ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯ ಆಸ್ವಾದಕ್ಕೊಂದು ವೆಬ್ ಸರಣಿ

Last Updated 6 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಲಯ ಅಂದರೆ ಕಾಲ. ನಮ್ಮ ಹೃದಯದ ಬಡಿತಕ್ಕೂ ಒಂದು ಲಯವಿದೆ. ಕಾರಣ, ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಕಾಲಮಾಪನ. ಅದಕ್ಕೂ ನಾವು ಕೇಳುವ ಸಂಗೀತಕ್ಕೂ ಸಂಬಂಧವಿದೆ. ಇಂಥ ಲಯದ ಬಗ್ಗೆ ಪ್ರಖಾಂಡವಾಗಿ ಕೆಲಸ ಮಾಡಿರುವ ವಿದ್ವಾನ್ ಖಂಜರ ಗುರುಪ್ರಸನ್ನ ಲಯಗಳ ನಾನಾ ಸ್ವರೂಪಗಳನ್ನು ತೆರೆದಿಡುವ 21 ವಿಡಿಯೊಗಳನ್ನು ಮಾಡಿ, ಯೂಟ್ಯೂಬ್ ಅಪ್ ಲೋಡ್ ಮಾಡಿದ್ದಾರೆ.

ಲಯ ಅಂದರೆ ಕಾಲ; ಸಮಯ. ಪ್ರತಿ ಮನುಷ್ಯನ ದೇಹದೊಳಗೂ ಅಂತರ್ಗತವಾದ ಕಾಲಮಾಪನವಿರುತ್ತದೆ. ಇದೂ ಲಯವೇ. ಹಗಲು-ಇರುಳಿನ ಬದಲಾವಣೆಯನ್ನು ಆಧರಿಸಿರುತ್ತದೆ. ನಮ್ಮ ದೈನಿಕ ಕಾಲಚಕ್ರಕ್ಕೂ, ಸೂರ್ಯಸ್ತ, ಸೂರ್ಯೋದಯದಂತಹ ಪ್ರಾಕೃತಿಕ ಚಲನೆಗೂ ನಂಟಿದೆ. ನಮ್ಮ ಹೃದಯ ಬಡಿತಕ್ಕೂ ಲಯವಿದೆ.

ಸಂಗೀತದಲ್ಲಿ ಕಾಲ ಅನ್ನುವುದೇಒಂದು ಜಗತ್ತು. ಸಾಮಾನ್ಯವಾಗಿ ಗಾಯಕರು ಹಾಡುತ್ತಾ ತೊಡೆಯ ಮೇಲೆ ಹಾಕುವ ತಾಳವೇ ಲಯ ಅಂದುಕೊಂಡವರಿದ್ದಾರೆ.

ತಪ್ಪು ತಪ್ಪು.

ತಾಳ ಲಯವಲ್ಲ. ಆದರೆ, ಲಯದ ತಕ್ಕಡಿ ತಾಳ. ಲಯವನ್ನು ತೋರಿಸುವ ಉಪಕರಣ ತಾಳ. ಹಾಗಾದರೆ ಕಾಲ, ಲಯ ಎಂದರೇನು ಅಂತೀರಾ... ಸಂಗೀತದಲ್ಲಿ ಲಯ ಅನ್ನುವುದು ಅನುಭೂತಿ; ಅಮೂರ್ತ; ಕಣ್ಣಿಗೆ ಕಾಣುವುದಿಲ್ಲ. ಹಾಗಾಗಿ, ಕಾಲವು ನಾವೇ ದಕ್ಕಿಸಿಕೊಳ್ಳಬೇಕಾದ ಅನುಭವ. ಕಾಲಾಯ ತಸ್ಮೈ ನಮಃ- ಎಂದುಕೊಂಡು ಕಾಲಮಂಟಪವನ್ನು ಹೊಕ್ಕಾಗ ಮಾತ್ರ ಲಯದ ಮಹಿಮೆಯನ್ನೂ, ಅದು ನಮಗೆ ನೀಡುವ ರಸಸ್ವಾದವನ್ನೂ ಅನುಭವಿಸಬಹುದು.

ಸಂಗೀತ ಸುಖದಲ್ಲಿ ಪರಾಕಾಷ್ಠೆ ತಲುಪಲು ನಮ್ಮ ದೇಹದೊಳಗಿನ ಅಂತರ್ಗತ ಲಯ, ಸಂಗೀತದ ಲಯ ಎರಡೂ ಕೈಕುಲುಕಿದಾಗ ಮಾತ್ರ ‘ವಾಹ್’ ಎನ್ನುವ ಪದ ಹೊರಬೀಳುವುದು. ಲಯ ಅಥವಾ ಕಾಲವನ್ನು ಅರ್ಥೈಸಿಕೊಂಡಾಗ ಸಂಗೀತದ ಆಸ್ವಾದನೆಯ ರೀತಿಯೂ ಬದಲಾಗುತ್ತದೆ. ಆಸ್ವಾದನೆ ಹೆಚ್ಚಾದಂತೆ ನಮ್ಮ ಮೆದುಳಿನಲ್ಲಿ ಡೋಪಮಿನ್, ಸೆರೋಟೋನಿನ್‌ನಂಥ ಹಾರ್ಮೋನ್‌ಗಳು ಉತ್ಪಾದನೆಯಾಗುತ್ತವೆ. ನಮ್ಮಲ್ಲಿ ಪಾಸಿಟಿವ್ ಮೂಡ್ ಸೃಷ್ಟಿಯಾಗುವುದು ಈ ಹಾರ್ಮೋನ್‌ಗಳಿಂದ.

ಶ್ರುತಿರ್ಮಾತಾ ಲಯ ಪಿತಃ

ಸಂಗೀತದಲ್ಲಿ ಶ್ರುತಿ ತಾಯಿಯಾದರೆ, ಲಯ ತಂದೆಯಂತೆ. ಈ ತಂದೆಯ ಬಗ್ಗೆ ಸಂಶೋಧನೆಗೆ ಇಳಿದು ಅಪರೂಪದ ದಾಖಲೆ ನಿರ್ಮಿಸಿದ್ದಾರೆ ಕರ್ನಾಟಕದ, ಬೆಂಗಳೂರಿನ ವಿದ್ವಾನ್ ಖಂಜರ ಗುರುಪ್ರಸನ್ನ.

ಸ್ವರ ಪ್ರಸ್ತಾರದಲ್ಲಿ ಲಯ ಹೇಗೆಲ್ಲಾ ಅಡಕವಾಗಿರುತ್ತದೆ, ಕಂಪೋಸಿಷನ್ ಅಂತ ನೋಡಿದಾಗ ಅದರ ಆದಿತಾಳದಲ್ಲಿ ಯಾವ ರೀತಿ ಲಯ ಇರುತ್ತದೆ, ತಾಳ ವೇಗ ಪಡೆದುಕೊಂಡಂತೆ ಲಯದ ಕಲರ್ ಹೇಗೆ ಬದಲಾಗುತ್ತದೆ, ಲಯ ವಿನ್ಯಾಸದ- ಚತುಷ್ರ, ಖಂಡ, ನಡೆಗಳಲ್ಲಿ ಲಯ ಹೇಗಿರುತ್ತದೆ, ಹೇಗೆಲ್ಲ ಬದಲಾಗುತ್ತದೆ, ಹೀಗೆ ಕರ್ನಾಟಕ ಸಂಗೀತದಲ್ಲಿ ಲಯ ಎಲ್ಲೆಲ್ಲಿ ಹರಿಯುತ್ತದೆಯೋ ಅದರ ಮಾರ್ಗವನ್ನು ಗುರುತಿಸುವ ಕೆಲಸವನ್ನು ಈ ಗುರುಪ್ರಸನ್ನ ಮಾಡಿದ್ದಾರೆ.

ಗುರುಪ್ರಸನ್ನ ಅವರು ಈ ಮಾರ್ಗವನ್ನು ಗುರುತಿಸಿ, ಕೇವಲ ತಾವು ಸಂತೋಷಪಟ್ಟು, ತಮ್ಮವರನ್ನು ಖುಷಿಪಡಿಸಲಿಲ್ಲ. ವಿದ್ವತ್ತನ್ನು ಜ್ಞಾನದ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಡಲಿಲ್ಲ. ಬದಲಿಗೆ ತಮ್ಮ ಕನಸಿನ ಕೂಸು ಸಮತ್ವ ಸಂಗೀತ ಸಂಸ್ಥೆಯ ಮೂಲಕ, ಕರ್ನಾಟಕ ಶಾಸ್ತ್ರೀಯ ಸಂಗೀತದ 40 ಮೇರು ಕಲಾವಿದರಿಗೆ, ಲಯದ ಒಂದೊಂದು ಆಯಾಮಗಳನ್ನು ನೀಡಿ, ಅವರ ಅಗಾಧ ಅನುಭವವನ್ನು 21 ಎಪಿಸೋಡ್‌ಗಳಲ್ಲಿ ರೆಕಾರ್ಡ್ ಮಾಡಿ, ಅವುಗಳನ್ನು ಫೇಸ್‌ಬುಕ್, ಯೂಟ್ಯೂಬ್ ಮೂಲಕ ಪ್ರಸಾರ ಮಾಡಿದ್ದಾರೆ.

ಜಗತ್ತಿನ ಸಾವಿರಾರು ಸಂಗೀತಗಾರರು, ಸಂಗೀತ ಪ್ರೇಮಿಗಳು ಈ ‘ರಿದಮ್ಮಿನ ಟೇಸ್ಟ್’ ಸವಿದಿದ್ದಾರೆ. ಆಸ್ಟ್ರೇಲಿಯಾ, ಯೂರೋಪ್, ಅಮೆರಿಕ ಮುಂತಾದ ಕಡೆಗಳಲ್ಲಿರುವ ಸಂಗೀತಗಾರರು, ಸಂಗೀತಾರ್ಥಿಗಳು ಗುರುಪ್ರಸನ್ನ ಅವರಿಗೆ ದೊಡ್ಡ ಚಪ್ಪಾಳೆ ಕೊಟ್ಟಿದ್ದಾರೆ. ‘ನಾವು ಸಂಗೀತ ಕೇಳುವುದಕ್ಕೂ, ಲಯ ಗೊತ್ತಿಲ್ಲದೇ ಇರುವವರು ಸಂಗೀತ ಕೇಳುವುದಕ್ಕೂ ಬಹಳ ವ್ಯತ್ಯಾಸ ಇದೆ. ಅದನ್ನು ತಿಳಿದುಕೊಂಡರೆ ಸಂಗೀತದ ಸ್ವಾದ ಜಾಸ್ತಿಯಾಗುತ್ತದೆ. ಇಂಥ ಜ್ಞಾನವನ್ನು ನಾವೇ ಇಟ್ಟುಕೊಂಡರೆ ಸರಿಯಲ್ಲ. ಇದು ಮುಂದಿನ ಪೀಳಿಗೆಗೂ ಮುಟ್ಟಬೇಕು ಅನ್ನುವುದು ನಮ್ಮ ಗುರಿ’ ಎನ್ನುತ್ತಾರೆ ಖಂಜರ ಗುರುಪ್ರಸನ್ನ.

ಆದರೆ, ಸಂಗೀತ ಮಾರಾಟದ ಸರಕಾಗಿರುವ ಈ ಕಾಲದಲ್ಲಿ ಇಂಥ ನಿಸ್ವಾರ್ಥ ಯೋಚನೆ ಮೊಳೆತದ್ದು ಹೇಗೆ ಅಂದಾಗ ಅವರು ಕೊಟ್ಟ ಉತ್ತರ ಹೀಗಿದೆ: ‘ನಾನು ಒಂದು ಸಲ ವಿದ್ವಾನ್ ಕಾರೈಕುಡಿ ಮಣಿ ಅವರ ಜೊತೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಅವರು ಲಯದ ಅಸ್ತಿತ್ವ, ಸ್ವರೂಪಗಳ ಬಗ್ಗೆ ಅದ್ಭುತವಾಗಿ ಚರ್ಚಿಸಿದರು. ಆನಂತರ, ಕಾರ್ಯಕ್ರಮದಲ್ಲಿ ಕಂಪೋಸಿಷನ್ ನುಡಿಸಿದೆ. ಆಗ ಲಯದ ಅಭೂತಪೂರ್ವ ಅನುಭವ ನನಗಾಯಿತು. ಇದು ನನಗಷ್ಟೇ ಸೀಮಿತವಾಗಬಾರದೆನ್ನುವ ಯೋಚನೆ ಬಂತು. ಲಾಕ್‌ಡೌನ್ ವೇಳೆ ಕಛೇರಿಗಳು ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಲಯದ ಆಲಯಕ್ಕೆ ಹೊಕ್ಕೆ. ಅದು ಈಗ ನಿಮ್ಮ ಮುಂದೆ ಇದೆ. ಲಯದ ಬಗ್ಗೆ ಅಧ್ಯಯನ ಮಾಡುವವರಿಗೆ ಇದು ದಾರಿದೀಪವಾಗಲಿದೆ ಅನ್ನೋದು ನನ್ನ ಹೆಮ್ಮೆ’ ಎನ್ನುತ್ತಾರೆ ಗುರು.

ಗುರುಪ್ರಸನ್ನ, ಆಗಸ್ಟ್ 13ರಂದು ಬೆಂಗಳೂರು ಎನ್. ಆರ್. ಕಾಲೊನಿಯ ಪತ್ತಿ ಸಭಾಂಗಣದಲ್ಲಿ ಲಯಸ್ವಾದ ಸಮಾರೋಪ ಇಟ್ಟುಕೊಂಡಿದ್ದಾರೆ. ದಿಗ್ಗಜರು ಪ್ರಸ್ತುತಪಡಿಸುವ ಲಯದ ನಾನಾ ಸ್ವರೂಪಗಳನ್ನು ಕಣ್ತುಂಬಿಕೊಳ್ಳಬಹುದು, ಕಿವಿ ತುಂಬಿಕೊಳ್ಳಬಹುದು. ಅವಿಸ್ಮರಣೀಯ ಘಳಿಗೆಗೆ ಸಂಗೀತಾಸಕ್ತರು ಸಾಕ್ಷಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT