ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ | ದಣಪೆ

Last Updated 31 ಮಾರ್ಚ್ 2023, 7:03 IST
ಅಕ್ಷರ ಗಾತ್ರ

– ಫಾಲ್ಗುಣ ಗೌಡ, ಅಚವೆ

ಹಾಲಕ್ಕಿಗಳ ಅಂಗಳದಾಚೆಗೆ
ಗಿಡದ ಕವಲೊಂದನ್ನು ಹುಗಿದು
ನಾಯಿ ಕರು ಮನುಷ್ಯನಷ್ಟೇ ದಾಟುವಂತ ದಣಪೆ
ಸುತ್ತಲಿನ ಸಾಮಾಜಿಕ ಸೂಕ್ಷ್ಮಗಳ ನೋಡುತ್ತ ನಿಂತಿರುತ್ತದೆ
ನಿರ್ಲಿಪ್ತ ಭಾವದಲ್ಲಿ

ಪಕ್ಕದ ಮನೆಗಳ ಪಿಸುಮಾತನಾಲಿಸುವ ಇದು
ಶುರು ಹಚ್ಚಿಕೊಂಡ ಜಗಳ
ಹೆಚ್ಚಾಗಲೆಂದು ಪಟಕ್ಕನೆ ಒಳಗೆ ಓಡಿ ಮೂಲೆಯಲ್ಲಿದ್ದ ಹಿಡಿಯನ್ನು
ತುದಿ ಮೇಲಾಗಿಸಿಡುವುದು

ಸುಗ್ಗಿಯ ಕುಣಿತ ಹಗಣ ಗುಮಟೆ ಪಾಂಗ್
ಕೂಟದ ನಿರ್ಣಯಗಳು ನಿಕ್ಕಿಯಾಗಿ
ಊರ ಮಾತಾಗುವುದು ಇಲ್ಲಿಯೇ
ಸೊಂಟದ ಮೇಲಿದ್ದ ಕೊಡಗಳು ಕೆಳಗಿಳಿದು

ಎಷ್ಟೆಲ್ಲ ಕೆಟ್ಟ ಸುದ್ದಿಗಳನ್ನು ಮನಸೋ ಇಚ್ಛೆ ಬೆಳೆಸಿ
ಬಚ್ಚಲ ಬಳ್ಳಿಯೊಂದು ಮೈಮೇಲೆ
ಊರ್ದ್ವ ಮುಖದಲ್ಲಿ ಹಬ್ಬುವವರೆಗೆ
ಮಾತು ಮಾತು ಮಾತು

ಅಪರಿಚಿತ ನಾಯಿ ಸಿದ್ದಣ್ಣ ಬುಡಬುಡಕಿ
ಮಾರಿಕ್ಯಾಮ್ಮನನ್ನು ತಡೆಯುವಂತೆ
ನಾಯಿಗೆ ದಣಪೆಯೇ ಧೈರ್ಯ ತುಂಬುವುದು
ತಾಜಾ ಮೀನು ತರುವ ಬೆಟ್ಕುಳಿಯ ದಾಲ್ದೀರ್ ಅಜ್ಜಿಯನ್ನು ಬಿಟ್ಟು

ಇಂದೂ ಹೊರಗೆ ನಿಲ್ಲಬೇಕಲ್ಲ ಎಂದು
ಶಾಲಾ ಪ್ರವೇಶದ ಬಾಕಿ ಹಣವಿಲ್ಲದೇ
ಹೋಗುವ ವ್ಯಗ್ರ ಮನಸ್ಸಿನ ಪೋರನ
ಮೈದಡವಿ ಸಂತೈಸುವುದು

ಅಪ್ಪ ಮಕ್ಕಳ ತಾರಕಕ್ಕೇರಿದ ಜಗಳ
ಮುಂದುವರಿದು ನಿಲ್ಲುವುದು ಇದೇ ದಣಪೆಯಲ್ಲಿಯೇ
ಹಾಲಕ್ಕಿಗಳ ದಣಪೆಯಲ್ಲಿ ನಿಂತು
ಸಾರಸ್ವತ ಲೋಕ ಬೆಳಗಿದ ಚಿತ್ತಾಲರ

ಬುಡಾಣಸಾಬ ಸಂಕ ದಾಟುವುದು ಕಂಡದ್ದು
ಉತ್ತಮಿ ಬೊಮ್ಮಿಯರು ಹುಲ್ಲುಹೊರೆ ಹೊತ್ತು ಹೋದದ್ದು
‘ಸೆರೆ’ ಕಥೆಯಲ್ಲಿ ಬರ್ಮಾಚಾರಿ ಒಡೆದೀರ
ಬರ್ಮಚರ್ಯವನ್ನೆ ಸೆರೆಹಿಡಿದ ದೇವಿ ಬಂದದ್ದು
ಇಂತಹ ದಣಪೆಯಲ್ಲಿಯೇ

ಅಪ್ಪ ಮೇಯಲು ಹೋದ ಮಂಗ್ಳುವ ಕತ್ತಲಾಗುವವರೆಗೂ
ಬರ ಕಾಯುವುದು
ಹಮ್ಮಣ್ಣ ನಾಯ್ಕನ ಸಂಕದ ಹತ್ತಿರ ಬರುವ ಹಾಲ್ಟಿಂಗ್ ಬಸ್ಸಿನ ಸದ್ದು ಆಲಿಸುವುದು
ನಾಟಕದ ತಾಲೀಮು ತಾಸುಗಟ್ಟಲೆ ಕೇಳುವುದು ಓಣಿಯ ಈ ದಿವ್ಯ ಸಂದಿಯಲ್ಲೆ

ದಣಪೆಯಲ್ಲಿ ನಿಂತರೆ ಅಪ್ಪ ಹಳ್ಳ ಹಾಯಿಸುವ ಸಪ್ಪಳ ನನಗೀಗಲೂ ಕೇಳಿಸುವುದು
ಒಮ್ಮೊಮ್ಮೆ ಅಪ್ಪನೇ ನಿಂತು ತದೇಕಚಿತ್ತದಿಂದ ನನ್ನನೇ ನೋಡುವನು
ಅವನ ಜೊತೆ ದಣಪೆಯೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT