ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಜಗದ ಹೊನ್ನಿನಂಥ ಗುರು

Last Updated 26 ಜನವರಿ 2019, 19:30 IST
ಅಕ್ಷರ ಗಾತ್ರ

ಡಾ. ಬಿ.ಜಿ.ಎಲ್. ಸ್ವಾಮಿ ಅವರನ್ನು ನೋಡಿದ್ದು ಒಮ್ಮೆ ಮಾತ್ರ. ಎಪ್ಪತ್ತರ ದಶಕದಲ್ಲಿ ಶಿರಸಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ. ಅವರ ಮಾತುಗಳನ್ನು ಕೇಳಿಸಲು ನಮ್ಮ ಶಾಲೆಯ ಶಿಕ್ಷಕರು ನಮ್ಮನ್ನೆಲ್ಲ ಕರೆದೊಯ್ದಿದ್ದರು. ಅವರು ಅಂದು ಆಡಿದ್ದೇನೂ ಅರ್ಥವಾಗದಿದ್ದರೂ, ಅವರ ಚಿತ್ರ ಮಾತ್ರ ಮನದಲ್ಲಿ ಅಳಿಯದೇ ಉಳಿದಿದೆ. ಉದ್ದನೆಯ ಬಿಳಿ ಕುರ್ತಾ, ಕೈಯಲ್ಲಿ ಕಪ್ಪನೆಯ ಸೇದುಕೊಳವೆ! ಅವರ ಭಾಷಣದ ತಿರುಳು ತಿಳಿದದ್ದು ಬುದ್ಧಿ ಬಲಿತಮೇಲೆ. ಕೃಷಿಯಲ್ಲಿರಬೇಕಾದ ತಳಿ ವೈವಿಧ್ಯದ ಮಹತ್ವ ಕುರಿತು ಅವರು ವಿವರಿಸಿದ್ದನ್ನು, ಬಿಜಿಎಲ್ ಸಾಹಿತ್ಯದ ಅಭಿಮಾನಿಯಾಗಿದ್ದ ಕೃಷಿಋಷಿ ದಿವಂಗತ ಅಶಿಸರ ನಾರಾಯಣ ಹೆಗಡೆಯವರು ನೆನಪಿಸಿಕೊಳ್ಳುತ್ತಿದ್ದರು. ಹವಾಮಾನ ಬದಲಾವಣೆಯಂಥ ಸಂಗತಿಗಳ ಕುರಿತೂ ಆಗಲೇ ಅವರು ಚರ್ಚಿಸಿದ್ದನ್ನು ರೈತವಿಜ್ಞಾನಿ ಭೈರುಂಬೆಯ ಕೆ.ಎಂ. ಹೆಗಡೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಸಂಶೋಧನೆಯ ಕಾಣ್ಕೆಗಳನ್ನು ಸಾಮೂಹಿಕ ಹಿತಕ್ಕಾಗಿ ವ್ಯಯಿಸುವುದನ್ನು ತೋರಿಸಿಕೊಟ್ಟ ಕನ್ನಡದ ಮಾದರಿಯಂತೆ ತೋರುತ್ತಾರೆ ಬಿಜಿಎಲ್.

ಪ್ರಸಿದ್ಧ ಸಾಹಿತಿ ಡಿವಿಜಿ ಹಾಗೂ ಭಾಗೀರತಮ್ಮ ದಂಪತಿಗಳ ಮಗನಾದ ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿಯವರ (ಬಿಜಿಎಲ್) ಜನ್ಮಶತಮಾನೋತ್ಸವ ವರ್ಷವಿದು (5 ಫೆಬ್ರವರಿ 1918- 1 ನವೆಂಬರ್ 1980). ವೈಜ್ಞಾನಿಕ ನಿಯತಕಾಲಿಕೆಗಳಲ್ಲಿನ ಅವರ ಅನೇಕ ಲೇಖನಗಳು, ಇಂದಿಗೂ ಸಸ್ಯವರ್ಗೀಕರಣಶಾಸ್ತ್ರದ ಸಂಶೋಧನಾ ಲೇಖನಗಳ ಉಲ್ಲೇಖ ಯಾದಿಗೆ ಸೇರುವಂಥವು. ಅಧ್ಯಾಪಕರಾಗಿ ಅವರು ಪಾಲಿಸಿದ ಮೌಲ್ಯಗಳಂತೂ, ಸಸ್ಯಶಾಸ್ತ್ರದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ತಲೆಮಾರುಗಳನ್ನೇ ಪ್ರಭಾವಿಸುವ ಶಕ್ತಿಯಳ್ಳವು. ಬಿಜಿಎಲ್ ಬರೆದ ಬರಹಗಳು, ಕನ್ನಡದ ಉತ್ಕೃಷ್ಟ ಲಲಿತ ಪ್ರಬಂಧ ಪರಂಪರೆಯನ್ನು ಪ್ರತಿನಿಧಿಸುವ ಸಾಮರ್ಥ್ಯದ್ದು. ಗ್ರಂಥಾಲಯದಲ್ಲಿನ ಅಧ್ಯಯನ, ಪ್ರಯೋಗಾಲಯದಲ್ಲಿನ ಪರೀಕ್ಷೆ, ಕ್ಷೇತ್ರಾಧ್ಯಯನದ ಅನುಭವ- ಎಲ್ಲವನ್ನೂ ಎರಕಹೊಯ್ದು ಅವರು ವಿದ್ಯಾರ್ಥಿಗಳಿಗೆ ಮಾಡುತ್ತಿದ್ದ ಪಾಠಗಳು ಹಾಗೂ ಬರಹಗಳ ಮೂಲಕ ಕನ್ನಡದ ಸಾಹಿತ್ಯಾಸಕ್ತರನ್ನು ಪ್ರಭಾವಿಸಿದ ರೀತಿ ಅನನ್ಯ. ಈ ವಿದ್ವತ್ ಋಣಕ್ಕೆ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸಲ್ಲಿಸಬಹುದಾದದ್ದು, ಅಕ್ಷರರೂಪಿ ಸ್ಮರಣೆ ಮಾತ್ರ.

‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ನಾನು ಮೊತ್ತ ಮೊದಲು ಓದಿದ ಬಿಜಿಎಲ್ ಕೃತಿ. ಅದರಲ್ಲಿ ತೋರಿದ ಸಸ್ಯಲೋಕದ ಯಾತ್ರಾ ವೈಖರಿ, ಆ ಹೈಸ್ಕೂಲಿನ ವಯಸ್ಸಿನಲ್ಲಿ ಅಚ್ಚರಿ ಮೂಡಿಸಿತ್ತು. ಬಟಾಟೆ, ಟೊಮೇಟೋಗಳೆಲ್ಲ ಖಂಡಾಂತರ ಮಾಡಿ, ಈ ನೆಲದ ಹೊಲದಲ್ಲರಳಿ, ನಮ್ಮೆಲ್ಲರ ಅಡುಗೆಮನೆ ಸೇರಿ, ಅಮ್ಮ ಬಡಿಸುವ ದೇಶಿ ಊಟದ ಭಾಗವಾದ ಕಥನವೇ ಅದ್ಭುತ. ಇವು ಕೇವಲ ಗಿಡಗಳ ಕಥೆಯಲ್ಲ. ಇತಿಹಾಸ, ಭೂಗೋಳಶಾಸ್ತ್ರ, ಮಾನವಶಾಸ್ತ್ರದ, ಪರಿಸರಶಾಸ್ತ್ರಗಳ ಪಾಠ ಕೂಡ! ಇಂದಾದರೋ ದೇಶ- ಭಾಷೆಗಳನ್ನು ಮೀರಿ ನಮ್ಮ ಮೈ- ಮನವನ್ನಾಕ್ರಮಿಸಿರುವ ಅನೇಕ ವಿದೇಶಿ ಗಿಡ-ಮರ-ಬಳ್ಳಿಗಳಿವೆ. ಆಫ್ರಿಕಾದ ಕಾಫಿ ಅಥವಾ ಚೀನಾದ ಚಹಾ ಇಲ್ಲದೆ ನಮಗೆ ಸೂರ್ಯೋದಯವಾಗುವದಿಲ್ಲ.

ಆಫ್ರಿಕಾ, ಯುರೋಪ್ ಕಡೆಯಿಂದ ಬಂದು ಇಲ್ಲಿನ ಹೂದೋಟಗಳಲ್ಲಿ ಸ್ಥಳೀಯ ಸೌಂದರ್ಯಖನಿಗಳ ಜೊತೆಗೆ ಸ್ಪರ್ಧೆಗಿಳಿದಿರುವ ತರಹೇವಾರಿ ಹೂಗಿಡಗಳಿಗಂತೂ ಲೆಕ್ಕವಿಲ್ಲ. ಅಮೆರಿಕ ದಿಕ್ಕಿನಿಂದಲೇ ಬಂದ ಪಾರ್ಥೇನಿಯಂ, ಲಂಟಾನ ತರಹದ ಕಳೆಗಳಂತೂ ಕಾಡು-ಹೊಲಗಳನ್ನೆಲ್ಲ ಆಕ್ರಮಿಸುತ್ತ, ಭೂಮಿಯಲ್ಲಿ ಪಾಲು ಕೇಳುವ ದಾಯಾದಿಗಳೇ ಆಗಿಬಿಟ್ಟಿವೆ. ಆಫ್ರಿಕಾದಿಂದ ಇತ್ತೀಚೆಗಷ್ಟೇ ಬಂದಿರುವ ‘ಎಥುಲಿಯಾ’, ಉತ್ತರ ಕರ್ನಾಟಕದಲ್ಲೀಗ ವೇಗವಾಗಿ ಹಬ್ಬುತ್ತಿರುವ ಇನ್ನೊಂದು ಕಳೆ. ಕೃಷಿ ಇಳುವರಿ, ಜನ-ಜಾನುವಾರಗಳ ಆರೋಗ್ಯ ಹಾಗೂ ಪರಿಸರದ ಸುಸ್ಥಿರತೆ - ಎಲ್ಲವುಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿವೆ.

ಆಸ್ಟ್ರೇಲಿಯಾದಿಂದ ಬಂದ ನೀಲಗಿರಿ, ಮ್ಯಾಂಜಿಯಂ, ಅಕೇಶಿಯಾಗಳಂತೂ ಮನೆ-ಕಚೇರಿಗಳ ಪೀಠೋಪಕರಣಗಳಷ್ಟೇ ಅಲ್ಲ, ಸರ್ಕಾರಿ ನೀತಿಯನ್ನೇ ನಿರ್ದೇಶಿಸುವ ರಾಜಪ್ರಭೇದಗಳಾಗಿ ಏರಿ ಕುಳಿತಿವೆ. ಈ ಪ್ರವಾಸಿ ಸಸ್ಯಜಗತ್ತನ್ನು ಸಮಗ್ರವಾಗಿ ಗ್ರಹಿಸಲು ಸಸ್ಯಶಾಸ್ತ್ರದಲ್ಲೀಗ ಪ್ರತ್ಯೆಕ ವಿಭಾಗವೇ ವಿಕಾಸವಾಗಿದೆ. ಈ ಅತಿಥಿಗಳನ್ನೂ ಹಾಗೂ ಅವುಗಳ ಅಟಾಟೋಪಗಳನ್ನೆಲ್ಲ ನಿರ್ವಹಿಸಲು, ಸರ್ಕಾರವು ಮುಂದೆ ಹೊಸ ಇಲಾಖೆಯನ್ನೂ ತೆರೆಯಬೇಕಾದೀತು! ಆದರೆ, ಈ ಸಂಕೀರ್ಣ ಸಂಗತಿಗಳನ್ನೆಲ್ಲ ಜನಮಾನಸದಲ್ಲಿ ಬಿಂಬಿಸಬಲ್ಲ ಬಿಜಿಎಲ್ ಬರೆದ ರೀತಿಯ ಇನ್ನೊಂದು ಕನ್ನಡ ಗ್ರಂಥ ಮಾತ್ರ ಇನ್ನೂ ಬರಬೇಕೆನ್ನಿಸುತ್ತದೆ.

ಪಿಯುಸಿಯಲ್ಲಿ ಓದಿದ ‘ಹಸಿರು ಹೊನ್ನು’ ನನ್ನಂಥ ಹಲವರಿಗೆ ಪದವಿಯಲ್ಲಿ ಸಸ್ಯಶಾಸ್ತ್ರ ಓದಲು ಪ್ರೇರೇಪಿಸಿದ ಸಂಗತಿಗಳಲ್ಲಿ ಒಂದು. ಪಶ್ಚಿಮ ಘಟ್ಟಗಳ ಕಣಿವೆಗಳಲ್ಲಿ ಗಿಡ ಹುಡುಕುತ್ತ ಸಾಗುವ ರೋಮಾಂಚನ, ಅಪರೂಪದ ಗಿಡಗಳ ಗುಣ- ರೂಪಗಳ ಸಸ್ಯಶಾಸ್ತ್ರೀಯ ವರ್ಣನೆ, ಪುರಾಣೇತಿಹಾಸಗಳಲ್ಲಿ ಅವುಗಳ ಪ್ರತಿಫಲನ, ಜೀವವಿಕಾಸದಲ್ಲಿ ಇವುಗಳಿಗಿರಬಹುದಾದ ವಿಶಿಷ್ಟ ಸ್ಥಾನ - ಇವನ್ನೆಲ್ಲ ವಿವರಿಸುತ್ತಲೇ ನಮ್ಮನ್ನು ಸಸ್ಯಶಾಸ್ತ್ರದ ಮಡಿಲಿಗೆ ನೂಕಿದ ಕೃತಿಯದು. ಚಿಕ್ಕವರಿದ್ದಾಗ ಓದಿದ ಕಾರಂತರ ಬಾಲಪ್ರಪಂಚದ ಮುಂದುವರಿದ ಪ್ರೌಢಭಾಗ ಎನ್ನುವ ಹಾಗೆ. ಬಿಜಿಎಲ್ ತೋರಿದ ‘ಸರ್ಕಾಂಡ್ರ್ಯಾ’ ಗಿಡ ಹಾಗೂ ತೇಜಸ್ವಿ ಕಾಣಿಸಿದ ಹಾರುವ ಓತಿ- ಇವೆರಡೂ, ಕನ್ನಡದ ವಿದ್ಯಾರ್ಥಿಗಳನ್ನು ಜೀವಲೋಕದ ಅನ್ವೇಷಣೆಗೆ ಪ್ರೇರೇಪಿಸಬಲ್ಲ ನಿತ್ಯನೂತನ ರೂಪದರ್ಶಿಗಳೆನ್ನಬೇಕು.

ಪದವಿ ಮುಗಿಸಿ ಸಸ್ಯಶಾಸ್ತ್ರದ ಸ್ನಾತಕೋತ್ತರ ತರಗತಿಗೆ ಕಾಲಿಡುವ ಕಾಲಕ್ಕೆ, ಬಿಜಿಎಲ್ ವಿದ್ವತ್ತಿನ ಇನ್ನಷ್ಟು ಆಯಾಮಗಳು ಪರಿಚಯವಾಗತೊಡಗಿದವು. ಸಸ್ಯರೂಪಶಾಸ್ತ್ರ, ಅಂಗಾಂಗರಚನೆ, ಭ್ರೂಣಶಾಸ್ತ್ರ, ವರ್ಗೀಕರಣಶಾಸ್ತ್ರ- ಈ ಕ್ಷೇತ್ರಗಳಲ್ಲೆಲ್ಲ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಅವರು ಬರೆದ ಸಂಶೋಧನಾ ಪ್ರಬಂಧಗಳು ತರಗತಿಯ ಅಧ್ಯಯನದ ಭಾಗಗಳಾದವು. ಹೂಬಿಡುವ ಗಿಡಗಳ ಕುರಿತ ಅವರ ಒಂದು ಗ್ರಂಥವನ್ನಂತೂ (Flower to Fruit – Embryology of Flowering Plants) ಗ್ರಂಥಾಲಯದಲ್ಲಿ ಹುಡುಕಿ ಪಡೆಯುವುದೇ ಸವಾಲಾಗುತ್ತಿತ್ತು.

ಸ್ನಾತಕೋತ್ತರ ಪದವಿಯ ನಂತರ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಖ್ಯಾತ ಸಸ್ಯಶಾಸ್ತ್ರಜ್ಞ ಐರ್ವಿಂಗ್ ವಿಡ್ಮೆರ್ ಬೇಲೈ ಜೊತೆಯಾಗಿ, ಅವರು ನಡೆಸಿದ ಸಂಶೋಧನೆಗಳೂ ತರಗತಿಯ ಪಠ್ಯವಾಗಿದ್ದವು. ತಾವು ಹುಡುಕಿದ್ದ ಕೊಳವೆ ಅಂಗಾಂಶಗಳೇ ಇಲ್ಲದ ‘ಸರ್ಕ್ಯಾಂಡ್ರಾ’ ಗಿಡದ ಪ್ರಭೇದವೊಂದಕ್ಕೆ ತಮ್ಮ ಗುರುವಿನ ಗೌರವಾರ್ಥವಾಗಿ ‘ಸರ್ಕ್ಯಾಂಡ್ರಾ ಐರ್ವಿಂಗ್-ಬೇಲಿಯಾ’ (Sarcandra irvingbaileyi) ಎಂದು ಬಿಜಿಎಲ್ ಹೆಸರಿಸಿದ್ದು ಹಾಗೂ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಪಿ.ಮಹೇಶ್ವರಿಯವರ ಸ್ಮರಣಾರ್ಥ ಇನ್ನೊಂದು ಗಿಡಕ್ಕೆ ‘Ascarina maheshwarii’ ಎಂದು ಹೆಸರಿಸಿದ್ದ ಸಂಗತಿಗಳೆಲ್ಲ ನಮ್ಮನ್ನಾಗ ಬಹಳಷ್ಟು ಪ್ರಭಾವಿಸಿದ್ದವು. ನಾವೇನಾದರೂ ಮುಂದೊಮ್ಮೆ ಹೊಸ ಸಸ್ಯಪ್ರಭೇದ ಹುಡುಕಲು ಸಾಧ್ಯವಾದಲ್ಲಿ, ಅದಕ್ಕೆ ಯಾರ ಹೆಸರು ಇಡಬಹುದೆಂದು ಮಿತ್ರರಲ್ಲಿ ಗಂಭೀರವಾಗಿ ಚರ್ಚಿಸಿದ್ದೂ ಇದೆ!

ಓದು ಮುಗಿಸಿ ಸಂಶೋಧನೆ ಹಾಗೂ ಅಧ್ಯಾಪನ ವೃತ್ತಿ ಕೈಗೊಳ್ಳುವ ಸಮಯಕ್ಕೆ, ಜಗದೀಶ್ಚಂದ್ರ ಬೋಸ್, ಬೀರ್ಬಲ್ ಸಹಾನಿ, ಪಂಚಮ್ ಮಹೇಶ್ವರಿ ಮುಂತಾದ ಶ್ರೇಷ್ಠ ಭಾರತೀಯ ಸಸ್ಯಶಾಸ್ತ್ರಜ್ಞರ ಸಾಲಿಗೆ ಸೇರಿದವರೊಬ್ಬರಾಗಿ ಬಿಜಿಎಲ್ ಮನದಾಳಕ್ಕಿಳಿದಿದ್ದರು. ಅಧ್ಯಾಪಕರೋರ್ವರ ಅನುಭವಗಳನ್ನೆಲ್ಲ ವಿಶಿಷ್ಟವಾಗಿ ಹೇಳುವ ಅವರ ‘ಕಾಲೇಜು ತರಂಗ’ ಹಾಗೂ ‘ಪ್ರಾಧ್ಯಾಪಕನ ಪೀಠದಲ್ಲಿ’ ಓದಿಯೂ ಆಗಿತ್ತು. ಕಾಲೇಜಿನಲ್ಲಿ ಪಾಠಮಾಡಲು ಆರಂಭಿಸಿದ್ದ ದಿನಗಳಲ್ಲಿ, ನಮಗೂ ಆ ತೆರನ ವಿಶೇಷ ಅನುಭವಗಳಾಗಬಹುದೇ ಎಂದು ನಿರೀಕ್ಷಿಸಿದ್ದೂ ಇದೆ!

ಅಂಗಾಂಶ ರಚನೆ, ಭ್ರೂಣವಿಕಾಸ, ವರ್ಗೀಕರಣದಂಥ ಶಾಸ್ತ್ರೀಯ ಸಸ್ಯಶಾಸ್ತ್ರದ ಪಾಠ ಮಾಡುವಾಗ, ಕ್ಷೇತ್ರಾಧ್ಯಯನಯಕ್ಕೆಂದು ಸಹ್ಯಾದ್ರಿ ಮಡಿಲಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಸಂದರ್ಭಗಳಲ್ಲೆಲ್ಲ, ಇಂದಿಗೂ ಸಂವೇದನಾಶೀಲ ಅಧ್ಯಾಪಕನೋರ್ವನ ಸಂಗಾತಿಯವರು.

ಬೆಂಗಳೂರಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು, ಅಮೆರಿಕದಲ್ಲಿ ಸಂಶೋಧನಾ ಅನುಭವಗಳಿಸಿ, ಮದ್ರಾಸಿನಲ್ಲಿ ದೀರ್ಘಕಾಲ ಅಧ್ಯಾಪಕ ವೃತ್ತಿ ಹಾಗೂ ಸಂಶೋಧನಾ ಜೀವನ ನಡೆಸಿದವರು ಬಿಜಿಎಲ್. ಕನ್ನಡ ಹಾಗೂ ಇಂಗ್ಲಿಷ್ ಹೊರತಾಗಿ ತಮಿಳು, ಮಲಯಾಳ, ಫ್ರೆಂಚ್, ಜರ್ಮನ್, ಸ್ಪ್ಯಾನಿಶ್ ಭಾಷೆಗಳ ಪರಿಚಯವೂ ಅವರಿಗಿತ್ತು. ಸ್ವತಃ ವಿಶಿಷ್ಟ ರೇಖಾಚಿತ್ರ ಹಾಗೂ ತೈಲವರ್ಣದ ಚಿತ್ರ ಬಿಡಿಸುವ ಕಲೆಯೂ ಅವರಿಗೊಲಿದಿತ್ತು. ಸಂಗೀತ ಕಛೇರಿ ಕೊಡುವಷ್ಟು ವಯಲಿನ್ ನುಡಿಸುವ ಪ್ರಾವೀಣ್ಯ ಹಾಗೂ ಸಂಗೀತದ ವಿಮರ್ಶಾ ಲೇಖನ ಬರೆಯುವಷ್ಟು ಶಾಸ್ತ್ರಜ್ಞಾನವೂ ಅವರದ್ದಾಗಿತ್ತು. ಹಸ್ತಪ್ರತಿ ಮತ್ತು ಶಾಸನಗಳ ಅಧ್ಯಯನಗಳಲ್ಲಿ ಅವರಿಗಿದ್ದ ಕೌಶಲವನ್ನು ಅವರ ‘ಶಾಸನದಲ್ಲಿ ಮರಗಿಡಗಳು’ ಪುಸ್ತಕದಲ್ಲೇ ನೋಡಬಹುದು. ಅವರ ಪ್ರತಿಭೆಯ ಹರವು ಅಷ್ಟು ವಿಶಾಲವಾದದ್ದು.

ಕಂಪ್ಯೂಟರ್, ಅಂತರ್ಜಾಲ, ಮೊಬೈಲ್ ಇಲ್ಲದ ಕಾಲದಲ್ಲಿ, ವ್ಯಾಪಕ ಕ್ಷೇತ್ರಾಧ್ಯಯನಾಧಾರಿತ ಮತ್ತು ಪ್ರಯೋಗಾಧಾರಿತ ಸಂಶೋಧನಾ ದಾರಿಯಲ್ಲಿ ದೀರ್ಘಕಾಲ ನಡೆದ ಬಿಜಿಲ್ಎಲ್ ಸಾಧನೆ ಸಣ್ಣದಲ್ಲ. ಕನ್ನಡ ನಾಡಿನಲ್ಲಿ ಇಂದು ಸಸ್ಯವರ್ಗಿಕರಣ ಶಾಸ್ತ್ರವೇ ವಿನಾಶದಂಚಿಗೆ ತಲುಪುತ್ತಿದೆ ಎಂಬ ಮಾತು ಆಗಾಗ ವೈಜ್ಞಾನಿಕ ಗೋಷ್ಠಿಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಬಿಜಿಎಲ್ ತರುವಾಯ ಬಂದ ಫಾದರ್ ಜೆ. ಸಲ್ಡಾನ, ಸಿ.ಆರ್. ನಾಗೇಂದ್ರ, ಯೋಗನರಸಿಂಹ, ಬಿ.ಎ. ರಾಜಿ, ಈಗಲೂ ಸಂಶೋಧನೆಯ ಮಂಚೂಣಿಯಲ್ಲಿರುವ ಉಡುಪಿಯ ಕೆ. ಗೋಪಾಲಕೃಷ್ಣ ಭಟ್ – ಇವರೆಲ್ಲ, ಹೊಸ ಸಸ್ಯಪ್ರಭೇದಗಳನ್ನು ಗುರುತಿಸುತ್ತ, ಜಿಲ್ಲೆ-ಪ್ರದೇಶಗಳ ಸಸ್ಯಯಾದಿ (ಫ್ಲೋರಾ) ರಚಿಸುತ್ತ, ವರ್ಗೀಕರಣಶಾಸ್ತ್ರವನ್ನು ಜಾಗತಿಕ ಗುಣಮಟ್ಟದೊಂದಿಗೆ ಪೋಷಿಸಿಕೊಂಡು ಬಂದವರು.

ಈ ಸಂಶೋಧನಾ ಪರಂಪರೆ ಮುಂದೆ ಪರಿಣಾಮಕಾರಿಯಾಗಿ ಮುಂದುವರಿದೀತೆ ಎಂಬ ಪ್ರಶ್ನೆ ಈಗ ಮೂಡುತ್ತಿದೆ. ಅಪಾರ ಜೀವಸಂಕುಲವನ್ನು ಒಡಲಲ್ಲಿರಿಸಿಕೊಂಡ ಸಹ್ಯಾದ್ರಿ ಶ್ರೇಣಿಯಲ್ಲಿ ಅರಸಬೇಕಾದ ಅದೆಷ್ಟೋ ಹೊಸ ಪ್ರಭೇದಗಳೇನೋ ಇದ್ದಾವು. ಇಂದಿನ ತಂತ್ರಜ್ಞಾನ ಯುಗದಲ್ಲಿ ಅವನ್ನು ಹುಡುಕುವುದು ಅಷ್ಟೇನೂ ಕಷ್ಟವೂ ಆಗಲಿಕ್ಕಿಲ್ಲ.

ಪಶ್ಚಿಮಘಟ್ಟದಲ್ಲಿ ಕ್ಷೇತ್ರಾಧ್ಯಯನಕ್ಕೆಂದು ಅಲೆಯುವಾಗಲೆಲ್ಲ, ಹೊಸದೊಂದು ಗಿಡ ಅಥವಾ ಬಳ್ಳಿ ದೊರಕಬಾರದೇ ಎಂಬ ಗುಪ್ತ ಆಸೆ ಇರುತ್ತದೆ. ಹೊಸ ಸಸ್ಯವೊಂದನ್ನು ಹೆಸರಿಸುವ ಯೋಗ ಲಭಿಸಿದರೆ, ಬಿಜಿಎಲ್ ಹೆಸರಿಡುವ ಕನಸು ಕೂಡ ಚಿಗುರುತ್ತದೆ. ಅವನ್ನು ಸಾಕಾರಮಾಡಬಹುದಾದ ವಿಶಿಷ್ಟ ತಳಿಗಳು ಆಗೀಗ ಅಘನಾಶಿನಿ ನದಿಕಣಿವೆ ಅಥವಾ ಕೊಡಚಾದ್ರಿ ತಪ್ಪಲಿನಂಥ ಪ್ರದೇಶದಲ್ಲಿ ಎದುರಾಗುವುದೂ ಇದೆ. ವಾಪಸ್ಸು ಬಂದಮೇಲೆ ಅವುಗಳ ಕುರಿತಾಗಿ ಆಳ ಸಂಶೋಧನೆ ನಡೆಸುವ ಉತ್ಸಾಹ ಚಿಮ್ಮಿಸುವ ಘಳಿಗೆಗಳವು. ಆದರೆ, ಒಂದಷ್ಟು ಸಮಯ ಕಾಡು- ಗುಡ್ಡ, ನದಿ- ಕೊಳ್ಳ ಓಡಾಡುವಷ್ಟರಲ್ಲಿ, ಅತಿಕ್ರಮಣ, ಮರಕಡಿತ, ಗಣಿಗಾರಿಕೆ, ವನ್ಯಜೀವಿ ವಾಸಸ್ಥಳ ನಾಶದಂಥ ಯಾವುದೋ ಅರಣ್ಯನಾಶದ ಸಂಗತಿ ಎದುರಗುತ್ತದೆ. ಹಿಂತಿರುಗಿದ ನಂತರ ಸಂಶೋಧನೆ ಹಿನ್ನೆಲೆಗೆ ಸರಿದು, ಆ ಪ್ರದೇಶದ ರಕ್ಷಣೆಗಾಗಿ ಮಾಡಬೇಕಾದ ತುರ್ತು ಹೋರಾಟವೇ ಆದ್ಯತೆಯಾಗಿ ಮುನ್ನೆಲೆಗೆ ಬಂದು
ನಿಂತುಬಿಡುತ್ತದೆ!

ಅಸಂಖ್ಯ ಜೀವಪ್ರಭೇದಗಳಿರುವ ವಿಶಿಷ್ಟ ನೈಸರ್ಗಿಕ ಪರಂಪರಾತಾಣವಾದ ಪಶ್ಚಿಮಘಟ್ಟವನ್ನು ಉಳಿಸಿಕೊಳ್ಳುವದೇ ಇಂದಿನ ಸವಾಲು. ಜನರ ಶ್ರೇಯೋಭಿವೃದ್ಧಿಯೂ ಅದರಲ್ಲಡಗಿದೆಯೆಂಬ ವಿವೇಕ ನಮ್ಮಲ್ಲಿ ಸದಾ ಜಾಗೃತವಾಗಿರಬೇಕಿದೆ. ಕಾರಂತ, ತೇಜಸ್ವಿ, ಬಿಜಿಎಲ್ ತರಹದವರ ಬದುಕು ಮತ್ತು ಬರಹಗಳು ನಮ್ಮನ್ನೆಚ್ಚರಿಸುವ ಅಂಥ ಗುರುಪ್ರಜ್ಞೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT