ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿನ್ನ ಕೆಲಸ ನೀನೇ ಮಾಡು’

Last Updated 28 ಜೂನ್ 2019, 19:30 IST
ಅಕ್ಷರ ಗಾತ್ರ

ಆ ಊರಲ್ಲೊಂದು ತೋಟ. ಆ ತೋಟದಲ್ಲೊಂದು ದೊಡ್ಡ ಮರ. ಆ ಮರದಲ್ಲಿ ಎರಡು ಗುಬ್ಬಿಗಳ ವಾಸ.

ಮರದ ನೆರಳು ತೋಟದ ಮೇಲೆ ಬೀಳುತ್ತಿತ್ತು. ದೊಡ್ಡ ಮರ. ಹೀಗಾಗಿ ನೆರಳು ಬೀಳುತ್ತಿದ್ದ ಭಾಗವೂ ವಿಶಾಲ. ನೆರಳಿನ ಕಾರಣದಿಂದಾಗಿ ತೋಟದ ಬೆಳೆ ಕುಂಠಿತವಾಗಿತ್ತು. ತೋಟದ ಯಜಮಾನನಿಗೆ ಇದು ಸಮಸ್ಯೆಯಾಗತೊಡಗಿತು.

ಒಂದು ದಿನ ಯಜಮಾನ ಆ ಮರದ ಬಳಿ ಬಂದ‘ನಾಳೆ ನಾಲ್ಕು ಜನರನ್ನು ಕರೆ ತಂದು ಈ ಮರವನ್ನು ಕಡಿಸಬೇಕು’ ಎಂದು ಅವನ ಆಳಿನ ಬಳಿ ಹೇಳಿದ.

ಸಂಜೆ ಗಂಡುಗುಬ್ಬಿ ಗೂಡಿಗೆ ಮರಳಿತು. ಆತಂಕದಲ್ಲಿದ್ದ ಹೆಣ್ಣುಗುಬ್ಬಿ ಹೇಳಿತು‘ನಾಳೆ ಈ ಮರವನ್ನು ಕಡಿಸುತ್ತಾರಂತೆ; ನಾವು ಬೇರೆ ಯಾವುದಾದರೂ ಮರಕ್ಕೆ ಹೋಗೋಣ.’

ಆಗ ಗಂಡುಗುಬ್ಬಿ ಹೇಳಿತು,‘ನೀನೇನೂ ಹೆದರಬೇಡ; ನಾಳೆ ಈ ಮರವನ್ನು ಯಾರೂ ಕತ್ತರಿಸುವುದಿಲ್ಲ.’

ಹೀಗೆ ಐದಾರು ದಿನಗಳು ಕಳೆದವು. ದಿನವೂಯಜಮಾನ ಬರುವುದು, ನಾಳೆ ಆಳುಗಳನ್ನು ಕರೆತಂದು ಮರವನ್ನು ಕಡಿಸುವೆ ಎಂದು ಹೇಳುವುದು, ಹೋಗುವುದು – ಹೀಗೆ ನಡೆದೇ ಇತ್ತು. ಹೆಣ್ಣುಗುಬ್ಬಿ‍ಪ್ರತಿ ಸಂಜೆ ಗಂಡುಗುಬ್ಬಿಗೆಈ ವರದಿಯನ್ನು ಒಪ್ಪಿಸುತ್ತಿತ್ತು. ಗಂಡುಗುಬ್ಬಿ ಧೈರ್ಯವಾಗಿ ಇರುವಂತೆ ಹೇಳುತ್ತಿತ್ತು.

ಅದೊಂದು ದಿನ ಎಂದಿನಂತೆ ಯಜಮಾನ ತೋಟಕ್ಕೆ ಬಂದ. ‘ಛೇ! ಎಷ್ಟು ಹೇಳಿದರೂ ಈ ಆಳುಗಳು ಹೇಳಿದ ಮಾತಿನಂತೆ ನಡೆದುಕೊಳ್ಳುವುದಿಲ್ಲ. ನಾಳೆ ನಾನೇ ಈ ಮರವನ್ನು ಕಡಿಯುತ್ತೇನೆ’ ಎಂದು ಒದರುತ್ತಹೋದ.

ಈ ವಿಷಯ ಸಂಜೆ ಗಂಡುಗುಬ್ಬಿಗೆ ಗೊತ್ತಾಯಿತು. ಕೂಡಲೇ ಅದು ಹೆಣ್ಣುಗುಬ್ಬಿಗೆ ಹೇಳಿತು‘ನಾವು ಇಂದೇ ನಮ್ಮ ಗೂಡನ್ನು ಬಿಟ್ಟು ಹೋಗೋಣ.’

ಹೆಣ್ಣುಗುಬ್ಬಿಗೆ ಆಶ್ಚರ್ಯವಾಯಿತು. ಕಾರಣ ಕೇಳಿತು. ಆಗ ಗಂಡುಗುಬ್ಬಿ ಹೇಳಿತು: ‘ನೋಡು ದಿನವೂ ಆ ಯಜಮಾನ ಆಳುಗಳಿಗೆ ಮರ ಕಡಿಯುವ ಕೆಲಸವನ್ನು ಒಪ್ಪಿಸುತ್ತಿದ್ದ. ಅವರು ತತ್‌ಕ್ಷಣಕ್ಕೆ ಬರುವವರಲ್ಲ ಎಂದು ನನಗೆ ಗೊತ್ತಿತ್ತು. ಹೀಗಾಗಿ ನಮಗೆ ಅಪಾಯ ಇಲ್ಲವೆಂದು ಹೇಳುತ್ತಿದ್ದೆ. ಆದರೆ ನಾಳೆ ಅವನೇ ಬರುವನೆಂದು ಹೇಳಿದ್ದಾನೆ. ಅವನು ಖಂಡಿತ ಬರುತ್ತಾನೆ. ಅದಕ್ಕಾಗಿಯೇ ಹೊರಡೋಣ ಎಂದು ತೀರ್ಮಾನಿಸಿದೆ.’

ಮರುದಿನ ಬೆಳಗ್ಗೆ ಯಜಮಾನ ತೋಟಕ್ಕೆ ಬಂದು. ಆ ಮರವನ್ನು ಕಡಿಯಲು ತೊಡಗಿದ.

***

‘ಆಳು ಮಾಡುವುದು ಹಾಳು; ಮಗ ಮಾಡುವುದು ಮಧ್ಯಮ; ತಾನು ಮಾಡುವುದು ಉತ್ತಮ’ ಎಂಬ ಗಾದೆಯೊಂದಿದೆ.

ನಮ್ಮ ಕೆಲಸದ ಆರಂಭ ಆಗಬೇಕಾಗಿರುವುದು ನಮ್ಮಿಂದಲೇ. ಅದು ಅವರಿಂದ ಆಗಲಿ, ಇವರಿಂದ ಆಗಲಿ – ಎಂದು ಕುಳಿತರೆ ಕೆಲಸ ನಡೆಯದು. ನಮಗೆ ನಮ್ಮ ಗುರಿಯ ಬಗ್ಗೆ ಶ್ರದ್ಧೆ ಇಲ್ಲ, ಆಸಕ್ತಿ ಇಲ್ಲ ಎಂದು ಬೇರೆಯವರಿಗೆ ಗೊತ್ತಾದರೆ ಅವರಾದರೂ ಏಕೆ ಶ್ರಧ್ಧೆ–ಆಸಕ್ತಿಗಳಿಂದ ಕೆಲಸದಲ್ಲಿ ತೊಡಗುತ್ತಾರೆ?

ಗಂಡುಗುಬ್ಬಿಗೆ ಈ ಮರ್ಮ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಅದು ಆಳುಗಳು ಮರ ಕಡಿಯಲು ಬರುತ್ತಾರೆ ಎಂಬ ಸುದ್ದಿಗೆ ಹೆದರಲಿಲ್ಲ. ಆದರೆ ಯಾವಾಗ ಯಜಮಾನನೇ ಬರುತ್ತಾನೆ ಎಂದು ತಿಳಿಯಿತು ಆಗ ಅದು ಎಚ್ಚರವಾಯಿತು.

ನಮ್ಮ ಆಧುನಿಕ ಜೀವನಶೈಲಿಗೂ ಈ ಕಥೆಗೂ ಸಂಬಂಧವಿದೆ. ಇಂದು ನಮ್ಮ ಧಾವಂತದ ಜೀವನ ಹೇಗಿದೆ ಎಂದರೆ, ನಮ್ಮ ಹಸುಗೂಸನ್ನು ನೋಡಿಕೊಳ್ಳಲೂ ನಮಗೆ ಸಮಯವೇ ಇಲ್ಲ – ಸಂಪಾದನೆ, ಸಂಪಾದನೆ, ಸಂಪಾದನೆ – ಇದಿಷ್ಟೇ ನಮಗೆ ಗೊತ್ತಿರುವುದು. ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಆಳುಗಳನ್ನು ಗೊತ್ತುಮಾಡಿರುತ್ತೇವೆ, ನಿಜ. ಆದರೆ ಆ ಆಳುಗಳು ಮಕ್ಕಳಿಗೆ ಹೆತ್ತವರ ಪ್ರೀತಿಯನ್ನು ಕೊಡಬಲ್ಲರೆ? ಹೋಗಲಿ, ನಾವಿಲ್ಲದಿರುವಾಗ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ – ಎನ್ನುವುದಕ್ಕೆ ಖಾತ್ರಿಯಾದರೂ ಏನು? ಪುಟ್ಟಮಗುವಿನಿಂದ ನಮಗೆ ವರದಿ ಕೊಡಲು ಸಾಧ್ಯವೆ? ನಾವೇ ಮಾಡಬೇಕಾದ ಕರ್ತವ್ಯಗಳಿಗೂ ಬಾಡಿಗೆಯವರನ್ನು ಗೊತ್ತುಮಾಡುವಷ್ಟು ನಾವು ‘ಬ್ಯುಸಿ’ ಆಗಿಬಿಟ್ಟಿರೆ, ನಮ್ಮ ಜೀವನಕ್ಕೆ ಆಗ ಅರ್ಥವಾದರೂ ಏನಿದ್ದೀತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT