ಗಂಧವತಿ

7
ಕಾವ್ಯ

ಗಂಧವತಿ

Published:
Updated:
Deccan Herald

ಸುಮ್ಮನೇ ಪದ್ಮಾಸನದಲ್ಲಿ ಕೂತು ಧ್ಯಾನಸ್ಥನಂತೆ ನಟಿಸುವಾಗಲೂ 
ಕಳೆದ ಇರುಳುಗಳಲ್ಲಿ ದೇಹದಿಂದ ನೀನು ಗುಟ್ಟಾಗಿ ಹೊಮ್ಮಿಸಿದ ಗಂಧದ ಘಮಲು 
ನೀಲಿದೇಹಿಯ ಉಬ್ಬುಕೊರಳಿನ ಉರಗದಂತೆ 
ಮರಳಿ ನನ್ನನ್ನು ಬಿಗಿದುಕೊಳ್ಳುತ್ತದೆ

ಸಹಸ್ರ ವರ್ಷಗಳಿಗೊಮ್ಮೆ ಮಿನುಗಿ   
ಒಂದ್ಹಿಡಿಯಷ್ಟು ಬೆಳಕನ್ನು ಮಾತ್ರ ಬಯಲಿಗೆಸೆವ
ಅಸ್ಪೃಶ್ಯ ನಕ್ಷತ್ರದ
ಬೆಳಕಿಗೆ ಹೆದರಿ ಅಗಳಿ ಜಡಿದುಕೊಂಡವರ
ಮನೆಯ ಮೂಲೆಯಲ್ಲಿ ಅತ್ತಿತ್ತ ಓಲಾಡುತ್ತಿರುವ
ಒಂಟಿ ದೀಪದ ಒಡಲಿಗೆ ಎಣ್ಣೆ ಸುರಿದವಳು
ಈಗ
ನೆರಳೂ ಸೋಕಿಸದಂತೆ
ಊರ ಹೊರಗೆ ಒಬ್ಬಳೇ ಗೇಣು ಕೆತ್ತುತ್ತ ಒಡಲ ತುಂಬಿಕೊಳ್ಳಲು ಅವಸರಿಸುತಾಳೆ

ಅಕಾಲಿಕ ವಸಂತದಂತೆ ಮುನಿಸು ಸರಿಸಿದ
ಅವನ ಎರಡೂ ಕಣ್ಣುಗಳಲ್ಲಿನ
ಸಿಟ್ಟು ಸಣ್ಣ ಒಲವಿನ ಎದುರು
ಕೈ ಮಿಲಾಯಿಸಲಾರದೆ ನೆಲಕ್ಕಪ್ಪಳಿಸಿ ದೊಪ್ಪೆಂದು‌ ಬಿದ್ದು ಮೈಗಂಟಿದ ದೂಳು ಕೊಡವಿಕೊಳ್ಳುತ್ತಲೆ ಚದುರುತ್ತದೆ

ಏರೋಪ್ಲೇನ್ ಚಿಟ್ಟೆಯೊಂದನ್ನ
ಹಿಡಿದ ಮಗು ಬಾಲದ ತುದಿಗೆ ಎಳೆಯ 
ನುಲಿಯುತದೆ
ಒಂದಿಷ್ಟೇ ಹೊತ್ತು
ಎಳೆಯ ಕಳಚಿಕೊಂಡ ಚಿಟ್ಟೆ ಬಿಡುಗಡೆಗೊಂಡು
ಚಿಟ್ಟೆ ಕಳೆದುಕೊಂಡ ಮಗು ಬಂಧನಕೆ ಒಲಿದಮೇಲೆ
ಜಾರಿಯಾಗುತ್ತದೆ
ಸಣ್ಣ ಖಾಸಗಿ ಮೌನ 

ಊರ ತೋಟದ ಹೂವು ಕಂಪು ಕಳೆದುಕೊಂಡು 
ತನ್ನಸ್ತಿತ್ವದ ಗಾಯದ ಒಸರಿಗೆ 
ನೋಯುತ್ತಿರುವ ಹೊತ್ತಿಗೇ
ತುಂಬಿಕೊಂಡ ಘಮಲನ್ನ ಅವಳು
ಕದ್ದು ಕಣ್ಣರಳಿಸಿ
ಒಂದಿಷ್ಟೇ ಹಂಚಿಕೊಳ್ಳುತ್ತಾಳೆ

ಆ ಹೊತ್ತಿಗೆ
ಮಗ್ಗುಲಿಗೆ ಹೊರಳಿ 
ಕೊರಳು ಪಸೆ ಒಣಗುವ ಮೊದಲೇ
ಅಷ್ಟೊಂದು ರೂಪದ ಗಂಧವತಿಯ
ಪಾಪಕಾರ್ಯದಲ್ಲಿ ಅರಿವಿಲ್ಲದೆ ಅನುಮತಿ ಇಲ್ಲದೇ ನಾನೂ ಸಮಾನವಾಗಿ ಭಾಗಿಯಾಗಿಹೋಗುತ್ತೇನೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !