ಡಾ.ಮುಮ್ತಾಜ್ ಬೇಗಂ ಕವಿತೆ: ಕೆಂಡದ ಮುತ್ತು

ಹೊಟ್ಟೆಗೆ ರೊಟ್ಟಿ ಸುಡಲೆಂದು
ಹಂಚ ಮೇಲೆ ಹಾಕಿದರೆ
ಚರಕ್ಕ್ ಎಂದು ಎಳೆಯ ಕೈಗೆ
ಕೆಂಡದ ಮುತ್ತು
ಹಂಚಿಗೂ ನನ್ನ ಮೇಲೆ
ಶತಮಾನದ ಸಿಟ್ಟು
ಕೆಲಸವಿಲ್ಲದ ಗೃಹಿಣಿ
ಸಾಂಬರಿಗೊಂದಿಷ್ಟು ಘಮ
ಹರಡಲು, ಒಗ್ಗರಣೆ
ಎಣ್ಣೆಯೊಳಗಣ ಜೀರಿಗೆ
ಕಣ್ಣಿಗೆ ಸಿಡಿದು, ನೋಡುವ
ನೋಟ ಮಸುಕಾಗಿ
ಕಣ್ಣೊಳಗೆ ಹೂವ ಹೊತ್ತವಳು
ಬೇಕೆಂದಾಗ ಸಂಭೋಗಕ್ಕೆ
ಸಜ್ಜುಗೊಂಡು, ಇಲ್ಲದಿರೆ ಒದೆ ತಿಂದು
ಹೆಣ್ಣತನಕೆ ಬಂಜೆತನದ ಕುತ್ತು
ಬೇಕಿಲ್ಲದಿದ್ದರು ಬಸಿರು
ಹೊತ್ತು ತಿರುಗಲೇ ಬೇಕು
ಸಾವಿನ ಮನೆ ಬಾಗಿಲು ತಟ್ಟಿ ಬಂದು
ಜನ್ಮಕ್ಕೆ ಜನ್ಮ ಕೊಟ್ಟವಳಿಗೆ
ಸೂತಕದ ಛಾಯೆ ಅಂಟಿಸಿದರು
ನಿಗಿ ನಿಗಿ ಉರಿವ ಒಲೆಯ
ಮುಂದಿನ ನನ್ನ ಮಾತು
ಬೆವರಿನೊಳಗೆ ಸೋತು
ಬೆಂಕಿಯಲಿ ಬೆವರು
ಆವಿ ಆಯಿತು ನೋಡು
ಬೆಂಕಿ ಬೆಳಕಾಗುವುದಾದರು ಎಂತು..!!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.