ಸೋಮವಾರ, ಮಾರ್ಚ್ 20, 2023
29 °C

ಲಕ್ಷ್ಮಿ ಕಿಶೋರ್ ಅರಸ್ ಅವರ ಕವಿತೆ | ಮರವಾಗಬಾರದಿತ್ತೇ

ಲಕ್ಷ್ಮಿ ಕಿಶೋರ್ ಅರಸ್, ಕೂಡ್ಲೂರು. Updated:

ಅಕ್ಷರ ಗಾತ್ರ : | |

Prajavani

ಮಸುಕಿನ ಮಬ್ಬಲೆ ಬರುತ್ತಿದ್ದರು
ಕತ್ತಲಿರುವಂತೆಯೇ ಹರಸುತ್ತಿದ್ದರು
ಬಿದ್ದ ಕಾಯಿ, ಸೌದೆ ಇತ್ಯಾದಿ
ಧಣಿ ಧಾವಿಸುವುದರಲ್ಲಿ ಅದೃಶ್ಯವಾಗುವರು.

ಬೆಳಕು ಹರಿದ ಮೇಲೆ ಬಂದನು ಧಣಿ
ಕಣ್ಣಿಗೆ ಕಂಡವರ ಜನ್ಮ ಜಾಲಾಡಿದ
ಅರುಚಿ- ಕಿರುಚಿ ಕೂಗಾಡಿದ
ಆರ್ಭಟ ಕೇಳಿ ಮಾಯವಾಗುವರು
ಮತ್ತೆ ಬರುವರು ನಾಳೆ ರವಿಗೂ ಮುಂದೆ.

ತೋಟದ ಸುತ್ತ ಸುತ್ತಾಡಿದನು ಧಣಿ
ಕಾಣಸಿಗಲಿಲ್ಲ ಬಿದ್ದ ಪೋಟು -ಪಿಳ್ಳೆ
ತಲೆಯೆತ್ತಿ ನೋಡಿದ ಕಲ್ಪವೃಕ್ಷವ
ಹಣ್ಣಾಗಿದೆ ಗೊನೆ-ಗೊನೆ ಎಂದು ಹಲ್ಲುಕಡಿದ.

ಹೇಳಿಯಾಯಿತು ಒಂದು ವಾರ
ಯಾರು ಬರಲಿಲ್ಲವೆ ಗೊನೆಕಾರ
ಮರಹತ್ತಲು ಕಾಲು ಕಟ್ಟುವಾಗಾಯ್ತು
ಹಿಂದೆ ಹೀಗಿರಲಿಲ್ಲ ಆಧುನಿಕತೆ ಬೆಳೆದು
ಮರಹತ್ತಲು ಬಂತು ಎರಡು ಕಾಲಿಗೂ ಯಂತ್ರ.

ಮುಸುಕಿನ ಮಬ್ಬಲ್ಲಿ ಮತ್ತೆ ಬಂದರೂ ಮಂದಿ
ಅಂದು ಕಾದಿದ್ದ ಗೌಡ ಬೇಗ ಬಂದಿ
ಕೈಗೆ ಸಿಕ್ಕ ಹೆಂಗಸನ್ನು ತಳಿಸಿಯೇ ಬಿಟ್ಟ
ನೊಂದ ಮಹಿಳೆ ನಡೆದಳು ಗೂಡಿನತ್ತ
ಏನು ಮಾಡುವುದು ಜಮೀನಿಲ್ಲ ಸೂಜಿ ಗಾತ್ರ.

ಗೌಡರ ಮನೆಯಲ್ಲಿ ಬೇಯುವುದು ರುಚಿ-ರುಚಿ
ಮಂದಿ ಜೋಪಡಿಯಲ್ಲಿ ಗಂಜಿಯೇ ಗತಿ
ಗೌಡರಿಗೆ ಜಮೀನು ಊರತುಂಬಾ
ಮಂದಿಗಿಲ್ಲ ಬೆಂಕಿಪೊಟ್ಟಣ ದಷ್ಟು ಜಾಗ
ಒಂದು ಕಣ್ಣಿಗೆ ಬೆಣ್ಣೆ ,ಮತ್ತೊಂದಕ್ಕೆ ಸುಣ್ಣ.

ಗೋದಾಮಿನಲ್ಲಿ ತುಂಬಿದೆ ಲೋಡು ಕಾಯಿ
ಮಂದಿಯ ಮನೆಯಲ್ಲಿ ಸಾರಿಗಿಲ್ಲ
ಒಡೆವರು ದೇವರಿಗೆ ಸಂಖ್ಯೆಯಷ್ಟು
ನಿಂತಿಹರು ಆಯ್ದುಕೊಳ್ಳಲು ಚೂರಿನಷ್ಟು
ಮಂದಿಗನಿಸಿತ್ತು ನಾವು ಮರವಾಗಬಾರದಿತ್ತೆ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು