ಗುರುವಾರ , ಡಿಸೆಂಬರ್ 1, 2022
22 °C

ಪುಟಾಣಿ ಕವಿತೆ | ಪನಿಶ್ಮೆಂಟು

ಚಿದಾನಂದ ಸಾಲಿ Updated:

ಅಕ್ಷರ ಗಾತ್ರ : | |

ಟ್ರಿಣ್ ಟ್ರಿಣ್ ಬೆಲ್ಲು ಬಾರಿಸಿತು
ಸ್ಕೂಲಿಗೆ ಟೈಮು ಆಗೋಯ್ತು

ಕಾಲಿಗೆ ಮಣಭಾರ ಬೂಟೇರ್ಸಿ
ಕೊರಳಿಗೆ ಬಾಟಲಿ ನೇತಾಡ್ಸಿ

ಬೆನ್ನಿಗೆ ಹೆಣಭಾರದ ಬ್ಯಾಗು
ಮುಖದಲಿ ಹುಸಿನಗೆಯ ಸೋಗು

ಕಾಲೆಳಕೊಂಡು ಹೋಗ್ಬೇಕು
ಮೂಗೇರಿಸಿಕೊಂಡು ಕೂರ್ಬೇಕು

ಗಲಾಟೆ ಮಾಡಿದರೆ ಬೈತಾರೆ
ಅತ್ತರೆ ಹಂಗಿಸಿ ನಗುತಾರೆ

ಮಿಸ್ಸಿನ ಮಾತು ಹಾಗಿರಲಮ್ಮ
ಆಯಾನೂ ಕಂಪ್ಲೇಂಟ್ ಕೊಡ್ತಾಳೆ

ನಿಜ ಹೇಳಮ್ಮ ನಿಜ ಹೇಳು
ಸ್ಕೂಲನು ಕಂಡ್ಹಿಡಿದವರಾರೇಳು?

ಎಲ್ಲಕೂ ನನಗೇ ಬೈತೀಯಲ್ಲ
ಅಂತವರಿಗೆ ಪನಿಶ್ಮೆಂಟ್ ಇಲ್ಲೇನು?!

==============================

ವಾರ್ನಿಂಗ್

ಕೋಳಿ ಕೋಳಿ ಕೊಕ್ಕೊಕ್ಕೋ
ಬೆಳಿಗ್ಗೆ ಸುಮ್ನೆ ನೀ ಮಕ್ಕೋ /ಅ/

ನೀನೇನ್ ಶಾಲೇಗ್ ಹೋಗ್ತೀಯ?
ನಮ್ಮಂಗ್ ಏಟು ತಿಂತೀಯ?

ಟೀವಿ ಗೀವಿ ನೋಡದೆ
ಠೀವಿಯಿಂದ ಇರ್ತೀಯ
ಹೋಮ್ ವರ್ಕೇ ಇಲ್ಲದೆ
ಓಣಿ ಓಣಿ ತಿರುಗ್ತೀಯ

ಇಕ್ಕಿದ್ದುಂಡು ಸಿಕ್ಕಲ್ ಮಲಗಿ
ಕುನುಕು ನಿದ್ದೆ ತೆಗಿತೀಯ
ಬೆಳಿಗ್ಗೆ ಬೇಗ್ನೆ ಎದ್ದು
ನಮ್ಮ ಪ್ರಾಣ ತಿಂತೀಯ

ನೀನೂ ಶಾಲೆಗೆ ಬಂದ್ನೋಡು
ನಮ್ಮ ಕಷ್ಟ ತಿಳಿಯುತ್ತೆ
ಟೀವಿ ಮುಂದೆ ಕುಂತ್ನೋಡು
ಕೂಗೋದು ತಾನೇ ನಿಲ್ಲುತ್ತೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.