ಕವಿತೆ: ಹಾದಿ-ಹಾಡು

ಈ ನಗರದ ರಸ್ತೆಗಳು ಥೇಟ್
ನರಮಂಡಲ ವ್ಯೂಹದಂತಹ
ರಚನೆಯವು.... ಆದಿ ಅನೂಹ್ಯ,
ಅಂತ್ಯ ಅನಂತ.
ಏಕಮುಖ ದ್ವಿಮುಖ ಸಂಚಾರ
ಗೊಂದಲ, ಚಲನೆ ಸ್ಥಿರವೋ!
ಸ್ಥಾವರವೋ! ಚಲಿಪ ವಸ್ತುಗಳು
ಜಂಗಮವೋ ಸ್ಥಾವರವೋ?
ನಿರಂತರ ಪ್ರಶ್ನೆಗಳು...
ರಸ್ತೆ ಮೇಲೆ ಸದಾ ಚಕ್ರಗಳು;
ತಿಕ್ಕಿ ಉಜ್ಜುವ ಘರ್ಷಣೆಗಳು.
ದೂಳಿಡಿಸಿ; ಒಂದೇ ಬಿರುಮಳೆಗೆ
ಕೊಚ್ಚೆ ರಾಡಿ ಎಬ್ಬಿಸಿ, ಪಾದಚಾರಿ
ಮಾರ್ಗಗಳನು ನುಂಗಿ ನೊಣೆದು
ಅನಾದಿಯ ಬೇರುಬಿಟ್ಟು ಬದುಕುಳಿದ
ಅಳಿದುಳಿದ ಮರಮರಗಳನೂ,
ಹೆಬ್ಬಂಡೆಗಳನೂ - ಅನಂತ್ಯ ಹಸಿವಿನ
ಬ್ಬರದಲಿ ಕಬಳಿಸುವ ಈ ನಗರದ
ರಸ್ತೆಗಳು ಮಲಗುವ ಕನಸನ್ನು ಎಂದಿಗೂ
ಕಾಣಲಾರವು.
ದೊಡ್ಡ ವಾಸ್ತುವಿನ ಕಟ್ಟಡಗಳನೂ ಚಿಕ್ಕ
ಅವಾಸ್ತವದ ಗುಡಿಸಲುಗಳನೂ ಹತ್ತಿರ
ಸೇರಿಸದ; ನೇರ ರಾಜ ಮಾರ್ಗಗಳೂ,
ದಾರಿ ಇರದ ಕಾಲು ಹಾದಿಗಳೂ
ಈ ನಗರದ ಮೈಯೊಳಗೆ ಜೀವದ್ರವ
ಪೋಷಕಗಳು. ಹಗಲೂ ಇರುಳೂ
ಅವಾಸ್ತವಿಕ ಕಲ್ಪನೆಯಲಿ ಬಸವಳಿಯುವ
ಕನಸುಗಳಿಗೆ ರಸ್ತೆಯ ಮೇಲೆಯೇ ಸಾವು-
ಬದುಕಿನ ನಿರ್ಧಾರವಾಗುತ್ತದೆ.
ಈ ನಗರದ ರಸ್ತೆಗಳು ನಯವಂಚಕರ
ತಿಜೋರಿ ಕೀಲಿಯೂ; ಮುಗ್ಧರ ಸಮಾಧಿ
ಸ್ಥಳವೂ ಆಗಿರುವುದು ಮಾತ್ರ
ಅವಾಸ್ತವಿಕವಲ್ಲ...
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.