ಗಾದೆಗಳ ವಿಶಿಷ್ಟ ಕಲಾಕೃತಿ!

7

ಗಾದೆಗಳ ವಿಶಿಷ್ಟ ಕಲಾಕೃತಿ!

Published:
Updated:
Deccan Herald

ಜರ್ಮನಿಯ ಬರ್ಲಿನ್‌ನಲ್ಲಿರುವ ಜರ್ಮಾಲ್ಡಿ ಗ್ಯಾಲೆರಿ ಆರ್ಟ್ ಮ್ಯೂಸಿಯಂನಲ್ಲಿ ಅತ್ಯಂತ ವಿಶಿಷ್ಟವಾದ ಕಲಾಕೃತಿಯನ್ನು ತೂಗುಹಾಕಲಾಗಿದೆ. ಓಕ್ ಮರದ 64x46 ಇಂಚುಗಳ ಅಳತೆಯ ಹಲಗೆಯಲ್ಲಿ ತೈಲವರ್ಣದಲ್ಲಿರುವ ಈ ಪೇಂಟಿಂಗ್, 16 ನೇ ಶತಮಾನದ್ದು.

ಇದರಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಗಂಡಸರು, ಹೆಂಗಸರು, ಮಕ್ಕಳು ಮತ್ತು ಪ್ರಾಣಿಗಳ ಪುಟ್ಟ ಆಕೃತಿ (ಮಿನಿಯೇಚರ್) ಚಿತ್ರಗಳಿವೆ. ಇದರಲ್ಲಿರುವ ಪ್ರತಿಯೊಬ್ಬರೂ ಅತ್ಯಂತ ವಿಲಕ್ಷಣ ಕಾರ್ಯಗಳಲ್ಲಿ ತೊಡಗಿರುವಂತೆ ತೋರಿಸಲಾಗಿದೆ. ಇಬ್ಬರು ಕಿಟಕಿ ಹೊರಗೆ ಮಲವಿಸರ್ಜನೆ ಮಾಡುತ್ತಿರುವ, ಮತ್ತೊಬ್ಬನು ಮರದ ಕಂಬವನ್ನು ಹಲ್ಲಿನಿಂದ ಕಚ್ಚುತ್ತಿರುವ, ಮಗದೊಬ್ಬ ಗೋಡೆಗೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತಿರುವ, ಇನ್ನೊಬ್ಬ ಕರುವನ್ನು ಹೂಳುತ್ತಿರುವ, ಬೆಕ್ಕಿಗೆ ಗಂಟೆ ಕಟ್ಟುತ್ತಿರುವವನೊಬ್ಬ ಮತ್ತೊಬ್ಬ ಚೆಲ್ಲಿದ ಗಂಜಿಯನ್ನು ಹೆಕ್ಕಲು ಪ್ರಯತ್ನಿಸುತ್ತಿರುವುದು ಸೇರಿದಂತೆ ಒಂದಕ್ಕೊಂದು ಹೊಂದಾಣಿಕೆ ಇಲ್ಲದ ಕೆಲಸಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಚಿತ್ರಿಸಲಾಗಿದೆ.

ಈ ವಿಚಿತ್ರವಾದ ಕಲಾಕೃತಿಯನ್ನು ರಚಿಸಿದ ಕಲಾವಿದ ಪೀಟರ್ ಬ್ರುಗೆಲ್ ದಿ ಎಲ್ಡರ್. ಪುನರುಜ್ಜೀವನದ ಕಾಲದಲ್ಲಿದ್ದ ಪ್ರಮುಖ ಡಚ್ ಕಲಾವಿದರಲ್ಲಿ ಈತನೂ ಒಬ್ಬ. ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ಎಂಬ ಶೀರ್ಷಿಕೆಯ ಈ ಪೇಟಿಂಗ್ ನಲ್ಲಿ ಒಂದು ನೂರಕ್ಕೂ ಜಾಸ್ತಿ ಸಂಖ್ಯೆಯಲ್ಲಿ ಡಚ್ ಭಾಷೆಯ ಗಾದೆಗಳು ಹಾಗೂ ನುಡಿಗಟ್ಟುಗಳ ದೃಷ್ಟಾಂತಗಳನ್ನು ಅಕ್ಷರಶಃ ಚಿತ್ರಿಸಲಾಗಿದೆ. ಇದನ್ನು ಮೂಲತಃ ದಿ ಬ್ಲೂ ಕ್ಲೋಕ್ ಅಥವಾ ದಿ ಫೊಲಿ ಆಫ್ ದಿ ವರ್ಲ್ಡೆಂದು ಕರೆಯುತ್ತಿದ್ದರು.

ಕೇವಲ ಗಾದೆಗಳ ಅಥವಾ ನುಡಿಗಟ್ಟುಗಳ ದೃಷ್ಟಾಂತವನ್ನು ನೀಡುವುದಾಗಿರದೆ ಮನುಷ್ಯರ ಮೂರ್ಖತನವನ್ನು ಸಚಿತ್ರವಾಗಿ ವಿವರಿಸಬೇಕೆಂದು ಬ್ರುಗೆಲ್‌ನ ಉದ್ದೇಶವಾಗಿತ್ತೆಂದು ಇದರಿಂದ ತಿಳಿದುಬರುತ್ತದೆ. ಕಲಾಕೃತಿಯಲ್ಲಿ, ಹಲವಾರು ಗಾದೆಗಳು ಮನುಷ್ಯನ ಅಸಂಬದ್ಧವಾದ ನಡವಳಿಕೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಇನ್ನೂ ಅನೇಕ ಗಂಭೀರವಾದ ಉಕ್ತಿಗಳು, ಅವಿವೇಕಿಗಳಿಂದಾಗುವ ಅಪಾಯಗಳು ಪಾತಕಕ್ಕೆ ಎಡೆಮಾಡಿಕೊಡುವುದನ್ನು ಚಿತ್ರಸಮೇತ ವಿವರಿಸುತ್ತವೆ.

ಬ್ರುಗೆಲ್‌ನ ಕಾಲದಲ್ಲಿ ಮತ್ತು ಅದಕ್ಕೂ ಮೊದಲು ಗಾದೆಗಳು ಹೆಚ್ಚು ಜನಪ್ರಿಯವಾಗಿದ್ದವು. ಡಚ್ಚರು ಮತ್ತು ಫ್ಲೆಮಿಶ್ ಲೇಖಕರ ಯುಗದಲ್ಲಿ ಇವುಗಳನ್ನು ಧಾರಾಳವಾಗಿ ಬಳಸಿದ್ದರೆಂಬುದು ಅವರ ಬರಹಗಳಿಂದ ತಿಳಿಯುತ್ತದೆ. ನೆದರ್‌ಲ್ಯಾಂಡಿಶ್ ಪ್ರಾವರ್ಬ್ ಪೇಂಟಿಂಗ್‌ಗಿಂತ ಐವತ್ತಕ್ಕೂ ಅಧಿಕ ವರ್ಷಗಳ ಕಾಲದ ಮೊದಲು ಡಚ್ ಮಾನವತಾವಾದಿ ಡೆಸಿಡೆರಿಯಸ್ ಎರಾಸ್ಮಸ್‌ನು ಅಡಾಜಿಯ ಎಂಬ ಹೆಸರಿನ ಸಂಪುಟವನ್ನು ಪ್ರಕಟಿಸಿದ್ದನು. ಇದರಲ್ಲಿ ಎಂಟು ನೂರಕ್ಕೂ ಜಾಸ್ತಿ ಗ್ರೀಕ್ ಹಾಗೂ ಲ್ಯಾಟಿನ್ ಗಾದೆಗಳನ್ನು ಒಟ್ಟುಗೂಡಿಸಿದ್ದನು.

ಎಂಟು ವರ್ಷದ ನಂತರ ಮೂರು ಸಾವಿರಕ್ಕೂ ಹೆಚ್ಚು ಗಾದೆಗಳನ್ನು ಸಂಗ್ರಹಿಸಿ ಸಂಪುಟವನ್ನು ವಿಸ್ತರಿಸಿದನು. ಈ ಸಂಗ್ರಹಣೆ ಕಾರ್ಯ ಹಾಗೆಯೇ ಮುಂದುವರೆದು ಎರಾಸ್ಮಸ್ ನ ಮರಣ ಕಾಲದಲ್ಲಿ (1536) ಗಾದೆಗಳ ಸಂಖ್ಯೆ ನಾಲ್ಕು ಸಾವಿರವನ್ನು ದಾಟಿತ್ತು. ಎರಾಸ್ಮಸ್‌ನು ಒಟ್ಟುಗೂಡಿಸಿ ಬರೆದಿಟ್ಟ ಗಾದೆಗಳ ಈ ಸಂಗ್ರಹಣೆಯು ಇಂದಿಗೂ ದಾಖಲೆಯಾಗಿದೆ.

ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್, ಬ್ರುಗೆಲ್‌ನ ಮೊಟ್ಟ ಮೊದಲನೆಯ ಅಥವಾ ಗಾದೆ ವಿಷಯ ಕುರಿತಾಗಿಯೇ ರಚಿಸಿದ ಪೇಂಟಿಂಗ್ ಅಲ್ಲ. ಈ ಪೇಂಟಿಂಗ್ ಮಾಡುವ ಒಂದು ವರ್ಷ ಮೊದಲು 1558ರಲ್ಲಿ ಈತನು 12 ಗಾದೆಗಳ ಸರಣಿ ಚಿತ್ರಗಳನ್ನು ಬೇರೆ ಬೇರೆ ಹಲಗೆಗಳ ಮೇಲೆ ಹಾಗೂ ಬಿಗ್ ಫಿಶ್ ಈಟ್ ಲಿಟಲ್ ಫಿಶ್ ಹೆಸರಿನ ಕಲಾಕೃತಿಯನ್ನು 1556ರಲ್ಲಿ ರಚನೆ ಮಾಡಿದ್ದನು. ಆದರೆ ದೊಡ್ಡ ಅಳತೆ ಪ್ರಕಾರದ ಮೊದಲನೆ ಚಿತ್ರವನ್ನು ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ಪ್ರತಿನಿಧಿಸುತ್ತದೆ.

ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್ ಕಲಾಕೃತಿಯಲ್ಲಿರುವ ಗಾದೆಗಳ ನಿಖರ ಸಂಖ್ಯೆ ಸ್ವಲ್ಪಮಟ್ಟಿಗೆ ಸಂದೇಹಾಸ್ಪದ ಇದರ ಬಗ್ಗೆ ಆಧುನಿಕ ವಿದ್ವಾಂಸರ ವ್ಯಾಖ್ಯಾನವು ಬೇರೆ ಬೇರೆಯದ್ದಾಗಿದೆ.

ಕೆಲವು ಪ್ರಕರಣಗಳಲ್ಲಿ ಒಂದಕ್ಕಿಂತ ಹೆಚ್ಚು ಗಾದೆಗಳು ಒಂದೇ ಘಟಕದಲ್ಲಿ ಅಡಕವಾಗಿವೆ. ಅಂದಾಜು 112 ಗಾದೆಗಳು ಹಾಗೂ ನುಡಿಗಟ್ಟುಗಳನ್ನು ಗುರುತು ಹಿಡಿಯಬಹುದೆಂದು ವಿಮರ್ಶಕರು ಕಂಡುಹಿಡಿದಿದ್ದಾರೆ. ಅದಾಗ್ಯೂ ಬೇರೆ ಗಾದೆಗಳನ್ನು ಬ್ರುಗೆಲ್‌ನು ಸೇರಿಸಿದ್ದಿರಬಹುದಾದರೂ ಅವುಗಳನ್ನು ನಿರ್ಧರಿಸಲು ಆಗುವುದಿಲ್ಲ. ಯಾಕೆಂದರೆ ಅವುಗಳ ಬಳಕೆಯೇ ನಿಂತುಹೋಗಿರಬಹುದು ಅಥವಾ ಭಾಷೆ ಬದಲಾಗಿರಬಹುದು.

ಬ್ರುಗೆಲ್‌ನು ತಾನು ಸಂಗ್ರಹಿಸಿದ ಗಾದೆಗಳನ್ನು ಹಲವಾರು ಪಾತ್ರಗಳಲ್ಲಿ, ಕಟ್ಟಡಗಳಲ್ಲಿ ಮತ್ತು ಭೂದೃಶ್ಯ (ಲ್ಯಾಂಡ್ ಸ್ಕೇಪ್)ಗಳಲ್ಲಿ ಕಲ್ಪನಾತೀತ ರೀತಿಯಲ್ಲಿ ಅಡಗಿಸಿದ್ದಾನೆ. ಪ್ರವಾಹಕ್ಕೆದುರಾಗಿ ಈಜಾಡುವುದು, ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರಂತೆ, ಬೆಟ್ಟ ಅಗೆದು ಇಲಿಯನ್ನು ಹುಡುಕಿದಂತೆ, ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ದಿ ಬಾಗಿಲು ಹಾಕಿದರಂತೆ ಎಂಬೆಲ್ಲ ಅರ್ಥ ಬರುವ ಗಾದೆಗಳನ್ನು ಇಲ್ಲಿ ನೋಡಬಹುದು. ಒಟ್ಟಾರೆಯಾಗಿ ಮನುಷ್ಯ ಮಾಡುವ ಹಲವಾರು ಮೂರ್ಖತನದ ಕೆಲಸಗಳನ್ನು ಬ್ರುಗೆಲ್‌ನು ಸಚಿತ್ರವಾಗಿ ನೆದರ್‌ಲ್ಯಾಂಡಿಶ್ ಪ್ರಾವರ್ಬ್ಸ್‌ನಲ್ಲಿ ತೋರಿಸಿಕೊಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !