ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ಮೋನಿಕಾದ ಮೋಡಿಯಲ್ಲಿ...

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ಜಾತ್ರೆಗಳಲ್ಲಿ ಸಿಗುವ ಮೌತ್‌ ಆರ್ಗನ್‌ ಖರೀದಿಸಿದ ನೆನಪು ಹಲವರಿಗೆ ಇರಬಹುದು. ಇದೊಂದು ಆಟಿಕೆ ಎಂಬ ಭಾವವೇ ಬಹುತೇಕರದ್ದು. ಪಾಶ್ಚಾತ್ಯ ದೇಶಗಳಲ್ಲಿ ಪ್ರಮುಖ ವಾದ್ಯ ಎನಿಸಿದ ಹಾರ್ಮೋನಿಕಾ ವಾದ್ಯಕ್ಕೆ ಭಾರತದಲ್ಲಿ ಪ್ರಮುಖ ವಾದ್ಯದ ಸ್ಥಾನ ಇನ್ನೂ ಸಿಕ್ಕಿಲ್ಲ. ಈ ವಾದ್ಯದ ಶೇ 95ರಷ್ಟು ವಾದನ ಕೇಳಿ ಬರುವುದು ಹಿಂದಿ ಚಿತ್ರಗಳಲ್ಲಿ.

ಶೋಲೆ ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌ ಹಾರ್ಮೋನಿಕಾ ನುಡಿಸುತ್ತ ಕುಳಿತಿದ್ದ ದೃಶ್ಯ ಇನ್ನೂ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ಕಾಣದಂತೆ ಮಾಯವಾದನೋ... ಹಾಡಿಗೂ ವಿಶಿಷ್ಟ ಮಾಧುರ್ಯ ಬೆರೆಸಿದ ಈ ‘ಹಾರ್ಮೋನಿಕಾ’ದ ಮೋಡಿ ಹಿಂದಿ–ಕನ್ನಡ ಚಿತ್ರಗೀತೆಗಳಲ್ಲಿ ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಇದೇ ವಾದ್ಯವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿ ಸಂಗೀತ ಪ್ರಿಯರಿಗೆ ರಸದೌತಣ ನೀಡುತ್ತಿದ್ದಾರೆ ಬೆಂಗಳೂರಿನ ಸಂಗೀತ ಕಲಾವಿದ ಸಾಯಿತೇಜಸ್‌ ಚಂದ್ರಶೇಖರ್‌.

ಬಾಲ್ಯದಲ್ಲಿ ಜಾತ್ರೆಗಳಲ್ಲಿ ಸಿಗುವ ಮೌತ್‌ ಆರ್ಗನ್‌ ಖರೀದಿಸಿದ ನೆನಪು ಹಲವರಿಗೆ ಇರಬಹುದು. ಇದೊಂದು ಆಟಿಕೆ ಎಂಬ ಭಾವವೇ ಬಹುತೇಕರದ್ದು. ಆಡು ಭಾಷೆಯಲ್ಲಿ ಇದಕ್ಕೆ ‘ರಾಗಮಾಲಿಕೆ’ ಎಂದೂ ಕರೆಯುವುದುಂಟು. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾದ ಸಾಯಿತೇಜಸ್‌ಗೆ 10ನೇ ವಯಸ್ಸಿನಲ್ಲಿ ಮೌತ್‌ ಆರ್ಗನ್‌ ಸಿಕ್ಕಾಗ ಅವರು ಮೊದಲು ನುಡಿಸಿದ್ದು ‘ಟ್ವಿಂಕಲ್‌ ಟ್ವಿಂಕಲ್‌ ಲಿಟಲ್‌ ಸ್ಟಾರ್‌....’ ಎಂಬ ಶಿಶುಗೀತೆಯನ್ನು. ನಂತರ ರಾಷ್ಟ್ರಗೀತೆ ‘ಜನಗಣಮನ’ ನುಡಿಸಲು ಕಲಿತರು. ಆಗಾಗ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ನುಡಿಸುತ್ತಿದ್ದರು. 2006ರಲ್ಲಿ ಶಾಲೆಯ ಪ್ರಾಧ್ಯಾಪಕರೊಬ್ಬರು ನೀನ್ಯಾಕೆ ಕರ್ನಾಟಕ ಸಂಗೀತವನ್ನು ಈ ವಾದ್ಯದಲ್ಲಿ ನುಡಿಸಬಾರದು ಎಂದು ಕೇಳಿದರು. ಅದಕ್ಕೆ ಅವಕಾಶವನ್ನೂ ಮಾಡಿಕೊಟ್ಟರು. ಅಲ್ಲಿಂದ ಹಾರ್ಮೋನಿಕಾದೊಂದಿಗಿನ ಬಾಂಧವ್ಯ ಆರಂಭಗೊಂಡಿತು. ಇಂದು ಹಾರ್ಮೋನಿಕಾದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಡುವ ಜಗತ್ತಿನ ಏಕೈಕ ಕಲಾವಿದ ಸಾಯಿತೇಜಸ್‌. ಇವರ ಅಕ್ಕ ಸುಮನಾ ಚಂದ್ರಶೇಖರ್ ಘಟಂ ವಾದ್ಯ ಕಲಾವಿದೆ. ವಿದುಷಿ ರೂಪಾ ಶ್ರೀಧರ್‌, ಪಂಡಿತ್‌ ವಿಶ್ವನಾಥ ನಾಕೋಡ ಅವರು ಸಂಗೀತ ಗುರುಗಳು.

ಪಾಶ್ಚಾತ್ಯ ದೇಶಗಳಲ್ಲಿ ಪ್ರಮುಖ ವಾದ್ಯ ಎನಿಸಿದ ಹಾರ್ಮೋನಿಕಾ ವಾದ್ಯಕ್ಕೆ ಭಾರತದಲ್ಲಿ ಪ್ರಮುಖ ವಾದ್ಯದ ಸ್ಥಾನ ಇನ್ನೂ ಸಿಕ್ಕಿಲ್ಲ. ಈ ವಾದ್ಯದ ಶೇ 95ರಷ್ಟು ವಾದನ ಕೇಳಿ ಬರುವುದು ಹಿಂದಿ ಚಿತ್ರಗಳಲ್ಲಿ. ಅದೂ ತುಣುಕು–ತುಣುಕುಗಳಾಗಿ ಅಷ್ಟೆ. ಈ ವಾದ್ಯದ ಮೋಡಿಗೊಳಗಾದ ಸಾಯಿತೇಜಸ್‌ ಮಾತ್ರ ಸತತ ಪರಿಶ್ರಮದಿಂದ ಶಾಸ್ತ್ರೀಯ ವಾದ್ಯಗಳಂತೆ ಇದನ್ನೂ ಅಷ್ಟೇ ಅದ್ಭುತವಾಗಿ ನುಡಿಸುವುದನ್ನು ಅಭ್ಯಸಿಸಿಕೊಂಡಿದ್ದಾರಲ್ಲದೇ ಇದನ್ನು ಉತ್ತಮವಾಗಿ ನುಡಿಸಬಲ್ಲ 150 ಶಿಷ್ಯಂದಿರನ್ನೂ ತಯಾರು ಮಾಡಿದ್ದಾರೆ!

ಹತ್ತು ವರ್ಷಗಳ ಹಿಂದೆ ಶಾಲೆಯೊಂದರಲ್ಲಿ ಸಂಗೀತ ಪಾಠ ಮಾಡುತ್ತಿದ್ದಾಗಿನ ಸಂದರ್ಭ. ಮಕ್ಕಳ ರಜಾ ಶಿಬಿರದಲ್ಲಿ ಮೌತ್‌ ಆರ್ಗನ್‌ ಅನ್ನು ಕಲಿಸಲು ಆರಂಭಿಸಿದರು. ಆರಂಭದಲ್ಲಿ 15ರಷ್ಟಿದ್ದ ಶಿಷ್ಯಂದಿರ ಸಂಖ್ಯೆ ನಿಧಾನಕ್ಕೆ ಬೆಳೆದು ಈಗ 150ಕ್ಕೆ ತಲುಪಿದೆ. ‘ಹಂಸನಾದ ಫೌಂಡಷನ್‌’ ಸ್ಥಾಪಿಸಿ ಹಾರ್ಮೋನಿಕಾ ತರಬೇತಿ ನಡೆಸತೊಡಗಿದರು. ಇವರಲ್ಲಿ ಒಂಬತ್ತು ವರ್ಷದ ಮಕ್ಕಳಿಂದ ಹಿಡಿದು 82ರವರೆಗಿನ ವೃದ್ಧರವರೆಗಿನವರೂ ಇರುವುದು ಹಾರ್ಮೋನಿಕಾ ಸೃಷ್ಟಿಸಿದ ಮೋಡಿಗೆ ಸಾಕ್ಷಿ. ಇವರು ಕಟ್ಟಿರುವ ತಂಡ ದೇಶದಲ್ಲೇ ಮೊದಲ ‘ಯೂತ್‌ ಹಾರ್ಮೋನಿಕಾ ಗ್ರೂಪ್‌’ ಎಂದು ಹೆಸರಾಗಿದೆ.

‘75–80ರ ದಶಕದಲ್ಲಿ ಹಾರ್ಮೋನಿಕಾ ಖ್ಯಾತ ವಾದ್ಯ. ನಂತರದ ಕಾಲಘಟ್ಟದಲ್ಲಿ ಕೀ ಬೋರ್ಡ್‌
ಹಾಗೂ ಇತರ ಕೆಲವು ವಾದ್ಯಗಳು ಬಂದ ಬಳಿಕ ಇದು ಸ್ವಲ್ಪ ಹಿಂದೆ ಬಿತ್ತು. ಈಗ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತೆ ಜನಪ್ರಿಯತೆ ಗಳಿಸುತ್ತಿದೆ. ಈಗ ದೇಶದಲ್ಲೂ ಇದರ ಹಲವು ಕ್ಲಬ್‌ಗಳು ಇವೆ. ಸಂವಹನ ಜಾಲ ನಿರ್ಮಾಣವಾಗುತ್ತಿದೆ. ತಬಲಾ, ಹಾರ್ಮೋನಿಯಂಗೆ ಹೋಲಿಸಿದರೆ ಇದರ ಕಲಾವಿದರ ಸಂಖ್ಯೆ ಕಡಿಮೆಯೇ ಇದೆ. ಇಂಥ ಸುಂದರ ವಾದ್ಯವನ್ನು ಪ್ರಚಾರ ಮಾಡಬೇಕು. ಮುಂದಿನ ಪೀಳಿಗೆಗೆ ಅದನ್ನು ತಲುಪಿಸಬೇಕು ಎಂಬ ಧ್ಯೇಯ ನನ್ನದು’ ಎನ್ನುತ್ತಾರೆ ಸಾಯಿತೇಜಸ್‌.

‘ಸ್ಯಾಕ್ಸೋಫೋನ್‌ನಲ್ಲಿ ಕದ್ರಿ ಗೋಪಾಲನಾಥ್‌, ತಬಲಾದಲ್ಲಿ ಜಾಕೀರ್‌ ಹುಸೇನ್‌... ಹೀಗೆ ಪ್ರತಿ ವಾದ್ಯಗಳಲ್ಲೂ ಪ್ರಖ್ಯಾತ ಕಲಾವಿದರು ಇರುವಂತೆ ಹಾರ್ಮೋನಿಕಾದಲ್ಲೂ ಏಕಿರಬಾರದು ಎಂಬ ಯೋಚನೆ ಬಂತು. ಹೀಗಾಗಿ ‘ರೀಡ್ಸ್‌ ಆ್ಯಂಡ್‌ ರಾಗಾಸ್‌’ ಎಂಬ ಕಾರ್ಯಕ್ರಮ ನಡೆಸಲು ಆರಂಭಿಸಿದೆವು. ಈ ಕಾರ್ಯಕ್ರಮವನ್ನು ಹಾರ್ಮೋನಿಕಾ ಕಛೇರಿಗಾಗಿಯೇ ಮಾಡಲಾಗುತ್ತದೆ. ಕಲಾವಿದರು 45 ನಿಮಿಷಗಳವರೆಗೆ ವಾದ್ಯ ನುಡಿಸುತ್ತಾರೆ. ಆಗ ಕಲಾವಿದರ ಬಗ್ಗೆ ಜನರಿಗೆ ತಿಳಿಯುತ್ತದೆ. ಗೌರವ ಮೂಡುತ್ತದೆ. ಕಾರ್ಯಾಗಾರಗಳನ್ನೂ ನಡೆಸುತ್ತದೆ. ಇದರ ಸಮಾರೋಪ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿತದ್ದನ್ನು ಪ್ರಸ್ತುತಪಡಿಸುವ ಅವಕಾಶ ನೀಡುತ್ತದೆ. ಇದೇ ಈಗ ಬೆಳೆದುಕೊಂಡು ಬಂದು ದೊಡ್ಡಮಟ್ಟದ ಕಾರ್ಯಕ್ರಮದ ಸ್ವರೂಪ ಪಡೆದಿದೆ. ಈ ವರ್ಷ ಹಿರಿಯ ಹಾರ್ಮೋನಿಕಾ ಕಲಾವಿದರಿಗೆ ’ರಾಗಮಾಲಿಕಾ’ ಎಂಬ ಪ್ರಶಸ್ತಿ ನೀಡಲಾಗುತ್ತದೆ. ದೇಶದ ಪ್ರಸಿದ್ಧ ಹಾರ್ಮೋನಿಕಾ ಕಲಾವಿದರನ್ನೂ ಕರೆಸುವ ಯೋಜನೆ ಇದೆ’ ಎಂದು ವಿವರಿಸುತ್ತಾರೆ.

ಭಕ್ತಿಗೀತೆ, ಜನಪದ ಸಂಗೀತ ಸೇರಿದಂತೆ ಸಂಗೀತದ ವಿವಿಧ ಪ್ರಕಾರಗಳನ್ನೂ ಹಾರ್ಮೋನಿಕಾ ವಾದ್ಯದಲ್ಲಿ ಪ್ರಯೋಗ ಮಾಡಿದ್ದೇವೆ. ಶಿಷ್ಯೆಯೊಬ್ಬಳು ನುಡಿಸಿದ್ದ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಕ್ರೋಮ್ಯಾಟಿಕ್‌ ಹಾರ್ಮೋನಿಕಾದ ಜೊತೆ ಕಾರ್ಡ್‌ ಹಾರ್ಮೋನಿಕಾ, ಬೇಸ್‌ ಹಾರ್ಮೋನಿಕಾ, ಮೆಲೊಡಿಕಾ ಸೇರಿದಂತೆ ಅಪರೂಪದ ವಾದ್ಯಗಳನ್ನು ಬಳಸಿಕೊಂಡು ಸಾಮೂಹಿಕ ಪ್ರಸ್ತುತಿ ನೀಡಿದ ಏಕೈಕ ತಂಡ ‘ಹಂಸನಾದ ಫೌಂಡೇಷನ್‌’. ಕೋವಿಡ್‌ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗಳನ್ನೂ ನಡೆಸಿದ್ದರಿಂದ ದೇಶದಾದ್ಯಂತ ಕಲಾ ಚಟುವಟಿಕೆ ವಿಸ್ತರಿಸಿದೆ’ ಎಂದು ಸಾಯಿತೇಜಸ್‌ ಮಾಹಿತಿ ನೀಡುತ್ತಾರೆ.

ಹಂಸನಾದ ಫೌಂಡೇಷನ್‌ ಬೆಂಗಳೂರಿನಲ್ಲಷ್ಟೇ ಅಲ್ಲದೇ ಮುಂಬೈ, ಜೈಪುರ, ಕೋಲ್ಕತ್ತ, ಹೈದರಾಬಾದ್‌ನಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದೆ. ದೇಶದ ಮೊತ್ತಮೊದಲ ಹಾರ್ಮೋನಿಕಾ ಫ್ಲಾಶ್‌ ಮಾಬ್‌ ನಡೆಸಿಕೊಟ್ಟ ಹೆಗ್ಗಳಿಕೆಯೂ ಇದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT