ಬುಧವಾರ, ಸೆಪ್ಟೆಂಬರ್ 22, 2021
29 °C

ಕವಿತೆ | ಸೋಲ್ ಮೇಟ್

ಭುವನಾ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಶಬ್ದಕೋಶದಲ್ಲಿ ಹುಡುಕಾಡಿದೆ
ತಿಳಿದವರಲ್ಲಿ ಕೇಳಿ ತಿಳಿದೆ
ಉಂಡವರ ರುಚಿ ಉಣ್ಣದೆಯೂ ತಿಳಿದಂತೆ
ಗೂಗಲ್ ಮೇಧಾವಿ ಹೇಳಿತು,

ಸಮತ್ವ
ಪ್ರೇಮ
ಪ್ರಣಯ
ನಿಷ್ಕಾಮ
ಸಮಾಧಾನ
ಆತ್ಮೀಯತೆ
ಲೈಂಗಿಕ ಕ್ರಿಯೆ
ಆಧ್ಯಾತ್ಮ
ಹೊಂದಾಣಿಕೆ
ಜೊತೆಗೆ ನಂಬುಗೆ
ಹೀಗೆ ಹತ್ತಾರು,

ಪ್ಲೇಟೋ ಮಹಾನುಭಾವ ಎಂದೋ ಬಳಸಿ ಬಿಟ್ಟ

ಮಿಲೇನಿಯರ್ ಈಚೆಗೆ
ತಪ್ಪುತಪ್ಪಾದ ಜೋಡಿಪದ
'ಸೋಲ್ ಮೇಟ್'

ಕೈ ಕೈ ಹಿಡಿದು ಏಳು ಹೆಜ್ಜೆ
ತುಳಿದವರಿಗಾಗಿ,

ಜ್ವರದ ರಾತ್ರಿಯೋ
ರಾತ್ರಿಯ ಜ್ವರವೋ
ಮಡಿಕೆ ಮಾಡಿಟ್ಟ ಕೌದಿಯ
ಸಾವಿರ ಬಣ್ಣದ ಕಣ್ಣುಗಳು
ಕರುಣೆಯಿಂದ ನನ್ನತ್ತ ನೋಡಿ
ಹೊದ್ದುಕೊಳ್ಳುವಂತೆ ಬೇಡಿಕೊಂಡು
ಮೈಯೆಲ್ಲಾ ಮುಟ್ಟಿ ಮುಟ್ಟಿ
ಆ ಕ್ಷಣದ 'ಸೋಲ್ ಮೇಟ್'

ಬೆಚ್ಚಗೆ ಮಾಡಿದ
ಅವ್ವನ ಮಡಿಲು
ಅಪ್ಪನ ನೇವರಿಕೆ

ಇದೇ ದಿನ ಸಂಜೆಗೊಂದು
ಐತಿಹಾಸಿಕ ದೇವಸ್ಥಾನ ಮುಂದೆ
ಅಚ್ಚರಿಯ ಶಿಲ್ಪ
ಸೋಲ್ ಮೇಟ್ ನಂ-೧೧

ಎರಡು ಮೂರು.....ಹತ್ತು ಹನ್ನೊಂದು

ದರಿದ್ರದ ನಾನು
ಒಬ್ಬನಿಗೂ ಆಗಲಿಲ್ಲ,
ಒಬ್ಬನಾಗಿದ್ದಾನೆ ನನಗೆಂಬಭ್ರಮೆಯಿದ್ದರೂ ಸಾಕು
ಎಳಸು ಜೀವನ
ಮುಂದೆ ನೆಟ್ಟಗಾಗಬಹುದು

ಸೂರ್ಯನ ಮಗ
ಭೂಮಿಯ ಮಗಳು
ಇಬ್ಬರೂ ಅರ್ಧವಂತೆ

ಥಿಯೋಸಫಿ ಫಿಲಾಸಫಿಗಳು
ಇಬ್ಬರನ್ನೂ ಒಂದು ಮಾಡಿ
ಕರ್ಮ ಕಳೆದುಕೊಳ್ಳುವಲ್ಲಿಗೆ
ಇದೊಂದು ಅವಾಸ್ತವಿಕ ನಿರೀಕ್ಷೆಯಾಗಿ
ವೆಡ್ಡಿಂಗ್ ಕಾರ್ಡಿನ ಮೇಲೆ

'ಮೈ ಸೋಲ್ ಮೇಟ್....
ಸೋ ಆ್ಯಂಡ್ ಸೋ'

ನನ್ನ ಪಾಲಿನ
ಇಂದಿನ ಸಮಾಧಾನ
ಒಂದು ಕೌದಿಯ
ಸಾವಿರ ಕಣ್ಣುಗಳ ಕರುಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.