ಭಾನುವಾರ, ಏಪ್ರಿಲ್ 11, 2021
20 °C
ಮಹಿಳಾ ದಿನಾಚರಣೆಗೆ ಸವಿಗಾನದ ಮೆರುಗು

ಮಾಮನ ಮನೆಗೆ ಹೊಗೋಣ...

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸುಂದರ ಸಂಜೆಯ ತಂಪಾದ ಗಾಳಿಯಲ್ಲಿ ಸ್ವಚ್ಛಂದವಾಗಿ ತೇಲಾಡಲೆಂದೇ ಅನೇಕ ಮಕ್ಕಳು ಒಂದೆಡೆ ಸೇರಿದ್ದರು. ಆಗಷ್ಟೇ ಸೂರ್ಯ ಬಾನಿನಿಂದ ಜಾರಿದ್ದ. ಸೂರ್ಯ ಮರೆಯಾದ ಕ್ಷಣದಲ್ಲೇ ಅಲಂಕಾರಿಕ ದೀಪಗಳು ಹೊತ್ತಿಕೊಂಡು ಬೆಳಕು ಚೆಲ್ಲುತ್ತಿದ್ದಂತೆಯೇ ಮಕ್ಕಳ ಗಾನದ ರೈಲು ಸಂಭ್ರಮದತ್ತ ಪ್ರಯಾಣ ಬೆಳೆಸಿತು. ನಂತರ ಸಂಗೀತ ಲೋಕವೇ ಸೃಷ್ಟಿ ಆಯಿತು.

ಚುಕು-ಬುಕು ಚುಕು-ಬುಕು ರೈಲು ಬಂತು
ಹೊಳೆಯ ದಡದಲಿ ಆನೆಯ ಹಿಂಡು
ಓಡುವ ಗಿಡ ಮರ ನೋಡೋಣ
ಮಾಮನ ಮನೆಗೆ ಹೊಗೋಣ...

ಎನ್ನುವ ಶಿಶುಗೀತೆಯನ್ನು ವೈಭವಿ ರವಿಕುಮಾರ, ಸಾಕ್ಷಿ ಸ್ವಾಮಿ, ಸಂಚಿತಾ ಕಿರಣ, ಸಂದೇಶ, ಪ್ರಥಮೇಶ, ಕಿರಣ, ತನಿಷ್ಕ್ ಮಣಗೆ ಮತ್ತು ನಿಕಿತಾ ಅವರು ಹಾಡಿ ವೇದಿಕೆಯಿಂದ ಇಳಿದಾಗ ಪ್ರೇಕ್ಷಕರಿಗೆ ರೈಲಿನಿಂದಲೇ ಇಳಿದಂತೆ ಭಾಸವಾಯಿತು.

ನಾನಿ ತೇರಿ ಮೋರನಿ ಕೋ ಮೋರ್ ಲೇ ಗಯೀ
ಬಾಕಿ ಜೋ ಬಚಾ ಥಾ ಕಾಲೆ ಚೋರ್ ಲೇ ಗಯೀ
ಹಿಂದಿ ಗೀತೆಯನ್ನು ಹಾಡಿದ ಶ್ರಾವಣಿ, ಪ್ರೀತಿ, ತನಿಷ್ಕ್ ಮತ್ತು ರಮ್ಯ ಅವರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಮುಗ್ಧ ಮುಖದ ಪುಟ್ಟ ಬಾಲಕಿ ಯುಕ್ತಿ ಅರಳಿ ಮೈಕ್ ಹಿಡಿದು ವೇದಿಕೆಗೆ ಬಂದಾಗ ಪಠ್ಯದೊಳಗಿನ ಗೀತೆ ಹಾಡುತ್ತಿರಬಹುದು ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ಅಚ್ಚರಿ ಕಾದಿತ್ತು. ಪಂಚಮಿಗೆ ಅಣ್ಣ ಕರೆಯಲು ಬರುತ್ತಾನೆ ಎನ್ನುವ ಖುಷಿಯಲ್ಲಿದ್ದ ತಂಗಿ ಹಾಡುವ ಜಾನಪದ ಗೀತೆ ಬಹಳ ಅಚ್ಚುಕಟ್ಟಾಗಿ ಸಾದರಪಡಿಸಿದಳು.

ಪಂಚಮಿ ಹಬ್ಬಕ ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ ಯಾಕ ಕರೀಲಾಕ
ನಮ್ಮ ತವರೂರು ಗೋಕುಲನಗರ
ಮನಿ ಎಂತಾದೂ ರಾಜ ಮಂದಿರ
ನಮ್ಮಣ್ಣಯ್ಯ.. ನಮ್ಮಣ್ಣಯ್ಯ ದೊಡ್ಡ ಸಾಹುಕಾರ
ಹೆಂಗಾದೀತು ತಂಗೀನ ಮರಿಲಾಕ...

ಎಂದು ಸ್ವರಗಳ ಏರಿಳಿತದಲ್ಲೇ ಹಾವಭಾವಗಳನ್ನು ವ್ಯಕ್ತಪಡಿಸುತ್ತ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಹೋದರ ಹಾಗೂ ತವರು ಮನೆಯವರನ್ನು ನೆನಪಿಸಿಕೊಳ್ಳುವಂತೆ ಮಾಡಿದಳು.

ಕುಂತ್ರೆ..ನಿಂತ್ರೆ.. ಅವನ್ದೆ ಧ್ಯಾನ, ಜೀವಕಿಲ್ರಿ ಸಮಾಧಾನ,
ಅವ್ನಿಗೆ ಎಂಥ ಬಿಗುಮಾನ... ಅವನೆ ನನ್ನ ಗೆಣೆಕಾರ..
ಎನ್ನುವ ಜಾನಪದ ಗೀತೆಯನ್ನು ಭಾಗ್ಯಲಕ್ಷ್ಮಿ ಗುರುಮೂರ್ತಿ ಉತ್ಸಾಹದಿಂದ ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡರು.

ಲೋಕವ ಬೆಳಗಲು ಜನಿಸಿದ ಮಾತೆಗೆ
ಮಹಿಳಾ ದಿನದ ಶುಭಾಷಯ
ತ್ಯಾಗದ ಮೂರ್ತಿಯು ನೀನು
ಜೀವನ ಜ್ಯೋತಿಯು ನೀನು

ಎನ್ನುವ ಕವನ ಬರೆದ ಭಾನುಪ್ರಿಯಾ ಅರಳಿ ಅವರು ಭಾಗ್ಯಲಕ್ಷ್ಮಿ ಗುರುಮೂರ್ತಿ, ಶೈಲಜಾ ದಿವಾಕರ್ ಮತ್ತು ರಮ್ಯ ಅವರೊಂದಿಗೆ ಲಯಬದ್ಧವಾಗಿ ಪ್ರಸ್ತುತಪಡಿಸಿದರು.

ನಮ್ಮ ನಾಡು ನಮ್ಮ ನುಡಿ ನಮ್ಮ ಸಂಸ್ಕೃತಿ
ಹೆಮ್ಮೆಯಿಂದ ಹಾಡಿ ನಲಿಯುವಂತ ಸಂಗತಿ

ಹಾಡನ್ನು ರಮ್ಯ, ಶೈಲಜಾ ದಿವಾಕರ, ಪ್ರಿಯಾಂಕ ಕಿರಣ, ಸೃಜನ್ಯ ಅತಿವಾಳೆ ಮತ್ತು ಐಶ್ವರ್ಯ ಹಾಡಿದರು. ಪ್ರವೀಣ ಜಾನ್ ಜಾನಪದ ಗೀತೆ ಪ್ರಸ್ತುತಪಡಿಸಿದರು. ಇಮ್ಯಾನುವೆಲ್ ಕೀ ಬೋರ್ಡ್‌ ನುಡಿಸಿದರು.

ಸವಿಗಾನ ಮ್ಯೂಸಿಕ್‌ ಅಕಾಡೆಮಿ ಹಾಗೂ ಸುಶಾ ಕಲ್ಚರಲ್‌ ಟ್ರಸ್ಟ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೀದರ್‌ನ ಚಿಕ್ಕಪೇಟದ ಸವಿಗಾನ ಸಂಗೀತ ಸಭಾಂಗಣದಲ್ಲಿ ಆಯೋಜಿಸಿದ್ದ ಸವಿಗಾನ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳು ಮುಕ್ತ ಮನಸ್ಸಿನಿಂದ ಲಯಬದ್ಧವಾಗಿ ಹಾಡಿದರು. ಕಾರ್ಯಕ್ರಮ ಮುಗಿದ ನಂತರ ಪ್ರೇಕ್ಷಕರು ಹಾಡುಗಳನ್ನು ಮೆಲುಕು ಹಾಕುತ್ತ ಮನೆಗಳತ್ತ ಹೆಜ್ಜೆ ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು