ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಅರ್ಥ ಕಾಮ ಮೋಕ್ಷ ಮತ್ತು ಸ್ವರ್ಗಕ್ಕಾಗಿ

Last Updated 22 ಮೇ 2021, 19:30 IST
ಅಕ್ಷರ ಗಾತ್ರ

ಖಾಲಿ ಹಾಳೆಯ ಮೇಲೆ ಕಪ್ಪು ಕುಳಿ

ಘೋರ ಆಗಸಕ್ಕೆ ಧುಮುಕಿದ ಎಳೆಗೂಸು ನಕ್ಷತ್ರ

ಈಜು ಹೊಡೆಯುವ ಧಾವಂತದಲ್ಲಿ ಕೈಕಾಲು ಬಡಿಯುತ್ತಾ

ಬಿದ್ದೆನೋ ಎದ್ದೆನೋ ತಿಳಿಯದೆ

ಭ್ರಮೆಯ ಅಂತರದಲ್ಲೇ ತೇಲುತಿರಲು

ಅರ್ಥ ಕಾಮ ಮೋಕ್ಷಗಳಿಗಾಗಿ

ನೆಲಕ್ಕುರುಳುವ ಸ್ವರ್ಗ ಅಚಾನಕ್ಕು ಕಣ್ಣಿಗೆ ಬಿದ್ದು


ಬಿಕನಾಸಿ ಜ್ಯೋತಿರ್ವರ್ಷಗಳಷ್ಟು ದೂರ ಸಾಗುತ್ತಾ ಸಾಗುತ್ತಾ

ಎಲ್ಲಿ ಕಣ್ಣು ನೆಟ್ಟರೂ

ಅರ್ಧ ತಾಯಿ

ಅರ್ಧ ತಂದೆ

ಅರ್ಧ ನೆರಳು

ಉಳಿದರ್ಧವೆಲ್ಲ ಕುಲಿಗೇಡಿ ಕ್ಯಾಲೆಂಡರುಗಳು

ತಿರುವಿದಷ್ಟೂ ಅನಾಥ ತಾರೀಖುಗಳ ಹಾವಳಿ,

ಮುಂದಿನ ವರ್ಷದ ದಿನಗಳ ಹಡೆದವರು

ನಡುವಿಶ್ವದಲಿ ಅನೀತಿ ಕೈಬಿಟ್ಟು

ಹಿಂತಿರುಗಿಯೂ ನೋಡಲಾಗದೆ

ಕಳವಳವನೆಲ್ಲ ಈ ಕೂಸಿನ ಉಡಿಯೊಳಗೇ ಬಿಟ್ಟು ಹೋದರಂತೆ

ಅರ್ಥ ಕಾಮ ಮೋಕ್ಷ

ಮತ್ತು ಸ್ವರ್ಗಕ್ಕಾಗಿ


ಯಾವುದೋ ರೈಲ್ವೆ ನಿಲ್ದಾಣದ ಪಡಸಾಲೆಯಲ್ಲಿ

ಅಡ್ಡಾದಿಡ್ಡಿ ನಿದ್ದೆಹೋದ ಯಾತ್ರಿಕರ ಹಿಂಡಿನಲ್ಲಿ

ಎದ್ದು ನಡೆವ ಕನಸುಗಳ ತಡವಿದಾಗ

ಅವ್ವಂದಿರ ಮಡಿಲಲ್ಲಿ ದೇವಪುಷ್ಪಗಳು ಅರಳುತ್ತವೆ


ಚರ್ಮಕ್ಕೊಪ್ಪುವ ಬಣ್ಣ ಮನಸು

ಉಟ್ಟುಕೊಂಡು ತೊಟ್ಟುಕೊಂಡು,

ಒಳಗೊಳಗೇ ಮುಗುಚಿ ಮುಗುಚಿ

ಮೊಣಕಾಲೊರೆಸಿಕೊಂಡು ಮುಲಾಮು ಸವರುತ್ತ

ಉಗುಳು ಅಡ್ಡ ದಾಟುತ್ತಲೇ

ಮುಳ್ಳು ಕೊಂಪೆಗಳ ತನ್ನದೇ ನೆರಳಿಗೆ ಬಿಗಿದು ಕಟ್ಟಿ

ಇಟ್ಟ ಹೆಜ್ಜೆಗಳ ಕರಾಮತಿ ಕಳೆಯುತ್ತ;

ಮುಂದಿನ ಊರಿನ ಟಿಕೆಟ್ಟು

ಟಿಕ್ ಟಿಕ್ ಪಂಚ್ ಮಾಡುವಷ್ಟೊತ್ತಿಗೆ

ಕ್ಯಾಲೆಂಡರು ತಂತಾನೇ ತಿರುವಿಕೊಂಡು ಹರವಿಕೊಂಡು

ಅಪ್ಪಿಕೊಂಡು ಕೈಹಿಡಿಯುವ ಅಪರಂಜಿ ದಿನ ಜಲ್ಮ ದುತ್ತನೆ ಎದ್ದೇಳುತ್ತದೆ.


ನಡೆಯುವುದೇ ನಡೆಯುವುದು ನಡೆಯುವುದೇ ನಡೆಯುವುದು

ಅರ್ಥ ಕಾಮ ಮೋಕ್ಷ

ಮತ್ತು ಸ್ವರ್ಗಕ್ಕಲ್ಲದಿದ್ದರೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT