ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳುಗಳನ್ನು ಹೆಕ್ಕಿ ಹೂವ ಹರಡಿದವರು

ಸಂಗೀತ ಲೋಕದಲ್ಲಿ ‘ಸ್ತ್ರೀ ಪ್ರವೇಶ’ದ ಹೊರಳು ನೋಟ
Last Updated 3 ಜುಲೈ 2021, 19:30 IST
ಅಕ್ಷರ ಗಾತ್ರ

ಹಿಂದೆ, ಪುರುಷ ಆಧಿಪತ್ಯದ ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ‘ಪ್ರವೇಶ’ ಅಷ್ಟು ಸುಲಭದ್ದೇನೂ ಆಗಿರಲಿಲ್ಲ. ಸಾಂಸಾರಿಕ ಜೀವನದಲ್ಲಿ ಹಲವು ಬಗೆಯ ಕಷ್ಟ-ನಷ್ಟಗಳನ್ನು ಅನುಭವಿಸಿದ ಸಾಧಕಿಯರಿಗೆ ವೇದಿಕೆಯೇರಿ ಹಾಡುವ ಅವಕಾಶವನ್ನು ನಿರಾಕರಿಸಲಾಗುತ್ತಿತ್ತು. ಅವಕಾಶದ ಹೆಸರಿನಲ್ಲಿ ಶೋಷಣೆ ನಡೆಸಿದ ಘಟನೆಗಳಿಗೂ ಲೆಕ್ಕವಿಲ್ಲ. ಇಂತಹ ಸವಾಲುಗಳನ್ನೆಲ್ಲ ಈ ಸಂಗೀತ ಸರಸ್ವತಿಯರು ಮೆಟ್ಟಿ ನಿಂತಿದ್ದಾದರೂ ಹೇಗೆ?

ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಬೆರಗನ್ನು ಮೂಡಿಸುವಷ್ಟು ದೊಡ್ಡ ಸಂಖ್ಯೆಯಲ್ಲಿ ಎದ್ದುಕಾಣುವ ಪ್ರತಿಭಾವಂತ ಗಾಯಕಿಯರ ಬಳಗವನ್ನು ನೋಡಿದಾಗಲೆಲ್ಲ ಅದರ ಹಿಂದಿನ ಹೋರಾಟ-ಹುಡುಕಾಟ ನಮ್ಮನ್ನು ಕಾಡುತ್ತದೆ. ಪುರುಷ ಪ್ರಧಾನವಾಗಿದ್ದ ಶಾಸ್ತ್ರೀಯ ಸಂಗೀತ ಲೋಕದೊಳಗೆ ಪ್ರವೇಶಿಸಿದ ಗಾಯಕಿಯರ ದಾರಿ ಕಲ್ಲು-ಮುಳ್ಳುಗಳಿಂದ ಕೂಡಿದ್ದಾಗಿತ್ತು. ಹಲವು ಬಗೆಯ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಒತ್ತಡಗಳನ್ನು ಎದುರಿಸುತ್ತಾ-ಮೀರುತ್ತಾ ತಾವು ಸಾಗಿ, ಮುಂದಿನವರಿಗೆ ಸುಗಮವಾದ ದಾರಿಯನ್ನು ಆ ಗಾಯಕಿಯರು ಮಾಡಿಕೊಟ್ಟರು.

ಸಂಗೀತ ಕ್ಷೇತ್ರದಲ್ಲಿ ಮಹಿಳೆಯರ ‘ಪ್ರವೇಶ’ ಎಂಬುದು ಮಹತ್ವದ ಹೆಜ್ಜೆ ಎಂದೆನಿಸಿರುವುದಕ್ಕೆ ಹಲವಾರು ಕಾರಣಗಳಿವೆ. ಮೊದಲಿನಿಂದಲೂ ಸಮಾಜದಲ್ಲಿ ಗಾಯನ, ನೃತ್ಯ, ನಾಟಕ ಇವುಗಳಿಗೆ ಗೌರವದ ಸ್ಥಾನವಿರಲಿಲ್ಲ. ಇವುಗಳಲ್ಲಿ ಯಾವುದಾದರೊಂದರಲ್ಲಿ ತೊಡಗಿದರೆಂದರೆ ಅವರು ಹಾಳಾದಂತೆಯೇ ಎಂಬ ಭಾವನೆ ಆಳವಾಗಿತ್ತು. ಹೀಗೆ ಸ್ತ್ರೀಯರಿಗೆ ಇವುಗಳನ್ನು ಕಲಿಯುವ ಅವಕಾಶ ಇಲ್ಲದಿದ್ದ ಸಂದರ್ಭದಲ್ಲಿ ಅವರು ಸಂಗೀತ ಕ್ಷೇತ್ರವನ್ನು ಪ್ರವೇಶಿಸಲು ಬಹುತೇಕ ಸಾಧನಗಳಾಗಿದ್ದು
ದೇವದಾಸಿ, ತವಾಯಫ್‌ ಹಾಗೂ ರಂಗಭೂಮಿಯಂತಹ ಪರಂಪರೆಗಳು.

ಸಂಗೀತ, ನೃತ್ಯಗಳ ಆಗರವಾಗಿದ್ದ ಅಂತಹ ಕುಟುಂಬಗಳು ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿದ್ದವು. ದೇವಸ್ಥಾನಗಳಲ್ಲಿ ಹಾಗೂ ತಮ್ಮ ಆಶ್ರಯದಾತರ ಮುಂದೆ ಹಾಡುತ್ತಿದ್ದ ಇವರ ಬದುಕಿನ ಮೂಲದ್ರವ್ಯವೇ ಕಲೆಯಾಗಿತ್ತು. ಆಧುನಿಕ ಕಾಲದಲ್ಲಿ ಈ ಆಚರಣೆಗಳನ್ನು ಅವಮಾನಕರವೆಂದು ಭಾವಿಸಲಾಯಿತು. ಇದರಿಂದಾಗಿ ಆಶ್ರಯ, ಸಾಮಾಜಿಕ ಗೌರವ ಎರಡನ್ನೂ ಕಳೆದುಕೊಂಡ ಅವರು ನಂತರದಲ್ಲಿ ಶಾಸ್ತ್ರೀಯ ಸಂಗೀತ, ರಂಗಭೂಮಿ ಹೀಗೆ ಬದುಕಿನ ಹೊಸ ಮಗ್ಗುಲಿಗೆ ತೆರೆದುಕೊಂಡರು.

ಪ್ರಮುಖ ಸಂಶೋಧಕರಾದ ಡಾ.ರಹಮತ್ ತರೀಕೆರೆಯವರು ‘ಅಮೀರ್‍ಬಾಯಿ ಕರ್ನಾಟಕಿ’ ಕೃತಿಯಲ್ಲಿ ಬರೆದಿರುವಂತೆ, ಕೆಲವರು ನಾಟಕದಿಂದ ಮುಂದುವರಿದು ಆಧುನಿಕ ಭಾರತದಲ್ಲಿ ಆಗಷ್ಟೇ ಜನ್ಮ ಪಡೆಯುತ್ತಿದ್ದ ಸಿನಿಮಾ ಕ್ಷೇತ್ರವನ್ನು ಪ್ರವೇಶಿಸಲು ಮುಂಬೈ ಸೇರಿದರು. ಅದೇ ಸಂದರ್ಭದಲ್ಲಿ ಭಾರತದಲ್ಲಿ ಪರಿಚಿತವಾದ ‘ಗ್ರಾಮಾಫೋನ್’ ಗಾನಮುದ್ರಿಕೆಗಳು, ಕಡೆಗಣಿಸಲ್ಪಟ್ಟಿದ್ದ ಹಲವು ಧ್ವನಿಗಳನ್ನು ಹೊರಜಗತ್ತಿಗೆ ಪರಿಚಯಿಸಿದವು. ಮೊತ್ತಮೊದಲ ಗ್ರಾಮಾಫೋನ್ ಗಾಯಕಿ ಎನಿಸಿದ ಕೋಲ್ಕತ್ತದ ಗೋಹರ್‍ಜಾನಳ ಬಗ್ಗೆ ವಿಕ್ರಂ ಸಂಪತ್ ಅವರು ಬರೆದ ‘ಮೈ ನೇಮ್ ಈಸ್ ಗೋಹರ್‍ಜಾನ್’ ಎಂಬ ಕೃತಿ, ಆ ಗಾಯಕಿಯ ಬದುಕಿನ ಹಲವು ಒಳನೋಟಗಳನ್ನು ಒಳಗೊಂಡಿದೆ. ಸಂಗೀತ ಕ್ಷೇತ್ರದಲ್ಲಿ ಮಹಿಳೆಯೊಬ್ಬಳು ಮುಂದೆ ಬರುವುದು ಆ ಕಾಲದಲ್ಲಿ ಎಷ್ಟು ಕಷ್ಟವಿತ್ತು ಎನ್ನುವುದನ್ನು ಅರಿವಿಗೆ ತರುತ್ತದೆ.

ಕಷ್ಟದ ಹಾದಿಯನ್ನು ಸವೆಸಿ ಪ್ರಸಿದ್ಧಿಗೆ ಬಂದ ಗಾಯಕಿಯರಲ್ಲಿ ಜೋಹರಾಬಾಯಿ ಆಗ್ರೆವಾಲಿ, ಮಲಕಾ ಜಾನ್, ಗೋಹರ‍್ಜಾನ್‌, ಜಾನಕಿಬಾಯಿ, ಸಿನೆಮಾ ನಟಿ ನರ್ಗಿಸ್‍ಳ ತಾಯಿ ಜದ್ದನ್ ಬಾಯಿ, ಗಝಲ್ ಗಾಯನವನ್ನು ಬೇರೊಂದು ಸ್ತರಕ್ಕೆ ಕೊಂಡೊಯ್ದ ಬೇಗಂ ಅಖ್ತರ್, ಕರ್ನಾಟಕದ ಮಧುರಕಂಠದ ಗಾಯಕಿ ಅಮೀರ್‌ಬಾಯಿ ಕರ್ನಾಟಕಿ, ಅತ್ಯುತ್ತಮ ಠುಮ್ರಿ ಗಾಯಕಿ ರಸೂಲನ್ ಬಾಯಿ, ಮತ್ತೊಬ್ಬ ಠುಮ್ರಿ ಗಾಯಕಿ ಶೋಭಾ ಗುರ್ಟು ಅವರ ತಾಯಿ ಮೇನಕಾಬಾಯಿ ಶಿರೋಡ್‍ಕರ್ ಇವರೆಲ್ಲ ಪ್ರಮುಖರು. ಸಿನೆಮಾ ಸಂಗೀತ ಕ್ಷೇತ್ರದ ಧ್ರುವತಾರೆ ಎನಿಸಿದ ಲತಾ ಮಂಗೇಶ್ಕರ್ ಹಾಗೂ ಅವರ ಸಹೋದರಿ ಆಶಾ ಭೋಂಸ್ಲೆ ಅವರ ಹೆಸರುಗಳೂ ಉಲ್ಲೇಖನೀಯ. ಈ ಗಾಯಕಿಯರು ಈಗ ಬೆಳೆದಿರುವ ಎತ್ತರವನ್ನು ನೋಡಿ ಚಪ್ಪಾಳೆ ತಟ್ಟುವವರು, ಅವರು ಸವೆಸಿದ ಮುಳ್ಳಿನ ಹಾದಿಯನ್ನೂ ಒಮ್ಮೆ ನೆನಪಿಸಿಕೊಳ್ಳಬೇಕು. ‘ಸಾದಿರ್’ ಎಂದು ಹೆಸರಾಗಿದ್ದು ನಂತರದಲ್ಲಿ ಭರತನಾಟ್ಯವಾಗಿ ರೂಪುಗೊಂಡ ನೃತ್ಯ ಪ್ರಕಾರದ ನಿಪುಣೆಯಾದ ದಿಟ್ಟ ಮಹಿಳೆ ನಮ್ಮ ಬೆಂಗಳೂರು ನಾಗರತ್ನಮ್ಮ ಅವರದು ಸಹ ಹೋರಾಟದ ಬದುಕಿನ ನಡುವೆಯೇ ಹೆಮ್ಮೆಪಡುವಂತಹ ಸಾಧನೆ.

ಕೇಸರಬಾಯಿ ಕೇರಕರ್‌ ಸಂಗೀತ ಕಛೇರಿ... ಚಿತ್ರ: ಅನೀಶ್‌ ಪ್ರಧಾನ್‌ ಅವರ ‘ಹಿಂದೂಸ್ತಾನಿ ಮ್ಯೂಜಿಕ್‌ ಇನ್‌ ಕಲೊನಿಯಲ್‌ ಬಾಂಬೆ’ ಕೃತಿ
ಕೇಸರಬಾಯಿ ಕೇರಕರ್‌ ಸಂಗೀತ ಕಛೇರಿ... ಚಿತ್ರ: ಅನೀಶ್‌ ಪ್ರಧಾನ್‌ ಅವರ ‘ಹಿಂದೂಸ್ತಾನಿ ಮ್ಯೂಜಿಕ್‌ ಇನ್‌ ಕಲೊನಿಯಲ್‌ ಬಾಂಬೆ’ ಕೃತಿ

ಈ ಎಲ್ಲ ಹೋರಾಟಗಳ ಹಿನ್ನೆಲೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನು ಹೊಕ್ಕು ಸ್ತ್ರೀ ಸಂಗೀತಗಾರರ ಹೊಸ ಪರಂಪರೆಗೆ ನಾಂದಿ ಹಾಡಿದ ಆದ್ಯ ಸಂಗೀತಗಾರ್ತಿಯರಲ್ಲಿ ಪ್ರಮುಖರಾದ ಕೆಲವರನ್ನು ತುಸು ಸಮೀಪದಿಂದ ನೋಡಬಹುದಾಗಿದೆ.

ಬಾಲ್ಯದಿಂದಲೂ ಮುಳ್ಳಿನ ದಾರಿಯಲ್ಲೇ ನಡೆದುಬಂದು, ಗೌರವಯುತ ಜೀವನವನ್ನು ಹೋರಾಡಿ ಪಡೆದ ಮೋಗುಬಾಯಿ ಕುರ್ಡೀಕರ್ ಅವರು ಅಲ್ಲಾದಿಯಾ ಖಾನರ ಶಿಷ್ಯರು. ಸಂಗೀತಕ್ಕಾಗಿ ಮುಂಬೈಗೆ ಬಂದು ನೆಲೆಸಿ ‘ಗಾನ ತಪಸ್ವಿನಿ’ ಎಂಬ ಹೆಸರು ಪಡೆದ ಇವರು ಮುಂದೆ ಪ್ರತಿಭಾನ್ವಿತ ಗಾಯಕಿಯರ ಬಳಗವನ್ನೇ ತಯಾರು ಮಾಡಿದರು. ಕಿಶೋರಿ ಅಮೋನಕರ್, ಕಮಲ್ ತಾಂಬೆ, ಕೌಸಲ್ಯಾ ಮಂಜೇಶ್ವರ್, ಸುಶೀಲಾರಾಣಿ ಪಟೇಲ್, ಕುಮುದಿನಿ ಕಾಟದರೆ, ಸುಲಭಾ ಐಶವೀಕರ್, ಮಾಣಿಕ್ ಭಿಡೆ, ಪದ್ಮಾ ತಲ್ವಾಲಕರ್ ಇವರೆಲ್ಲರೂ ಮೋಗುಬಾಯಿಯವರ ಶಿಷ್ಯರು ಮತ್ತು ಸಂಗೀತ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದವರು. ಇವರ ಮಗಳಾದ ಕಿಶೋರಿ ಹಲವು ಬಾರಿ ‘ಎಲ್ಲವನ್ನೂ ಸರಿಯಾಗಿ ಪಡೆದುಕೊಂಡು ಹುಟ್ಟಿದ ನಿಮಗೆ ನಾವುಗಳು ಬದುಕಿಗಾಗಿ ಪಟ್ಟ ಕಷ್ಟದ ಅರಿವು ಎಲ್ಲಿ ಆಗುತ್ತದೆ’ ಎಂದು ಅಸಹನೆ ತೋರುತ್ತಿದ್ದರೆಂಬುದನ್ನು ಅವರ ಶಿಷ್ಯಂದಿರಿಂದ ಕೇಳಿದ್ದೇನೆ.

ಮೊತ್ತಮೊದಲ ಗ್ರಾಮಾಫೋನ್‌ ಗಾಯಕಿ ಗೋಹರ‍್ಜಾನ್‌ಕಲೆ: ಸುಜಾತಾ ಶೆಟ್ಟಿ
ಮೊತ್ತಮೊದಲ ಗ್ರಾಮಾಫೋನ್‌ ಗಾಯಕಿ ಗೋಹರ‍್ಜಾನ್‌
ಕಲೆ: ಸುಜಾತಾ ಶೆಟ್ಟಿ

ತಮ್ಮ ಛಲ ಹಾಗೂ ಆತ್ಮವಿಶ್ವಾಸದಿಂದ ಸಂಗೀತ ಲೋಕದಲ್ಲಿ ಬೇರೆಯಾಗಿ ನಿಂತವರು ಕೇಸರಬಾಯಿ ಕೇರಕರ್. ಗೋವಾದ ಸಣ್ಣ ಊರಲ್ಲಿದ್ದ ಕೇಸರಬಾಯಿ ಸಂಗೀತ ಕಲಿಕೆಗಾಗಿ ಗುರುಗಳನ್ನು ಪಡೆಯಲು ಮುಂಬೈಗೆ ಬಂದು ಬಹು ಪ್ರಯಾಸಪಟ್ಟು, ಹಲವು ಷರತ್ತುಗಳೊಂದಿಗೆ ಅಲ್ಲಾದಿಯಾ ಖಾನರನ್ನು ಗುರುವಾಗಿ ಪಡೆದವರು. ಕಠಿಣ ಅಭ್ಯಾಸ ನಡೆಸಿ ಜೈಪುರ್ ಘರಾಣೆಯ ತಾಲೀಮನ್ನು ಪಡೆದು, ಶಿಸ್ತುಬದ್ಧ ಗಾಯನ, ಸತ್ವಪೂರ್ಣ ಆಕಾರಯುಕ್ತ ಆವಾಜ್‌ನಿಂದ ಚಿರಸ್ಮರಣೀಯರಾಗಿ ಉಳಿದವರು. ಇವರ ಏಕಮಾತ್ರ ಶಿಷ್ಯೆ ಡೋಂಢೂತಾಯಿ ಕುಲಕರ್ಣಿ.

ಬೆಂಡಿಬಝಾರ್ ಘರಾಣೆಯ ನಝೀರ್ ಖಾನರ ಬಳಿ ಗಾಯನವನ್ನು ಕಲಿತ, ಅಪೂರ್ವ ಸೌಂದರ್ಯವತಿಯಾಗಿದ್ದ ಅಂಜನಿಬಾಯಿ ಮಾಲ್ಪೇಕರ್ ಅವರನ್ನು ರೂಪದರ್ಶಿಯಾಗಿಸಿಕೊಂಡು ರಾಜಾ ರವಿವರ್ಮ ‘ಲೇಡಿ ಇನ್ ಮೂನ್‍ಲೈಟ್’, ‘ಮೋಹಿನಿ’, ‘ದ ಹಾರ್ಟ್ ಬ್ರೋಕನ್’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಅವುಗಳು ಅಂತರ್ಜಾಲದಲ್ಲಿ ಲಭ್ಯವಿವೆ.

16 ವರ್ಷಕ್ಕೆ ಅತ್ಯದ್ಭುತವಾಗಿ ಹಾಡಿ ಕಾರ್ಯಕ್ರಮ ನೀಡುತ್ತಿದ್ದ ಅಂಜನಿಬಾಯಿ ತಮ್ಮ ಸೌಂದರ್ಯದ ಕಾರಣದಿಂದ ಶೋಷಿತರಾದವರು. ಪುರುಷ ಪ್ರಾಧಾನ್ಯವಿದ್ದ ಶ್ರೋತೃವರ್ಗದ ಮುಂದೆ ಕುಳಿತು ಹಾಡುವುದಕ್ಕೆ ಅವರು ಭಯಪಡುತ್ತಿದ್ದರು. 40 ವರ್ಷಕ್ಕೇ ಕಾರ್ಯಕ್ರಮ ಕೊಡುವುದನ್ನು ನಿಲ್ಲಿಸಿಬಿಟ್ಟರು ಎನ್ನುವುದು ಅವರ ಜೀವನ ಚಿತ್ರಣಗಳಲ್ಲಿ ದಾಖಲಾಗಿದೆ. ಪ್ರಖ್ಯಾತ ಸಂಗೀತಗಾರರಾದ ಕುಮಾರ ಗಂಧರ್ವ, ಕಿಶೋರಿ ಅಮೋನಕರ್ ಅವರೂ ಅಂಜನಿಬಾಯಿ ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ.

ಮೇಲೆ ಚರ್ಚಿಸಲಾದ ಗಾಯಕಿಯರಿಗಿಂತ ಹೊರತಾಗಿ ರಂಗಭೂಮಿಯಿಂದ ಶಾಸ್ತ್ರೀಯ ಸಂಗೀತದೊಳಗೆ ಪ್ರವೇಶಿಸಿ ಮಹಾರಾಷ್ಟ್ರದ ಭಾವಸಂಗೀತ ಪರಂಪರೆಗೆ ಹೊಸಭಾಷ್ಯ ಬರೆದವರು ಹೀರಾಬಾಯಿ ಬಡೋದೆಕರ್. ಮಹಾರಾಷ್ಟ್ರದಲ್ಲಿ ಸ್ತ್ರೀಯರು ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ, ನಾಟಕ ಕ್ಷೇತ್ರದಲ್ಲಿ ತೊಡಗಿರುವುದಕ್ಕೆ ಬಹುಮುಖ್ಯ ಕಾರಣ ಹೀರಾಬಾಯಿಯಿಂದ ಪಡೆದ ಪ್ರಚೋದನೆ-ಸ್ಫೂರ್ತಿ ಎನ್ನಲಾಗುತ್ತದೆ. ಸಾಂಸಾರಿಕ ಜೀವನದಲ್ಲಿ ಹಲವು ಬಗೆಯ ಕಷ್ಟ-ನಷ್ಟಗಳನ್ನು ಅನುಭವಿಸಿದ ಹೀರಾಬಾಯಿಯ ಜೀವನವಿಡೀ ಹೋರಾಟ. ಇವರ ಶಿಷ್ಯಂದಿರಲ್ಲಿ ಪ್ರಮುಖರಾದವರು ಡಾ.ಪ್ರಭಾ ಅತ್ರೆ.

ಗಂಗೂಬಾಯಿ ಹಾನಗಲ್‌
ಗಂಗೂಬಾಯಿ ಹಾನಗಲ್‌

ಕರ್ನಾಟಕದ ಮೊದಲ ಹಿಂದೂಸ್ತಾನಿ ಗಾಯಕಿಯೆನಿಸಿದ ಗಂಗೂಬಾಯಿ ಹಾನಗಲ್ ಅವರು ಜೀವನದುದ್ದಕ್ಕೂ ಅನುಭವಿಸಿದ ಕಷ್ಟ ಸಣ್ಣದೇನಲ್ಲ. ಸಂಗೀತದಿಂದ ಗಳಿಸಿದ ಆದಾಯದಿಂದ ಕುಟುಂಬ ಪೋಷಣೆ ಮಾಡಿದ ಸಾಹಸಿ ಮಹಿಳೆ ಅವರಾಗಿದ್ದರು. 16 ವರ್ಷದವರಿದ್ದಾಗ ವಕೀಲರಾದ ಗುರುರಾವ್ ಕೌಲಗಿ ಅವರನ್ನು ಗಂಗೂಬಾಯಿ ವಿವಾಹವಾಗಿದ್ದರು. ಸಂಗೀತ ಕಲಿಕೆಗಾಗಿ-ನಂತರ ಹಾಡುವ ಅವಕಾಶಕ್ಕಾಗಿ ಮಾತ್ರವಲ್ಲದೆ ಜೀವನಕ್ಕಾಗಿ ಹಾಗೂ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಪಡೆಯಲೂ ಗಂಗೂಬಾಯಿಯವರು ದೊಡ್ಡ ಹೋರಾಟವನ್ನೇ ನಡೆಸಬೇಕಾಯ್ತು.

ಆಗಿನ ಕಾಲದ ಸಮಾಜ ಸ್ತ್ರೀಯರು ಧೈರ್ಯದಿಂದ ಪುರುಷರಿಗೆ ಸಮಾನರಾಗಿ ವೇದಿಕೆಯೇರಿ ಹಾಡುವುದನ್ನು ಸ್ವಾಗತಿಸುವ ಮನಃಸ್ಥಿತಿಯದ್ದಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಷ್ಟೋ ಬಾರಿ ಸರಣಿ ಕಾರ್ಯಕ್ರಮಗಳಲ್ಲಿ ಯಾರಾದರೂ ಗಾಯಕಿಯರ ಹೆಸರು ಸೇರ್ಪಡೆಯಾಗಿದ್ದರೆ, ಆ ಸರಣಿಯಲ್ಲಿ ಹಾಡಲು ತಾನು ಬರಲಾರೆ ಎಂದು ಗಾಯಕರು ನಿರ್ದಾಕ್ಷಿಣ್ಯವಾಗಿ ಹೇಳಿದ ಉದಾಹರಣೆಗಳು ಸಿಗುತ್ತವೆ. ಹೆಂಗಸರಿಗೆ ಪಕ್ಕವಾದ್ಯ ನುಡಿಸಲು ಕಲಾವಿದರುಗಳು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ನುರಿತ ಕಲಾವಿದರು ಯಾರೂ ಸ್ತ್ರೀಯರಿಗೆ ಸಹವಾದನಕ್ಕೆ ದೊರಕುತ್ತಿರಲಿಲ್ಲ.

ಬುದ್ಧಿಪ್ರಧಾನವೆನಿಸಿದ ಕರ್ನಾಟಕಿ ಸಂಗೀತದಲ್ಲಿ ಸ್ತ್ರೀಯರಿಗೆ ಬರಿ ಕೀರ್ತನೆ, ದೇವರನಾಮ, ಜಾವಳಿಗಳು ಸಾಕು, ತಾಳದ ಲೆಕ್ಕಾಚಾರದಿಂದ ಕೂಡಿದ ಪಲ್ಲವಿ ಗಾಯನ, ಆಲಾಪನೆ-ಕಲ್ಪನಾ ಸ್ವರಗಳಿಂದ ಕೂಡಿದ ಮನೋಧರ್ಮದ ಸಂಗೀತಕ್ಕೆ ಸ್ತ್ರೀಯರು ಬರಕೂಡದು ಎನ್ನುವ ಅಘೋಷಿತ ಕಾನೂನು ಜಾರಿಯಿದ್ದ ಕಾಲವೊಂದಿತ್ತು. ಆ ಕಾಲದಲ್ಲೇ ಶ್ರೇಷ್ಠ ಗಾಯಕಿಯರಾದ ಎಂ.ಎಸ್. ಸುಬ್ಬುಲಕ್ಷ್ಮಿ, ಡಿ.ಕೆ.ಪಟ್ಟಮ್ಮಾಳ್ ಹಾಗೂ ಎಂ.ಎಲ್.ವಸಂತಕುಮಾರಿ ಅವರು ಮೊದಲ ಬಾರಿಗೆ ಸಂಗೀತದಲ್ಲಿನ ಪುರುಷ ನಿರ್ಮಿತ ಕೋಟೆಯನ್ನು ಪ್ರವೇಶಿಸಿ ಭಾವಯುಕ್ತ ಸಂಗೀತದೊಂದಿಗೆ ಬುದ್ಧಿಪ್ರಧಾನವಾದ ಸಂಗೀತ ಪ್ರಕಾರಗಳಲ್ಲೂ ಕೈಯಾಡಿಸಿದರು.

ಗಂಗೂಬಾಯಿ ಹಾನಗಲ್ ಅವರ ಜೀವನದಲ್ಲೂ ಇಂಥ ಕೆಲವು ಘಟನೆಗಳು ದಾಖಲಾಗಿವೆ. ಒಮ್ಮೆ ಗಯಾದಲ್ಲಿ ನಡೆದ ಸಂಗೀತ ಸಭಾದಲ್ಲಿ ಇವರನ್ನು ನೋಡಿ ಉಪೇಕ್ಷೆಯಿಂದ ಕೇವಲ 15 ನಿಮಿಷಗಳ ಕಾಲಾವಧಿ ನೀಡಿದಾಗ, ಅಷ್ಟು ದೂರದ ಕರ್ನಾಟಕದಿಂದ ಬಂದು ಈ ಪರಿಸ್ಥಿತಿಯೇ ಎಂದು ದುಃಖಪಟ್ಟು ನಂತರ ಅಷ್ಟೇ ಅವಕಾಶದಲ್ಲಿ ಅವರು ಹಾಡಿದ ಶುದ್ಧಕಲ್ಯಾಣ್ ಕೇಳಿ ಅಲ್ಲಿ ನೆರೆದಿದ್ದ ಬಡೆ ಗುಲಾಂ ಅಲಿ ಖಾನ್, ಬಿಸ್ಮಿಲ್ಲಾ ಖಾನ್, ಓಂಕಾರನಾಥ ಠಾಕೂರ್ ಮೊದಲಾದವರೆಲ್ಲಾ ಬೆರಗಾದರಂತೆ. ಇನ್ನೊಮ್ಮೆ 1938ರಲ್ಲಿ ಕೋಲ್ಕತ್ತದಲ್ಲಿ ನಡೆದ ಸಂಗೀತ ಸಮ್ಮೇಳನಕ್ಕೆ ಹೋದ ಗಂಗೂಬಾಯಿಯವರ ಸಂಗೀತದ ಬಗ್ಗೆ ಅನುಮಾನ ಪಟ್ಟು ಒಮ್ಮೆ ರಿಹರ್ಸಲ್ ತೆಗೆದುಕೊಳ್ಳೋಣ ಎಂದಿದ್ದರಂತೆ.

ಸ್ತ್ರೀಯರಿಗೆ ಮನೆಯಿಂದ ಹೊರಗೆ ಬಂದು, ಯೋಗ್ಯ ಗುರುವನ್ನು ಪಡೆದು ಸಂಗೀತದ ಕಲಿಕೆ, ಕಾರ್ಯಕ್ರಮಕ್ಕಾಗಿ ಪ್ರಯಾಣ, ಮನೆಯ ಜವಾಬ್ದಾರಿ, ಮಕ್ಕಳ ಪೋಷಣೆ, ತಮ್ಮ ಅಭ್ಯಾಸ ಇವುಗಳ ಜೊತೆಗೆ ಎಲ್ಲೂ ಶೋಷಣೆಗೆ ಒಳಗಾಗದಂತೆ ತಮ್ಮನ್ನು ಕಾಪಾಡಿಕೊಂಡು, ವೇದಿಕೆಯನ್ನು ಪಡೆದು ತಮ್ಮ ಶ್ರೋತೃ ವರ್ಗವನ್ನು ರೂಪಿಸಿಕೊಳ್ಳುವುದು, ತಮ್ಮ ಇರುವಿಕೆಯನ್ನು ಪ್ರಕಟಪಡಿಸಿಕೊಳ್ಳುವುದು ಇವೆಲ್ಲವೂ ಮಹತ್ವದ್ದೇ ಆಗಿರುತ್ತವೆ.

ಹಳೆಯ ಗಾಯಕಿಯರಲ್ಲಿ ತವಾಯಫ್‌ನಂತಹ ಹಿನ್ನೆಲೆ ಹೊಂದಿದವರಲ್ಲಿ ಹಲವರಿಗೆ ಹುಟ್ಟಿನೊಂದಿಗೆ ತಮಗೆ ಅಂಟಿದ ಗುರುತಿನ ಬಗ್ಗೆ (ಮಾರ್ಕಿಂಗ್) ಆಕ್ರೋಶವಿದ್ದು, ಅದನ್ನು ಮರೆಯಲೂ ಆಗದೆ ಅದೇ ಬೇಗೆಯೊಂದಿಗೆ ಮುನ್ನುಗ್ಗುವ ಸ್ವಭಾವ ಇದ್ದದ್ದು ಕಾಣಿಸುತ್ತದೆ. ಇನ್ನೊಂದೆಡೆ, ನೆನಪಿಸಿಕೊಳ್ಳಲೂ ಇಚ್ಛಿಸದ ತಮ್ಮ ಹಿಂದನ್ನು ಇನ್ನೂ ಹಿಂದಕ್ಕೆ ಸರಿಸುತ್ತಾ, ಹಲವು ಬಾರಿ ಮರೆಮಾಚುತ್ತಾ ತಮ್ಮ ರಿವಾಜು, ನಡೆನುಡಿಗಳನ್ನು ಪರಿಷ್ಕರಿಸಿಕೊಳ್ಳಲು ಹೆಣಗಾಡಿದ ಗಾಯಕಿಯರು ಕಾಣಿಸುತ್ತಾರೆ.

ಆಧುನಿಕ ಕಾಲದಲ್ಲಿ ಸಂಗೀತಕ್ಕೊಂದು ಶಿಸ್ತನ್ನು, ಅಕಾಡೆಮಿಕ್ ಚೌಕಟ್ಟನ್ನು ಕೊಡಲು ಹೊರಟ ವಿಷ್ಣು ದಿಗಂಬರ ಪಲುಸ್ಕರ್ ಹಾಗೂ ವಿಷ್ಣು ನಾರಾಯಣ ಭಾತಖಂಡೆ ಇವರುಗಳ ಮೂಲಕವೂ ಸಂಗೀತದ ಸ್ಥಾನಮಾನ ಬದಲಾಯಿತು. ಎಲ್ಲ ವರ್ಗಗಳ ಸ್ತ್ರೀಯರು ಸಂಗೀತ ಕಲಿಯುವಂತಾಗಲು ಅವರು ಸಂಗೀತ ಪಾಠಶಾಲೆಗಳನ್ನು ಆರಂಭಿಸಿದರು. ಅಲ್ಲಿಯವರೆಗೆ ಗುರು-ಶಿಷ್ಯ ಪರಂಪರೆಯಲ್ಲಿ ಉಸ್ತಾದರುಗಳ ಬಳಿ ಹೋಗಿ ಕಲಿಯಬೇಕಾಗಿದ್ದ ವಿಷಯವನ್ನು ಶಾಲಾ ಕಾಲೇಜುಗಳಲ್ಲಿ ಪರಿಚಯಿಸಿದರು. ಆಧುನಿಕ ಭಾರತದಲ್ಲಿ ಸ್ತ್ರೀಯರಿಗೆ ಔಪಚಾರಿಕ ಶಿಕ್ಷಣವನ್ನು ಪಡೆಯುವ ಅವಕಾಶವೂ ದೊರೆತದ್ದರಿಂದ ಸಂಗೀತ ಕ್ಷೇತ್ರದಲ್ಲಿ ಗಾಯಕಿಯರ ಸಂಖ್ಯೆ ಹೆಚ್ಚಿತು.

ರಾಜಾ ರವಿವರ್ಮನ ‘ಲೇಡಿ ಇನ್ ಮೂನ್‍ಲೈಟ್’ ಕಲಾಕೃತಿಗೆ ರೂಪದರ್ಶಿಯಾದ ಗಾಯಕಿ ಅಂಜನಿಬಾಯಿ ಮಾಲ್ಪೇಕರ್ ಚಿತ್ರ: ವಿಕಿ ಕಾಮನ್ಸ್‌
ರಾಜಾ ರವಿವರ್ಮನ ‘ಲೇಡಿ ಇನ್ ಮೂನ್‍ಲೈಟ್’ ಕಲಾಕೃತಿಗೆ ರೂಪದರ್ಶಿಯಾದ ಗಾಯಕಿ ಅಂಜನಿಬಾಯಿ ಮಾಲ್ಪೇಕರ್ ಚಿತ್ರ: ವಿಕಿ ಕಾಮನ್ಸ್‌

ಕಳೆದ ನಾಲ್ಕೈದು ದಶಕಗಳಿಂದ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಹಲವಾರು ಮಹತ್ವದ ಗಾಯಕಿಯರು ಹಿಂದಿನವರು ಕಟ್ಟಿದ ಹೋರಾಟದ ದಾರಿಯಲ್ಲಿ ತಮ್ಮ ಹೆಜ್ಜೆಯನ್ನು ಮೂಡಿಸಿದ್ದಾರೆ. ಉತ್ತಮ ಗಾಯಕಿಯರಾಗಿ ಮಾತ್ರವಲ್ಲದೆ ವಾದಕಿಯರಾಗಿ, ಗುರುಗಳಾಗಿ, ಉಪನ್ಯಾಸಕಿಯರಾಗಿ, ಸಂಶೋಧಕಿಯರಾಗಿ, ವಾಗ್ಗೇಯಕಾರ್ತಿಯರಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕಿಶೋರಿ ಅಮೋನಕರ್, ವೀಣಾ ಸಹಸ್ರಬುದ್ಧೆ, ಮಾಣಿಕ್ ವರ್ಮಾ, ಸುಚೇತಾ ಭಿಡಕರ್, ಸುಹಾಸಿನಿ ಕೋರಟಕರ್ ಇವರ ಪಾತ್ರ ಮರೆಯುವಂಥದ್ದಲ್ಲ. ನಮ್ಮ ನಡುವಿನ ಮಹತ್ವದ ಗಾಯಕಿಯರಲ್ಲಿ ಪ್ರಭಾ ಅತ್ರೆ, ಪದ್ಮಾ ತಲವಾಲಕರ್, ಶ್ರುತಿ ಸಡೋಲಿಕರ್, ಅಶ್ವಿನಿ ಭಿಡೆ, ಆರತಿ ಅಂಕ್ಲಿಕರ್, ಅಲಕಾ ದೇವ್ ಮಾರುಲ್‍ಕರ್, ಶುಭ್ರಾ ಗುಹಾ ಹಾಗೂ ಮುಂದಿನ ಪೀಳಿಗೆಯ ದೇವಕಿ ಪಂಡಿತ್, ಕಲ್ಪನಾ ಜೋಗರ್‍ಕರ್, ಅಪೂರ್ವಾ ಗೋಖಲೆ, ಗೌರಿ ಪಾಠಾರೆ, ಅನುರಾಧಾ ಕುಬೇರ್, ಮಂಜೂಶಾ ಪಾಟೀಲ್, ಕೌಶಿಕಿ ಚಕ್ರವರ್ತಿ ಇವರೆಲ್ಲರೂ ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವವರಿಗೆ ಭರವಸೆಯ ದೀಪವಾಗಿದ್ದಾರೆ. ಸಿದ್ಧವಾಗಿರುವ ಭೂಮಿಕೆಯನ್ನು ಪ್ರವೇಶಿಸುವವರಿಗೆ ಅದನ್ನು ನಿರ್ಮಿಸಿದವರಿಗೆ ಎದುರಾದ ಸವಾಲುಗಳು ಬರಲಾರವು. ಮಾತ್ರವಲ್ಲ ಇತಿಹಾಸದ ಅನುಸಂಧಾನವು ಎದುರಾಗುವ ಹಲವು ಸವಾಲುಗಳಿಗೆ ಪರಿಹಾರವನ್ನೂ ನೀಡಬಲ್ಲುದು.

ನಾನೇನು ಕಡಿಮೆ ಅಲ್ಲ... ಆಶಾ ಭೋಸ್ಲೆ ಹಾಡಿನ ವೈಖರಿ
ನಾನೇನು ಕಡಿಮೆ ಅಲ್ಲ... ಆಶಾ ಭೋಸ್ಲೆ ಹಾಡಿನ ವೈಖರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT