ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಅವನತಿ

Last Updated 2 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬಂದ ಬಂದ ಜವಾರಿ ಮದಲಿಂಗ
ಬಂದ
ಅರಿಸಿಣದ ಮೈಯಾರಿ ತುಟಿಗುಂಟ ರಸಧಾರೆ
ಊರೂರಿಗೆಲ್ಲ ನಗೆಹುಗ್ಗಿ
ಚಿಗುರುತಾರೆಗಳ ಹೊಳೆ ಹಗಲು
ತೊಗಲು ತಾಳಗಳ ಚಿರಮೇಳ
ಕನಸೊಡೆದು ಕಲ್ಲು ಕರಗಿದ ಹೊತ್ತು
ತೊಟ್ಟಿಲು ತುಂಬಿತು ಕೇಕೆ ಕನವರಿಕೆ ಲಾಲಿ
ಎದೆಯೊಳಗೆ ಉಯ್ಯಾಲೆ
ಮೂಡಣದ ಗಾಳಿಗೊಲಿಯಿತು ಪದವು
ಸೋ ಎನ್ನೀರೇ ಸೋಬಾನ ಎನ್ನೀರೇ

ಹರಗುತ್ತ ಬಂದ
ಬೆಳೆದ ಮೊಳಕೆಗಳ ಬುಡವರಸೆ ತೆಗೆದು
ಮಣ್ಣ ದೂಡುತ ಹೋದ
ಸರಹದ್ದು ಕಿತ್ತೊಗೆದ
ಎಲ್ಲ ದಿಕ್ಕಿಗೂ ಚೆಕ್ಕುಬಂದಿ ತನದೆಂದ
ಸತ್ತವರ ಮನೆಯ ಹಿತ್ತಲು ಮೇದು
ಸುಖವ ಸ್ಖಲಿಸಿದ ಶೀಲವಂತ!
ಬಯಲು ಹಾದಿಯ ಗಾದಿ ಸಖ!
ಇವನ ಬೆದೆಸ್ಥಲಕೆ ಯಾರು ಜಾಡಿಸಿದರಯ್ಯಾ
ಬಚ್ಚಲು ಬಾಯೊಳಗೆ
ಉಣ್ಣೆಹುಳಗಳ ಮಂತ್ರ ಮೆರವಣಿಗೆ!
ನರೆತ ಕರಿತಳದ ಸುತ್ತ
ಸತ್ತ ನರಕಾಲುವೆಗೆ ನೆತ್ತರು ಹರಿಸಲೆಳಸಿದ ಯಯಾತಿಯತ್ನದ ಸೂರ!
ಪಕ್ಷಾಂತರದ ರೂಪರಾಕ್ಷಸ!
ತಂಪು ಬಿಯರ್ರಿನ ನೊರೆ ಕರಗಿ ಕಂಡ ವಾಸ್ತವದಲ್ಲಿ
ನೊಂದು ನುಡಿದಿದೆ ಜೀವದನಿ
ತಾನು ತನದೆಂದವರ ಸಾಲುಗೋರಿಗಳ ಕೆಳಗೆ
ಅಲ್ಲಿದೆ
ಕೊ
ನಿನ್ನಂತಿಮದ ಮರ್ಮರದ ತನುವು ಗದ್ದುಗೆ!

ತುತ್ತಿಟ್ಟ ಎದೆಕದಕೆ ಜಾಡಿಸಿದ
ತಾಯಿಗಂಡ
ತನದಲ್ಲೂ ತತ್ವದ ತುಪ್ಪ ತೊಟ್ಟಿಕ್ಕಿಸುವ
ತಪ್ತತುಟಿಗಳ ಸಂತ!
ಅಳಿದ ಗಂಡನ ನೆನೆದತ್ತವಳ ಮುಂದೆ
ಸಣ್ಣಗೆ
ಬಾಲ ತಿರುವಿದ ಕುನ್ನಿ ತೋಳನ ಮುಲುಕು!
ಬೆಂಕಿ ಬಿದ್ದ ಗುಡಿಸಲು ಮೂಲೆಯಲಿ
ಹಾಸು ಹಾಸೆಂದ
ಮುಸುಮುಸು ನಕ್ಕು
ಮಯ್ಯ ಕಾಯಿಸಿಕೊಂಡ ಮುಸಿಯ
ಕಯ್ ಕೊರಳು ಸವರಿ ಸರಿ ಸರಿ ಎಂದ
ಸರ ಬಳೆ ಕಸಿದ
ದಿನದಾಯ ತೂಗಿತ್ತೆಂದು ಬೆರಳು ಮಡಿಚಿದ
ಹಾಲುಗಲ್ಲದ ಮುದಿಯ!
ಗೂರುಗಣಿತದ ಗುರುವು!
ವಿಫಲ ವಿದುರನ ವಿದಾಯ
ಶಾಖದಲಿ
ಮೊಗ್ಗು ಹೂವಾಗಲಿಲ್ಲ
ಹೂವು ಈಚಾಗಿ ಹಣ್ಣು ಮಾಗಲೂ ಇಲ್ಲ.
ಸೋ ಅನ್ನುತಿರಬೇಕು
ಅನವರತ!
ಪರಧನದ ದೊರೆ ಪಟ್ಟ
ಪೊರೆಬಿಟ್ಟ ಸರ್ಪಚಿತ್ತದ ಪತನ!

ಜಾತ್ರೆ ಮುಗಿಸುವ
ಹೊತ್ತು
ಸೂರ್ಯನ ತಡೆಹಿಡಿದು ಸೈಂಧವನ ತರಿವ
ಕೃಷ್ಣ ಚಕ್ರದ ಮಾಯೆ
ಮುಗಿದಿತ್ತು!
ಇಳಿಜಾರು
ಕಾಲೂರು
ಭದ್ರ!
ಕಿಮಟು ಹತ್ತಿದ ಚರಿತೆಯಲಿ
ಮೆದುಳು ಚಿಗಳೊಡೆದು ಮುಗಿಲು ತುಂಬುವುದಕೆ
ಪಾರಿವಾಳಗಳು ಹೊತ್ತು ಹಾರಬೇಕು
ಹೊತ್ತು
ಹೊತ್ತಿಗೂ
ಕಾಯಬೇಕು!
ಕೆಳಗಿಳಿದು ಕಾವ ಕರ್ಮಕ್ಕೆ
ತುದಿಗಾಲು
ನಿಡುನೋಟದುಸಿರು ಬಿಗಿ
ಹಿಡಿಯಬೇಕು...
-ದಾದಾಪೀರ್ ನವಿಲೇಹಾಳ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT