ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತದಲ್ಲೇ ಅಧ್ಯಾತ್ಮ...

Last Updated 8 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ ಹಿಂದೂಸ್ತಾನಿ ಸಂಗೀತದೊಂದಿಗೆ ಅನನ್ಯ ನಂಟು ಬೆಳೆಸಿಕೊಂಡವರು ನೀವು. ನಿಮ್ಮ ಸಮೃದ್ದ ಅನುಭವಗಳನ್ನು ಈಗ ಎಪ್ಪತ್ತರ ಹೊಸ್ತಿಲಲ್ಲಿರುವ ನೀವು ಒಮ್ಮೆ ಹಿಂತಿರುಗಿ ನೋಡಿದಾಗ ನಿಮಗೆ ಏನನ್ನಿಸುತ್ತದೆ?

ಸಂಗೀತಗಾರರಿಗೆ ವಯಸ್ಸಾದ ಹಾಗೆ ಸಂಗೀತದಲ್ಲಿ ಅನುಭವಗಳು ಪರಿಪಕ್ವವಾಗುತ್ತಾ ಹೋಗುತ್ತವೆ. ಜ್ಞಾನ ವಿಸ್ತಾರವಾಗಿ, ಆ ಜ್ಞಾನದ ಹರವನ್ನು ಶಿಷ್ಯ‌ರಿಗೆ ಧಾರೆ ಎರೆಯುವ ಮೂಲಕ ಸಾರ್ಥಕ್ಯ ಕಾಣಬಯಸುತ್ತೇನೆ. ಹತ್ತು ವರ್ಷಗಳ ಹಿಂದಿನ ಗಾಯನಕ್ಕೂ, ಇಂದಿನ ಗಾಯನ ಪ್ರವೃತ್ತಿಗೂ ಬಹಳ ವ್ಯತ್ಯಾಸವಿದೆ ಎಂದು ನನಗನ್ನಿಸುತ್ತದೆ. ಕಛೇರಿಗಳಲ್ಲಿ ಆಗೆಲ್ಲ ಸಂಗೀತದ ಮೂರೂ ಸಪ್ತಕಗಳಲ್ಲಿ ಹಾಡಬೇಕು, ಯಾವ ರಾಗವನ್ನು ಹೇಗೆ ಪ್ರಸ್ತುತಪಡಿಸಿದರೆ ಕೇಳುಗ ಖುಷಿಯಾಗಬಹುದು ಎಂಬ ಲೆಕ್ಕಾಚಾರ ಹಾಕಿ ವಿಭಿನ್ನವಾಗಿ ಹಾಡುತ್ತಿದ್ದೆ. ಈಗ ಸಂಗೀತದ ಪರಿಪಕ್ವತೆಯ ಹೊಳಪು, ಪರಿಣಾಮ ಬೇರೆ ರೀತಿಯಲ್ಲಿ ಅನುಭವ ಆಗುತ್ತದೆ. ಇಷ್ಟೂ ವರ್ಷಗಳ ಅನುಭವಗಳು ಒಂದೇ ಕಡೆ ಕೇಂದ್ರೀಕೃತವಾಗಿದೆಯೇನೋ ಅನಿಸುತ್ತದೆ. ರಾಗಗಳಲ್ಲಿ, ಬಂದಿಶ್‌ಗಳಲ್ಲಿ, ತಾನ್‌–ತರಾನಗಳಲ್ಲಿ ‘ಸ್ವಂತಿಕೆ’ ಕಾಣಬಯಸುತ್ತೇನೆ.

ಸಂಗೀತದಲ್ಲಿ ಅಧ್ಯಾತ್ಮ ಕಾಣಲು ಸಾಧ್ಯ ಎಂದಿರಿ. ಅದು ಹೇಗೆ?

ಸಂಗೀತ ಮತ್ತು ಅಧ್ಯಾತ್ಮಕ್ಕೆ ವಿಶೇಷ ಸಂಬಂಧ ಇದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಈಗಲೂ ಕಛೇರಿ ಕೊಡುವಾಗ ಜನರಿಗೆ ಹೆಚ್ಚು ತಾತ್ವಿಕ ಅಂಶಗಳು ಗಾಯನದ ಮೂಲಕ ಹೋಗಬೇಕು ಅನಿಸುತ್ತದೆ. ಈ ಮೂಲಕ ಅಧ್ಯಾತ್ಮ ತತ್ವಗಳು ಜನರನ್ನು ತಲುಪಬೇಕು.ಇಷ್ಟು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಹಾಡುವಾಗ ಕೇಳುಗರಲ್ಲಿ ಹೆಚ್ಚು ನಿರೀಕ್ಷೆ ಇರುತ್ತದೆ. ಸಂಗೀತದ ಇದು ಅವರಲ್ಲಿ ಸದ್ಭಾವನೆ ಬೆಳೆಸಲು ಸಹಾಯಕವಾಗುತ್ತದೆ ಎಂಬುದು ನನ್ನ ಭಾವನೆ. ಈಗಲೂ ಸಾಕಷ್ಟು ಪ್ರವಾಸ ಮಾಡ್ತೀನಿ, ವಿದೇಶಗಳಿಗೂ ಹೋಗುತ್ತೇನೆ. ಎಲ್ಲ ಕಡೆ ಒಬ್ಬ ಸಾಧಕ, ಚಿಂತಕ, ಸಂಗೀತ ಸಲಹೆಗಾರ... ಮೇಲಾಗಿ ನಾನೊಬ್ಬ ಬ ‘ರೋಲ್‌ ಮಾಡೆಲ್‌’ ಎಂಬಂತೆ ಉಪಚರಿಸುತ್ತಾರೆ. ಅವರ ನಿರೀಕ್ಷೆಗೆ ತಕ್ಕ ಹಾಗೆ ಸಂಗೀತ ಕೊಡಲು ನಿತ್ಯವೂ ಹೊಸ ಪ್ರಯತ್ನ ಮಾಡುತ್ತೇನೆ, ಸಂಗೀತದಲ್ಲಿ ಪರಿಪಕ್ವತೆ ಬಂದ ಕಾರಣ ಧ್ವನಿಯ ಗುಣಮಟ್ಟದಲ್ಲೂ ರಸವತ್ತತೆ ಬಂದಿದೆ. ಹಾಡಿನಲ್ಲಿ ಸೂಕ್ಷ್ಮ ವಿಚಾರಗಳು, ಸದ್ಭಾವನೆಯನ್ನು ತರುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.

ಹೊಸದಾಗಿ ‘ಭಾರ್ಗವಿ’ ಎಂಬ ರಾಗ ಸೃಷ್ಟಿಸಿದ್ದೀರಿ. ಇದು ಸುಪ್ರಸಿದ್ಧ ರಾಗ ‘ಭಾಗೇಶ್ರೀ’ ಯ ಮತ್ತೊಂದು ರೂಪವೋ ಹೇಗೆ?

ಭಾಗೇಶ್ರೀಯ ಮತ್ತೊಂದು ರೂಪ ಅಲ್ಲ. ಆದರೆ ಭಾಗೇಶ್ರೀಗೆ ಅತ್ಯಂತ ಸನಿಹವಾದ ರಾಗ. ಭಾಗೇಶ್ರೀ ರಾಗದಲ್ಲಿ ಕೋಮಲ ಗಾಂಧಾರ ಮಾತ್ರ ಇದೆ. ಭಾರ್ಗವಿಯಲ್ಲಿ ಕೋಮಲ, ತೀವ್ರ ಎರಡೂ ಗಾಂಧಾರಗಳಿವೆ. ಅಲ್ಲದೆ ಭಾಗೇಶ್ರೀಯಲ್ಲಿ ರಿಷಭ ಮತ್ತು ಪಂಚಮ (ರಿ ಮತ್ತು ಪ) ಸ್ವರಗಳು ಗೌಣವಾಗಿದ್ದರೆ ನಾನು ಸೃಷ್ಟಿಸಿದ ಭಾರ್ಗವಿ ರಾಗದಲ್ಲಿ ರಿಷಭ, ಪಂಚಮಗಳೆರಡೂ ಪ್ರಜ್ವಲಿಸುತ್ತವೆ. ಈಗ ನನ್ನ ಶಿಷ್ಯಂದಿರೆಲ್ಲರೂ ಈ ರಾಗವನ್ನು ಹಾಡ್ತಾರೆ, ಕೇಳುಗರ ಪ್ರತಿಕ್ರಿಯೆಯೂ ಚೆನ್ನಾಗಿದೆ.

ರಾಗಗಳಲ್ಲದೆ ಹಿಂದೂಸ್ತಾನಿ ಸಂಗೀತಕ್ಕೆ ನಿಮ್ಮ ಇತ್ತೀಚಿನ ಕೊಡುಗೆ ಏನಾದರೂ...

ಹೊಸ ರಾಗಗಳ ಜತೆಗೆ ನೂರಾರು ಬಂದೀಶ್‌ ರಚಿಸಿದ್ದೇನೆ. ತರಾನ, ಚೀಜ್‌ಗಳನ್ನೂ ಸಾಕಷ್ಟು ಬರೆದಿದ್ದೇನೆ. ಕೇಳುಗರಿಗೆ ಹೊಸದನ್ನು ಕೊಡುವ ಉದ್ದೇಶದಿಂದ ಕೇಳಲು ಇಂಪಾದ ಮತ್ತು ಭಿನ್ನವಾದ ಚೀಜ್‌ ಬರೆದಿದ್ದೇನೆ. ಉದಾಹರಣೆಗೆ ಬೆಳಗಿನ ಸುಮಧುರ ರಾಗ ‘ಬಿಲಾಸ್‌ಖಾನಿ ತೋಡಿ’ಯಲ್ಲಿ ‘ನೀಚೆ ಗುಂಗರಿಯಾ...’ ಎಂಬುದು ಬಹಳ ಹಳೆಯ ಚೀಜ್‌. ಇದರ ಬದಲಾಗಿ ‘ಮಹಾದೇವ...’ ಎಂಬ ಹೊಸ ಚೀಜ್‌ ಇದೇ ರಾಗದಲ್ಲಿ ಬರೆದಿದ್ದೇನೆ. ಇಲ್ಲಿ ದೇವರ ಪರಿಕಲ್ಪನೆಯನ್ನು ಪಡಿಮೂಡಿಸಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗಿದೆ.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡ್ತೀರಾ?

ಸಂಗೀತ ಕ್ಷೇತ್ರದಲ್ಲಿ ‘ಅಹೋರಾತ್ರಿ ಸಂಗೀತೋತ್ಸವ’ ಎಂಬ ಪರಿಕಲ್ಪನೆಯನ್ನು ಬೆಂಗಳೂರಿಗೆ ಮೊದಲ ಬಾರಿಗೆ ಸುಮಾರು 40 ವರ್ಷಗಳ ಹಿಂದೆಯೇ ಪರಿಚಯಿಸಿದೆ. ನನ್ನ ಗುರು ಗ್ವಾಲಿಯರ್‌ ಘರಾಣೆಯ ಮೇರು ಗಾಯಕ ಪಂ. ಗುರುರಾವ್‌ ದೇಶಪಾಂಡೆ ಹೆಸರಿನಲ್ಲಿ ‘ಗುರು ಗಂಧರ್ವ’ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿ ಸಾಧಕರಿಗೆ ಈ ಪುರಸ್ಕಾರ ನೀಡುತ್ತಿದ್ದೇನೆ. ಇನ್ನೊಬ್ಬ ಮಹಾನ್‌ ಚೇತನ ಗುರು ಪಂ. ಭೀಮಸೇನ ಜೋಶಿ ಹೆಸರಿನಲ್ಲಿ ‘ಮಲ್ಹಾರ್‌ ಸಂಗೀತೋತ್ಸವ’ವನ್ನೂ ನಡೆಸಿಕೊಂಡು ಬರುತ್ತಿದ್ದೇನೆ.

ಸಂಗೀತವನ್ನು ಉಳಿಸಿ ಬೆಳೆಸುವಲ್ಲಿ ಇಂದು ಸಾಮಾಜಿಕ ಜಾಲತಾಣಗಳು ಉತ್ತಮ ಮಾಧ್ಯಮವಾಗಿವೆ ಎಂಬ ಮಾತು ಕೇಳಿ ಬರುತ್ತಿದೆ. ನಿಮ್ಮ ಅನಿಸಿಕೆ ಏನು?

ಜಗತ್ತು ಎಷ್ಟೇ ಆಧುನಿಕವಾದರೂ ಪರಂಪರೆಯ ಸಂಗೀತದತ್ತ ಮಕ್ಕಳ ಆಸಕ್ತಿ, ಒಲವು ಕಡಿಮೆಯಾಗಿಲ್ಲ. ನನ್ನ ಶಿಷ್ಯಂದಿರೂ ಇಂದು ದೇಶ ವಿದೇಶಗಳಲ್ಲಿ ಕಛೇರಿ ಕೊಡುತ್ತಿದ್ದಾರೆ. ಸುಮಾರು 20 ಶಿಷ್ಯಂದಿರು ಆಕಾಶವಾಣಿಯ ಟಾಪ್‌ ಗ್ರೇಡೆಡ್‌ ಕಲಾವಿದರಾಗಿ ರೂಪುಗೊಂಡಿದ್ದಾರೆ, ಇವರೆಲ್ಲರಿಗೂ ಸೋಶಿಯಲ್‌ ಮೀಡಿಯ ಬಹಳ ಸಹಕಾರ ಕೊಡುತ್ತಿದೆ. ಒಂದು ರೀತಿಯಲ್ಲಿ ‘ಗುರು–ಶಿಷ್ಯ’ ಪರಂಪರೆಯನ್ನೂ ಬೆಳೆಸಿದ್ದೇನೆ. ಶಿಷ್ಯ ಸಂಪತ್ತೇ ನನಗೆ ದೊಡ್ಡ ಆಸ್ತಿ. ಸಾಮಾಜಿಕ ಜಾಲತಾಣಗಳು ಸಂಗೀತ ಪ್ರತಿಭೆಗೆ ನೀಡುವ ಸ್ಪಂದನೆಯೂ ಅಭೂತಪೂರ್ವವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT