ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಷತ್ರದ ಕೊಲೆ

Last Updated 17 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಯಾವ ಹಾದಿಯಿಂದ ಹಾದರೂ ಕಾಣುತ್ತದೆ
ಆ ಕಿಡಕಿಯ ಸರಳುಗಳೊಳಗೆ
ಪುಟ್ಟ ನಕ್ಷತ್ರವೊಂದು ಜೋತುಬಿದ್ದಿದೆ
ಜಂಗುತಿಂದು ಮೈ ಉದುರಿಸಿಕೊಳ್ಳುತ್ತಿದ್ದ ಕಿಡಕಿ
ತಾನು ಉಸಿರು ಹಿಡಿದದ್ದೇ ಆ ಮೃಣ್ಮಯ ಬೆರಗಿಗೆ
ಎಂಬಂತೆ ಲಕಲಕಿಸುತ್ತಿದೆ
ಸೂಜಿಮಲ್ಲಿಗೆಯ ದಳಗಳಂತಹ ಬೆರಳುಗಳು
ಮೊನಚು ಮೊನಚಾಗಿ ಹೊರಗಿಣುಕಿ
ಬೆಳಕಿನ ಕೋಲ ಹಾಯಿಸುತ್ತಿವೆ
ಕಾಡ ಸೆರಕಲಿನಂತಹ ದನಿ ತಾಗಿ
ಮೀಟಿ ಎಬ್ಬುತ್ತಿವೆ, ಮರೆತ ಆಪ್ತ ನೇವರಿಕೆಯ
ಹೆ, ಆ ಬೀದಿಗೀಗ ಜೀವದೋಕುಳಿ ಚೆಲ್ಲಿ...

ಓಣಿ ಮುದುಕಿಯರು ವಾರೆಗಾಲಿಟ್ಟಾದರೂ
ವಾಕಿಂಗಿನ ನೆಪಕಾದರೂ ಅರೆಗಳಿಗೆಯಾದರೂ
ತಲ್ಲೀನರಾಗುತ್ತಾರೆ, ಕಿಡಕಿಗೆ ಕಣ್ಣು ಕೀಲಿಸಿ
ಅಶ್ವತ್ಥಕೆ ತಲೆಯೊಡ್ಡಿದಂತೆ
ಕುರಿಗಾರ ಮುದುಕ, ತಪ್ಪಿ ನಾಗರಲೋಕ ಹೊಕ್ಕತಬ್ಬಿಬ್ಬಿನವ
ಓಗೊಡುತ್ತ ನಿಂತೇಯಿದ್ದ. ಕುರಿ ಮಂದೆಗೆ ಹೇಳಲಾಗದವ
ದಾಟಿ ನಡೆವಾಗ ಹೆಗಲ ಪಂಚೆಯಿಂದ
ಕಣ್ಣೀರ ಮರೆಸಿ.

ಅಹಾ, ಈ ಮರ್ಯಾದಸ್ಥರ ಓಣಿಯಲಿ
ಮೈ ಕೈ ಬಲಿತವರೆಲ್ಲ ತಲೆಬಾಗಿ ಕಿವಿಮಾರಿ
ಮೊಬೈಲಿಗರ್ಪಿಸಿಕೊಂಡು ತನುಮನವ.. .. ..
ಇಂತಿಪ್ಪವರ ಪಾದಂಗಳಿಗೂ ನಕ್ಷತ್ರ ಬೆಳಕಿನ ಕಚಗುಳಿ
ಎತ್ತಿ ನಿಲ್ಲಿಸುತ್ತದೆ ಇಹದ ಪರಿಮಳದ ನೆಲಕೆ

ಪುಟ್ಟ ನಕ್ಷತ್ರಕ್ಕೀಗ ಮಾತು ಮೂಡಿದೆ
ಎಲ್ಲ ಎಲ್ಲವನೂ ಮಾತಿನಲಿ ಮೈದಡವಿ ಮುದ್ದಿಸಿ
ಮಾಯೆಯ ನೂಲ ಸುತ್ತುತ್ತದೆ
ಬೆರಗಾಗಿದೆ ಗೌರವಸ್ಥರ ಬೀದಿ
ಮಲ್ಲಿಗೆ ಬೇಗ ಬೇಗ ಅರಳುತ್ತಿದೆ, ನೋಡಬೇಕಿದೆಯಂತೆ
ಗುಟುರು ಪಾರಿವಾಳ ನಕ್ಷತ್ರದ ಬೆಳಕಲ್ಲಿ ತಪ ತೇಯುತ್ತಿದೆ
ನಾಚಿಕೆಯಂತೆ ಗಾಳಿಗೆ, ಮೆಲ್ಲ ಬೀಸುತ್ತಿದೆ ನನ್ನ ಗರಿ

II

ಸದ್ದಿಲ್ಲದೆ ಸರಿಯುತ್ತಿದೆ ಬೆಳಗು ಬೈಗು
ನಿಂತಲ್ಲಿ ನಿಲ್ಲದೆಯೂ ಮೊಳಕೆ ಗಟ್ಟುವ ತಾಕತ್ತಿಟ್ಟು
ಕಳಿಸಿದ ದಯಾಮಯನೆ, ನಿನಗಿರಲಿ ನಮನ
ನೀನು ಕೆತ್ತಿದ ಪಾದಗಳೀಗ ನೆಲಕಂಟಿ ನಿಂತು
ತಿಳಿವು ಮೂಡುವ ಹೊತ್ತು; ಉಸಿರೊಳಗೇ ಬೆರೆತು ಬಂದಂತಿದೆ
ಜಾತಿ-ನೀತಿ, ರಾಗ-ದ್ವೇಷ, ವ್ಯಂಗ್ಯ-ಉಡಾಫೆ
ಚಾಡಿ, ಕಳುವು, ಸ್ವಾರ್ಥ, ಲಾಲಸೆ, ಆಲಸ್ಯಗಳೆಲ್ಲ
ನೆತ್ತರಲ್ಲೂರಿ ಹೀರಿ, ಈ ಲೋಕದ ನಾತೆಗಳು
ಎಳೆದೆಳೆದು ಬಿಗಿದು ನರಗಳ ನೋವುಕ್ಕಿ
ಯಾರೂ ಕೇಳಿದವರಿಲ್ಲ, ಯಾರೂ ನೋಡಿದವರಿಲ್ಲ
ಯಾರ ಅರಿವಿಗೂ ತಟ್ಟಿಲ್ಲ. ಯಾರ ಕಣ್ಣೀರೂ ಸೋಕಿಲ್ಲ
ಕೊಲೆಯಾಯಿತು, ನಕ್ಷತ್ರದ ಕೊಲೆಯಾಯಿತು
ತೀರ ಕೆಲಕಾಲ ಮಾತ್ರ ನಕ್ಷತ್ರದ ಹೆಣ ಹುಗಿದ ಗುರುತಿತ್ತು.
ಒಂದೆರಡೇ ಮಳೆಹನಿಗೆ ಎಲ್ಲ ಸಾಪಳಿಸಿ ಕುರುಚಲು ಚಿಗಿತು.

III

ಕುರಿಗಾರ ಮುದುಕ ಎಂದೋ ಕಂಡ ಕನಸಿನಂತೆ
ಬೀದಿ ಹಾಯುತ್ತಾನೆ, ಕಳ್ಳ ಕಣ್ಣಲಿ ಕಿಡಕಿ ಸವರಿ
ವಾರೆಗಾಲಿನ ಮುದುಕಿಯರಿಗೀಗ ಹೆಜ್ಜೆ ಹೊರಗಿಡಲು
ಜೋಲಿ ಸಂಭಾಳಿಸುವುದಿಲ್ಲ, ಮಬ್ಬುಗಣ್ಣಾಸಿ ಏನೋ ಕಂಡಂತೆ
ಮೊಗುಮ್ಮಾಗಿದೆ ಕಿಡಕಿ, ಟೊಳ್ಳುಗುಟ್ಟಿದ ಮೈಗೆ ಬಣ್ಣ ಮೆತ್ತಿಸಿಕೊಂಡು
ಎಳೆಹಲ್ಲುಗಳು ಕಚ್ಚಿದ ನಿಶಾನೆಯನು ಒಳಹೊತ್ತು ಮಂಕಾಗಿ
ಪುರಾವೆಯಿಲ್ಲದ ಹಾಗೆ ನಕ್ಷತ್ರಗಳ ಕೊಲೆ ರೂಢಿಯಾಗಿದೆ
ಕೊಲೆಗಾರರು ಧರ್ಮಭೀರುಗಳಾದ ಈ ಬಜಾರಿನಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT