ನಿಂಗಪ್ಪ ಮುದೇನೂರು ಅವರ ಕವಿತೆ | ಎರೆ ಮಣ್ಣಿನ ಎರೆ ಬಣ್ಣದನೂರು ಕನಸಿನ ತೇರು...

ಬಿತ್ತಿದ ಪ್ರತಿ ಬೀಜಕೂ ಅವರ ಬೆವರ ಹನಿಯ ಮುತ್ತು ತಾಗಿದೆ
ಬೆಳೆಯುವ ಪ್ರತಿ ಪೈರಿಗೂ ಅವಳು ಚೆರಗ ಚೆಲ್ಲಿದ ಚೆಲುವಿದೆ//
ಎರೆ ಮಣ್ಣಿನ ಎರೆ ಬಣ್ಣದ ನೂರು ಕನಸಿನ ತೇರಿದೆ
ಪ್ರತಿ ಪಾದದ ಪ್ರತಿ ಪಾಡ್ಯದ ಹಬ್ಬದೂಟದ ಕಂಪಿದೆ//
ಅವಳ ತೋಳಿನ ಅವಳ ಬಾಳಿನ ಅವಳ ಮಕ್ಕಳ ನಗುವಿದೆ
ಮಣ್ಣಗಂಧದ ಜೀವ ನಂದದ ತೂಗಿ ಬಾಗುವ ಮನಸ್ಸಿದೆ//
ಕನಕ ತೋರಣ ಮನಕೆ ಹೂಬನ ಚೆಲುವ ಕಟ್ಟಿದ ನಾಡಿದೆ
ಗುರು ಗೋವಿಂದರ ಶರೀಫ ಫಕೀರರ ಭಾವೈಕ್ಯದೂಟದ ಸವಿ ಇದೆ//
ಸರ್ವಜ್ಞ ಪಾಡಿದ ಚೌಡಯ್ಯನಾಡಿದ ಮದಗ ತುಂಗೆಯರ ಒಡಲಿದೆ
ಕೆಂಚಮ್ಮನ ಕಡುದುಃಖದ ಸೆರಗಿನಲ್ಲಿ ಕಟ್ಟಿದ ಜೀವನಾಣ್ಯದ ಬದುಕಿದೆ//
ಯಾಲಕ್ಕಿ ಕಂಪಿನ ಸೇವಂತಿಗಿಂಪಿನ ಮಧುರ ಹಾಡಿನ ಲಯವಿದೆ
ವರದಾ ಧರ್ಮೆಯರ ಕುಮುಧ್ವತಿ ತುಂಗ ಭದ್ರೆಯರ ಬಾಳುಕಟ್ಟಿದ ಸೌಹಾರ್ದವಿದೆ//
ಪುರದ ಪುಣ್ಯವೂ ಚಾಲುಕ್ಯ ಶಿಲ್ಪವೂ ರಾಷ್ಟ್ರಕೂಟರ ನಾಡ ಮಹಿಮೆ ಇದೆ
ಕನ್ನಡ ನುಡಿ ಚೆಲುವಲ್ಲಿ ಭಾರತ ಸಿಂಧೂರಶ್ಮಿ ಅರಳಿ ನಿಂತ
ವಿನಾಯಕನ ಗುಣಗಾನವಿದೆ//
ಹಾನಗಲ್ಲ ಗುರುವಿನ ಕ್ಷಾತ್ರತೇಜಸ್ಸಿನ ಪಂಚಾಕ್ಷರಿ ನಿಲುವಿನ ಬಲವಿದೆ
ಹುಕ್ಕೇರಿ ಸಿಂದಗಿ ಹೊಸಮಠ ಹಳೆಮಠಗಳ ಸುತ್ತ ಓಡಾಡಿದ ವಚನ ಗಂಧವಿದೆ//
ನವಿಲು ಕೃಷ್ಣಮೃಗ ಬಾಳನೊಗದೆತ್ತುಗಳ ಪರಿಸೆಯಲಿ ಮಿಂದೆದ್ದ ಸಂಕ್ರಾತಿ ಇದೆ
ಕಾರಣಿಕದ ನುಡಿಯ ಕನ್ನಡದ ಕಂಪಿನ ಶಾಲ್ಮೆಯವರೆಗೂ ಹಬ್ಬಿದ ನವತಾರುಣ್ಯವಿದೆ//
ವನವಾಸ ಕಳೆದ ಸುಖ ಸಂಮೃದ್ಧಿಯ ಪಡೆದ ಹೊಸಬೀಜ ಬಿತ್ತಿದ ರೖೆತನ ಕಸುವಿದೆ
ದೇವಗಿರಿಯಲಿ ನಿಂತು ಸುಗ್ಗಿ ಹಾಡಲಿ ಕಳಿತು 'ಕಟ್ಟುತ್ತೇವ ನಾವು' ಎಂದು ಮಿಡಿದ ಹೃದಯ ವೈಶಾಲ್ಯವಿದೆ/
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.