ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ- ಶಿವಜಂಗಮನ ಘೋರ ಹಸಿವು

ದೀಪಾವಳಿ ವಿಶೇಷಾಂಕ 2022: ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Last Updated 20 ನವೆಂಬರ್ 2022, 0:30 IST
ಅಕ್ಷರ ಗಾತ್ರ

ಹೂತು ಹೋಗಿದೆ
ಒಂದು ಕಾಲು ಹಿಮಬೆಟ್ಟದ ಆಳಕೆ.
ಸೆಟೆದು ನಿಂತಿದೆ ಮತ್ತೊಂದು ಕಾಲು
ಮಾದಾರ ಓಣಿಯ
ಗಟ್ಟಿ ಧರಿಯ ತಳಕೆ.
ಸಾಸಿರ ವರ್ಷಗಳಿಂದ
ಹಾಡುತ್ತಿದ್ದಾನೆ
ಕರುಳ ಬಗೆದು ಹಸಿವಿನ ಹಾಡು.
ಆನು ದೇವ ಹೊರಗಣನವನು ಎಂದು
ಶಿವ ಸಾತ್ವಿಕನೆಂಬ ಜಡೆಮುನಿ.
ಕೈಯಲ್ಲಿ ಢಮರು ಚೀರುತ್ತಿದೆ
ಹಸಿದ ಮಾತು ಬಾರದ ಮಗುವಿನಂತೆ
ಐಹೋಂಗ್. . . ಐಹೌಚ್ . . .

2
ಅನ್ನ ಚೀಲಗಳು ಬತ್ತಿಹೋಗಿವೆ
ಸ್ಮಷಾನಗಳಾಗಿ ಬದಲಾದ ಕೆರೆಗಳಂತೆ.
ನರಾಗ್ರಗಳೆಲ್ಲ ಕಣ್ಣಿಗೆ ಕುಕ್ಕುತ್ತಿವೆ
ಬಸರಿ ಮರದ ಬಿಳಲುಗಳಂತೆ.
ಕಂಗಳಲ್ಲಿಯ ಜ್ಯೋತಿ
ಒಂದೊಂದು ಸಲ ಬೆಂಕಿಯಾಗಿ
ಮೊತ್ತೊಂದು ಸಲ
ಶಾಂತ ಪರಂಜ್ಯೋತಿಯಾಗಿ ಉರಿಯುತ್ತಿದೆ.
ಮಗದೊಮ್ಮೆ ಸಂಗೀತದ ನಾದ ನದಿ
ಪುರಿಯಾ ಕಲ್ಯಾಣ ರಾಗದಂತೆ ಹರಿಯುತ್ತಿದೆ

3
ತ್ರಿಶೂಲ ಜಂಗು ಹಿಡಿದು
ಕೆಂಪಗೆ ತುಕ್ಕಿನ ಲೋಳೆ ಬಿಟ್ಟಿದೆ.
ಚಂದಿರ ಕಪ್ಪು ಕಂಬಳಿ ಹೊದ್ದುಕೊಂಡು
ಗಾಢ ನಿದ್ರೆಯಲ್ಲಿದ್ದಾನೆ.
ಅವನಿಗೂ ಗೊತ್ತಾಗಿದೆ
ಇದು ಎಂದೆಂದು ಮುಗಿಯದ ಕಥೆ.
ಕೊರಳ ಸುತ್ತಿದ ನಾಗರ ಹಾವು
ವೃದ್ಧಾಪ್ಯದಿಂದ ಬಳಲುತಿದೆ
ಅದರ ಮೈತುಂಬ ಬಿಳಿ ರೋಮ.
ಅದಕೂ ಹಸಿವಿನ ಚಿಂತೆ
ಉಟ್ಟ ಚರ್ಮಾಂಬರದ ಲುಂಗಿಯ ಮೇಲೆ
ಶತಮಾನದ ದೂಳು ಕುಂತಿದೆ
ಎಷ್ಟೋ ಸಲ ಭೋ ಎಂದು ಅತ್ತಿದ್ದಾನೆ
ಚಡಪಡಿಸಿದ್ದಾನೆ
ತನ್ನ ಕರುಳುಗಳ ಹರಿದು
ಕೊರಳಿಗೆ ಹಾಕಿಕೊಂಡು ಭೈರವನಾಗಿದ್ದಾನೆ

4
ಅವನಿಗೆ ಎಲ್ಲವೂ ನೆನಪಾಗುತ್ತಿದೆ.
ಕಂಚಿಯ ಮಾಧರಚೆನ್ನನ ಅಂಬಲಿಯ ಸವಿ
ತನಗೂ ಈಗ ನಿಷಿದ್ಧವಾಗಿದೆ.
ಏಳು ಸುತ್ತಿನ ತಂತಿ ಬೇಲಿಯ ಮಧ್ಯೆ
ಮೋರಿಯಲಿ ಹರಿವ ಅಂಬಲಿ ರಸವನು ನೋಡಿ
ಹೇಗೆ ಸುಮ್ಮನಿದ್ದಾನೊ?
ಜಿಹ್ವೆಯ ಲಾಲಾರಸ ಹರಿದಿದೆ
ಒಡಲಾಗಿ ನದಿಯಾಗಿ ಕಡಲಾಗಿ
ಕುರುಹುಗಳು ಹೆಸರಾಗಿಸುವ ಕಾಲವಿದು
ಈ ನದಿಗೆ ಏನೆಂದು ಹೆಸರಿಡಲಿ?
ಕೊಟ್ಟ ಹೆಸರು ಕ್ಷಣಾರ್ಧದಲಿ
ಅಳಕಿಸಿ ಹೋಯಿತು
ಶೂನ್ಯದ ಬಯಲಿನಲಿ

5
ತಂತಿಗೆ ಒದ್ದ ಕಾಲು ರಕ್ತ ಜಿನಗಿಸುತ್ತಿದೆ
ಸರ್ವಾಂತರ್ಯಾಮಿ ಸೋತು
ಬಸವಳಿದಿದ್ದಾನೆ.
ಹಲ್ಲು ಕಳೆದುಕೊಂಡ ಅವನ ಹಾವು
ನಿರಂತರ ಬುಸುಗುಡುತ್ತದೆ
ಹಣೆಯ ಚಂದಿರನ
ಬೆಳೆದಿಂಗಳ ಸರಕು
ಮುಗಿದುಹೋಗಿದೆ
ತಂತಿಯ ಬೇಲಿಗಳು
ಇನ್ನೂ ಹೊಸ ರೂಪ ಪಡೆದು
ಮುಂದಡಿ ಇಡದಂತೆ
ಇವನನ್ನು ನಿರ್ಬಂಧಿಸುತ್ತಲಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT