ಭಾನುವಾರ, ಮಾರ್ಚ್ 29, 2020
19 °C

ದೇವರು, ಸೀಸರ್ ಮತ್ತು ಓರ್ವ ಸಂತ

ಡಾ. ನಾ. ಡಿಸೋಜ Updated:

ಅಕ್ಷರ ಗಾತ್ರ : | |

Prajavani

ಸಂತ ಎಂದೇ ತಮ್ಮವರೆಲ್ಲರ ನಡುವೆ ಹೆಸರು ಮಾಡಿದ್ದ ಸರಕಾರಿ ಆಸ್ಪತ್ರೆಯ ನಿವೃತ್ತ ವಾರ್ಡ್‌ ಬಾಯ್ ಅಂತೋನಿ ಡಿಕಾಷ್ಟರ ದಿನಚರಿ ಪ್ರಾರಂಭವಾಗುತ್ತಿದ್ದುದೇ ಹೀಗೆ: ಮುಂಜಾನೆ ಪಾದರಿಗಳ ಬಟ್ಲರ್ ಹೊಡೆಯುತ್ತಿದ್ದ ಇಗರ್ಜಿಯ ಪ್ರಾರ್ಥನಾ ಗಂಟೆಯ ಸದ್ದು ಕಿವಿಗೆ ಬಿತ್ತು ಅನ್ನುವಾಗ, ಎದ್ದು ಹಿತ್ತಿಲಿಗೆ ಹೋಗಿಬಂದು, ಬಟ್ಟೆ ಧರಿಸಿ ಇವರು ಹೊರಟಾಗ ಅದರ ಹಿಂದೆಯೆ ಪೂಜೆಯ ಗಂಟೆಯೂ ಕೇಳಿ ಬರುತ್ತಿತ್ತು. ಇವರು ಕ್ಯಾನ್‍ವಾಸ್ ಶೂನಲ್ಲಿ ಕಾಲು ತೂರಿಸಿ ಮನೆಯ ಮೆಟ್ಟಲು ಇಳಿಯುವಾಗ ದೂರದಿಂದ ಪಾದರಿಗಳು ತಮ್ಮ ಬಂಗಲೆಯಿಂದ ಇಗರ್ಜಿಯತ್ತ ಹೋಗುವುದು ಕಾಣಿಸುತ್ತಿತ್ತು. ಇವರು ನಾಲ್ಕು ಮನೆಗಳನ್ನ ದಾಟಿ ಸಿಮಿತ್ರಿಯನ್ನು ಹಿಂದಿರಿಸಿಕೊಂಡು ಇಗರ್ಜಿ ಮುಂದೆ ತಲುಪುತ್ತಿದ್ದರು. ಒಂದು ನಿಮಿಷ ನಿಂತು ಹಣೆ, ಎದೆ, ಭುಜಗಳನ್ನ ಮುಟ್ಟಿಕೊಂಡು ತಂದೆಯಾ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ವಂದಿಸಿ ಇಗರ್ಜಿ ಒಳ ಹೋಗುವಾಗ ಅಲ್ಲಿ ಇರಿಸಿದ ತೀರ್ಥದ ಬಟ್ಟಲಿನಿಂದ ತೀರ್ಥ ತೆಗೆದುಕೊಂಡು ಅದನ್ನ ಹಣೆ ಭುಜಕ್ಕೆ ಪ್ರೋಕ್ಷಿಸಿಕೊಂಡು ಪೀಠದತ್ತ ಒಮ್ಮೆ ನೋಡುವರು.

ಪೀಠ ಬಾಲಕ ದೇವರ ಪೀಠದ ಮೇಲಿನ ಮೇಣದ ಬತ್ತಿಯನ್ನ ಹೊತ್ತಿಸಿ ಒಳಗೆ ಹೋದ ಅನ್ನುವಾಗ ಇವರು ತಲೆಯ ಮೇಲಿನ ಟೋಪಿ ತೆಗೆದು ಕಂಕುಳಲ್ಲಿ ಇರಿಸಿಕೊಂಡು ಎಂದಿನ ತಮ್ಮ ಜಾಗಕ್ಕೆ ಹೋಗಿ ಮೊಣಕಾಲೂರಿ ಬಗ್ಗಿ ನೆಲದ ಮೇಲೆ ಶಿಲುಬೆಯ ಗುರುತು ಬರೆದು ಅದಕ್ಕೆ ಭಕ್ತಿಯಿಂದ ಮುತ್ತಿಟ್ಟು ಮತ್ತೊಮ್ಮೆ ಶಿಲುಬೆಯ ವಂದನೆ ಮಾಡುತ್ತಿರಲು ಪೀಠದ ಹಿಂದಿನ ಪರದೆ ಸರಿದು ಪಾದರಿ ಪೀಠ ಬಾಲಕರನ್ನ ಹಿಂದಿರಿಸಿಕೊಂಡು ಪ್ರಸಾದ ಪಾತ್ರೆಯನ್ನ ಕೈಯಲ್ಲಿ ಹಿಡಿದು ಬಲಿ ಪೂಜೆಗೆ ಸಿದ್ಧರಾಗಿ ಬಂದಿರುತ್ತಿದ್ದರು. ನಂತರದ ಎಲ್ಲ ಕ್ರಿಯೆಗಳೂ ಇವರಿಗೆ ಚಿರಪರಿಚಿತ. ಪಾದರಿ ಹೇಳಬಹುದಾದ ಶ್ಲೋಕ, ಮಂತ್ರ, ಜಪ ಇವರಿಗೆ ಗೊತ್ತಿಲ್ಲದೇನೆ ಬಾಯಲ್ಲಿ ಬಂದು ಇವರು ಯಾಂತ್ರಿಕವಾಗಿ ಅವುಗಳನ್ನ ಹೇಳುತ್ತಿದ್ದರು. ಇವರ ಹಾಗೆ ಪೂಜೆಗೆ ಬಂದವರು ಕೂಡ ಇವರ ದನಿಗೆ ದನಿ ಸೇರಿಸುತ್ತಿದ್ದರು. ಅದೊಂದು ಅರ್ಧ ಗಂಟೆಯ ದೇವರ ಸೇವೆ, ಮನಸ್ಸಿಗೆ ಮುದ ನೀಡುವ, ಶಾಂತಿ, ನೆಮ್ಮದಿ, ಸಮಾಧಾನವನ್ನ ನೀಡುವ ಒಂದು ಕ್ರಿಯೆ, ಈ ಸೇವೆ ಮುಗಿಸಿ ಹಿಂತಿರುಗುವಾಗ ದೇವರ ನಾಮ ಒಂದನ್ನ ಗುಣುಗುಣಿಸುತ್ತ ಹೋಗುವುದು ಕೂಡ ಅಂದಿನ ದಿನವನ್ನು ನಿಶ್ಚಿಂತೆಯಿಂದ ಕಳೆಯಲು ಅವಕಾಶ ನೀಡುವ ಒಂದು ಸಂದರ್ಭ.

ಈ ಮೂವತ್ತೂ ವರ್ಷಗಳಿಂದ ಅವರು ನಡೆಸಿಕೊಂಡು ಬಂದ ಈ ವ್ರತ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು. ಅವರು ಇಗರ್ಜಿಗೆ ತಪ್ಪದೆ ಬರುವುದಷ್ಟೇ ಅಲ್ಲ; ನಿತ್ಯ ಮನೆಯಲ್ಲಿ ಪ್ರಾರ್ಥನೆ ಮಾಡುವುದೇ ಇರಲಿ, ದೇವರ ಮುಂದೆ ದೀಪ ಹಚ್ಚುವುದೇ ಇರಲಿ, ಕುತ್ತಿಗೆಯಲ್ಲಿ ದೇವರ ಪದಕವನ್ನ, ಪವಿತ್ರ ದಾರವನ್ನ ಧರಿಸುವುದಿರಲಿ ಯಾವುದನ್ನೂ ತಪ್ಪಿಸುತ್ತಿರಲಿಲ್ಲ. ಪ್ರತಿ ಶನಿವಾರ ಪಾಪ ನಿವೇದನೆ ಮಾಡಿ ಭಾನುವಾರದಂದು ತಪ್ಪದೆ ದಿವ್ಯ ಪ್ರಸಾದ ಸ್ವೀಕರಿಸುತ್ತಿದ್ದರು, ತಪಸ್ಸಿನ ಕಾಲದ ಉಪವಾಸ ತಪ್ಪಿಸುತ್ತಿರಲಿಲ್ಲ. ಆ ನಲವತ್ತು ದಿನ ಎಲ್ಲ ಮನರಂಜನೆಯಿಂದ ಅವರು ದೂರ, ಅವರ ಮನೆಯಲ್ಲಿ ಕೂಡ ಹೆಂಡತಿ ಟಿ.ವಿ. ಹಾಕುವಂತಿಲ್ಲ, ಸಿನಿಮಾ ನೋಡುವಂತಿಲ್ಲ. ದಿನನಿತ್ಯ ಮನೆಯಲ್ಲಿ ಗಂಜಿ ಊಟ. ಮನೆಯಲ್ಲಿ ಪ್ರಾರ್ಥನೆ ಮಾಡುವಾಗ ಕ್ರಿಸ್ತ ಶಿಲುಬೆಯ ಮೇಲೆ, ಪಟ್ಟ ಎಲ್ಲ ಹಿಂಸೆಯ ಪ್ರತೀಕವಾಗಿ, ಐದು ಪರಲೋಕ ಮಂತ್ರ ಐದು ನಮೋರಾಣಿ ಮಂತ್ರಗಳನ್ನ ಎರಡೂ ಕೈ ಮೇಲೆತ್ತಿ ಕಣ್ಣಲ್ಲಿ ನೀರು ಬಂತೇನೋ ಅನ್ನುವ ಹಾಗೆ ದೇವರಿಗೆ ಅರ್ಪಿಸುತ್ತಿದ್ದರು. ಈ ಹಲವು ಕಾರಣಗಳಿಂದಾಗಿ ಊರಿನ ಪಕ್ಕದೂರಿನ ಜನ ಅವರನ್ನ ‘ಸಂತ ಅಂತೋನಿ’ ಎಂದೇ ಕರೆಯುತ್ತಿದ್ದರು. ಅಂತೋನಿ ಡಿಕಾಷ್ಟ ಎಂಬುದು ಅವರ ಹೆಸರಾಗಿದ್ದರೂ ಅವರ ಹೆಸರಿಗೆ ಜನ ಹಚ್ಚಿದ ವಿಶ್ಲೇಷಣೆ ‘ಸಂತ’ ಎಂಬುದು. ಇದು ಅವರ ಈ ದೈವ ಭಕ್ತಿಗೆ ಜನ ಸಲ್ಲಿಸಿದ ಗೌರವ, ಇವರು ಕೂಡ ಇದನ್ನು ಅಷ್ಟೇ ಗೌರವ ಮರ್ಯಾದೆಯಿಂದ ಸ್ವೀಕರಿಸಿದ್ದರು.

ಊರಿಗೆ ಬಂದ ಹೊಸ ಪಾದರಿಗಳಿಗೆ ಇವರ ಈ ದೈವಭಕ್ತಿ ಒಂದೆರಡು ದಿನಗಳಲ್ಲಿಯೇ ತಿಳಿದು ಹೋಗುತ್ತಿತ್ತು. ಊರಿನ ಗುರ್ಕಾರನೋ ಇಲ್ಲವೆ ಇಗರ್ಜಿಯ ಮಿರೋಣನೋ ಈ ವಿಷಯವನ್ನ ಹೊಸ ಪಾದರಿಗೆ ಹೇಳಿ ಇವರ ಸ್ಥಾನಮಾನಗಳ ಪರಿಚಯ ಮಾಡಿಕೊಡುತ್ತಿದ್ದ. ಹೊಸ ಪಾದರಿ ಈ ವಿಷಯ ತಿಳಿದು ಇವರನ್ನ ತುಂಬಾ ಮರ್ಯಾದೆಯಿಂದ ನೋಡುತ್ತಿದ್ದರು ಅನ್ನುವುದೂ ನಿಜವೇ. ವರ್ಷಗಳಿಂದ ಸಂತ ಅಂತೋನಿ ಇಗರ್ಜಿಗೆ ಬರುವ ಈ ವೃತ ಎಷ್ಟೊಂದು ಪ್ರಚಲಿತವಾಗಿತ್ತು ಎಂದರೆ ಊರಿನ ಪಾದರಿ ರಿಟ್ರೀಟಿಗೆಂದೋ, ಯಾವುದಾದರೂ ಊರಿನ ಹಬ್ಬಕ್ಕೆಂದೋ ಇಲ್ಲ ಮತ್ತೆ ಯಾವುದಕ್ಕೋ ಊರಲ್ಲಿ ಇಲ್ಲ ಅಂದರೆ ಅಂತೋನಿಯವರೇ ಬೇಗ ಎದ್ದು ಇಗರ್ಜಿ ಬಾಗಿಲು ತೆರೆದು, ಮೇಣದಬತ್ತಿ ಹಚ್ಚಿ ಬಂದ ಇತರರ ಜೊತೆ ಸೇರಿ ಒಂದು ತೇರ್ಸ ಮಾಡಿ ‘ದಿ ಅಮ್ಕಾಂ ಬೇಸಾಂವ್ ಮೊಗಳಾ ಮಾಯೆ’ ಹೇಳಿ ಮೇಣದಬತ್ತಿ ಆರಿಸಿ ಮನೆಗೆ ಬರುತ್ತಿದ್ದರು. ಈ ಕಾರಣದಿಂದಾಗಿ ಅವರಿಗೆ ‘ಲಾಹನ್ ಪಾದರಿ’ (ಚಿಕ್ಕ ಪಾದರಿ) ಅನ್ನುವ ಹೆಸರೂ ಬಿದ್ದಿತ್ತು. ಇಂತಹ ಅಡ್ಡ ಹೆಸರುಗಳಿಂದ ವಿಚಲಿತರಾದವರು ಅವರಲ್ಲ. 

‘ಜನ ನನ್ನನ್ನ ಸಂತ ಅಂತೋನಿ ಅಂತಾರೆ, ಲಾಹನ್ ಪಾದರಿ ಅಂತಾರೆ, ಅನ್ನಲಿ ಬಿಡು, ಇನ್ನೂ ಒಂದೆರಡು ಹೆಸರುಗಳಿಂದ ಕೂಗಲಿ, ನನಗೇನೂ ಅವಮಾನ ಆಗೋದಿಲ್ಲ. ಅವೆಲ್ಲ ಪೂಜ್ಯವಾದ ಹೆಸರುಗಳೇ ಅಲ್ಲವೆ?’ ಎಂದು ಹೆಂಡತಿಯನ್ನ ಕೇಳುತ್ತಿದ್ದರು. ಅವರ ಹೆಂಡತಿ ರೋಜಿ ಬಾಯಿಗೂ ಈ ಮಾತು ಸರಿ ಅನಿಸುತ್ತಿತ್ತು. ಆಕೆಗೆ ಗಂಡನ ಭಕ್ತಿಯ ಮೇಲೆ ಅಪಾರ ಗೌರವ, ಅಭಿಮಾನ. ಹೀಗೆಂದೇ ಆಕೆ ಈ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ಈ ಹೆಸರುಗಳ ಮೂಲಕ ಇವರನ್ನ ಕರೆಯುವುದು ಒಂದು ಬಗೆಯ ತಮಾಷೆ ಮಾಡುವ ಯತ್ನ ಅನ್ನುವ ಹಾಗೆ ನಡೆದಿತ್ತು ಅನ್ನುವುದೂ ನಿಜವೇ. ಸಂತ ಅಂತೋನಿ, ಲಾಹನ್‌ ಪಾದರಿ ಅನ್ನುವ ಶಬ್ದಗಳಿಗೆ ಯಾವುದೇ ಕಳಂಕ ಇರಲಿಲ್ಲವಾದರೂ ಈ ಶಬ್ದಗಳನ್ನ ಪ್ರಯೋಗಿಸುವ ಕೆಲವರು ಈ ಶಬ್ದಗಳನ್ನ ವ್ಯಂಗ್ಯವಾಗಿ, ತಮಾಷೆಗಾಗಿ ಬಳಸುವುದೂ ಇತ್ತು. ರೋಜಿ ಬಾಯಿಯನ್ನ ಸಂತ ಅಂತೋನಿಯವರ ಹೆಂಡತಿ ಎಂದು ಕರೆದು ಹಿಂದೆ ನಗುವ ಜನ ಕಡಿಮೆ ಇರಲಿಲ್ಲ. ಅಂತೋನಿ ಹೀಗೆ ಕರೆಯುವುದರಿಂದ ನೋವನ್ನ ಉಣ್ಣದಿದ್ದರೂ ಅವರ ಹೆಂಡತಿ ಈ ನೋವಿಗೆ ಬಲಿ ಆಗುವುದಿತ್ತು. ಅತ್ತ ಈ ನೋವನ್ನ ತಿನ್ನಲಾರದೆ, ಅರಗಿಸಿಕೊಳ್ಳಲೂ ಆಗದೆ ಸಂಕಟ ಅನುಭವಿಸುವವರು ಮಾತ್ರ ಇವರಾಗಿದ್ದರು. ಇದರ ಅರಿವು ಅಂತೋನಿಗೆ ಇದ್ದರೂ ಅವರು ಈ ಬಗ್ಗೆ ಏನೂ ಮಾಡಲಾರದವರಾಗಿದ್ದರು. ಆದರೆ ಒಂದು ವಿಷಯವೆಂದರೆ ಅವರ ಈ ಸ್ವಭಾವವನ್ನ ಕುರಿತು ವ್ಯಂಗ್ಯವಾಡುವವರಿಗಿಂತ ಮೆಚ್ಚಿ ಗೌರವಿಸುವ ಜನರೇ ಹೆಚ್ಚಿದ್ದರಿಂದ ಸ್ವತಃ ಅಂತೋನಿಯವರೇ ನಿಶ್ಚಿಂತೆಯಿಂದ ಇದ್ದರು. ಅಂತೋನಿ ಡಿಕಾಷ್ಟರ ಇನ್ನೊಂದು ಗುಣವನ್ನ ಈಗಲೇ ಹೇಳ ಬೇಕು. ಅವರು ಸುಮಾರು ಇಪ್ಪತೈದು ವರ್ಷ ಊರಿನ ಸರಕಾರಿ ಆಸ್ಪತೆಯಲ್ಲಿ ವಾರ್ಡ್‌ ಬಾಯ್ ಆಗಿ ಕೆಲಸ ಮಾಡಿ ಇದೀಗ ನಿವೃತ್ತರಾಗಿದ್ದರು.

ಈ ಕೆಲಸ ಒಂದು ಕೆಲಸವಲ್ಲ ಡಿಕಾಷ್ಟರಿಗೆ ನಿಜವಾಗಿಯೂ ಅದೊಂದು ಸೇವೆ. ಆಸ್ಪತ್ರೆಗೆ ಬರುವ ರೋಗಿಗಳನ್ನ ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು ಡಿಕಾಷ್ಟ. ವಾರ್ಡಿನಲ್ಲಿ ಡಿಕಾಷ್ಟ ಇದ್ದಾರೆ ಅಂದರೆ ರೋಗಿಗಳು, ವೈದ್ಯರು, ರೋಗಿಗಳ ಕಡೆಯವರು ಎಲ್ಲರಿಗೂ ಒಂದು ನಿಶ್ಚಿಂತೆ. ರೋಗಿಗಳಿಗೆ ಏನೇ ಬರಲಿ ಇವರು ನಿಭಾಯಿಸುತ್ತಿದ್ದರು. ಅನಾಥರಾದ ಎಷ್ಟೋ ರೋಗಿಗಳಿಗೆ ಡಿಕಾಷ್ಟ ಸಾಕು ತಂದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿದ್ದವರು ಅಂದರೆ ಡಿಕಾಷ್ಟ ಒಬ್ಬರೇ. ಜನ ಅವರನ್ನ ಸಂತ ಎಂದು ಕರೆಯಲು ಇದೂ ಒಂದು ಕಾರಣ. ನಿವೃತ್ತಿಯ ನಂತರವೂ ಅವರು ಆಸ್ಪತ್ರೆಗೆ ಹೋಗುತ್ತಾರೆ. ಯಾರಿಗೋ ಗುಳಿಗೆ, ಔಷಧಿ, ಊಟ, ಬ್ರೆಡ್ಡು ಹೀಗೆ ವ್ಯವಸ್ಥೆ ಮಾಡಿ ಬರುತ್ತಾರೆ. ಇಲ್ಲವೆ ಮನೆಗೆ ಬಂದು ತಾನೇ ಅವುಗಳನ್ನ ಒಯ್ದು ಮುಟ್ಟಿಸುತ್ತಾರೆ. ಅವರು ಸರಕಾರಿ ಆಸ್ಪತ್ರೆಗೆ ಹೋದರೆ ಕಂಬ, ಕಿಟಕಿ, ಮಂಚ, ಬೆಂಚು, ಅವರನ್ನ ಮಾತನಾಡಿಸುತ್ತವೆ.

ದಿನಗಳು ಉರುಳುತ್ತವೆ, ಡಿಕಾಷ್ಟ ಎಂದಿನಂತೆ ತಮ್ಮ ಇಗರ್ಜಿ, ಪ್ರಾರ್ಥನೆ, ಆಸ್ಪತ್ರೆಯ ಸೇವೆ, ಜನರ ಸೇವೆ ಎಂದು ಮುಂದುವರೆಸುತ್ತಾರೆ, ಅವರ ಹೆಂಡತಿ ರೋಜಿ ಬಾಯಿ ತನ್ನ ಕಾಲು ನೋವು, ಸೊಂಟ ನೋವು ಇತ್ಯಾದಿಗಳನ್ನ ಹೊರಗೆ ತೋರಿಸಿಕೊಳ್ಳದೆ ಗಂಡನ ಸೇವೆ ಮಾಡಿಕೊಂಡು ಬರುತ್ತಾಳೆ. ಈ ಜೀವಿಗಳಿಗೆ ಇದ್ದ ಒಂದು ನೋವು ಊರಿನ ಹಲವರ ಗಮನಕ್ಕೆ ಬಂದು ಅವರು ಇದಕ್ಕಾಗಿ ವ್ಯಥೆಪಟ್ಟರೂ ಪಾಪ ಅವರು ತಾವು ಏನು ಮಾಡಬಲ್ಲೆವು ಎಂದು ತಮ್ಮ ನೋವನ್ನ ನುಂಗಿ ಕೊಳ್ಳುತ್ತಾರೆ. ಈ ದಂಪತಿಗೆ ಒಂದು ನೋವು ಇದ್ದುದು ನಿಜ. ಅದು ಮಕ್ಕಳಿಲ್ಲವಲ್ಲ ಎಂಬ ನೋವು ದಂಪತಿಗೆ. ಈ ನೋವನ್ನು ಕೂಡ ಅವರು ತಮ್ಮ ಸೇವೆಯ ಮೂಲಕ ಮರೆತಿದ್ದರು. ರೋಜಿ ಬಾಯಿ ಕೂಡ ಅಷ್ಟೆ. ಹೀಗೆ ಇರಬೇಕಾದರೆ ಒಂದು ದಿನ ಬೆಳಿಗ್ಗೆ ಇಗರ್ಜಿಗೆಂದು ಹೊರಟ ಡಿಕಾಷ್ಟ ಗೇಟು ದಾಟುವಾಗ ತಲೆ ಗಿರ‍್ರೆಂದು ಕಬ್ಬಿಣದ ಬಾಗಿಲು ಹಿಡಿದುಕೊಂಡು ನಿಂತು, ಹೂವಿನ ಗಿಡಕ್ಕೆ ನೀರು ಹಾಕುತ್ತಿದ್ದ ಹೆಂಡತಿಯತ್ತ ತಿರುಗಿ ರೋಜೀ ಎಂದರು. ಆಕೆ ಡಿಕಾಷ್ಟರು ತೂರಾಡುವುದನ್ನ ಕಂಡು ಓಡಿ ಬಂದು ಅವರನ್ನು ಹಿಡಿದುಕೊಂಡದ್ದಷ್ಟೆ ಡಿಕಾಷ್ಟರು ಕೆಳಗೆ ಬಿದ್ದರು.

ಡಿಕಾಷ್ಟರ ಮನೆ ಪಕ್ಕದ ಬಾಲ್ತಿದಾರ ಇಗರ್ಜಿಗೆ ಓಡಿದ. ಕೊನೆಯದಾಗಿ ಆಗಬೇಕಾದ ಕೆಲಸ ಸಾಕಷ್ಟು ಇತ್ತು. ರೋಜಿ ಬಾಯಿ ಗಂಡನ ಪಕ್ಕದಲ್ಲಿ ಕುಸಿದು ಕುಳಿತಿದ್ದಳು. ಸಿಮಿತ್ರಿಯಲ್ಲಿ ಹೊಂಡ ತೋಡಬೇಕಿತ್ತು. ಮರಣದ ಪೆಟ್ಟಿಗೆ ಮಾಡಿಸಬೇಕಿತ್ತು. ಊರಿನ ಜನರಿಗೆ ತಿಳಿಸಬೇಕಿತ್ತು. ಇದಕ್ಕೂ ಮೊದಲು ಪಾದರಿಗಳಿಗೆ ತಿಳಿಸಬೇಕಿತ್ತು. ಇದಕ್ಕೆಲ್ಲ ಅವರ ಒಪ್ಪಿಗೆ ಬೇಕಲ್ಲ. ಬಾಲ್ತಿದಾರ ನೇರ ಪಾದರಿಗಳ ಬಂಗಲೆ ಬಾಗಿಲು ತಟ್ಟಿದ.

‘ಏನು ಬಾಲ್ತಿದಾರ್ ಇಷ್ಟು ದೂರ’

ಬಾಲ್ತಿದಾರ ವಿಷಯ ತಿಳಿಸಿದ.

‘ಛೇ. ನನಗೆ ತಿಳಿಯಲಿಲ್ಲ’ ಎಂದರು ಪಾದರಿ.

‘ಡಿಕಾಷ್ಟರ ಶವ ಸಂಸ್ಕಾರದ ತಯಾರಿ ಮಾಡಲಿಕ್ಕೆ ನಿಮ್ಮ ಅನುಮತಿ ಬೇಕಲ್ಲ ಫಾದರ್’

‘ನಿಲ್ಲಿ’

ಅವರು ಮೇಜಿನ ಮೇಲಿನ ಒಂದು ದಪ್ಪ ಪುಸ್ತಕ ತಿರುವಿ ಹಾಕಿದರು.

‘ಡಿಕಾಷ್ಟ ಎಲ್ಲ ಸರಿ, ಆದರೆ ಇಗರ್ಜಿಗೆ ಸಲ್ಲಿಸಬೇಕಾದ ವಾರ್ಷಿಕ ವಂತಿಗೆಯನ್ನ ಅವರು ಕಳೆದ ಹದಿನೆಂಟು ವರ್ಷಗಳಿಂದ ಸಲ್ಲಿಸಿಲ್ಲ.....ಆ ವಂತಿಗೆಯನ್ನ ಸಲ್ಲಿಸದೆ...'

ಪಾದರಿಗಳು ಬಾಲ್ತಿದಾರನ ಮುಖ ನೋಡಿದರು.

ಮೂಕನಾಗಿ ನಿಂತುಬಿಟ್ಟ ಬಾಲ್ತಿದಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)