ಭಾನುವಾರ, ಮೇ 16, 2021
22 °C

ಬುದ್ಧನ ಮೊದಲ ಚರಿತೆ

ವಿ. ನರಹರಿ Updated:

ಅಕ್ಷರ ಗಾತ್ರ : | |

Prajavani

ಭಗವಾನ್ ಬುದ್ಧನ ಮಹಾಪರಿನಿರ್ವಾಣದ ಅನಂತರ ಐನೂರು ವರ್ಷಗಳು ಉರುಳಿದ ಮೇಲೆ ಲೋಕಕ್ಕೆ ಆತನ ಸಂಪೂರ್ಣ ಜೀವನಚರಿತೆಯನ್ನು ಮೊದಲು ನೀಡಿದ್ದು ಅಶ್ವಘೋಷನ ಬುದ್ಧಚರಿತೆ. ಅವನು ಕ್ರಿಸ್ತಶಕೆ ಮೊದಲನೆ ಶತಕದ ಎಂಬತ್ತರಲ್ಲಿ ಅಯೋಧ್ಯೆಯಲ್ಲಿ ಜನಿಸಿ, ಮುಂದೆ ಎರಡನೇ ಶತಮಾನದ ಮಧ್ಯಭಾಗದಲ್ಲಿ ಪೆಷಾವರದಲ್ಲಿ ಮರಣಿಸಿದ ಎನ್ನುತ್ತಾರೆ. ಅವನು ಕಾಳಿದಾಸನಿಗೂ ಹಿಂದಿನ ಅತಿಶ್ರೇಷ್ಠ ಸತ್ವಯುತ ಮಹಾಕವಿ, ಅತ್ಯುತ್ತಮ ವಾಗ್ಮಿ ಮತ್ತು ಪ್ರತ್ಯುತ್ಪನ್ನಮತಿ.

ಆತ ಮೊದಲು ಬೌದ್ಧಮತದ ಘೋಷಿತ ವಿರೋಧಿ. ಒಬ್ಬ ಬೌದ್ಧವಿದ್ವಾಂಸನೊಂದಿಗೆ ವೈದಿಕ ಮತ್ತು ಬೌದ್ಧಧರ್ಮಗಳ ಸಾಪೇಕ್ಷ ಉತ್ತಮಾಂಶಗಳನ್ನು ಪಾಟಲಿಪುತ್ರದಲ್ಲಿ ಚರ್ಚಿಸಿ, ಅನಂತರ ಬೌದ್ಧಧರ್ಮದ ಮೌಲ್ಯವನ್ನು ಒಪ್ಪಿ, ಬುದ್ಧಭಿಕ್ಷುವಾದ. ಮುಂದೆ ಬೌದ್ಧಮತಾನುಯಯಿಯಾದ ಚಕ್ರವರ್ತಿ ಕಾನಿಷ್ಕನು ಪಾಟಲೀಪುತ್ರವನ್ನು ಗೆದ್ದಾಗ ಅಲ್ಲಿಯ ರಾಜನಿಂದ ತನಗೆ ಬರಬೇಕಾದ ಕಪ್ಪದ ಒಂದು ಭಾಗವಾಗಿ ಈ ಪಂಡಿತ ಅಶ್ವಘೋಷನನ್ನು ಪಡೆದ. ಅದುವರೆಗೆ ಪಾಳಿ ಭಾಷೆಯಲ್ಲಿದ್ದ ಬುದ್ಧನ ವಿಚಾರಗಳನ್ನು ಸಂಸ್ಕೃತಕ್ಕೆ ಹೊರಳಿಸಿದ.

ಕಾನಿಷ್ಕನು ಏರ್ಪಡಿಸಿದ ನಾಲ್ಕನೆಯ ಬೌದ್ಧ ಸಮಾವೇಶದ ಮುಖ್ಯಪಾತ್ರ ಅವನದು. ಬುದ್ಧತತ್ವವನ್ನು ವಿವರಿಸಿ, ಅದಕ್ಕೊಂದು ವ್ಯವಸ್ಥೆಯನ್ನು ತರಲು ನೆರವಾದ. ಮಹಾಯಾನ ಪಂಥದ ಸೂಕ್ಷ್ಮ ಪರಿಕಲ್ಪನೆಗಳನ್ನು ವಿವರಿಸಿದ ಶ್ರದ್ಧೋತ್ಪಾದ ಶಾಸ್ತ್ರದಿಂದ ಬಂದಿತು. ಅವನು ರಚಿಸಿದ ‘ಮಹಾಲಂಕಾರ’ ಸಂಸ್ಕೃತ ಗ್ರಂಥವು ಉಪಲಬ್ಧವಿಲ್ಲವಾದರೂ ಅದರ ಚೀನೀ ಭಾಷಾಂತರ ಲಭ್ಯವಿದೆ. ಆತ ರಚಿಸಿದ ಮಹಾಕಾವ್ಯ ‘ಬುದ್ಧಚರಿತ’ ಮತ್ತು ‘ಸೌಂದರಾನಂದ’. ಚೀನೀ ಮೂಲಗಳು ಅವನು ಎರಡು ಮಹತ್ಕೃತಿಗಳು ರಚಿತವಾಗಿವೆ ಎನ್ನುತ್ತವೆ.

ಅಶ್ವಘೋಷನದು ವಿಶಿಷ್ಟವಾದ ಛಂದೋ ಲಕ್ಷಣಗಳ ಅರಿವು, ವ್ಯಾಕರಣಗಳ ನಿಯಮಗಳ ತಳಸ್ಪರ್ಶಿ ಜ್ಞಾನ, ಅಪಾರ ಶಬ್ದಭಂಡಾರ. ಅಲಂಕಾರಶಾಸ್ತ್ರ ಪರಿಣತನಾಗಿ ಅವನು ತನ್ನ ಕಾವ್ಯದಲ್ಲಿ ಬಳಸಿರುವ ಉಪನಾಮಾಲಂಕಾರಗಳು ಅನನ್ಯ. ಈ ಕಾರಣಕ್ಕೇ ಮಹಾಕವಿ ಕಾಳಿದಾಸ ಮತ್ತು ನಾಟಕಕಾರ ಭಾಸಾದಿಗಳು ಅವನನ್ನು ಮೆಚ್ಚಿಕೊಂಡಿರುವುದು. ಭಾರತಕ್ಕೆ ಬಂದ ಪ್ರಸಿದ್ಧ ಚೀನೀಯಾತ್ರಿಕ ಹ್ಯುಯನ್‌ತ್ಸಾಂಗನು, ಬುದ್ಧ ಚರಿತವನ್ನು ಭಾರತದ ಎಲ್ಲ ಐದು ಭಾಗಗಳಲ್ಲಿ ವಿಸ್ತೃತವಾಗಿ ಓದಲಾಗುತ್ತಿದೆ ಮತ್ತು ದಕ್ಷಿಣ ಸಾಗರದ ದೇಶಗಳಲ್ಲೂ (ಜಾವಾ, ಸುಮಾತ್ರಾ ಮತ್ತು ನೆರೆಯ ದ್ವೀಪಗಳು) ಸಹ ಎಂದಿದ್ದಾನೆ.

ಇನ್ನೊಬ್ಬ ಖ್ಯಾತ ಚೀನೀಯಾತ್ರಿಕ ಇ-ತ್ಯೆಂಗ್ ದೀರ್ಘವಿವರವನ್ನು ನೀಡುತ್ತಾ, ಅಶ್ವಘೋಷನು ಪುರಾತನ ಗ್ರಂಥಕರ್ತನಾಗಿ... ಬುದ್ಧಚರಿತ ಕಾವ್ಯವನ್ನು ಬರೆದಿದ್ದು... ಬುದ್ಧನನ್ನು ಸ್ತುತಿ ಮಾಡಿ ರಚಿಸಿದ ಶ್ಲೋಕಗಳು ಇದ್ದು, ಇವನ್ನು ಈಗಲೂ ಬೌದ್ಧಮಂದಿರಗಳಲ್ಲಿ ಸಂಜೆ ಪಠಿಸುತ್ತಾರೆ – ಎಂದಿದ್ದಾನೆ.

ಅಶ್ವಘೋಷಮು ‘ಸಾರಿಪುತ್ರ ಪ್ರಕರಣ’ವೆಂಬ ನಾಟಕವನ್ನು ಬರೆದು ಸಂಸ್ಕೃತನಾಟಕದ ಪಿತಾಮಹನಾದ. ಆದರೆ ಆ ನಾಟಕದ ಅಲ್ಪಸ್ವಲ್ಪ ಭಾಗ ಮಾತ್ರ ಸಿಕ್ಕಿದೆ. ಈ ನಾಟಕದ ಪ್ರಭಾವದಿಂದಾಗಿ ಪಾಟಲಿಪುತ್ರದ (ಈಗಿನ ಪಾಟ್ನಾ) ರಾಜಕುಮಾರರೂ ಸೇರಿದಂತೆ ಅನೇಕರು ಬೌದ್ಧಸಂಘವನ್ನು ಸೇರತೊಡಗಿದರಂತೆ. ತನ್ನ ರಾಜ್ಯದ ಜನಸಂಖ್ಯೆಯು ಇದರಿಂದ (ಭಿಕ್ಷುಗಳ ಸಂಖ್ಯೆ ಹೆಚ್ಚಿ) ಕಡಿಮೆಯಾಗಬಹುದೆಂದು ಹೆದರಿ ರಾಜನು ಈ ನಾಟಕದ ಪ್ರದರ್ಶನವನ್ನು ರದ್ದು ಗೊಳಿಸಿದನಂತೆ. ಶೂನ್ಯತೆ ಮತ್ತು ಪ್ರಾಪಂಚಿಕ ಭ್ರಮೆಗಳ ಹಿನ್ನೆಲೆಯ ತತ್ವಗಳ ಕುರಿತು, ಧ್ವನಿ ಮತ್ತು ವಾದ್ಯಗಳಿಗೆ ಒಂದು ಸಂಗೀತಪ್ರಸ್ತಾಪವನ್ನೂ ಅವನು ರಚಿಸಿದ್ದ ಎನ್ನುವವರುಂಟು.

ಬುದ್ಧಚರಿತದಲ್ಲಿ 28 ಸಂಧಿಗಳಿವೆ. ಸಂಸ್ಕೃತಮೂಲದ ಇದರಲ್ಲಿ 14 ಸರ್ಗಗಳು ಮಾತ್ರ ಲಭ್ಯವಿವೆ. ಅದರಲ್ಲೂ ಮೊದಲ ಸರ್ಗದ ಏಳು ಶ್ಲೋಕಗಳು ಮತ್ತು 14ನೇ ಸರ್ಗದ ಕೊನೆಯ 82 ಶ್ಲೋಕಗಳು ಲುಪ್ತವಾಗಿವೆ. ಇದು ಚೀನೀ ಭಾಷೆಗೆ (ಸಂಸ್ಕೃತಮೂಲ ಪೂರ್ತಿಯಾಗಿದ್ದಾಗ) ಕ್ರಿ.ಶ. 414–424ರಲ್ಲಿ ಭಾಷಾಂತರವಾಗಿತ್ತು. ಅದೇ ಸಮಯಕ್ಕೆ ಟಿಬೇಟಿಯನ್ ಭಾಷೆಗೂ ಅನುವಾದಗೊಂಡಿರಬೇಕು. ಆಕ್ಸ್‌ಫರ್ಡ್ ವಿಶ್ವ ವಿದ್ಯಾನಿಲಯದ ಸಂಸ್ಕೃತ ಪ್ರಾಧ್ಯಾಪಕರಾದ ಜೋನ್‌ಸ್ಟನ್‌ರವರು ಲಭ್ಯವಿದ್ದ ಸಂಸ್ಕೃತದ ಭಾಗವನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. ಅದರ ಟಿಬೆಟ್ ಮತ್ತು ಚೀನೀ ಭಾಷೆಗಳ ಭಾಗಗಳನ್ನೂ ಇಂಗ್ಲಿಷ್‌ಗೆ ಅನುವಾದ ಮಾಡಿ ಸೇರಿಸಿದರು. ಸೂರ್ಯನಾರಾಯಣ ಚೌಧರೀ ಎಂಬುವವರು ಇಡೀ ಕಾವ್ಯವನ್ನು ಹಿಂದಿಯಲ್ಲಿ ರಚಿಸಿದರು. ಈ ಹಿಂದೀ ಕಾವ್ಯದ (ಸಂಸ್ಕೃತದ ಅನುಪಲಬ್ಧ ಭಾಗಗಳನ್ನು) ಮರಳಿ ಸಂಸ್ಕೃತದಲ್ಲಿ ಬರೆದು ಅದನ್ನು ಸಂಪೂರ್ಣ ಕಾವ್ಯವನ್ನಾಗಿ ಮಾಡಿದರು! ಹೀಗೆ ಹಲವಾರು ದೇಶ, ಭಾಷೆಗಳಲ್ಲಿ ಪ್ರಚಲಿತಕ್ಕೆ ಬಂದು ಪ್ರಸಿದ್ಧವಾದ ಕಾವ್ಯವು ಪುನಃ ಸಂಪೂರ್ಣಗೊಂಡ ರೋಚಕ ಇತಿಹಾಸ ಇದರದ್ದು! 

ಜನನ, ಬೋಧೆ ಮತ್ತು ಮಹಾಪರಿನಿರ್ವಾಣದ ಭಗವಾನ್ ಬುದ್ಧನ ವಿಶೇಷ ಪೌರ್ಣಿಮೆಯಂದು ಅಶ್ವಘೋಷನ ಬುದ್ಧಚರಿತದ ಮೂಲ ಮತ್ತವುಗಳ ಕನ್ನಡಾನುವಾದ ಕೃತಿಗಳನ್ನು ರಚಿಸಿದ ಕವಿವರ್ಯರಿಗೆ ಮಣಿಯುತ, ಅವನ್ನು ಓದುವುದೇ ನಾವು ಬುದ್ಧನಿಗೆ ತೋರಿಸಬಹುದಾದ ಋಣ.

ಬುದ್ಧಂ ಶರಣಂ ಗಚ್ಛಾಮಿ |
ಧಮ್ಮಂ ಶರಣಂ ಗಚ್ಛಾಮಿ |

ಸಂಘಂ ಶರಣಂ ಗಚ್ಛಾಮಿ |

ಕನ್ನಡದ ಭಾಗ್ಯ

ಮಹಾಕವಿ ಅಶ್ವಘೋಷನ ಭಕ್ತಿ, ಶಕ್ತಿ, ಸಕ್ತಿ, ಸತ್ವ... ವಿನಯ, ವಿದ್ಯಾವೈಭವ ಪರಿಚಯ ಕನ್ನಡಿಗರಿಗೆ ಆಗಬೇಕೆಂದು  ಎಸ್.ವಿ. ಪರಮೇಶ್ವರ ಭಟ್ಟರು 1974ರಲ್ಲೇ ಸರಳ ಪದ್ಯಗಳಾಗಿ ಅನುವಾದಿಸಿ ಪ್ರಕಟಿಸಿ ಕನ್ನಡಿಗರಿಗೆ ಮಹೋಪಕಾರವನ್ನು ಮಾಡಿದ್ದಾರೆ. ಅವೆಲ್ಲ ಎರಡೆರಡು ಸಾಲಿನ ಮತ್ತು ಚತುಷ್ಪದಿಗಳಾಗಿ ಮೂಲದ ಅಂದವನ್ನು ಕನ್ನಡಕ್ಕೆ ತಂದಿವೆ. ಬುದ್ಧಚರಿತವು ಶಾಂತಿರಸದ ಆಧಾರಸ್ತಂಭ ಎಂದರು ವಿದ್ವಾಂಸ ತೀನಂಶ್ರೀ.

ಕಪಿಲವಸ್ತುವಿನ ವರ್ಣನೆ, ಸಿದ್ಧಾರ್ಥನ ತಾತ್ವಿಕ ತಳಮಳ, ವಿವಿಧ ದಾರ್ಶನಿಕರಿಂದ ಆತನಿಗೆ ಸಮಾಧಾನ ಉತ್ತರಗಳು ಸಿಗದುದು, ಸಂಬುದ್ಧಿ ಗಳಿಸಲು ಬೋಧಿವೃಕ್ಷದ ಕೆಳಗೆ ತಪಸ್ಸಿನಲ್ಲಿ ನಿರತನಾದಾಗ ಅವನನ್ನು ವಿಚಲಿತಗೊಳಿಸಲು ವಿಫಲನಾದ ಮಾರ, ಇತ್ಯಾದಿ ತಲೆದೂಗುವಂತಿವೆ. ಸಾರನಾಥದಲ್ಲಿ ನೀಡಿದ ಮೊದಲ ಬೋಧನೆಯಲ್ಲಿ ನಾಲ್ಕು ಸಮ್ಯಕ್ ತತ್ವಗಳು ಮತ್ತು ಅಷ್ಟಾಂಗಮಾರ್ಗಗಳನ್ನು ತನ್ನ ಈ ಧರ್ಮಚಕ್ರಪ್ರವಚನ ಸೂತ್ರದಲ್ಲಿ ವಿವರಿಸುವ ಅಂಶಗಳಿವೆ. ಬುದ್ಧನ ಜೀವನ ಬೋಧನೆಯ ಒಂದಂಗವಾಗಿ ಈಗ ನಮಗೆ ಗೊತ್ತಿರುವ ಕಿಸಾಗೌತಮಿಯ ಪ್ರಸಂಗ ಬುದ್ಧಚರಿತದಲ್ಲಿಲ್ಲ. ಅಂಗುಲಿಮಾಲನ ವೃತ್ತಾಂತವೂ ಅರ್ಧಶ್ಲೋಕಕ್ಕೇ ಸೀಮಿತಗೊಂಡಿದೆ. ವೇಶ್ಯೆ ಆಮ್ರಪಾಲಿಯ ಹೃದಯ ಪರಿವರ್ತನೆಯ ವರ್ಣನೆ ಹೃದಯಂಗಮವಾಗಿದೆ. ಅಂತೆಯೇ ಬುದ್ಧ ಮಹಾಪರಿನಿರ್ವಾಣವೂ ಸಹ.

ಕನ್ನಡಕ್ಕೆ ದಕ್ಕಿದ ಮತ್ತೊಂದು ಭಾಗ್ಯವೆಂದರೆ ವಿದ್ವಾಂಸ  ಎಲ್. ಬಸವರಾಜುರವರು ಬುದ್ಧಚರಿತವನ್ನು ಕನ್ನಡೀಕರಿಸಿದ್ದು. ಕನ್ನಡಿಗರಿಗೆ ಹೆಚ್ಚು ಪರಿಚಯವಿರುವ ಶಿವಶರಣರ ವಚನದ ಧಾಟಿಯನ್ನು ಅನುಸರಿಸಿ ಅವರು ಸರಳಗೊಳಿಸಿದ್ದು ಅವರ ವಿದ್ವತ್ಪ್ರತಿಭೆಗೆ ಸಾಕ್ಷಿ. ಗೌತಮ ಬುದ್ಧನ ನುಡಿಗಳು, ಸಲಹೆ, ಸೂಚನೆ ಮತ್ತು ಉದಾಹರಣೆಗಳು ವಚನ ವ್ಯಾಪ್ತಿಗೆ ಚೆನ್ನಾಗಿ ಒಗ್ಗಿರುವುದರಿಂದ ಅದನ್ನೇ ಅವರು ಪರಿಣಾಮಕಾರಿಯಾಗಿ ಬಳಸಿರಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.