ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಸ್ತಾದರ ಸ್ವರದಾಸರೆಯಲ್ಲಿ ಲಂಕೆಗೆ ಹಾರಿದ ರಾಮ

Last Updated 26 ಸೆಪ್ಟೆಂಬರ್ 2021, 16:35 IST
ಅಕ್ಷರ ಗಾತ್ರ

‘ಏಕ್ ಕಹಾನಿ ಆಪ್ ಸುನೀ ಹೋಗಿ ರಾಮ್ ರಾಮಾಯಣ್... ಸೀತಾಕೀ. ಆ ಕಥೆಯೇನೋ ಭಾಳ ದೊಡ್ಡದು. ಆದರೆ ನಾನೀಗ ಹಾಡುವ ಈ ಸಾದ್ರಾ ಉಮ್ರಾವ್‍ಖಾನರು ರಚಿಸಿದ್ದು. ಉಸ್ ಜಮಾನೇ ಮೆ ಸಬ್ ಗಾಯಾ ಕರತೆ ತೇ, ಕೋಯಿ ಮಸಲಾ ನಹಿ ಥಾ...’ ಹಾಡಲು ಕುಳಿತ ಉಸ್ತಾದರು ಹೇಳುತ್ತಿದ್ದಾರೆ.

‘ಆಗಿನ ಕಾಲದಲ್ಲಿ ಎಲ್ಲರೂ ಹಾಡುತ್ತಿದ್ದರು, ಯಾರಿಗೂ ಏನೂ ಸಮಸ್ಯೆಯಿರಲಿಲ್ಲ...’ ಅರೆ... ಯಾವ ಕಾಲದ ಮಾತನಾಡುತ್ತಿದ್ದಾರೆ ಇವರು? ಎಲ್ಲರೂ ಎಂದರೆ ಯಾರೆಲ್ಲ? ನಾವು ಮತ್ತು ಅವರು? ಯಾರಿಗೂ ಸಮಸ್ಯೆಯಿರಲಿಲ್ಲ ಎಂದರೆ ಈಗ ಯಾರಿಗೆ ಸಮಸ್ಯೆ?’ ಹತ್ತಾರು ಪ್ರಶ್ನೆಗಳು ಮನದೊಳಗೆ ಗಿರಕಿ ಹೊಡೆಯುತ್ತಿದ್ದಂತೆ ಉಸ್ತಾದರ ದನಿ ಕೇಳುತ್ತದೆ.
‘ರಿದನನನನೋನೋಂನೋಂ... ರಿದನನನನಾ ...’

ಈಗ ತಂದೆ, ಮಗ ಇಬ್ಬರೂ ಸರದಿಯಲ್ಲಿ ‘ರಿದನನಾ’ ಆಲಾಪಿಸುತ್ತಿದ್ದಾರೆ. ಆಲಾಪ ಕೊನೆಗೊಳ್ಳುತ್ತ ‘ತೋತೋಂ...’ ಎಂದು ಥಟ್ಟನೆ ವೀರದನಿಯಲ್ಲಿ ಶುರು...

‘ಲಂಕಾ ಚಢೋ ರಾಮssssss ಲಂಕಾ ಚಢೋ...’

ಓಹ್...! ಇದೀಗ ರಾಮನು ಉಸ್ತಾದರ ಕೊರಳಿನ ಸ್ವರದಾಸರೆಯಲ್ಲಿ ‘ಲಂಕಾ ಚಢೋ’ಗೆ ಸಜ್ಜಾಗುತ್ತಿದ್ದಾನೆ! ಅವರೊಂದಿಗೆ ಮಕ್ಕಳೂ ‘ಜೀತ್ ಗಯೋ ಗಢ್ ಸಬನ್...’ ಎಂದು ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದಾರೆ.

ರಾಮನಲ್ಲಿ ನವಉತ್ಸಾಹ ಮೂಡಿದೆ. ಗೆಲ್ಲಬೇಕು, ಎಲ್ಲ ಗಡಿಬೇಲಿಗಳ ದಾಟಿ ಹೃದಯಗಳ ಗೆಲ್ಲಬೇಕು!

ರಾಮನೀಗ ಹಾರುನಡಿಗೆಯಲ್ಲಿದ್ದಾನೆ.

ಮಧ್ಯೆ ಉಸ್ತಾದರು ತುಸು ಛೇಡಿಸುವ ದನಿಯಲ್ಲಿ ಹೇಳುತ್ತಾರೆ...

‘ಕಭೀ ಕಭೀ ಹಮ್ ಲಯ್ ಸೆ ಹಟ್ ಕರ್‍ ಆತೆ ಹೈ ತೋ ವೊ ಲಯ ಕಾ ಮಕಾಮ್ ಕೆಹತೇ ಹೈ; ಬೇತಾಬ್ ನಹೀ ಹೋತೆ ಹಮ್. ಲಯ್ ಕಾ ಏಕ್ ಮಕಾಮ್ ಹೈ. ಮಾತ್ರೆ ಸೆ ಐಸೆ ಯ್ಯೂಂ ಆತೇ ಹೈ...’

ರಾಮನೀಗ ಅರೆಕ್ಷಣ ನಿಲ್ಲುತ್ತಾನೆ. ಹೀಗೆ ‘ಮಾತ್ರೆ’ಯಿಂದ ತುಸುವೇ ಅತ್ತ, ಇತ್ತ ಸರಿದರೂ ಲಯದ ವ್ಯಾಪ್ತಿಯೊಳಗೇ ಇರುತ್ತೇವೆಂದು ಕೂತಲ್ಲಿಯೇ ಬಾಗಿ ಬಳುಕಿ ಹಾವಭಾವದೊಡನೆ ಹೇಳುತ್ತಿರುವ ಉಸ್ತಾದರನ್ನು ನೋಡುತ್ತ ವಿಸ್ಮಯಗೊಂಡಿದ್ದಾನೆ! ಅರೆ... ಈ ‘ಲಯ್ ಕಾ ಮಕಾಮ್...’ ‘ಲಯದ ವ್ಯಾಪ್ತಿ’ಯೊಳಗೇ ಅದ್ಭುತ ಸ್ವರಲೋಕವೊಂದು ಸೃಷ್ಟಿಯಾಗಿದೆಯಲ್ಲ! ಆಲೋಚಿಸುತ್ತ ಗಕ್ಕನೆ ನಿಂತ ರಾಮನನ್ನು ಉಸ್ತಾದರು ಮತ್ತೆ ಹೊರಡಿಸುತ್ತಾರೆ.

‘ಲಂಕಾ ಚಢೋ ರಾಮ...’ ಅವರು ಬೆರಳಾಡಿಸುತ್ತ ಸ್ವರಗಳನ್ನು ಚಿತ್ರಿಸುತ್ತಿರುವ ಬಗೆಯಲ್ಲಿಯೇ ರಾಮನಿಗೆ ಲಂಕೆಯ ದಾರಿಯೂ ನಿಚ್ಚಳವಾದಂತಿದೆ.

‘ಇದು ಖಯಾಲ್ ಅಂಗ್...’ ಉಸ್ತಾದರು ಹಾಡುತ್ತಲೇ ನಡುವೆ ಹೇಳುತ್ತಾರೆ.

ರಾಮನೀಗ ಖಯಾಲ್ ಗುಂಗಿನಲ್ಲಿ ಸಾಗುತ್ತಿದ್ದಾನೆ.

ಉಸ್ತಾದರು ತಮ್ಮ ಮಕ್ಕಳ ಜೊತೆಗೂಡಿ ‘ಜಸರಥ ರಾಜಾ ಕೋ ಪುತ್ರ ದಿಯೋ ರಥರಾಮ್...‌’ ಎಂದು ಹಾಡುತ್ತಿದ್ದರೆ ಆಲಿಸುತ್ತ ಸಾಗುತ್ತಿದ್ದ ರಾಮನೂ ಅರೆಕ್ಷಣ ತಂದೆಯ ನೆನಪಿನಲ್ಲಿ ಹನಿಗಣ್ಣಾಗುತ್ತಿದ್ದಾನೆ. ಕಣ್ಣು ಮಂಜಾಗಿ ದಾರಿ ಕಾಣುತ್ತಿಲ್ಲ, ಹೆಜ್ಜೆಗಳು ತಡವರಿಸುತ್ತಿವೆ. ಉಸ್ತಾದರು ಚಪ್ಪಾಳೆ ಹೊಡೆದು ವೀರದನಿಯಲ್ಲಿ, ಏರುಗತಿಯಲ್ಲಿ ಮುಂದಿನ ಚರಣ ಹಾಡುತ್ತಾರೆ...

‘ಧೂಮ್ ಮಚೀ ಜಗ್ ಮೇಂ ಬಾಜ್ ಗಯೋ ಢಂಕಾ...’ ರಾಮನಿಗೆ ಮತ್ತೆ ಮುಂದಿನ ದಾರಿ ಸ್ಫಟಿಕದಷ್ಟು ಸ್ಪಷ್ಟ. ಬಡೇ ಮತ್ತು ಛೋಟೆ ಉಸ್ತಾದರು ವೀರರಸಭರಿತ ಅಢಾಣ ರಾಗದಲ್ಲಿ ಸಾದ್ರಾ ಹಾಡುತ್ತ ರಾಮನನ್ನು ಹುರಿದುಂಬಿಸಿ ಯುದ್ಧಕ್ಕೆ ಸನ್ನದ್ಧಗೊಳಿಸುತ್ತಿದ್ದಾರೆ.

ಉಸ್ತಾದರ ಸ್ವರಗಳ ಬೆರಳು ಹಿಡಿದು ಲಂಕೆಗೆ ಜಿಗಿದ ಈ ರಾಮ... ಇವನು ಜನಮಾನಸದ ರಾಮ... ನಮ್ಮೆಲ್ಲರ ಬಾಯಲ್ಲಿ ದಿನಕ್ಕೆ ಹತ್ತಾರು ಸಲ ‘ಅಯ್ಯೋ ರಾಮ’ ಎಂಬ ಉದ್ಗಾರದಲ್ಲಿ ಹೊರಹೊಮ್ಮುವ ಸಂಕಟಹರ ರಾಮನಿವ. ಈ ರಾಮ ಅಯೋಧ್ಯೆಯಲ್ಲಿ ತುಂಡು ಜಾಗಕ್ಕಾಗಿ ಜಗಳ ಮಾಡುವವನೇ. ಮಂದಿರ-ಮಸೀದಿಯ ಸಿಕ್ಕಿನಲ್ಲಿ ಸಿಕ್ಕಿಬೀಳುವವನೇ. ಇಲ್ಲ, ಇವನು ನಿರಾಕಾರ. ಕಲಾವಿದರ ಕೊರಳಿನಲ್ಲಿ, ಬೆರಳಿನಲ್ಲಿ ಆಕಾರಗೊಳ್ಳುವ ಸ್ವರಾಕಾರ ರಾಮ!

ಈಗಿನ ಕಾಲಘಟ್ಟದಲ್ಲಿದ್ದೂ ‘ಉಸ್ ಜಮಾನೇ ಮೇಂ’ ಎಂದು ನೆನಪಿಸಿಕೊಂಡು, ಅದೇ ಉಮೇದಿಯಲ್ಲಿ ರಾಗಮಹಲ್ ಕಟ್ಟಬಲ್ಲ ಉಸ್ತಾದ್ ನಸೀರುದ್ದೀನ್ ಸಾಮಿ ಪಾಕಿಸ್ತಾನದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರು. 49 ಮೈಕ್ರೋಶ್ರುತಿಗಳನ್ನು ತಮ್ಮ ಕೊರಳಿನಲ್ಲಿ ಜತನವಾಗಿರಿಸಿಕೊಂಡಿರುವ, ನಮ್ಮ ನಡುವೆ ಇರುವ ಏಕೈಕ ಗಾಯಕರು. ‘ಲಂಕಾ ಚಢೋ ರಾಮ’ ಕೇಳಿದಾಗಿನಿಂದ ಹೇಗಾದರೂ ಸಂದರ್ಶಿಸಲೇಬೇಕೆಂದು ಪ್ರಯತ್ನಿಸಿದೆ. ಸದ್ಯ ಈಗಿನ ತಂತ್ರಜ್ಞಾನಗಳು ಗಡಿಬೇಲಿಯ ಹಂಗಿಲ್ಲದೆ ಹೃದಯಗಳನ್ನು ಹತ್ತಿರ ತರುತ್ತವೆ!

‘ನಾನು ನಿಮ್ಮೂರಿಗೂ ಬಂದಿದ್ದೆ, ಹತ್ತುಹನ್ನೆರಡು ದಿನವಿದ್ದೆ. ಬೆಂಗಲೂರ್‍ ಕೆ ಲೋಗ್ ಬಹುತ್ ನರಮ್ ಹೈ (ಬೆಂಗಳೂರಿನ ಜನರು ತುಂಬ ಮೃದು). 1984ರಿಂದ ಭಾರತಕ್ಕೆ ಆಗೀಗ ಬಂದಿದ್ದೇವೆ. ಈಗ ನಾಕೈದು ವರ್ಷದಿಂದ ಬಂದಿಲ್ಲ ಅಷ್ಟೆ’ ಎಂದು ನಸುನಗುತ್ತ ಮಾತು ಆರಂಭಿಸಿದರು.

ನಸೀರುದ್ದೀನ್ ಸಾಮಿಯವರು ಹುಟ್ಟಿದ್ದು ದಿಲ್ಲಿಯಲ್ಲಿ, 1946ರ ಜನವರಿ ಒಂದರಂದು. ಸಂಗೀತಗಾರರ ಮನೆತನ. ಹಲವಾರು ತಲೆಮಾರುಗಳಿಂದ ಸಾಗಿಬಂದ ಸಂಗೀತ ಜ್ಞಾನ. ಖವ್ವಾಲಿಯ ಮೂಲಪುರುಷನೆಂದೇ ಹೆಸರಾದ ಹಜರತ್ ಅಮೀರ್ ಖುಸ್ರೋ ಹನ್ನೆರಡು ಶಿಷ್ಯರನ್ನು ತಯಾರು ಮಾಡಿದರು. ಅವರ ಪ್ರಧಾನ ಶಿಷ್ಯರಲ್ಲಿ ಒಬ್ಬರಾದ ಮಿಯಾ ಸಾಮತ್ ಬಿನ್ ಇಬ್ರಾಹಿಂರ ವಂಶಸ್ಥರು ನಸೀರುದ್ದೀನ್ ಸಾಮಿ.

ಎಳವೆಯಿಂದಲೇ ಸಂಗೀತ ಪಾಠ ಶುರುವಾಯಿತು. 1956ರ ಹೊತ್ತಿಗೆ ಮನೆಯ ಒಳಹೊರಗಿನ ಪರಿಸ್ಥಿತಿ ಅನುಕೂಲಕರವಿರಲಿಲ್ಲ, ಹೀಗಾಗಿ ಕರಾಚಿಗೆ ವಲಸೆ ಹೋದರು.

-‘ಲಂಕಾ ಚಢೋ ರಾಮ.. ಲಂಕಾ ಚಢೋ...’ ನಸೀರುದ್ದೀನ್‌ ಸಾಮಿ ಅವರ ಸಂಗೀತಸುಧೆ
-‘ಲಂಕಾ ಚಢೋ ರಾಮ.. ಲಂಕಾ ಚಢೋ...’ ನಸೀರುದ್ದೀನ್‌ ಸಾಮಿ ಅವರ ಸಂಗೀತಸುಧೆ

‘ನಮ್ಮ ಮನೆ ದಿಲ್ಲಿಯ ಚಾಂದನಿ ಮಹಲ್‍ನಲ್ಲಿತ್ತು. ಇವತ್ತೂ ಚಾಂದನಿ ಮಹಲ್ ರಸ್ತೆ ಅಂತಲೇ ಕರೀತಾರೆ. ಆಗ ನಿಜಾಮುದ್ದೀನ್ ದರ್ಗಾಕ್ಕೆ ಹೆಚ್ಚಾಗಿ ಹೋಗುತ್ತಿದ್ದೆವು. ಕಾಲಕಳೆದಂತೆ ಎಲ್ಲವೂ ಬದಲಾಗುತ್ತವೆ, ನಾವು ಇಲ್ಲಿಗೆ ಬಂದೆವು’ ಎನ್ನುತ್ತ ನೆನಪುಗಳ ಕೌದಿಯನ್ನು ಎದೆಗವಚಿಕೊಂಡಂತೆ ಸಾಮಿಯವರು ನುಡಿದರು.

‘ನಾನು ಹನ್ನೊಂದು ವರ್ಷದವನಿದ್ದಾಗ ಕಠಿಣವಾದ ತಾಲೀಮ್ ಶುರುವಾಯಿತು. ನನ್ನ ಚಾಚಾ ಮುನ್ಷಿ ರಜಿಯುದ್ದೀನ್ ಅಹ್ಮದ್ ಖಾನ್ ಮಹಾನ್ ಸಂಗೀತಗಾರ, ಅವರೇ ನಮ್ಮ ಉಸ್ತಾದ್. ಅದು ಸಾಧಾರಣ ತಾಲೀಮ್ ಅಲ್ಲ. ಗುರುಗಳು ಮೊದಲೇ ಹೇಳಿದ್ದರು, ‘ಸವಾಲ್ ಮತ್ ಕರ್‍ನಾ... ಏನೂ ಪ್ರಶ್ನಿಸಬೇಡ. ಕೊಟ್ಟಿದ್ದನ್ನು ತೆಗೆದುಕೊಳ್ಳತಾ ಹೋಗು’ ಅಂತ. ಆರು ತಿಂಗಳವರೆಗೆ ಬರೀ ‘ಸ’ ಸ್ವರ ಹಿಡಿಯುವುದು, ಬರೀ ‘ಸ’; ರಿಗಮಪ ಎಲ್ಲ ಏನೂ ಇಲ್ಲ. ಗಂಟಲು ಒಣಗಿಹೋಗ್ತಿತ್ತು. ಆರು ತಿಂಗಳಿನ ನಂತರ ಒಂದೊಂದು ವಾರ ಒಂದೊಂದು ಸ್ವರ. ಒಂದು ವಾರ ‘ರಿ’, ಒಂದು ವಾರ ‘ಗ’ ಹೀಗೆ ಒಂದೊಂದು ಸ್ವರ ಹಿಡಿಯುವುದು; ಮತ್ತೆ ಮರಳಿ ಸ... ಅಂದರೆ ಮೊದಲು ಆವಾಜ್‍ ಕೀ ತಾಲೀಮ್’ ಸಾಮಿಯವರು ವಿವರಿಸುತ್ತ ಹೋದರು. ಬಹುಶಃ ಈಗ ಇಂಥದೊಂದು ಸುದೀರ್ಘ, ಕಠಿಣವಾದ ತಾಲೀಮನ್ನು ಊಹಿಸುವುದೂ ಕಷ್ಟ.

‘ಲಂಕಾ ಚಢೋ ರಾಮ’ ಸಾದ್ರಾದ ಹಿನ್ನೆಲೆಯ ಬಗ್ಗೆ ನನಗೆ ತುಂಬ ಕುತೂಹಲವಿತ್ತು. ನಾನು ಸಾಮಿಯವರ ಬೆನ್ಹತ್ತಿ ಹೋಗಿದ್ದರ ಮುಖ್ಯ ಕಾರಣವೇ ಇದು. ಸಾಮಿಯವರು ವಿವರಿಸಿದರು.

‘ಉಸ್ತಾದ್ ತಾನರಸ್‌ ಖಾನರ ಕಿರಿಯ ಮಗ ಉಮ್ರಾವ್‍ಖಾನ್ ಒಮ್ಮೆ ಕಲ್ಕತ್ತೆಗೆ ಕಛೇರಿ ಕೊಡಲು ಹೋಗಿದ್ದರು. ರಾವಣ ಮತ್ತು ರಾಮನ ಯುದ್ಧ ಆಯಿತಲ್ಲ? ಆ ಕಥೆಯೇನೋ ಬಹಳ ದೊಡ್ಡದು. ಆದರೆ ಇವರು ಚಿಕ್ಕ ಸಂಗತಿಯಲ್ಲಿ ಅದೆಲ್ಲವನ್ನೂ ಅಡಕಗೊಳಿಸಿದರು. ಹಿಂದೂಸ್ತಾನದಲ್ಲಿ ಒಂದು ದಿನ ಆಚರಿಸ್ತಾರೆ ನೋಡಿ... ನಿಮಗೆ ನೆನಪಿರಬಹುದು’ ಎಂದು ನನ್ನನ್ನೇ ಕೇಳಿದರು. ‘ಬಂಗಾಳದಲ್ಲಿ ದುರ್ಗಾಷ್ಟಮಿ ಸಮಯದಲ್ಲಿ ರಾವಣದಹನ ಮಾಡುತ್ತಾರಲ್ಲಾ, ಅದಾ?’ ಎಂದು ಅನುಮಾನಿಸುತ್ತಲೇ ಕೇಳಿದೆ. ಅವರ ಮಗ ಜೋರಾಗಿ ‘ದುರ್ಗಾಷ್ಟಮಿ... ಹ್ಞಾಂ’ ಎಂದರು. ‘ವೊಹೀ.. ಆಗ್ ಲಗಾತೆ ಹೈನಾ’ ಎನ್ನುತ್ತ ಮಾತು ಮುಂದುವರಿಸಿದರು. ‘ಆ ದಿನ ಅಲ್ಲಿ ಅದರ ಆಚರಣೆ... ಉಮ್ರಾವ್‍ಖಾನ್ ಸಾಹೇಬ್ ಈ ಸಾದ್ರಾ ರಚಿಸಿ, ಅಢಾಣ ರಾಗದಲ್ಲಿ ಹೆಣೆದು, ಅಲ್ಲಿಯೇ ಹಾಡಿದರು. ನಾನಿದನ್ನು 1960-61ರಲ್ಲಿ ಕಲಿತೆ. ಆಗಿನಿಂದ ಹಾಡ್ತಾನೆ ಇದ್ದೀನಿ’.

ತಮ್ಮ ಖಯಾಲ್ ಗಾಯನದ ಮೂಲಕ ಧ್ಯಾನಸ್ಥ ಗಂಧರ್ವಲೋಕಕ್ಕೆ ಕರೆದೊಯ್ಯುವ ಸಾಮಿಯವರು ‘ಶುದ್ ಬಾನಿ’ಯ ಪರಂಪರೆಯನ್ನು ಜತನವಾಗಿ ಕಾಯ್ದಿಟ್ಟುಕೊಂಡಿದ್ದಾರೆ. ಸಂಗೀತದ ಕುರಿತಾಗಿ ಆಳವಾಗಿ ಅಧ್ಯಯನ ಮಾಡಿರುವ, ಅಪಾರ ಜ್ಞಾನವಿರುವ ವಿದ್ವಾಂಸರೂ ಹೌದು. ಸಂಗೀತ ಕ್ಷೇತ್ರಕ್ಕೆ ಅವರ ಅನುಪಮ ಕೊಡುಗೆಗಾಗಿ ‘ತಮ್ಗಾ-ಎ-ಇಮ್ತಿಯಾಜ್’ ಹಾಗೂ ‘ಪ್ರೈಡ್ ಆಫ್ ಪರ್ಫಾರ್ಮೆನ್ಸ್‌’ ಪ್ರಶಸ್ತಿಗಳನ್ನು ನೀಡಿ ಪಾಕಿಸ್ತಾನ ಸರ್ಕಾರವು ಅವರನ್ನು ಗೌರವಿಸಿದೆ.

ಉಸ್ತಾದ್ ಸಾಮಿಯವರು ಪ್ರಸಿದ್ಧವಾದ ‘ಖವ್ವಾಲ್ ಬಚ್ಚೋಂ ಕಾ’ ಘರಾನದವರು, ತಮ್ಮದು ‘ಶುದ್ ಬಾನಿ’ ಎಂದು ಅಭಿಮಾನದಿಂದ ಹೇಳುತ್ತಾರೆ. ಇದನ್ನು ದಿಲ್ಲಿ ಘರಾಣೆ ಎಂದೂ ಕರೆಯುತ್ತಾರೆ. ಇವರ ನಾಲ್ವರು ಗಂಡುಮಕ್ಕಳ ‘ಸಾಮಿ ಬ್ರದರ್ಸ್’ ತಂಡವು ಏಳು ದಶಕಗಳಿಂದ ಸಾಗಿಬಂದ ಪರಂಪರಾಗತ ಶೈಲಿಗೆ ಧಕ್ಕೆ ಬಾರದಂತೆ ಖವ್ವಾಲಿಯನ್ನು ದೇಶವಿದೇಶಗಳಲ್ಲಿ ಪ್ರಸ್ತುತಪಡಿಸುತ್ತ ಹೆಸರಾಗಿದೆ.

-ನಮ್ಮ ಕೆಲಸ ಶಾಂತಿಯನ್ನು ಹರಡೋದು... ಈ ಶಾಂತಿ ಅನ್ನೋದು ಸ್ವರಗಳಲ್ಲಿರುತ್ತೆ
-ನಮ್ಮ ಕೆಲಸ ಶಾಂತಿಯನ್ನು ಹರಡೋದು... ಈ ಶಾಂತಿ ಅನ್ನೋದು ಸ್ವರಗಳಲ್ಲಿರುತ್ತೆ

ಸ್ವಿಸ್ ನಿರ್ದೇಶಕ ಆನೆಟ್ ಬರ್ಗರ್ ಸಾಕ್ಷ್ಯಚಿತ್ರ ‘ಕ್ಲೋಸರ್ ಟು ಗಾಡ್’ ಉಸ್ತಾದ್ ಸಾಮಿಯವರ ಸಂಗೀತ ಪಯಣದೊಂದಿಗೆ ಬರಿಗಾಲ ದರ್ವೆಶೀ ಸಂತ ಗೋಘಾ ಸೈನ್‌ರ ಆಧ್ಯಾತ್ಮಿಕ ಪಯಣವನ್ನು ಕಟ್ಟಿಕೊಡುತ್ತದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ಮಾಪಕ ಇಯಾನ್ ಬ್ರೆನ್ನನ್ ಅವರು ಉಸ್ತಾದ್ ಸಾಮಿಯವರ ಎರಡು ಸಂಗೀತ ಆಲ್ಬಮ್ ಹೊರತಂದಿದ್ದಾರೆ, ‘ಗಾಡ್ ಈಸ್ ನಾಟ್ ಎ ಟೆರರಿಸ್ಟ್’ ಮತ್ತು ‘ಪಾಕಿಸ್ತಾನ್ ಈಸ್ ಫಾರ್ ದಿ ಪೀಸ್‍ಫುಲ್’. ಹೆಸರುಗಳೇ ಒಳಗಿನ ಹೂರಣದ ಆಶಯವನ್ನು ಸೂಚಿಸುವಂತಿವೆ. ಸಾಕ್ಷ್ಯಚಿತ್ರ ಮತ್ತು ಆಲ್ಬಮ್, ಇವೆರಡೂ ಉಸ್ತಾದ್ ಸಾಮಿಯವರ ಸಂಗೀತದ ಕಂಪನ್ನು ವಿದೇಶಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಪಸರಿಸಿವೆ.

‘ನಮ್ಮ ಕೆಲಸ ಶಾಂತಿಯನ್ನು ಹರಡೋದು. ಶಾಂತಿ ಎಲ್ಲಿರುತ್ತೆ? ಈ ಸ್ವರಗಳಲ್ಲಿರುತ್ತೆ. ಗಲಾಟೆಗಳಾಗುತ್ತಿರುತ್ತವೆ, ಲೇಕಿನ್ ಹಮ್ ಅಮನ್ ಕೀ ಬಾತ್ ಕರೇಂಗೆ. ಇದೆಲ್ಲ ಸರಿಹೋಗುತ್ತೆ, ನಾವು ಮತ್ತೆ ಹಿಂದೂಸ್ತಾನಕ್ಕೆ ಕಛೇರಿ ಕೊಡೋದಕ್ಕೆ ಬರ್ತೀವಿ’ ಎನ್ನುತ್ತ ನನ್ನೊಳಗೊಂದು ಆಶಯದ ಕಿಡಿಯನಿಟ್ಟು ಸಾಮಿಯವರು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT