ಭಾನುವಾರ, ನವೆಂಬರ್ 17, 2019
21 °C

ಮಕ್ಕಳ ಪದ್ಯ | ವ್ಯಾಕರಣ ಕಲಿಯೋಣ

Published:
Updated:
Prajavani

ಬಾರೇ ಗೆಳತಿ ಬಾರೇ ಗೆಳತಿ
ಕನ್ನಡ ವ್ಯಾಕರಣ ಕಲಿಯೋಣ
ಕನ್ನಡದ ಸ್ವರ ಸಂಧಿಗಳು
ಹೇಗಿವೆ ಎಂದು ತಿಳಿಯೋಣ

ಕನ್ನಡ ಸ್ವರ ಸಂಧಿಗಳಲ್ಲಿ
ಇರುವವು ಮೂರು ಬಗೆಗಳು
ಲೋಪ, ಆಗಮ, ಆದೇಶ
ಎಂಬ ಮೂರು ಸಂಧಿಗಳು

ಸ್ವರದ ಮುಂದೆ ಸ್ವರವು ಬಂದು
ಸಂಧಿಯಾಗುವಾಗ
ಪೂರ್ವಪದದ ಕೊನೆ ಸ್ವರವು
ಲೋಪವಾಗುವಾಗ
ಅದುವೇ ನೋಡು ಲೋಪಸಂಧಿ
ಮೊದಲನೇ ಕನ್ನಡ ಸ್ವರ ಸಂಧಿ
ನೋಡಲ್ಲಿ, ಹಾಡಲ್ಲಿ, ಕೇಳಲ್ಲಿ, ಹೇಳಲ್ಲಿ
ಉದಾಹರಣೆಗಳ ತಿಳಿಯಿಲ್ಲಿ

ಸ್ವರದ ಮುಂದೆ ಸ್ವರವು ಬಂದು
ಸಂಧಿಯಾಗುವಾಗ
ಉತ್ತರ ಪದದಿ ಮೊದಲ ಅಕ್ಷರ
ಹೊಸದಾಗಿ ಬರುವಾಗ
ಅದುವೇ ನೋಡು ಆಗಮಸಂಧಿ
ಎರಡನೇ ಕನ್ನಡ ಸ್ವರ ಸಂಧಿ
ಮನೆಯನ್ನು, ಶಾಲೆಯನ್ನು, ನೆಲವನ್ನು, ಹೊಲವನ್ನು
ಉದಾಹರಣೆಗಳ ಕಲಿಯಿನ್ನು

ಸ್ವರದ ಮುಂದೆ ಸ್ವರವು ಬಂದು
ಸಂಧಿಯಾಗುವಾಗ
ಉತ್ತರ ಪದದಿ ಕ, ತ, ಪಗಳಿಗೆ
ಗ, ದ, ಬ ಬರುವಾಗ
ಅದುವೇ ನೋಡು ಆದೇಶ ಸಂಧಿ
ಮೂರನೇ ಕನ್ನಡ ಸ್ವರ ಸಂಧಿ
ಹಳೆಗನ್ನಡ, ಹೊಸಗನ್ನಡ, ಬೆಟ್ಟದಾವರೆ, ಕಂಬನಿ
ಉದಾಹರಣೆಗಳ ತಿಳಿ ಬಾ ನೀ

ಬಾರೇ ಗೆಳತಿ ಬಾರೇ ಗೆಳತಿ
ಕನ್ನಡ ವ್ಯಾಕರಣ ಕಲಿಯೋಣ
ಕನ್ನಡ ಸ್ವರ ಸಂಧಿಗಳ ಕಲಿತು
ನಲಿಯುತ ಕುಣಿ ಕುಣಿದಾಡೋಣ

ಪ್ರತಿಕ್ರಿಯಿಸಿ (+)