ಗಮನಸೆಳೆದ ಯುವ ಗಾಯಕ ವರುಣ

ಬೈಲಹೊಂಗಲ: ಇಲ್ಲಿನ ಪ್ರತಿಭೆಯೊಂದು ಗಾಯನ ಲೋಕದಲ್ಲಿ ಮಿಂಚುತ್ತಿದೆ.
ಎಲೆ ಮರೆಕಾಯಿಯಂತೆ ಮನೆ, ಶಾಲೆ, ಕಾಲೇಜಿನಲ್ಲಿ ಆಗಾಗ ಹಾಡು ಹಾಡುತ್ತಿದ್ದ ಯುವ ಗಾಯಕ ವರುಣ ವೈರಮುಡಿ ಯುಟ್ಯೂಬ್ ಚಾನಲ್‌ನಲ್ಲಿ ವಿಲಾಸಕನ್ನಡಿಗ ಎಂಬ ಹೆಸರಿನಲ್ಲಿ ಪೇಜ್ ಮಾಡಿ ಕಬೀರ್ ಸಿಂಗ್ ಹಿಂದಿ ಚಿತ್ರದ ‘ಕೈಸೇ ಹುವಾ’ ಹಾಡನ್ನು ಕನ್ನಡದಲ್ಲಿ ‘ಏನಾಗಿದೆ, ಏನಾಗಿದೆ’ ಎಂದು, ಮರಝಾವಾ ಹಿಂದಿ ಚಿತ್ರದ ‘ಥುಮ್ಹೀ ಅನಾ’ ಹಾಡನ್ನು ಕನ್ನಡದಲ್ಲಿ ‘ನಿನ್ನ ನಗುವೆ ಸಾಕು’ ಎಂದು ರಚಿಸಿ ಹಾಡಿ ಗಮನಸೆಳೆದಿದ್ದಾರೆ.
ಅಪ್ಪಟ್ಟ ಗ್ರಾಮೀಣ ಶೈಲಿಯಲ್ಲಿ ಹಾಡು ರಚಿಸಿ ನಟನೆಯನ್ನೂ ಮಾಡಿರುವ ವರುಣ, ಪಟ್ಟಣದ ಹಳೆಯ ಹನುಮಂತ ದೇವರ ದೇವಸ್ಥಾನ ಹತ್ತಿರದ ನಿವಾಸಿ. ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ ಪದವಿ ಪೂರೈಸಿರುವ ಗಾಯಕ ಲೆಕ್ಕಪತ್ರ ಪರಿಶೋಧಕರ ಬಳಿ ಸದ್ಯ ತರಬೇತಿ ಪಡೆಯುತ್ತಿದ್ದಾರೆ.
ಎರಡು ಹಾಡುಗಳಿಗೆ ಧ್ವನಿ: 25 ವರ್ಷದ ಅವರು ಕನ್ನಡ ಮತ್ತು ಹಿಂದಿ ಹಾಡುತ್ತಾರೆ. ಕನ್ನಡ ಚಲನಚಿತ್ರ ಗೀತೆ, ಜನಪದ ಗೀತೆ, ಭಾಗೀತೆ, ಭಕ್ತಿಗೀತೆಗಳು ಅವರ ಸ್ಮೃತಿಪಟದಲ್ಲಿವೆ. ಆಗಾಗ ಪೇಸ್‌ಬುಕ್ ಲೈವ್ ಕೂಡ ಮಾಡುತ್ತಿರುತ್ತಾರೆ. ಲಾಕ್‌ಡೌನ್ ಸಂದರ್ಭದಲ್ಲಿ 2 ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗೆಳೆಯರು ಸಾಕಷ್ಟು ನೆರವಾಗಿದ್ದಾರೆ. ಇತ್ತೀಚಿಗಷ್ಟೇ ದಾನಿಗಳ ಸಹಕಾರದಿಂದ ಸಿ.ಡಿ. ಬಿಡುಗಡೆಗೊಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಂಗೀತ ಮಾಧ್ಯಮವನ್ನು ಬಳಸಿಕೊಂಡು ತಮ್ಮ ಕಲಾ ಜ್ಞಾನವನ್ನು ಗೆಳೆಯರೊಂದಿಗೆ ಪಸರಿಸಿ ಎಲ್ಲರನ್ನು ರಂಜಿಸುತ್ತಿದ್ದಾರೆ.
‘ಪ್ರಥಮ ಪಿಯುಸಿ ಇದ್ದಾಗ ಸ್ನೇಹಿತರ ಒತ್ತಾಯದಿಂದಾಗಿ ಗಾಯನ ಸ್ಪರ್ಧೆಯಲ್ಲಿ ಭಾವಗೀತೆ ಹಾಡಿದ್ದೆ. ಆ ಕಾರ್ಯಕ್ರಮ ನನ್ನ ಪ್ರತಿಭೆ ಹೊರಹೊಮ್ಮಲು ವೇದಿಕೆಯಾಯಿತು. ಎಲ್ಲರೂ ಗುರುತಿಸಲು, ಮೆಚ್ಚುಗೆಯ ಮಾತುಗಳನ್ನಾಡಲು ಶುರು ಮಾಡಿದರು. ಬಳಿಕ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ತಂದೆ, ತಾಯಿ ನನ್ನ ಕಲೆ ಗುರುತಿಸಿದರು. ಸಂಗೀತ ಲೋಕದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಎಲ್ಲರ ಸಹಾಯ, ಸಹಕಾರ ಅವಶ್ಯವಿದೆ’ ಎಂದು ಅವರು ಪ್ರಜಾವಾಣಿಗೆ ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.