ಗುರುವಾರ , ನವೆಂಬರ್ 14, 2019
19 °C

ನಮಸ್ಕಾರ ಶ್ರೀಕೃಷ್ಣನಿಗೆ...

Published:
Updated:
Prajavani

ಗುಡಿಸಲಲ್ಲೂ ಮಹಲಿನಲ್ಲೂ
ಅಮ್ಮಂದಿರಿಗೆ
ತಮ್ಮ ಕಂದರಲ್ಲಿ ಇಂದಿಗೂ
ಕಾಣುವ ಏಕೈಕ ಬಿಂಬ
ಮುದ್ದು ಗೋವಿಂದನೆಂಬ
ಕಣ್ಣಗೊಂಬೆಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಎರೆಮಣ್ಣಿನ ಬಣ್ಣದಲ್ಲೂ
ಸೌಂದರ್ಯದ ಸೂಜಿಗಲ್ಲು
ಉಂಟು ಎಂದು ತೋರಿದ
ಅನ್ವರ್ಥನಾಮನಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಪಿಳ್ಳಂಗೋವಿಯ ಸ್ವಚ್ಛಂದ
ಸಮ್ಮೋಹಕ ನುಡಿತದಿಂದ
ಗೋಕುಲದೆದೆ ಸೂರೆಗೊಂಡ
ಜನಪದ ಕಲೆಗಾರನಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಅಡೆತಡೆಗಳ ಪರಿವೆಯಿರದ
ಪ್ರೇಮವೆಂಬ ಹುಚ್ಚುಹೊಳೆಗೆ
ಸ್ಫೂರ್ತಿಯ ಸೆಲೆ ತಾನಾದ
ರಾಧಾಮಾಧವನಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಹಳ್ಳಿಹೈದರಿಗೆ
ದಿಲ್ಲಿಯನ್ನೂ ಗೆಲ್ಲಬಲ್ಲೆವೆಂಬ
ಹುಮ್ಮಸ್ಸು ನೀಡಿದ
ಪೋರ ಕಂಸಾರಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಬೇಕಾದವರ ಎತ್ತರಿಸಿದ,
ಬೇಡದವರ ಒತ್ತರಿಸಿದ,
ನಿಗುರಿದವರ ಕತ್ತರಿಸಿದ
ಚತುರ ತಂತ್ರಗಾರನಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಉಪದೇಶದ ಕೊನೆಗೆ,
ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು
ಶಿಷ್ಯನಿಗೇ ಬಿಟ್ಟುಕೊಟ್ಟ
ಅನನ್ಯ ಗೀತಾಚಾರ್ಯನಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ತಾನು ಕಟ್ಟಿದ್ದೆಲ್ಲವೂ
ತನ್ನ ಕಣ್ಣ ಮುಂದೆಯೇ
ಕುಸಿದು ಬಿದ್ದದ್ದನ್ನು ಕಂಡು
ಕೈಚೆಲ್ಲಿದ, ಕಣ್ಮುಚ್ಚಿದ
ವೃದ್ಧ ಮುತ್ಸದ್ದಿಗೆ-
ನಮಸ್ಕಾರ ಶ್ರೀಕೃಷ್ಣನಿಗೆ.

ಎಲ್ಲರಿಗೂ ಸಲ್ಲಬಲ್ಲ,
ಎಲ್ಲರ ಮನ ಗೆಲ್ಲಬಲ್ಲ,
ಎಲ್ಲರಲ್ಲೂ ಕೊಂಚ ಉಳ್ಳ
ವಿಶ್ವರೂಪಿಗೆ-
ನಮಸ್ಕಾರ ನರೋತ್ತಮನಿಗೆ.
 

ಪ್ರತಿಕ್ರಿಯಿಸಿ (+)