ಭಾನುವಾರ, ಸೆಪ್ಟೆಂಬರ್ 27, 2020
24 °C

ಪ್ರಕೃತಿಯಿಂದ ಪ್ರಣಯ ಸಂಸ್ಕೃತಿಯಿಂದ ದಾಂಪತ್ಯ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Deccan Herald

ಕಥೆಗಳಿಂದ ನಾವು ಪ್ರಭಾವಿತರಾಗುತ್ತೇವೆ. ಬಹುಶಃ ರಾಮನೂ ಹೀಗೆ ಪ್ರಭಾವಿತನಾಗಿದ್ದಿರಬಹುದು. ವಿಶ್ವಾಮಿತ್ರನು ಅವನಿಗೆ ದಾರಿಯುದ್ದಕ್ಕೂ ಹಲವು ಕಥೆಗಳನ್ನು ಹೇಳುತ್ತಿದ್ದನಷ್ಟೆ. ಅದರಲ್ಲಿ ಒಂದು ಕಥೆ ರಾಮನ ವ್ಯಕ್ತಿತ್ವದ ಮೇಲೆ ಮುದ್ರೆಯನ್ನು ಒತ್ತಿದ್ದಿರಬೇಕೆನಿಸುತ್ತದೆ. ಅದೇ ಕಾಮನ ಕಥೆ; ಶಿವನ ತಪಸ್ಸಿನ ಕಥೆ; ಕುಮಾರಸಂಭವದ ಕಥೆ. ಇಲ್ಲೊಂದು ಸ್ವಾರಸ್ಯವುಂಟು. ವಿಶ್ವಾಮಿತ್ರನು ರಾಮನಿಗೆ ಹೇಳಿದ ಮೊದಲ ಕಥೆಯೇ ‘ಕಾಮಾಶ್ರಮ’ದ ಕಥೆ. ಕಾಮವೇ ಅಲ್ಲವೆ ಎಲ್ಲದಕ್ಕೂ ಮೂಲ? ವಿಶ್ವಾಮಿತ್ರನು ರಾಮನಿಗೆ ಹೇಳಿದ ಕಥೆ, ಅದು ಕಾಮನಿಗೆ ಅವನಿಗೇ ಆದ ಶರೀರವಿದ್ದಾಗ ನಡೆದ ಕಥೆ. ಅವನು ಶಿವನಿಂದ ಶರೀರವನ್ನು ಕಳೆದುಕೊಂಡ. ಆದರೆ ಹೀಗೆ ಕಳೆದುಕೊಂಡ ಶರೀರವನ್ನು ಅವನು ಜಗತ್ತಿನ ಎಲ್ಲ ಜೀವಿಗಳ ಮೂಲಕವೂ ಮತ್ತೆ ಪಡೆದುಕೊಂಡ. ಹೀಗಾಗಿ ಕಾಮನ ಕಥೆ ಎಂದರೆ ಅದು ನಮ್ಮ ಕಥೆಯೇ ಹೌದು, ಸೃಷ್ಟಿಯ ಕಥೆಯೇ ಹೌದೆನ್ನಿ!

‘ಕಾಮ’ ಎಂಬ ಪದದ ಸದ್ದನ್ನು ಕೇಳಿದ ಕೂಡಲೇ ನಮ್ಮ ಭಾವಸಾಗರದಲ್ಲಿ ಹಲವು ತೆರನಾದ ತೆರೆಗಳ ಅಲುಗಾಟ ಆರಂಭವಾಗುವುದು. ಎಷ್ಟೇ ಆಗಲಿ, ಕಾಮವೆ ಅಲ್ಲವೇ ನಮ್ಮ ಭವಸಾಗರದ ಕೇಂದ್ರಬಿಂದು? ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಅದರ ಬಗ್ಗೆ ತುಂಬ ಮೀಮಾಂಸೆ ನಡೆದಿರುವುದು ಸಹಜ. ನಮ್ಮದು ಅತ್ಯಂತ ಪ್ರಾಚೀನ ಸಂಸ್ಕೃತಿಯಷ್ಟೆ. ಪುರುಷಾರ್ಥಗಳ ಕಲ್ಪನೆಯೂ ನಮ್ಮಲ್ಲಿ ತುಂಬ ಪ್ರಾಚೀನವಾದುದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಇವು ಪುರುಷಾರ್ಥಗಳು. ‘ಕಾಮ’ ಎಂದರೆ ಹೆಣ್ಣು–ಗಂಡುಗಳ ನಡುವೆ ಉಂಟಾಗುವ ದೈಹಿಕ ಆಕರ್ಷಣೆ, ಬಯಕೆ ಎಂಬ ಸಂಕುಚಿತಾರ್ಥವಷ್ಟೆ ಹೆಚ್ಚು ರೂಢಿಯಲ್ಲಿರುವುದು. ಆದರೆ ಈ ಶಬ್ದಕ್ಕೆ ಹಲವು ಸ್ತರಗಳ ಅರ್ಥ ಪರಂಪರೆಯೇ ಉಂಟು. ಮಾನವರು ಬಯಸುವ ಎಲ್ಲ ವಿಧದ ಬಯಕೆಗಳಿಗೂ ‘ಕಾಮ’ ಎಂಬ ಒಕ್ಕಣೆ ಸಲ್ಲುತ್ತದೆ. ಆದುದರಿಂದಲೇ ಅದನ್ನು ವಿವಿಧ ಶ್ರೇಣಿಗಳಲ್ಲಿ, ಮೌಲ್ಯಗಳಲ್ಲಿ ಭಾರತೀಯ ಚಿಂತಕರು ವಿವೇಚಿಸಿರುವುದು. ಸೃಷ್ಟಿಗೇ ಮಹಾಭಿತ್ತಿಯಾಗಿರುವುದು ಕಾಮ – ಎನ್ನುವುದು ಋಷಿಗಳ ಕಾಣ್ಕೆ. ಆದರೆ ಹೆಣ್ಣು–ಗಂಡುಗಳ ‘ಕಾಮ’ದತ್ತ ದೃಷ್ಟಿಹಾಯಿಸುವುದು ಸದ್ಯದ ನಮ್ಮ ಉದ್ದೇಶ. ಏಕೆಂದರೆ ನಾವು ನೋಡುತ್ತಿರುವ ಕಾಮಾಶ್ರಮದ ಕಥೆಯ ಭಾವವೂ ಭಾಗವೂ ಭಾಗ್ಯವೂ ಇದೇ ಆಗಿದೆ.

ಗಂಡು–ಹೆಣ್ಣುಗಳ ಆಕರ್ಷಕಶಕ್ತಿಯ ಎಳೆಯಲ್ಲಿರುವ ನಿಸರ್ಗಸಿದ್ಧವಾದ ಸೆಳೆತವೂ ಪ್ರೇಮಾನಂದವೂ ಭಾರತೀಯ ಸಮಾಜವನ್ನೂ ಮಾನಸಿಕತೆಯನ್ನೂ ದಾರ್ಶನಿಕತೆಯನ್ನೂ ಹಲವು ಮುಖಗಳಲ್ಲಿ ಪ್ರಭಾವಿತಗೊಳಿಸಿದೆ. ಮುಖ್ಯವಾಗಿ ಗುರುತಿಸಬಹುದಾದ
ಕ್ಷೇತ್ರಗಳೆಂದರೆ –

ಒಂದು: ಕಲಾಜಗತ್ತು. ಹೆಣ್ಣು–ಗಂಡುಗಳ ನಡುವೆ ಏರ್ಪಡುವ ಸಂವೇದನೆಯ ಪ್ರಭಾವವಲಯ ಅತ್ಯಂತ ವಿಶಾಲವಾದುದು. ಇಲ್ಲಿ ತೋರಿಕೊಳ್ಳುವ ಪ್ರೇಮಶಕ್ತಿಯ ವಿಲಾಸಗಳೂ ಹಲವು ತೆರನಾದುವು. ಪ್ರತ್ಯಕ್ಷದಲ್ಲೊಂದು ವಿಧದ ಸಂಮೋಹನ, ಪರೋಕ್ಷ
ದಲ್ಲೊಂದು ವಿಧದ ಸಂಚಲನ. ಹೀಗೆ ಜೀವರಸವು ಮೂಡಿಸುವ ಅನಂತವರ್ಣಗಳ ಕಾಮನಬಿಲ್ಲಿನ ತೋರಣದಿಂದ ಸಜ್ಜುಗೊಂಡ ಭಾವರಂಗದ ಮೇಲೆ ತೋರಿಕೊಳ್ಳುವ ಆನಂದತಾಂಡವವೇ ಕಲಾಪ್ರಪಂಚದಲ್ಲಿ ಶೃಂಗಾರರಸ ಎನಿಸಿಕೊಂಡಿತು. ಕಾಮದ ಹಂದರದಿಂದ ರೂಪಪಡೆಯುವ ಶೃಂಗಾರರಸವು ಕೇವಲ ಸ್ತ್ರೀ–ಪುರುಷರ ಮಧ್ಯೆ ತೋರಿಕೊಳ್ಳುವ ಆಕರ್ಷಣೆಗೆ ಮಾತ್ರವೇ ಸೀಮಿತ
ವಾದುದಲ್ಲವಷ್ಟೆ; ಹಲವು ರಸಝರಿಗಳೂ ಈ ಮಹಾರಸದಲ್ಲಿ ಸಂಗಮಿಸುತ್ತವೆ ಎಂಬುದನ್ನು ಗಮನಿಸತಕ್ಕದ್ದು.

ಎರಡು: ತಂತ್ರಮಾರ್ಗ. ಸ್ತ್ರೀ–ಪುರುಷರ ಸಂಯೋಗದಲ್ಲಿ ಅಖಂಡಾನುಭವದ ಸ್ಥಿತಿಯುಂಟು. ಈ ಐಕ್ಯತತ್ತ್ವದ ಹಿನ್ನೆಲೆಯಲ್ಲಿ ತಂತ್ರಮಾರ್ಗವು ಸಾಧನೆಯ ವಿಧಾನವೊಂದನ್ನು ರೂಪಿಸಿಕೊಂಡಿತು. ಇಲ್ಲಿ ಗಂಡೇ ಶಿವ, ಹೆಣ್ಣೇ ಶಕ್ತಿ; ಶಿವ–ಶಕ್ತಿಗಳ ಸಂಮಿಲನವೇ ಈ ಕಲಾಪದ ನೆಲೆಗಟ್ಟು ಎಂಬ ಸಿದ್ಧಾಂತ ಇಲ್ಲಿ ಹರಳುಗಟ್ಟಿತು.

ಮೂರು: ಮಧುರಭಕ್ತಿ. ಗಂಡು–ಹೆಣ್ಣಿನ ಸಮಾಗಮದ ಹಿಂದೆ ಅಪಾರ ತುಡಿತ, ತವಕಗಳು ಇರುವುದಲ್ಲವೆ? ತನ್ನ ಸಹಜಸ್ಥಿತಿಯಾದ ಆನಂದದಲ್ಲಿ ಒಂದಾಗಬೇಕೆಂಬ ಮನಸ್ಸಿನ ತಪನೆಯೇ ಭಕ್ತಿಮಾರ್ಗದ ಒಂದು ಉಪಾಸನೆಯಾಗಿ ಅರಳಿತು. ಸಖನನ್ನು ಸೇರಲು ಸಖಿಯು ನಡೆಸುವ ಸಂಭ್ರಮ–ಸರಸಗಳೇ ಇಲ್ಲಿ ಪರಮಾತ್ಮವನ್ನು ಹೊಂದಲು ಜೀವಾತ್ಮವು ಕೈಗೊಳ್ಳುವ ಆರಾಧನೆಗಳು ಎನಿಸಿಕೊಂಡವು. ಪ್ರಣಯದ ಉಜ್ಜ್ವಲತೆ, ಶುಚಿತ್ವ ಮತ್ತು ಶಿಖರಾನುಭವಗಳೇ ಮಧುರಭಕ್ತಿಯ ಹೇತುಗಳಾದುವು.

ಮೇಲಣ ಮೂರು ವಿವರಗಳಲ್ಲಿಯೂ ಸಾದೃಶ್ಯವೊಂದುಂಟು. ಬದುಕಿನ ದಿಟವಾದ ನೆಲೆಯೊಂದರ ಹುಡುಕಾಟವಿರುವುದನ್ನು ಇಲ್ಲಿ ಗಮನಿಸಬಹುದು. ಇದೇ ಆಧ್ಯಾತ್ಮಿಕತೆ. ನಿಸರ್ಗಸಿದ್ಧವಾದ ಪ್ರಣಯೋಪಹಾರವು ಅಧ್ಯಾತ್ಮಮಾರ್ಗದ ಪ್ರಣವೋಪಾಸನೆಗೆ ಸಮನಾದದ್ದು ಎಂಬಂಥ ದಾರ್ಶನಿಕತೆ ಇಲ್ಲಿದೆ. ಆದರೆ ಕಾಮವೃಕ್ಷದ ಈ ಮೂರು ಕವಲುಗಳ ಅಭಿವ್ಯಕ್ತಿಪರಂಪರೆಗೆ ಒಂದು ಮಿತಿಯುಂಟು; ಇವು ಸಣ್ಣ ಗುಂಪೊಂದರ ಅಭಿವ್ಯಕ್ತಿಯಷ್ಟೆ ಆಗಬಹುದು; ಇಡಿಯ ಸಮುದಾಯವೇ ಅನುಸಂಧಾನಿಸಬಹುದಾದ ಮಹಾಯಾನದ ಸೌಲಭ್ಯಗಳು ಇಲ್ಲಿ ಕಡಿಮೆ. ಈ ಪ್ರಣಯತ್ರಿಪಥಗೆಗೂ ಮೀರಿದ ಮತ್ತೊಂದು ಅಪೂರ್ವ ಪ್ರಸ್ಥಾನವನ್ನು ಋಷಿಗಳು ಸಾಕ್ಷಾತ್ಕರಿಸಿಕೊಂಡರು. ಇದೇ ದಾಂಪತ್ಯ.

ಸೃಷ್ಟಿಯ ಯಾವುದೊಂದು ಅಲ್ಪವಿವರವನ್ನೂ ನಮ್ಮ ಪೂರ್ವಸೂರಿಗಳು ಉಪೇಕ್ಷಿಸಿದವರಲ್ಲ. ಹೀಗಿರುವಾಗ, ಇನ್ನು ಮನುಕುಲದ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಆಗುಹೋಗುಗಳಲ್ಲಿ ಪ್ರಮುಖಪಾತ್ರವನ್ನು ನಿರ್ವಹಿಸುವ ಹೆಣ್ಣು–ಗಂಡುಗಳ ಒಲವು–ನಲಿವುಗಳನ್ನು ಹೇಗೆ ತಿರಸ್ಕರಿಸಿಯಾರು? ಸೃಷ್ಟಿಪ್ರಕ್ರಿಯೆಯಲ್ಲಿಯೇ ಅಡಗಿರುವ ಈ ಕಾಂತಶಕ್ತಿಯ ರಹಸ್ಯವನ್ನು ಅರಿತುಕೊಂಡು, ಅದರ ವಿಲಾಸಕ್ಕೊಂದು ನಿಯಮಬದ್ಧತೆಯನ್ನು ಹೊಂದಿಸಿ, ರೂಪಿಸಿಕೊಂಡಿರುವ ಸಾರ್ಥಕ ಜೀವನಪದ್ಧತಿಯೇ ದಾಂಪತ್ಯ. ಒಳಗೆ ಅನಿವಾರ್ಯವಾಗಿರುವ ವಿವರವೊಂದು ಹೊರಗೆ ಉನ್ಮಾದವೆನಿಸುವ ಸಾಧ್ಯತೆಯುಂಟು. ಅಂತರಂಗದ ಬಯಕೆಯು ಬಹಿರಂಗದಲ್ಲಿ ಹಲವು ವಿಕಾರಗಳಿಗೆ ಕಾರಣವಾಗಬಹುದು. ಹೀಗೆ ಮುಳ್ಳಾಗಬಹುದಾದ ಸತ್ತ್ವವನ್ನು ಹೂವಾಗಿ ಅರಳಿಸುವ ಜೀವತತ್ತ್ವವೇ ದಾಂಪತ್ಯ. ‘ಪ್ರಕೃತಿಯಿಂದ ಪ್ರಣಯ, ಸಂಸ್ಕೃತಿಯಿಂದ ದಾಂಪತ್ಯ’. (ಇದು ಡಿವಿಜಿ ಅವರ ಸೊಲ್ಲು.) ಇದೇ ಈ ದಾಂಪತ್ಯಸಂಸ್ಕಾರದಲ್ಲಿರುವ ತತ್ತ್ವೌನ್ನತ್ಯ. ಈ ಮಹಾದರ್ಶನದ ಶಿವಭಿತ್ತಿಯೇ ‘ಕುಮಾರಸಂಭವ’ದ
ರಸಾರ್ಣವ.

ದೇಹವನ್ನು ಪಡೆದಿದ್ದ ಕಾಮ, ಎಂದರೆ ಮನ್ಮಥನು ದೇಹವನ್ನು ಕಳೆದುಕೊಂಡು ‘ಅನಂಗ’ ಎನಿಸಿಕೊಂಡ ಪ್ರದೇಶದ ಕಥೆಯಲ್ಲವೆ ವಿಶ್ವಾಮಿತ್ರನು ರಾಮನಿಗೆ ಹೇಳಿದ್ದು? ಕಾಮನ ದೇಹವನ್ನು ಸುಟ್ಟವನು ಶಿವ. ಅವನು ಕಾಮನನ್ನು ಸುಟ್ಟವನು ಮಾತ್ರವಲ್ಲವಷ್ಟೆ, ಕಾಮನಿಗೆ ಜೀವವನ್ನು ಕೊಟ್ಟವನು ಕೂಡ. ಹೀಗೆ ಜೀವವನ್ನು ಕೊಟ್ಟದ್ದು ಪ್ರಣಯದ ಮೂಲಕ; ಆ ಪ್ರಣಯವು ಪ್ರಕಟವಾದದ್ದು ದಾಂಪತ್ಯದ ಮೂಲಕ. ದಾಂಪತ್ಯದ ಎತ್ತರ ಎಷ್ಟು – ಎನ್ನುವುದು ರಾಮನಿಗೆ ಗಟ್ಟಿಯಾದದ್ದು ಆದಿದಂಪತಿಯ ಆದರ್ಶಪ್ರಣಯದ ಕಥಾಪ್ರಸಂಗದ ಮೂಲಕವಾಗಿದ್ದಿರಬಹುದೆ? ರಾಜನಾದವನು ಹಲವರು ಪತ್ನಿಯರನ್ನು ಪಡೆಯಬಹುದು – ಎಂದು ಅಂದಿನ ಸಂವಿಧಾನವೇ ಅವಕಾಶ ನೀಡಿತ್ತು; ತಂದೆ ದಶರಥನೇ ಹಲವರು ಹೆಂಡಂದಿರನ್ನು ಹೊಂದಿದ್ದವನು. ಆದರೆ ರಾಮ ಆರಿಸಿಕೊಂಡದ್ದು ಮಾತ್ರ ಏಕಪತ್ನಿವ್ರತವನ್ನು. ಸೀತೆಯನ್ನು ಕಳೆದುಕೊಂಡ ರಾಮನ ವಿರಹದಲ್ಲಿ ಅವನ ದಾಂಪತ್ಯದ ಆದರ್ಶವೇ ಕಾಣುವುದು. ತನ್ನ ಶರೀರದ ಅರ್ಧಭಾಗವನ್ನೇ ಹೆಂಡತಿಗೆ ನೀಡಿದ ಶಿವನ ಸತೀಪ್ರೀತಿ ಅವನಿಗೂ ಆದರ್ಶವೇ. ಶಿವನ ಆದರ್ಶದಾಂಪತ್ಯದ ಬಗ್ಗೆ ಸಂಸ್ಕೃತಪದ್ಯವೊಂದು ಮಹೋನ್ನತವಾಗಿದೆ; ಅಪ್ಪಯ್ಯದೀಕ್ಷಿತನ ಆ ಶ್ಲೋಕ ಹೀಗಿದೆ:

ಪರಸ್ಪರತಪಸ್ಸಂಪತ್ಫಲಾಯಿತಪರಸ್ಪರೌ |
ಪ್ರಪಂಚಮಾತಾಪಿತರೌ ಪ್ರಾಂಚೌ ಜಾಯಾಪತೀ ಸ್ತುಮಃ ||

‘ಶಿವ–ಪಾರ್ವತಿ ಯಾರು ಎಂದರೆ ಅವರು ಪ್ರಪಂಚದ ತಂದೆ–ತಾಯಿ. ಅವರ ಆದಿದಾಂಪತ್ಯವಾದರೂ ಹೇಗೆ ಸಿದ್ಧಿಸಿತು – ಎಂದರೆ ಪಾರ್ವತಿಯ ತಪಸ್ಸಿನ ಫಲ ಶಿವ; ಶಿವನ ತಪಸ್ಸಿನ ಫಲ ಪಾರ್ವತಿ’ – ಇದು ಈ ಶ್ಲೋಕದ ನಿಲುವು.

ಸೀತಾರಾಮರ ದಾಂಪತ್ಯವೂ ಅಂಥದ್ದೇ ಆದರ್ಶದಾಂಪತ್ಯ. 

ಸಹಜವಾಗಿರುವ ಗಂಡು–ಹೆಣ್ಣಿನ ಕಾಮವು ಸಮಾಜದ ಕಣ್ಣೂ ಆಗಬಹುದು, ಕನ್ನಡಿಯೂ ಆಗಬಹುದು ಎಂದು ಕಂಡುಕೊಂಡವರು ಋಷಿ–ಕವಿಗಳು. ಬದುಕೆಂಬ ನಾಟಕದ ದಾಂಪತ್ಯ ಎಂಬ ಅಂಕದೊಳಗೆ ಅಳವಟ್ಟ ಸ್ತ್ರೀ–ಪುರುಷಪಾತ್ರಧಾರಿಗಳ ಕಾಮನೆಗಳ ನರ್ತನವನ್ನು, ಅರ್ಥದ ಆಹಾರ್ಯದಲ್ಲಿ ಧರ್ಮದ ತಾಳ–ಮೇಳಗಳೊಂದಿಗೆ ಮೋಕ್ಷದ ಬೆಳಕಿನಲ್ಲಿ ಸಮಾಜ ಎಂಬ ಸಹೃದಯರ ಸಮ್ಮುಖದಲ್ಲಿ ವಿಶ್ವರಂಗದ ಮೇಲೆ ಪ್ರಸ್ತುತಪಡಿಸಬಲ್ಲವರು ರಸಋಷಿಗಳೇ ಹೌದು. ಕಾಳಿದಾಸ ಈ ವಾರಸಿಕೆಯ ಶ್ರೇಷ್ಠ ಪ್ರತಿನಿಧಿ. ಅವನು ದಾಂಪತ್ಯದ ಆದರ್ಶನಿರೂಪಣೆಗೆ ಆಯ್ದುಕೊಂಡ ದಂಪತಿಯಾದರೂ ಯಾರು? ಪಾರ್ವತೀ–ಪರಮೇಶ್ವರರು; ಆದಿದಂಪತಿಗಳು. ದಿಟವಾಗಿಯೂ ಅವನ ಸಾಹಸವನ್ನೂ ಪ್ರತಿಭೆಯನ್ನೂ ಎಷ್ಟುಕೊಂಡಾಡಿದರೂ ಸಾಲದು. ಕಾಮವನ್ನು ಗೆದ್ದವನಷ್ಟೇ ಅದರ ಶಕ್ತಿ–ಮಿತಿಗಳನ್ನೂ ನೆಲೆ–ಬೆಲೆಗಳನ್ನೂ ಬಲ್ಲವನಾಗಿರುತ್ತಾನೆ. ಪುರುಷಾರ್ಥಗಳಲ್ಲಿ ಹೇಗೆ ಕಾಮವು ಸ್ಥಾನವನ್ನು ಪಡೆದಿದೆಯೋ, ಹಾಗೆಯೇ ಅರಿಷಡ್ವರ್ಗಗಳಲ್ಲಿಯೂ ಅದು ಸ್ಥಾನವನ್ನು ಸಂಪಾದಿಸಿದೆ. ಅಕಾಲದಲ್ಲಿ ಕಾಣಿಸಿದ ಕಾಮನನ್ನು ಶಿವ ಭಸ್ಮಮಾಡಿ, ಅದರ ನೆಲೆ ಯಾವುದೆಂದು ಕಾಣಿಸಿದ. ಕಾಮವನ್ನು ಪುರುಷಾರ್ಥವಾಗಲ್ಲದೆ ಅರಿಷಡ್ವರ್ಗದ ನೆಲೆಯಲ್ಲಿಯೇ ಅಪ್ಪಿದ ರಾವಣನು ರಾಮನಿಂದ ಹತನಾಗಬೇಕಾಯಿತು. ಹೀಗಾಗಿ ಕಾಮದಹನದ ಪ್ರಸಂಗವನ್ನು ಒಳಗೊಂಡ ‘ಕುಮಾರಸಂಭವ’ವು ರಾಮಾಯಣದ ಮೀಮಾಂಸೆಗೆ ಬೆಳಕಾಗಿ ಒದಗುತ್ತದೆಯೆನ್ನಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.