ಶುಕ್ರವಾರ, ಏಪ್ರಿಲ್ 3, 2020
19 °C

ಬತ್ತಿದ ನದಿ

ಎಂ.ಎಸ್‌. ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ತುಂಬಿದಂಬರದಿಂದುದುರಿದಮೃತ
ಫಲಿಸಿ ಬಸುರಿಯಾದಂತೆ ನದಿ
ದುಂದುಮುಕುತ್ತಲೇ ಭೋರ್ಗರೆ
ಯುವುದರದರದೊಳು ಜಿಗಿದು
ಸೇರಿ , ಸುಳಿಯೊಳಗೆ ಈಜಿ
ಕರಗಿ ಹೋಗಬಹುದು

ನೋಡಲು ಬಾರದು ಬತ್ತಿದ ನದಿಯ

ಬಳುಕಿ ಸಾಗುವ ನದಿಯೊಂದಿಗೆ ಓಡಿ
ದಣಿದುದಡದಲಿ ಕುಳಿತುನ್ಮನ ತುಂಬಿಕೊಳ್ಳಬಹುದು
ಘನ ಬಂಡೆ ತಬ್ಬಿ , ಸೀಳಿ ಇಬ್ಭಾಗ
ಹರಿದರಿದು ಸವೆಸಿ ಕಾಲವನೇ ಮಸೆದು,
ನುಣ್ಣನೆ ಸಾಗುವ ನದಿ ತಣ್ಣಗೆ ಬೊಗಸೆಯಲಿ
ತುಂಬಿ ದಣಿವಾರಿಸಿಕೊಳ್ಳಬಹುದು

ನೋಡಲು ಬಾರದು ಬತ್ತಿದ ನದಿಯ

ಭುವಿಯೊಳಗೊಂದಾದಮೃತ ಬಿಂದು
ವಿಕಸಿಸಿ ಹರಿದು ಧಾರುಣಿಯ ನೆನಸಿ
ವಿಸ್ತರಿಸಿ ಗಿರಿ ಪಾತ್ರ ಸಮರುಚಿನನ್ನಿನೊಂದರೊಳಗೆ
ಎರಡೊಂದಾಗಿ ಬೆಸೆದು ಬಸಿರಾದ
ಮಹಾತಾಯಿಯೊಳಗೆ ಮುಳುಗಿ
ಪಾವನವಾಗಬಹುದು

ನೋಡಲು ಬಾರದು ಬತ್ತಿದ ನದಿಯ

ಸಕಲಚರಾಚರಗಳುಚ್ಚಿಷ್ಠ ಪಾಪ,
ಪುಣ್ಯಗಳ ಭಾರ ಇಳಿಸಿ
ಯೋಜನಗಳ ದೂರ ಬಳಸಿ ಗಿರಿ
ಪರ್ವತಗಳ ತೊಳೆದಳಿಸಿ ಧರೆ ಕೊಳೆಯ
ರುಚಿ ಕಳೆದು ಮನೋಸಾಗರವ ಸೇರಿ
ಅಮೃತಮಯಿಯನನ್ಯತೆ

ಅನುಭಾವಿಸಬಹುದು

ನೋಡಲು ಬಾರದು ಬತ್ತಿದ ನದಿಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)