ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸೆಲ್ ಮಾರುಕಟ್ಟೆ ಒತ್ತುವರಿಯನ್ನು ಒಪ್ಪಲು ಸಾಧ್ಯವೇ?

ತೆರವು ಕಾರ್ಯಾರಣೆಯನ್ನು ಸಮರ್ಥಿಸಿಕೊಂಡ ಬಿಬಿಎಂಪಿ
Last Updated 8 ಮೇ 2019, 20:00 IST
ಅಕ್ಷರ ಗಾತ್ರ

ಮಾರುಕಟ್ಟೆ ಎಂದರೆ ವ್ಯಾಪಾರ, ಜನಸಂದಣಿ ಸಾಮಾನ್ಯ. ಆದರೆ ಅವಘಡಗಳು ನಡೆದರೆ ಅಲ್ಲಿರುವ ವರ್ತಕರು ಹಾಗೂ ಖರೀದಿಗೆ ಬಂದ ಗ್ರಾಹಕರಿಗೇ ಮೊದಲು ತೊಂದರೆಯಾಗುತ್ತದೆ ಎನ್ನುತ್ತಾರೆ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ಜಿ. ರವೀಂದ್ರ.

ರಸೆಲ್ ಮಾರುಕಟ್ಟೆಯಲ್ಲಿ ಆಗಿರುವುದೂ ಇದೇ. ಅಲ್ಲಿ ಪಾದಚಾರಿ ಮಾರ್ಗ ಇದ್ದೂ ಇಲ್ಲದಂತಾಗಿದೆ. ಫುಟ್‌ಪಾತ್ ಪೂರ್ತಿ ವ್ಯಾಪಾರಿಗಳ ಕಾರುಬಾರು. ಅದು ಅಷ್ಟಕ್ಕೇ ನಿಲ್ಲುವುದಿಲ್ಲ, ರಸ್ತೆಯ ಅರ್ಧಭಾಗವನ್ನೂ ಅವರೇ ಕಬಳಿಸಿದರೆ ಸರಿ ಎನ್ನಲು ಸಾಧ್ಯವೇ ಎನ್ನುವುದು ಅವರ ಪ್ರಶ್ನೆ.

ಬೆಂಕಿ ಆಕಸ್ಮಿಕ ಸಂಭವಿಸಿದರೆ ಅಗ್ನಿಶಾಮಕ ವಾಹನಗಳು ಸಂಚರಿಸಲೂ ಅಲ್ಲಿ ಅವಕಾಶವಿಲ್ಲ. ತುರ್ತು ಸ್ಥಿತಿಯಲ್ಲಿ ಆಂಬುಲೆನ್ಸ್ ಓಡಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇರುವಾಗ, ಜನರ ಸುರಕ್ಷತೆಯೇ ಆದ್ಯತೆಯ ವಿಷಯವಾಗುತ್ತದೆ. ನ್ಯಾಯಾಲಯದ ಕಳಕಳಿಯೂ ಇದೇ ಎನ್ನುತ್ತಾರೆ ವಿಶೇಷ ಆಯುಕ್ತರು.

ಹೈಕೋರ್ಟ್ ಆದೇಶದಂತೆ ಮಾರುಕಟ್ಟೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಮಾರಾಟ ಕೇಂದ್ರಗಳನ್ನು ಹಾಗೂ ಪಾದಚಾರಿ ಮಾರ್ಗ ಒತ್ತುವರಿಯನ್ನು ಬಿಬಿಎಂಪಿ ಇತ್ತೀಚೆಗೆ ತೆರವುಗೊಳಿಸಿದೆ. ಇದಕ್ಕೆ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ರಂಜಾನ್ ಮಾಸ ಮುಗಿಯುವವರೆಗಾದರೂ ತೆರವು ಕಾರ್ಯಾಚರಣೆ ಮುಂದೂಡಬೇಕಿತ್ತು ಎಂದು ವರ್ತಕರು ಅಳಲು ತೋಡಿಕೊಂಡಿದ್ದರು. ಆದರೆ ‘ಹಬ್ಬಗಳನ್ನು ನೋಡಿಕೊಂಡು ಅವಘಡಗಳು ಸಂಭವಿಸುತ್ತವೆಯೇ’ ಎಂದುಪ್ರಶ್ನಿಸುತ್ತಾರೆ ರವೀಂದ್ರ.

ತೆರವುಗೊಳಿಸಿದ ಅಂಗಡಿಗಳು ಅನಧಿಕೃತ ಸ್ಥಳದಲ್ಲಿ ಇರುವಾಗ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ಅಥವಾ ಬೇರೆಕಡೆ ಜಾಗ ಕೊಡುವ ಪ್ರಶ್ನೆಯೇ ಉದ್ಭವಿಸದು ಎಂದು ಸ್ಪಷ್ಟಪಡಿಸಿದರು.

ಜನರ ಮನಸ್ಥಿತಿ ಬದಲಾಗಲಿ

ಮಾರುಕಟ್ಟೆಯ ಆವರಣದಲ್ಲಿರುವ ಪಾರ್ಕಿಂಗ್‌ ಜಾಗವೂ ಅನಧಿಕೃತ. ಶಾಪಿಂಗ್‌ಗೆಂದು ಬರುವ ಜನರಿಗೆ ಮಾರುಕಟ್ಟೆಯಲ್ಲೇ ಪಾರ್ಕಿಂಗ್‌ ಒದಗಿಸುವುದು ಕಷ್ಟಸಾಧ್ಯ. 25 ವರ್ಷಗಳ ಹಿಂದಿನ ಬೆಂಗಳೂರು ಈಗಿಲ್ಲ. ಜನಸಂಖ್ಯೆ ದೊಡ್ಡದಾಗಿ ಬೆಳೆದಿದೆ. ಹೊರಗಿನಿಂದ ಬರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಾರುಕಟ್ಟೆಯಲ್ಲೇ ಗಾಡಿ ನಿಲ್ಲಿಸಲು ಈಗ ಅಸಾಧ್ಯ ಎನ್ನುತ್ತಾರೆ ವಿಶೇಷ ಆಯುಕ್ತರು. ನಿಗದಿತ ಸ್ಥಳಗಳಲ್ಲೇ ವಾಹನಗಳನ್ನು ಪಾರ್ಕ್‌ ಮಾಡಿ ಮಾರುಕಟ್ಟೆಗೆ ಬರುವುದನ್ನು ಗ್ರಾಹಕರೂ ರೂಢಿ ಮಾಡಿಕೊಳ್ಳಬೇಕು ಎನ್ನುವುದು ಅವರ ಸಲಹೆ.

ಆಯುಕ್ತರ ವಾಹನಕ್ಕೂ ಅವಕಾಶವಿಲ್ಲ

ರಸ್ತೆಯನ್ನು ತೆರವುಗೊಳಿಸಿದ ಮಾತ್ರಕ್ಕೆ ರಸ್ತೆಯಲ್ಲಿ ಪೊಲೀಸ್ ವಾಹನಗಳನ್ನು ನಿಲ್ಲಿಸಬಹುದು ಎಂದೇನೂ ಅಲ್ಲ. ಏನಾದರೂ ಗಲಾಟೆ ನಡೆದರೆ, ಅನಾಹುತ ಸಂಭವಿಸಿದರೆ ಮಾತ್ರ ಪೊಲೀಸ್ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಬಹುದು. ಅದನ್ನು ಹೊರತುಪಡಿಸಿದರೆ, ಬಿಬಿಎಂಪಿ ಆಯುಕ್ತರ ವಾಹನ ನಿಲುಗಡೆಗೂ ಅಲ್ಲಿ ಅವಕಾಶ ನಿಷಿದ್ಧ. ನಿಮಯ ಎಲ್ಲರಿಗೂ ಅನ್ವಯ ಎಂದು ಅವರು ಸ್ಪಷ್ಟ ಮಾತುಗಳನ್ನು ತಿಳಿಸಿದರು.

ಹೊಣೆ ಯಾರು?

ಬೆಂಕಿ ಅನಾಹುತ ಸಂಭವಿಸಿ, ಅಮಾಯಕ ಜೀವಗಳು ಬಲಿಯಾಗಬಾರದು ಎಂಬುದು ಮುಖ್ಯ ಉದ್ದೇಶ. ಹೈಕೋರ್ಟ್ ಕಳಕಳಿಯೂ ಇದೇ ಆಗಿದೆ. ಒಂದು ವೇಳೆ ಅನಾಹುತ ಘಟಿಸಿದಾಗ, ಬಿಬಿಎಂಪಿ ಅಧಿಕಾರಿಗಳನ್ನೇ ಮೊದಲು ದೂರುತ್ತಾರೆ. ಮುನ್ನೆಚ್ಚರಿಕೆಯಾಗಿ ತೆಗೆದುಕೊಂಡ ಈ ಕ್ರಮ ಸರಿಯಾಗಿದೆ ಎಂದು ವಿಶೇಷ ಆಯುಕ್ತರು ಪಾಲಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ಮಾರುಕಟ್ಟೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯ ವಿಲೇವಾರಿಗೆ ಒಂದು ವ್ಯವಸ್ಥೆಯಿದೆ. ಆದರೆ ಅಲ್ಲಿನ ವ್ಯಾಪಾರಿಗಳು ಈ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಂಡಿಲ್ಲ ಎನ್ನುವುದು ಅವರ ಆರೋಪ. ಉದಾಹರಣೆಗೆ, ಪಾದಚಾರಿ ಮಾರ್ಗದಲ್ಲಿ ಟೊಮೆಟೊ ಮಾರುವ ವರ್ತಕರು ವ್ಯಾಪಾರ ಮುಗಿಸಿ ಹೊರಡುವಾಗ, ಕೆಟ್ಟಿರುವ ಹಣ್ಣುಗಳನ್ನು ಅಲ್ಲಿಯೇ ಬಿಟ್ಟು ನಡೆಯುತ್ತಾರೆ. ಮರುದಿನ ಅದು ಕೊಳೆತು ನಾರುತ್ತದೆ. ಬೇರೆ ದೇಶಗಳ ಮಾರುಕಟ್ಟೆಗಳು ಎಷ್ಟೊಂದು ನೈರ್ಮಲ್ಯದಿಂದ ಕೂಡಿರುವಾಗ ನಮ್ಮಲ್ಲೇಕೆ ಹೀಗೆ ಎಂದು ಕೇಳುವವರೇ ಮಾರುಕಟ್ಟೆಗಳನ್ನು ಹಾಳುಗೆಡವುತ್ತಿದ್ದಾರೆ ಎಂದು ಅವರು ದೂರಿದರು. ತಮ್ಮ ಸುತ್ತಲಿನ ಪರಿಸರದ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಜವಾಬ್ದಾರಿ ಅಲ್ಲಿನ ವ್ಯಾಪಾರಿಗಳಿಗೆ ಬಂದರೆ, ಮಾರುಕಟ್ಟೆಯೂ ಕಳೆಗಟ್ಟುತ್ತದೆ ಎಂದು ತಮ್ಮ ಮಾತು ಮುಗಿಸಿದರು ಎಸ್‌.ಜಿ. ರವೀಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT