುರಿತು ಮಾತನಾಡಲಿ. ಒಂದನೇ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಅತ್ಯುತ್ತಮವಾಗಿ ಕಲಿಸಲು ಮೊದಲು ಏರ್ಪಾಟು ಮಾಡಲಿ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಎಂಬ ಹಲಗೆ ನೇತುಹಾಕಿದ ತಕ್ಷಣ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸುವುದಿಲ್ಲ. ಇಂದು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ,ಗುಣಮಟ್ಟದ ಬೋಧನೆಯ ಕೊರತೆ, ಶಿಕ್ಷಕರಲ್ಲಿ ಬದ್ಧತೆಯ ಕೊರತೆ ಕಾರಣದಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ವಿಶ್ವಾಸಾರ್ಹತೆ ಕಳೆದುಕೊಂಡಿದೆ.

‘ಭಾರತೀಯರು ತಮ್ಮ ಅಭಿರುಚಿಯಲ್ಲಿ, ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗಿರಬೇಕು, ಪಾಶ್ಚಾತ್ಯ ದೇಶಗಳಿಂದ ವಿಜ್ಞಾನದ ಪಾರಿಭಾಷಿಕ ಪದಗಳನ್ನು ಎರವಲು ಪಡೆಯಬೇಕು’ ಎಂದು ಮೆಕಾಲೆ ಬೋಧಿಸಿದ್ದನ್ನು ಇಂದು ಮೇಲ್ಜಾತಿ ಮತ್ತು ಮಧ್ಯಮ ವರ್ಗಗಳ ಜನ ಅಕ್ಷರಶಃ ಪಾಲಿಸುತ್ತಿದ್ದಾರೆ. ಆರ್ಥಿಕ ಸುಭದ್ರತೆ ಸಾಧಿಸಲು ಇಂಗ್ಲಿಷನ್ನು ಚಿಮ್ಮು ಹಲಗೆಯನ್ನಾಗಿ ಮಾಡಿಕೊಂಡಿದ್ದಾರೆ. ಆಧುನಿಕತೆ ಎಂದರೆ ಇಂಗ್ಲಿಷ್, ಕೊಳ್ಳುಬಾಕತನ, ಸ್ವಾರ್ಥ ವ್ಯಕ್ತಿತ್ವ ಎನ್ನುವ ಸಮೀಕರಣ ಬಿತ್ತುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂದು ಶಿಕ್ಷಣದ ಮೂಲಭೂತ ಹಕ್ಕುದಾರರಾಗಿರುವ ಪೋಷಕರು ಮತ್ತು ಶೋಷಿತ ಸಮುದಾಯಗಳು ಪ್ರಜಾತಾಂತ್ರಿಕ ಆಶಯಗಳನ್ನುಳ್ಳ, ಸಮಾನ ಶಿಕ್ಷಣದ ಪರವಾಗಿರುವ ಸರ್ಕಾರಿ ಶಾಲೆಗಳ ಪರ ಒಲವು ಹೊಂದಿಲ್ಲ. ಅಂಚಿನಲ್ಲಿರುವ ಶೋಷಿತ ಸಮುದಾಯಗಳು, ಮುಸ್ಲಿಮರು ಚಾಲ್ತಿಯಲ್ಲಿರುವ ಗತಿ, ಪ್ರವೃತ್ತಿ, ಧೋರಣೆಯನ್ನು ಅನಿವಾರ್ಯವಾಗಿ ಅನುಸರಿಸುತ್ತಾರೆ. ಸಾಮಾಜಿಕ-ಆರ್ಥಿಕ ಭದ್ರತೆಗೆ ಇಂಗ್ಲಿಷ್‌ ಮಾತ್ರ ಮಾರ್ಗ ಎಂದು ನಂಬಿದ್ದಾರೆ. ಈ ಎಲ್ಲ ಗೊಂದಲ, ಅಪನಂಬಿಕೆಗಳಿಗೆ ಸರ್ಕಾರವೇ ನೇರ ಹೊಣೆ.

ಭಾಷೆ, ಶಿಕ್ಷಣ ಮತ್ತು ಬಹುತ್ವ

ಮನುಷ್ಯನ ವ್ಯಕ್ತಿತ್ವ, ಭಾವಕೋಶ ರೂಪಿಸುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆ ನಶಿಸಿದರೆ ಅದನ್ನು ಮಾತನಾಡುವ ಸಮುದಾಯಗಳೂ ನಾಶ ಹೊಂದುತ್ತವೆ. ಭಾಷಾತಜ್ಞ ಗಣೇಶ್ ದೇವಿ ಅವರು, ‘ಭಾಷಾ ವೈವಿಧ್ಯ ಉಳಿಸಿಕೊಳ್ಳುವುದೆಂದರೆ ನಮ್ಮ ನಾಗರಿಕತೆಯನ್ನು ಉಳಿಸಿಕೊಳ್ಳುವುದು’ ಎಂದು ಹೇಳುತ್ತಾರೆ. ತಾಯ್ನುಡಿಯ ಮೂಲಕ ಶಿಕ್ಷಣದ ಭಾಷೆಯನ್ನು ನಿರ್ವಸಾಹತೀಕರಣಗೊಳಿಸಬೇಕು, ನಮ್ಮ ಮನಸ್ಸನ್ನು, ಚಿಂತನೆಗಳನ್ನು ಜೀತಮುಕ್ತಗೊಳಿಸಬೇಕು ಎಂದ ಕೀನ್ಯಾದ ಲೇಖಕ ಥಿಯಾಂಗೋ ಗೂಗಿ ಬಾಷೆಯನ್ನು ಆಲಂಕಾರಿಕವಾಗಿ, ಸೌಂದರ್ಯಪ್ರಜ್ಞೆಯ ಪ್ರತೀಕವಾಗಿ, ಭಾವುಕವಾಗಿ ನೋಡುವುದನ್ನು ತಿರಸ್ಕರಿಸುತ್ತಾನೆ. ಆ ರೀತಿಯ ದೃಷ್ಟಿಕೋನವು ಭಾಷೆ, ಸಾಹಿತ್ಯವು ಸಾಮಾಜಿಕವಾಗಿ ಕಾರ್ಯ ನಿರ್ವಹಿಸುವುದರ ಮೇಲಿನ ದಾಳಿ ಎಂದು ವಿಶ್ಲೀಷಿಸುತ್ತಾನೆ.

ಪ್ರಕೃತಿ ಮತ್ತು ಸಾಮಾಜಿಕ ವಾತಾವರಣದೊಂದಿಗಿನ ಮನುಷ್ಯರ ಸಂಬಂಧ ನಿರ್ಧರಿಸಲು, ವಿಶ್ವಾತ್ಮಕ ಪ್ರಜ್ಞೆ ರೂಪಿಸಲು ಭಾಷೆಯ ಆಯ್ಕೆ ಮತ್ತು ಅದರ ಬಳಕೆ ತುಂಬಾ ಮುಖ್ಯ ಎಂದು ಹೇಳಿದ ಗೂಗಿ, ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ, ಅದು ಸಂಸ್ಕೃತಿ, ವರ್ತನೆ, ಬದುಕು, ನುಡಿಕಟ್ಟು, ವ್ಯಕ್ತಿತ್ವ ಎಲ್ಲವನ್ನೂ ಒಳಗೊಂಡಿರುತ್ತದೆ ಮತ್ತು ಅವೆಲ್ಲದರ ವಾಹಕವೂ ಆಗಿರುತ್ತದೆ ಎಂದು ಪ್ರತಿಪಾದಿಸುತ್ತಾನೆ.

ಸಂವಹನವಾಗಿ ಭಾಷೆಯನ್ನು ಮೂರು ನೋಟಗಳಲ್ಲಿ ವಿಶ್ಲೇಷಿಸುತ್ತಾನೆ. 1. ವಾಸ್ತವ ಬದುಕಿನ ಭಾಷೆ 2. ಮಾತು; ಇದು ವಾಸ್ತವ ಬದುಕಿನ ಭಾಷೆಯನ್ನು ಅನುಕರಣ ಮಾಡುತ್ತದೆ. 3. ಬರವಣಿಗೆ; ಇದು ನುಡಿಯನ್ನು ಅನುಕರಣ ಮಾಡುತ್ತದೆ. ದೃಶ್ಯ ಸಂಕೇತಗಳೊಂದಿನ ಶಬ್ದವನ್ನು ಪ್ರತಿನಿಧಿಸುತ್ತದೆ.

ಭಾಷೆ ಒಂದು ತಳಹದಿ ಮತ್ತು ಸಂಸ್ಕೃತಿಯ ವಿಕಸನ ಎಂದು ಹೇಳುವ ಗೂಗಿ, ಭಾಷೆ ಒಂದು ಸಂಸ್ಕೃತಿಯಾಗಿ ನಾನು ಮತ್ತು ನನ್ನೊಳಗೆ ಅನುಸಂಧಾನ ನಡೆಸುತ್ತದೆ ಮತ್ತು ನನ್ನೊಳಗೆ ಹಾಗೂ ಇತರರೊಳಗೆ, ನನ್ನೊಳಗೆ ಹಾಗೂ ಪ್ರಕೃತಿಯೊಂದಿಗೆ ಅನುಸಂಧಾನ ಮಾಡುತ್ತಿರುತ್ತದೆ ಎಂದು ವಿವರಿಸುತ್ತಾನೆ.

ನಮ್ಮ ಶಿಕ್ಷಣ ಪದ್ಧತಿಯಲ್ಲಿನ ಬಲುದೊಡ್ಡ ದೋಷವೆಂದರೆ ಪಠ್ಯಪುಸ್ತಕಗಳಲ್ಲಿ ಶಿಷ್ಟ ಕನ್ನಡದ ಬಳಕೆ. ಇದು ಮಕ್ಕಳನ್ನು ಪಠ್ಯದಿಂದ ದೂರ ಮಾಡುತ್ತದೆ. ಇದು ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಒಂದು ತೊಡರುಗಾಲು. ಈ ಕಾರಣಕ್ಕಾಗಿಯೂ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ.

ಭಾಷೆಯನ್ನು ಮೌಖಿಕ ಮತ್ತು ಬರಹ ಎನ್ನುವ ರೂಪಗಳಲ್ಲಿ ಕಲಿಸಬಹುದು. ಇಂಡಿಯಾದಲ್ಲಿ ಶತಮಾನಗಳ ಕಾಲ ಸಾಹಿತ್ಯ, ಜ್ಞಾನ, ನೆನಪುಗಳನ್ನು ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ತಲೆಮಾರಿಗೆ ದಾಟಿಸುತ್ತ ಬರಲಾಗಿದೆ. ಅನೇಕ ಸಂದರ್ಭಗಳಲ್ಲಿ ಹಸ್ತಪ್ರತಿಗಳಲ್ಲಿ ಬರೆದಿಟ್ಟರೂ ಅದು ಮೌಖಿಕದ ಮುಂದುವರಿದ ಭಾಗವೆಂದೇ ಹೇಳಬೇಕಾಗುತ್ತದೆ. ಅದನ್ನು ಬರವಣಿಗೆ ರೂಪ ಎಂದು ಕರೆಯಲು ಸಾದ್ಯವಿಲ್ಲ. ಗಣೇಶ್ ದೇವಿಯವರು ‘ಕಲೋನಿಯಲ್ ಪೂರ್ವ ಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮುಂದೆ ಒಂದು ಶಬ್ದ, ವಾಕ್ಯವನ್ನು ಹೇಳುತ್ತಿದ್ದರು. ಅದರ ಉಳಿದ ಭಾಗವನ್ನು ವಿದ್ಯಾರ್ಥಿಗಳು ವಿವರಿಸುತ್ತಿದ್ದರು. 13ನೆ ಶತಮಾನದ ನಂತರ ಕಾಗದದ ಬಳಕೆ ಶುರುವಾಗಿ ಬರವಣಿಗೆ ಆರಂಭವಾಯಿತು. ಆದರೂ ಮಾತು ಮತ್ತು ಬರವಣಿಗೆ ಸ್ವತಂತ್ರ ರೂಪದಲ್ಲಿ ಉಳಿದವು. ತುಕಾರಾಮ, ಕಬೀರ, ಮೀರಾ ಮುಂತಾದ ಮಧ್ಯಯುಗೀನ ಭಾರತದ ಭಕ್ತಿಪಂಥದ ಸಂತರು ಮೌಖಿಕ ಪರಂಪರೆಯನ್ನು ಬೆಳೆಸಿದರು ಮತ್ತು ಬರಹಕ್ಕೂ ಇಳಿಸಿದರು.

ಹೀಗಾಗಿ ಭಾರತದಲ್ಲಿ ಹಸ್ತಪ್ರತಿ ಎಂದರೆ ಅದು ಮೌಖಿಕವೂ ಹೌದು ಬರಹವೂ ಹೌದು. ಸಹಜ ಭಾಷೆ ಅಥವಾ ಪರಿಸರದ ಭಾಷೆ ಎನ್ನುವುದು ಪ್ರಚಲಿತವಿರುವ ನುಡಿಕಟ್ಟಾದರೂ ಕೃತಕ ಭಾಷೆ ಅಥವಾ ಯಂತ್ರ ನಿರ್ಮಿತ ಭಾಷೆ ಎನ್ನುವುದು ಇಂದಿನ ತಂತ್ರಜ್ಞಾನ ಯುಗದಲ್ಲಿ ಬಳಕೆಯಾಗುತ್ತಿದೆ. ಈ ತಂತ್ರಜ್ಞಾನ, ಅಂತರ್ಜಾಲದ ಕಾಲದಲ್ಲಿ ಸಹಜ ಭಾಷೆ ಸಾಯುತ್ತಿದೆ ಎನ್ನುವ ಆತಂಕ ಎಲ್ಲೆಡೆ ಕೇಳಿಬರುತ್ತಿದೆ. ಕೆಲವರು ಜ್ಞಾನದ ಒಲವಿಲ್ಲದ ಭಾಷೆಗಳು ತೀರಿಕೊಂಡಿವೆ ಅಂತ ಹೇಳುತ್ತಾರೆ. ಆದರೆ ಇದು ಸುಳ್ಳು, ಇಂದಿನ ಡಿಜಿಟಲೀಕರಣದ ಕಾಲದಲ್ಲಿ ಪರಿಸರದ ಭಾಷೆ, ತಾಯ್ನುಡಿಯನ್ನು ಉಳಿಸಿಕೊಳ್ಳಬೇಕಾಗಿರುವುದು ಹೇಗೆ ಎಂದು ಚಿಂತಿಸಬೇಕಾಗಿದೆ’ ಎಂದು ಹೇಳುತ್ತಾರೆ.

‘ಇಂದು ಅಸಂಖ್ಯಾತ ಆದಿವಾಸಿ, ಅಲೆಮಾರಿ ಸಮುದಾಯಗಳು ಅಂಚಿನಲ್ಲಿ ಬದುಕುತ್ತಿದ್ದಾರೆ. ಅಂಬೇಡ್ಕರ್ ಅವರು ಹೇಳಿದಂತೆ ಮೀಸಲಾತಿ ಒದಗಿಸುವುದೆಂದರೆ ಪ್ರಾತಿನಿಧ್ಯ ಮಾತ್ರವೇ ಅಲ್ಲ. ಅಂಚಿನಲ್ಲಿರುವ ಈ ನೆಲದ ಮಕ್ಕಳಾದ ತಳಸಮುದಾಯಗಳ ಬದುಕನ್ನು, ಅವರ ಅನುಭವಗಳನ್ನು ಶಿಕ್ಷಣದ ಪಠ್ಯವನ್ನಾಗಿ ರೂಪಿಸಬೇಕು. ಇದು ಜ್ಞಾನಪ್ರಕಾರವಾಗಿ ಬೆಳೆಯಬೇಕು, ಈ ದೇಶದ ಪರಿಶಿಷ್ಟ ಜಾತಿ, ಆದಿವಾಸಿ ಸಮುದಾಯಗಳನ್ನು ಪ್ರತಿಯೊಬ್ಬರೂ ಜ್ಞಾನವಾಗಿ ಸ್ವೀಕರಿಸಬೇಕು. ಇದನ್ನು ನಿರ್ವಸಾಹತೀಕರಣ ಎಂದು ಕರೆಯಬೇಕು. ಸಂವಿಧಾನದ 8ನೆ ಶೆಡ್ಯೂಲ್ ಹೊರಗಿರುವ, ಅಧಿಕೃತ ರಕ್ಷಣೆ ಇಲ್ಲದ ಸುಮಾರು 700 ಭಾಷೆಗಳ ಕಡೆ ನಾವು ಗಮನ ಹರಿಸಬೇಕು’ ಎಂದೂ ವಿವರಿಸುತ್ತಾರೆ.

ಮಾತೃಭಾಷಾ ಮಾಧ್ಯಮದ ಮೂಲಕವೇ ಭಾಷೆಯನ್ನು ಉಳಿಸುತ್ತೇವೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ಅಂಚಿನಲ್ಲಿರುವ ಸಮುದಾಯಗಳ ಭಾಷೆ, ಜ್ಞಾನ, ಅವರ ಬದುಕು ಮುಖ್ಯವಾಹಿನಿಯ ಶಿಕ್ಷಣದ ಪಠ್ಯವಾಗಬೇಕು, ಕಲಿಕೆಯರಿಮೆಯಾಗಬೇಕು. ಈ ಮೂಲಕ ಅಲೆಮಾರಿ, ಆದಿವಾಸಿ ಸಮುದಾಯಗಳು ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು. ಇದನ್ನೇ ಶಿಕ್ಷಣದಲ್ಲಿ ಭಾಷೆಯ ಕಲಿಕೆ ಎನ್ನುತ್ತಾರೆ.

ಎಲ್ಲಿಯವರೆಗೆ ಅಂಚಿನಲ್ಲಿರುವ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಷೆ, ಬದುಕು, ಸಂಸ್ಕೃತಿ ಕನ್ನಡ ಶಿಕ್ಷಣದ ಭಾಗವಾಗುವುದಿಲ್ಲವೋ, ಇಲ್ಲಿನ ಕಲಿಕೆಯರಿಮೆ ಆಗುವುದಿಲ್ಲವೋ ಅಲ್ಲಿಯವರೆಗೆ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಅರ್ಥವಿರುವುದಿಲ್ಲ. ತಾಯ್ನುಡಿಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಇಂದಿನ ನವ ಉದಾರೀಕರಣ ಮಾರುಕಟ್ಟೆಯ ಅವಕಾಶವಾದಿ ತಂತ್ರಗಳು ಮತ್ತು ಆ ಮೂಲಕ ಹುಟ್ಟಿಕೊಂಡ ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳನ್ನು ಆಳವಾಗಿ ಅರಿತು, ಸ್ಪಂದಿಸಿ ಈ ತಾಯ್ನುಡಿಯ ಶಿಕ್ಷಣ ರೂಪಿಸಬೇಕಾಗಿದೆ. ಶೈಕ್ಷಣಿಕ ವಲಯದ ಮೇಲೆ ಖಾಸಗೀಕರಣ, ಜಾಗತೀಕರಣದ ಪ್ರಭಾವ ನಿರ್ಲಕ್ಷಿಸಿ ಭಾವುಕ ನೆಲೆಯಲ್ಲಷ್ಟೇ ಮಾತೃಭಾಷಾ ಮಾಧ್ಯಮದ ಪರ ಹೋರಾಟ ಮಾಡಿದರೆ ಅದು ಕತ್ತಲ ದಾರಿಯನ್ನು ತುಳಿಯುವ ವ್ಯರ್ಥ ಪ್ರಯತ್ನವಾಗುತ್ತದೆ.

ಮರೆಯುವ ಮುನ್ನ

1990ರ ನಂತರ ಜನಿಸಿದ ಭಾರತೀಯರಿಗೆ ಶಿಕ್ಷಣದಲ್ಲಿ ಭಾಷೆ ಮತ್ತು ಜ್ಞಾನದ ಬಳಕೆ ಹೇಗೆ ಎನ್ನುವ ಬಗ್ಗೆ ಹೊಸದಾಗಿ ಅಧ್ಯಯನ ನಡೆಸಬೇಕಾಗಿದೆ. ಜಾಗತೀಕರಣದ ನವ ಉದಾರೀಕರಣದ ಅಪಾಯವನ್ನು ಈ ಹೊಸ ತಲೆಮಾರಿಗೆ ಅರಿವು ಮೂಡಿಸುವ ಬಗೆ ಹೇಗೆ ಎನ್ನುವುದರ ಕುರಿತು ಆಲೋಚಿಸಬೇಕಾಗಿದೆ. ಇತಿಹಾಸವನ್ನು ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಎಂದು ವರ್ಗೀಕರಿಸಿ ತಲಸ್ಪರ್ಶಿ ಅಧ್ಯಯನ ಮಾಡಬೇಕಾದ ತುರ್ತು ಇದೆ. ಇಲ್ಲಿ ಭಾಷೆಯನ್ನು ಜ್ಞಾನದ ಜೊತೆ ಸಮೀಕರಿಸಿ ನಿರ್ವಚಿಸಬೇಕಾಗಿದೆ. ಶಿಕ್ಷಣದಲ್ಲಿ ಭಾಷೆ ಎನ್ನುವುದು ಮಾಧ್ಯಮ ಮಾತ್ರವಾಗಿ ಸೀಮಿತಗೊಳ್ಳಬಾರದು. ಅದು ನುಡಿಯಾಗಬೇಕು. ನಡೆಯಾಗಬೇಕು. ಬದುಕಾಗಬೇಕು.

ಭಾಷೆಯ ಕಲಿಕೆ ಏಕರೂಪಿ ಶಿಕ್ಷಣವಾಗಿರಬಾರದು. ಭಾಷೆಯ ಬಳಕೆ ಬಹುರೂಪಿ ಸ್ವರೂಪದ್ದಾಗಿರಬೇಕು. ಇದಕ್ಕೆ ಅಗತ್ಯವಾದ ಕಲಿಕೆಯರಿಮೆಯನ್ನು ರೂಪಿಸಬೇಕು. ಪ್ರತಿ ಪಠ್ಯವನ್ನು ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಎನ್ನುವ ನಾಲ್ಕು ಹಂತಗಳನ್ನು ಒಳಗೊಂಡಂತೆ ರಚಿಸಬೇಕು. ಬಹು ಭಾಷಿಕರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಭಾಷಾ ನೀತಿ ರೂಪಿಸಬೇಕು. ಭಾಷೆಯು ವೈವಿಧ್ಯತೆಗೆ ಅನುಗುಣವಾಗಿ ಬಹುಸಂಸ್ಕೃತಿಯನ್ನು, ಬಹುತ್ವವನ್ನು ಬಿಂಬಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT