ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹತ್ವದ ಐದು ವೃತ್ತಿ ನಾಟಕಗಳು

Last Updated 8 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಪ್ರಸ್ತುತ ವೃತ್ತಿ ರಂಗಭೂಮಿಯಲ್ಲಿ ಮುಂಚೂಣಿಯಲ್ಲಿರುವ ನಾಟಕಕಾರ ಜೇವರಗಿ ರಾಜಣ್ಣ ಅವರ ‘ಐದು ವೃತ್ತಿ ನಾಟಕಗಳು’ ಕನ್ನಡ ರಂಗ ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಕೃತಿ. ಮೂರು ದಶಕಗಳಿಂದ ವೃತ್ತಿರಂಗಭೂಮಿಯಲ್ಲಿ ಸಕ್ರಿಯರಾಗಿರುವ ರಾಜಣ್ಣ ನಟ, ನಾಟಕ ಕಂಪನಿ ಮಾಲೀಕ ಮತ್ತು ನಾಟಕಕಾರರಾಗಿ ಯಶಸ್ಸು ಕಂಡವರು. ರಂಗಭೂಮಿಯ ಅಕಾಡೆಮಿಕ್ ಶಿಸ್ತುಗಳನ್ನು ಮೀರಿ ಪ್ರೇಕ್ಷಕರ ನಾಡಿಮಿಡಿತ ಬಲ್ಲ ಯಶಸ್ವಿ ರಂಗಕರ್ಮಿಯೂ ಹೌದು.

ಈ ಕೃತಿಯಲ್ಲಿ ‘ವರಪುತ್ರ’, ‘ಸೆರೆ ಅಂಗಡಿ ಸಂಗವ್ವ’, ‘ನಗಿಸಿ ನಗಿಸಿ ಅಳಸ್ತಾಳ’, ‘ಕುಂಟ ಕೋಣ ಮೂಕಜಾಣ’ ಮತ್ತು ‘ಅಮರಫಲ’ ಎನ್ನುವ ಐದು ವೃತ್ತಿ ನಾಟಕಗಳಿವೆ. ‘ಬರಿ ಕಥೆ ಹೇಳಿದರೆ ಪ್ರೇಕ್ಷಕ ಪ್ರಭು ಕೇಳಲಾರ ಅನ್ನುವ ಉದ್ದೇಶಕ್ಕೆ ಎಲ್ಲಾ ನಾಟಕಗಳಲ್ಲಿಯೂ ಹಾಸ್ಯವಿದೆ. ಹಾಸ್ಯದಲ್ಲಿಯೂ, ಕಥೆಯಲ್ಲಿಯೂ ಸಂದೇಶವಿದೆ’ ಎಂದು ಲೇಖಕರ ಮಾತಿನಲ್ಲಿ ರಾಜಣ್ಣ ತಮ್ಮ ನಾಟಕಗಳಲ್ಲಿರುವ ಹೂರಣವನ್ನು ತೆರೆದಿಡುತ್ತಾರೆ.

ಇಲ್ಲಿನ ಪ್ರತಿ ನಾಟಕದಲ್ಲೂ ಹಾಸ್ಯದ ಜತೆಗೆ ಸಂದೇಶವಿದೆ. ಮನುಷ್ಯ ಸಂಬಂಧಗಳು, ಪ್ರಸ್ತುತ ರಾಜಕಾರಣ, ಮನುಷ್ಯ ದೌರ್ಬಲ್ಯ, ಸಮಾಜ ಸೇವೆ, ಶ್ರೀಮಂತಿಕೆಯ ಎಡವಟ್ಟುಗಳು, ಎಂಡೋಸಲ್ಫಾನ್ ಪೀಡಿತರ ನೋವು ಹೀಗೆ ಒಂದೊಂದು ನಾಟಕವೂ ತನ್ನ ಭಿನ್ನ ಗುಣ ಮತ್ತು ವಸ್ತುವೈವಿಧ್ಯದ ಕಾರಣಕ್ಕಾಗಿ ಗಮನ ಸೆಳೆಯುತ್ತದೆ. ನಾಟಕಕಾರರ ಸರಳ ಭಾಷಾ ಶೈಲಿ ಕಲಾವಿದರಿಗಷ್ಟೇ ಅಲ್ಲ ಸಾಮಾನ್ಯ ಪ್ರೇಕ್ಷಕನಿಗೂ ಅರ್ಥವಾಗುವಂತಿದೆ. ಅದುವೇ ಈ ಕೃತಿಯ ವಿಶೇಷ. ಮೈಲುದ್ದದ ಸಂಭಾಷಣೆಗಳು, ನಾಟಕೀಯ ಭಾಷೆ, ದುಬಾರಿ ಪದಪುಂಜಗಳ ಹಂಗು ಇಲ್ಲಿಲ್ಲ. ಸರಳವಾಗಿ ಓದಿಸಿಕೊಂಡು ಹೋಗುವ ಈ ವೃತ್ತಿನಾಟಕಗಳು ಬರೀ ಓದುಗರನ್ನಷ್ಟೇ ಗಮನದಲ್ಲಿಟ್ಟುಕೊಂಡು ಬರೆದಿಲ್ಲ. ಪ್ರಯೋಗದ ದೃಷ್ಟಿಯಿಂದಲೂ ಬರೆದ ನಾಟಕಗಳಿವು. ಸಾಮಾನ್ಯವಾಗಿ ವೃತ್ತಿರಂಗದ ನಾಟಕಗಳಿಗೆ ಆರೋಪಿಸುವ ಅಶ್ಲೀಲ ಸಂಭಾಷಣೆ, ಗೊತ್ತುಗುರಿಯಿಲ್ಲದ ಕಥೆ, ಅನಗತ್ಯ ಐಟಂ ಗೀತೆಗಳು ಹಾವಳಿ ಇಲ್ಲಿಲ್ಲ. ಎಲ್ಲರೂ ನೋಡಿ ಆನಂದಿಸುವ, ನಕ್ಕು ಮನಸು ಹಗುರ ಮಾಡಿಕೊಳ್ಳುವ ಕಥಾವಸ್ತು ಇಲ್ಲಿನ ವೃತ್ತಿನಾಟಕಗಳಿಗಿದೆ.

ಇಲ್ಲಿನ ಐದೂ ನಾಟಕಗಳು ರಾಜಣ್ಣ ಅವರ ಮಾಲೀಕತ್ವದ ವಿಶ್ವಜ್ಯೋತಿ ಶ್ರೀಪಂಚಾಕ್ಷರ ನಾಟ್ಯ ಸಂಘದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಂಡಿವೆ. ಇತ್ತೀಚಿನ ದಿನಗಳಲ್ಲಿ ಕನ್ನಡ ವೃತ್ತಿರಂಗಭೂಮಿಯಲ್ಲಿ ಅತಿ ಹೆಚ್ಚು ಪ್ರದರ್ಶನ ಕಂಡ ಮತ್ತು ದಾಖಲೆ ನಿರ್ಮಿಸಿ ‘ಕುಂಟಕೋಣ ಮೂಕ ಜಾಣ’ ನಾಟಕವೂ ಈ ಕೃತಿಯಲ್ಲಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT