ಸೋಮವಾರ, ಏಪ್ರಿಲ್ 12, 2021
22 °C

ಕವಿತೆ: ಪ್ರಮಾದ

ಶಂಕರ್ ಸಿಹಿಮೊಗೆ Updated:

ಅಕ್ಷರ ಗಾತ್ರ : | |

Prajavani

ಹತ್ತಿ ಇಳಿದು
ದಿಗ್ದಿಗಂತವನ್ನು ಏರಿ
ಮುಂದೆ ಮುಂದೆ ಓಡುತ್ತಿದ್ದೆ
ಎರಡು ಕಾಲುಗಳನು ಹಿಂದೆ ಎಳೆದು
ಮಂಡಿಗೆರಡು ಬಿಗಿದು
ಹಗ್ಗದಿಂದ ಬಂಧಿಸಿದರು,
ನಿಂತ ಜಾಗದಿಂದ ಹುಲ್ಲು ಮೇದು
ಗುಟುಕು ನೀರು ಕುಡಿದು ಹಸಿವ ತಾಳಿಕೊಂಡೆ;
ಅವರು ಇವರು ಇದನು ಸಹಿಸಲಿಲ್ಲ!
ರೆಕ್ಕೆ ಬಡಿದು ಜಿಗಿದು ಹಾರಿ
ಮೇಲೆ ಮೇಲೆ ಏರಿದಾಗ ಹದ್ದಿಗೊಂದು ಸಲಾಮು ಹೇಳಿ
ಗೀಜಗನ ಬಾಲ ಹಿಡಿದು ಕಣಿಯ ಕೇಳಿ
ಗೂಡು ಸೇರಿ ಕೂಡಿ ಬಾಳಿ ಆಟವಾಡಿದೆ;
ಆದರು ಅಲ್ಲಿ ನಾನು ಹಕ್ಕಿಯಲ್ಲ!

ಇವರು ಅವರು ಮಾತಿನ
ಬೆಂಕಿಯುಂಡೆ ಉಗುಳಲು
ಎಲ್ಲವನ್ನೂ ನುಂಗಿಕೊಂಡೆ;
ಆದರು ಅಲ್ಲಿ ನಾನು ಉಕ್ಕುವ ಸಮುದ್ರವಲ್ಲ!

ಮೂರು ನೂರು ಕಾರಣ ಏಕೆ ಬೇಕು ಅಹಿಂಸೆಗೆ?
ಒಂದೇ ಒಂದು ಕಾರಣ ಸಾಕಲ್ಲವೇ ನಮ್ಮ ಪ್ರೀತಿಗೆ!

ರಕ್ತದಲ್ಲಿ ಮುದ್ದೆಯಾದ ಎಲುಬು ಚರ್ಮಗಳನು
ದಬ್ಬಣದಿ ಸಿಕ್ಕಿಸಿ ಹೊಲೆಯುತ್ತಿರಲು,
ನೋವಿನ ದನಿ ಹೊರಡದಂತೆ ತಡೆದುಕೊಂಡೆ;
ಆದರು ಅಲ್ಲಿ ನಾನು ಬಂಡೆಯಲ್ಲ!

ಅಲ್ಲಿ ನಾನು,
ರೌದ್ರದಲೆಗಳೆಬ್ಬಿಸಿ
ದಡ ನುಂಗುವ ಸಮುದ್ರವಲ್ಲ!
ಉರುಳಿ ಉರುಳಿ ಉಸಿರ ಸಿಕ್ಕಿಸಿ
ನರಳಿಸುವ ಬಂಡೆಯಲ್ಲ!
ಕಂಡು ಕಾಣದಂತೆ ಓಡಿ ಓಡಿ
ದಾರಿ ತಪ್ಪಿಸುವ ಮಾಯಾ ಜಿಂಕೆಯಲ್ಲ!
ಸುರ್ರನೆ ಹಾರಿ ಸುದ್ದಿಯ ಮುಟ್ಟಿಸಿ
ಕೋಳವ ತೊಡಿಸಲು
ಪೋಲಿಸನ ಹಕ್ಕಿಯು ಅಲ್ಲ!
ಆದರು ಅವರು ಹಿಂಸೆಯಿಂದ
ಅಹಿಂಸೆಯ ಕೊರಳಹಿಂಡಿ ಉಸಿರ ಬಗೆದು
ತೋರಣವ ಕಟ್ಟಿದರು,
ಹೀಗೆ ಕಟ್ಟುವಾಗ
ನಾನು ಅಲ್ಲಿ ಮನುಷ್ಯನಾಗಿದ್ದೆ!
ಮತ್ತು ಈಗೀಗ ಮನುಷ್ಯರಾಗಿರುವುದೇ
ಪ್ರಮಾದವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.